ಶಿವಮೊಗ್ಗ: ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡುವ ಮೂಲಕ ಭೀತಿಯನ್ನು ಹುಟ್ಟು ಹಾಕಿರುವ ಮಂಗನ ಕಾಯಿಲೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಈಗಾಗಲೇ, ಹಲವು ಜೀವಗಳನ್ನು ಬಲಿ ಪಡೆದಿರುವ ಕಾಯಿಲೆ ವಿಚಾರದಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಪ್ರಮುಖ ಪರಿಸರವಾದಿಗಳೆಲ್ಲಾ ಸೇರಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸಾಗರದ ಪರಿಸರ ರಕ್ಷಣಾ ಚಳವಳಿಗಾರ ಶ್ರೀಕವಲಕೋಡು ವೆಂಕಟೇಶ್ ಅವರು ಕಲ್ಪ ನ್ಯೂಸ್ ಗೆ ವಿಶೇಷವಾಗಿ ಸಾರ್ವಜನಿಕ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲು ಬರೆದ ಪತ್ರ. ಪತ್ರದ ಯಥಾವತ್ ಹೀಗಿದೆ.
ಇವರಿಗೆ,
ಮಾನ್ಯ ಶ್ರೀ ಹೆಚ್.ಡಿ ಕುಮಾರಸ್ವಾಮಿ,
ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು.ವಿಷಯ:- ರಾಜ್ಯದ ಮಲೆನಾಡು ಹಾಗೂ ಕರಾವಳಿಯಲ್ಲಿ ತೀವೃವಾಗಿರುವ ಮಂಗನಕಾಲೆಯ ನಿಯಂತ್ರಣದ ಕುರಿತಂತೆ ಸರ್ಕಾರವು ತ್ವರಿತವಾಗಿ ಕೈಗೊಳ್ಳಬೇಕಿರುವ ಕಾರ್ಯಗಳು ಹಾಗೂ ಸಂಶೋಧನೆಯ ಕುರಿತು.
ಮಾನ್ಯರೇ,
ಕಳೆದ ಎರಡು ತಿಂಗಳಿನಿಂದ ಮಲೆನಾಡು ಹಾಗೂ ಕರಾವಳಿಯ ಹಲವೆಡೆ ಜನರ ಜೀವಹಿಂಡುತ್ತಿರುವ ಮಂಗನಕಾಲೆ ಸಮಸ್ಯೆಯ ಕುರಿತು ತಮಗೆ ತಿಳಿದೇ ಇದೆ. ಇದು ಇನ್ನೂ ನಿಯಂತ್ರಣವಾಗುತ್ತಿಲ್ಲ. ಈಗಾಗಲೇ ಹದಿನೈದಕ್ಕೂ ಹೆಚ್ಚು ಜನರು ಮರಣ ಹೊಂದಿದ್ದು, ಸಾವಿರಾರು ಜನರು ಜ್ವರದಲ್ಲಿ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೃಕ್ಷ ಆಂದೋಲನ ಸಂಘಟನೆಯು ಹಲವು ತಜ್ಞರಿದ್ದ ಸಮಿತಿಯೊಂದಿಗೆ ರೋಗಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸ್ಥಿತಿಗತಿಯ ಕುರಿತು ಇತ್ತೀಚೆಗೆ ಸಮಿಕ್ಷೆ ನಡೆಸಿತು. ಇದರಲ್ಲಿ ಹೊರಹೊಹೊದ ಮಾಹಿತಿಗಳು ಮತ್ತು ತಜ್ಞರ ಅಭಿಪ್ರಾಯದ ಆಧಾರದಲ್ಲಿ, ಮಂಗನಕಾಯಿಯ ನಿಯಂತ್ರಣದ ಕುರಿತಂತೆ ಸರ್ಕಾರವು ತ್ವರಿತವಾಗಿ ಕೈಗೊಳ್ಳಬೇಕಿರುವ ಕೆಲವು ತುರ್ತು ಕಾರ್ಯಗಳ ಕುರಿತಂತೆ ತಮ್ಮ ಗಮನ ಸೆಳೆಯುತ್ತಿದ್ದೇವೆ. ಈ ಮನವಿ ಸಲ್ಲಿಸುತ್ತಿರುವ ನಾವು ಪಶ್ಚಿಮಘಟ್ಟದ ಸಂರಕ್ಷಣೆ ಹಾಗೂ ಅಧ್ಯಯನ ಕೆಲಸದಲ್ಲಿ ೨೫ ವರ್ಷಗಳಿಂದ ತೊಡಗಿಸಿಕೊಂಡವರಿದ್ದೇವೆ.1) ತಕ್ಷಣದಲ್ಲಿ ರೋಗನಿಯಂತ್ರಿಸುವ ಕುರಿತು:- ಕಳೆದ ಎರಡು ತಿಂಗಳ ಹಿಂದೆ ಸಾಗರ ತಾಲ್ಲೂಕಿನ ಕಾರ್ಗಲ್ ಬಳಿಯ ಅರಲಗೋಡು ಪ್ರದೇಶದಲ್ಲಿ ಕಾಣಿಸಿಕೊಂಡ ಮಂಗನ ಕಾಲೆ ಈಗ ಅಕ್ಕಪಕ್ಕದ ಜಿಲ್ಲೆಗಳಿಗೂ ಹರಡಿದೆ. ಶಿವಮೊಗ್ಗ ಜಿಲ್ಲೆಯ ಸೊರಬ, ಹೊಸನಗರ, ತೀರ್ಥಹಳ್ಳಿ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಭಟ್ಕಳ, ಹೊನ್ನಾವರ, ಕುಮಟಾ, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ಪ್ರದೇಶಗಳಿಗೂ ಇದು ಹರಡಿದೆ. ಇದೀಗ ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳನ್ನೂ ದಾಟಿ, ಕೇರಳ ಹಾಗೂ ಗೋವಾಕ್ಕೂ ಹಬ್ಬುತ್ತಿರುವ ಮಾಹಿತಿಗಳು ಬರುತ್ತಿವೆ. ಅಂದರೆ, ಮಲೆನಾಡಿನ ಕೆಲವೇ ಸ್ಥಳಗಳಿಗೆ ಸೀಮಿತವಾಗಿದ್ದ ಈ ರೋಗವು, ಈಗ ಸಾಂಕ್ರಾಮಿಕವಾಗಿ ಪರಿಗಣಿಸುತ್ತಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಬರುವ ಮಳೆಗಾಲದವರೆಗೂ ಮಂಗನ ಕಾಲೆ ಮುಂದುವರಿಯಬಹುದು. ಮುಂಬರುವ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ಸಾವು-ನೋವುಗಳಾಗಬಹುದು. ಆದ್ದರಿಂದ, ವ್ಯಾಪಕವಾಗಿ ಈ ಪ್ರದೇಶದೆಲ್ಲೆಡೆ ಲಸಿಕೆ ಹಾಕುವ ಅವಶ್ಯಕತೆದೆ. ಇದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ತ್ವರಿತವಾಗಿ ಲಸಿಕೆಯ ಪೂರೈಕೆಯಾಗಬೇಕಿದೆ. ಜೊತೆಗೆ, ಕಾಡಿನಲ್ಲಿ ವಾಸಿಸುವ ರೈತರು, ವನವಾಸಿಗಳು ಹಾಗೂ ಕೂಲಿಕಾರರಿಗೆ ಉಣ್ಣೆಗಳನ್ನು ದೂರಹರಿಸುವ ಸಲುವಾಗಿ ದೇಹಕ್ಕೆ ಸವರಿಕೊಳ್ಳಲು ಡಿಎಂಪಿ ತೈಲವನ್ನು ಅಪಾರ ಪ್ರಮಾಣದಲ್ಲಿ ಪೂರೈಸಬೇಕಾಗಿದೆ. ರೋಗಬಾಧಿತ ಪ್ರದೇಶದೆಲ್ಲೆಡೆ ಈ ಎಲ್ಲ ಸೌಲಭ್ಯಗಳನ್ನು ಸರ್ಕಾರವು ಆದ್ಯತೆಯಲ್ಲಿ ಒದಗಿಸುವ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಿದೆ.
2) ನಿಖರ ಸಂಶೋಧನೆಯ ಕುರಿತು: ಮಂಗನ ಕಾಲೆಗೆ ಇನ್ನೂ ಔಷಧವನ್ನು ಅಭಿವೃದ್ಧಿಪಡಿಸಲಾಗಿಲ್ಲ. ಮಂಗನ ಕಾಲೆಗೆ ನಿಶ್ಚಿತ ಔಷಧ ನೀಡಲು ಅಗತ್ಯವಾದ ಸಂಶೋಧನೆಗೆ ರಾಜ್ಯ ಕೇಂದ್ರ ಸರ್ಕಾರಗಳು ಮುಂದಾಗಬೇಕು. ವರ್ಷದಿಂದ ವರ್ಷಕ್ಕೆ ಮಂಗನಕಾಲೆ ಬರದಂತೆ ಹಾಕುವ ಲಸಿಕೆಯ ಸಾಮರ್ಥ್ಯವೂ ಕಡಿಮೆಯಾಗುತ್ತಿರುವುದನ್ನು ರಾಜ್ಯ ಆರೋಗ್ಯ ಇಲಾಖೆಯ ಸಮೀಕ್ಷೆಗಳು ಹೇಳಿವೆ. ಆದ್ದರಿಂದ, ಈ ರೋಗದ ಸೋಂಕುಶಾಸ್ತ್ರ, ರೋಗಶಾಸ್ತ್ರ, ರೋಗನಿಧಾನ ಹಾಗೂ ಔಷಧದ ಅಭಿವೃದ್ಧಿ ಕುರಿತಂತೆ ಇನ್ನೂ ಆಳವಾದ ಸಂಶೋಧನೆಗಳಾಗಬೇಕಿದೆ. ಇದು ವೈದ್ಯಕೀಯ ಶಾಸ್ತ್ರದ ಅಪಾರ ಜ್ಞಾನ ಮತ್ತು ಕೌಶಲ್ಯ ಬೇಡುವ ಸಂಶೋಧನಾ ಕಾರ್ಯ. ಇದಕ್ಕೆ ಪುಣೆಯ ನ್ಯಾಶನಲ್ ಇನ್ಟಿಟ್ಯೂಟ್ ಆಫ್ ವೈರಾಲಾಜಿ ಹಾಗೂ ಚೆನೈನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ತಜ್ಞರ ಸಹಭಾಗಿತ್ವವೂ ಇದ್ದರೆ ಒಳ್ಳೆಯದೆಂದು ತಜ್ಞರ ಅಭಿಪ್ರಾಯ ಪಡುತ್ತಾರೆ. ಹೀಗಾಗಿ, ಭಾರತೀಯ ವೈದ್ಯಕೀಯ ವಿಜ್ಞಾನ ಸಂಶೋಧನಾ ಕೌನ್ಸಿಲ್ (ಐ.ಸಿ.ಎಮ್.ಆರ್) ನೇತೃತ್ವದಲ್ಲಿ ಕೇಂದ್ರ ಸರ್ಕಾರವೇ ಈ ಸಂಶೋಧನೆಗೆ ಚಾಲನೆ ನೀಡಲು, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ತ್ವರಿತವಾಗಿ ಬೇಡಿಕೆ ಸಲ್ಲಿಸಬೇಕಿದೆ. ರೋಗಪರೀಕ್ಷೆಗೆ ಬೇಕಾದ ರಕ್ತ ಮತ್ತು ಮತ್ತಿತರ ನಮೂನೆಗಳು, ಸಾಕ್ಷ್ಯಗಳು ಹಾಗೂ ಸುಳಿವುಗಳು ಈಗ ಮಾತ್ರ ಹೇರಳವಾಗಿ ಲಭಿಸುವುದರಿಂದ, ಈ ಉನ್ನತ ಸಂಶೋಧನಾ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ, ಕೇಂದ್ರ ಸರ್ಕಾರದ ಆರೋಗ್ಯ ಮಂತ್ರಾಲಯವನ್ನು ರಾಜ್ಯ ಸರ್ಕಾರ ಕೇಳಿಕೊಳ್ಳಬೇಕಿದೆ. ಕೇಂದ್ರ ಸರ್ಕಾರದ ಆರೋಗ್ಯ ಮಂತ್ರಾಲಯದ ತಜ್ಞರ ತಂಡ ಮಲೆನಾಡಿನ ಪ್ರದೇಶಕ್ಕೆ ತಕ್ಷಣ ಭೇಟಿ ನೀಡುವಂತೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು.
3) ಶಿವಮೊಗ್ಗದಲ್ಲಿರುವ ರೋಗಪತ್ತೆ ಪ್ರಯೋಗಾಲಯವನ್ನು ಸುಸಜ್ಜಿತಗೊಳಿಸುವ ಕುರಿತು: ಶಿವಮೊಗ್ಗದಲ್ಲಿ ಈಗಾಗಲೇ ಮಂಗನ ಕಾಯಿಲೆ ವೈರಸ್ಸನ್ನು ಪತ್ತೆ ಹಚ್ಚುವ ಪ್ರಯೋಗಾಲಯ ಇದೆ. ಆದರೆ ಅದು ತಜ್ಞ ವೈದ್ಯರು, ಕೌಶಲ್ಯಭರಿತ ಪೂರ್ಣಕಾಲಿಕ ತಜ್ಞರ, ತಾಂತ್ರಿಕ ಸಿಬ್ಬಂದಿಗಳು ಹಾಗೂ ಸಾಕಷ್ಟು ಅನುದಾನವಿಲ್ಲದೆ ಬಳಲುತ್ತಿದೆ. ಆದ್ದರಿಂದ, ತಕ್ಷಣದಲ್ಲಿ ಪೂರ್ಣಕಾಲಿಕ ತಜ್ಞರು ಸಿಬ್ಬಂದಿಗಳನ್ನು ನಿಯೋಜಿಸಿ, ಅಗತ್ಯವಿರುವ ಸೌಲಭ್ಯ ಮತ್ತು ಅನುದಾನವನ್ನು ಒದಗಿಸಬೇಕು, ಇದನ್ನೊಂದು ಉತ್ಕೃಷ್ಟ ಮಾಹಿತಿ ಕೇಂದ್ರವನ್ನಾಗಿ ಮತ್ತು ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುವ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕಿದೆ.
ಈ ಮೂರೂ ಕಾರ್ಯಗಳನ್ನು ಸರ್ಕಾರವು ತುರ್ತಾಗಿ ಕೈಗೊಂಡು, ಸಾಂಕ್ರಾಮಿಕ ರೋಗವಾಗಿ ಬದಲಾಗುತ್ತಿರುವ ಮಂಗನ ಕಾಲೆಯನ್ನು ನಿಯಂತ್ರಿಸಲು ತರ್ತುಕ್ರಮಕ್ಕೆ ಈ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ. ಸರ್ಕಾರ ಇಂದಿನ ಮಂಗನ ಕಾಲೆಯ ಪರಿಸ್ಥಿತಿಯನ್ನು ವೈದ್ಯಕೀಯ ಗಂಭೀರ ತುರ್ತುಪರಿಸ್ಥಿತಿ ಎಂದು ಪರಿಗಣಿಸಬೇಕೆಂದು ಕೋರುತ್ತೇವೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಅನಂತ ಹೆಗಡೆ ಆಶೀಸರ, ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ, ಕರ್ನಾಟಕ,
ಪ್ರೊ|| ಬಿ.ಎಂ. ಕುಮಾರಸ್ವಾಮಿ ಶಿವಮೊಗ್ಗ ಸಂಚಾಲಕರು, ಪಶ್ಚಿಮಘಟ್ಟ ಉಳಿಸಿ ಆಂದೋಲನ
ಡಾ|| ಟಿ.ವಿ.ರಾಮಚಂದ್ರ, ಪರಿಸರ ವಿಜ್ಞಾನ, ಭಾರತೀಯ ವಿಜ್ಞಾನ ಸಂಸ್ಥೆ
ನಾಗೇಶ ಹೆಗಡೆ, ಪರಿಸರ ತಜ್ಞರು ಹಾಗೂ ವೈಜ್ಞಾನಿಕ ಬರಹಗಾರರು
ಡಾ|| ಕೇಶವ ಕೊರ್ಸೆ, ತಜ್ಞ ಸದಸ್ಯರು ರಾಜ್ಯ ಔಷಧಿ ಸಸ್ಯ ಪ್ರಾಧಿಕಾರ
ಡಾ|| ವಾಮನ್ ಆಚಾರ್ಯ, ಮಾಜಿ ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
Discussion about this post