ಕನ್ನಡದ ಅಳಿವು ಮತ್ತು ಉಳಿವು ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಡ್ನುಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ಅರಿತುಕೊಳ್ಳಬೇಕಾಗಿದೆ.
ಮಗು ತನ್ನ ಪ್ರಾಥಮಿಕ ಶಿಕ್ಷಣವನ್ನ ತನ್ನ ಮಾತೃಭಾಷೆಯಲ್ಲಿ ಕಲಿತಾಗ ಭಾಷಾಪ್ರಾವಿಣ್ಯತೆ ಗಟ್ಟಿಯಾಗಲು ಸಾಧ್ಯ ಎಂದು ಹಲವು ಭಾಷಾತಜ್ಞರ ಸಮಿತಿಗಳು ವರದಿ ನೀಡಿವೆ. ಹೀಗಿದ್ದರೂ ಸಹ ಸರ್ಕಾರ ಹಾಗು ಪೋಷಕರು ಆಂಗ್ಲಮಾಧ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಭವಿಷ್ಯವನ್ನು ಕೇಂದ್ರೀಕರಿಸಿಕೊಂಡಿದ್ದಾರೆ. ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಮಾತೃಭಾಷೆಯು ತಳಮಟ್ಟದಿಂದ ರೂಪಗೊಂಡಾಗ ಅನ್ಯ ಭಾಷೆಯನ್ನಾಗಲಿ ಜ್ಞಾನವನ್ನಾಗಲಿ ಸುಲಲಿತವಾಗಿ ಗ್ರಹಿಸಲು ಸಾಧ್ಯವಾಗುತ್ತದೆ.
ಪೋಷಕರ ಧಾವಂತದಲ್ಲಿ ಫಾರಂ ಜಾನುವಾರುಗಳಂತೆ ಮಕ್ಕಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಊಟ ಆಟ ಪಾಠ ಮಾಡಲೇಬೇಕೆಂಬ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೆ. ತಮ್ಮ ಮಾತೃಭಾಷೆ ಯಾವುದೇ ಆಗಿರಲಿ ಆ ಭಾಷೆಯಬಗ್ಗೆ ಅದೇನೋ ಒಂದುರೀತಿಯ ತಾತ್ಸಾರ. ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಬೇಕೆಂಬ ಹಠ ಮಗು ಹುಟ್ಟುವ ಮೊದಲೇ ಹುಟ್ಟಿರುತ್ತದೆ.
2000 ನೇ ಇಸವಿಯಿಂದ ಈಚೆಗೆ ಜಾಗತೀಕರಣದ ಪರಿಣಾಮವಾಗಿ ಭಾರತೀಯರ ಜೀವನ ಶೈಲಿ ಹಲವು ಮಜಲುಗಳನ್ನ ಪಡೆದುಕೊಂಡಿದೆ. ಇದಕ್ಕೂ ಮೊದಲು ಟಿವಿ ಎಂಬ ಮಾಯಾಲೋಕ ಮಾತ್ರ ಮಕ್ಕಳ ಕಲಿಕೆಗೆ ಮಾರಕ ಎನ್ನುವಂತಿತ್ತು. ಆಗಿನ ಟಿವಿ ಕಾರ್ಯಕ್ರಮಗಳಲ್ಲಿ ಉಪಯುಕ್ತ ಜೀವನ ಕ್ರಮಕ್ಕೆ ಪೂರಕವಾದ ಮಾಹಿತಿಗಳು ಲಭ್ಯವಿತ್ತು. ಬದಲಾದ ಕಾಲಘಟ್ಟದಲ್ಲಿ ಟಿವಿಯೊಂದಿಗೆ ಕಂಪ್ಯೂಟರ್, ಮೊಬೈಲ್, ಟ್ಯಾಬ್‍ಗಳಿಗೆ ಜೀವ ತುಂಬಲು ಇಂಟರ್ ನೆಟ್ ಬಂದನಂತರ ಶಿಕ್ಷಣದ ಬೋಧನಾ ಕ್ರಮಗಳು ಬದಲಾಗುತ್ತಾ ಬಂದಿವೆ.
ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡನಂತರ ಅಕ್ಷರಸ್ಥ ಹಾಗು ಅನಕ್ಷರಸ್ಥ ಎಂಬ ಭೇದ ಭಾವಗಳಿಲ್ಲದೇ ಸರಳವಾಗಿ ಅರ್ಥೈಸಿಕೊಳ್ಳುವಂತಹ ಅಪ್ಲಿಕೇಷನ್ಸ್ ಗಳು ಸೃಷ್ಠಿಯಾಗುತ್ತಲೇ ಇವೆ. ಇದರ ಪರಿಣಾಮವಾಗಿ ಹುಟ್ಟಿದ ಮಗುವಿನಿಂದ ವೃದ್ದರಾಧಿಯಾಗಿ ಅವರÀವರಿಗೆ ಬೇಕಾದ ಸಾಮಾಜಿಕ ಜಾಲತಾಣಗಳು, ಗೇಮ್ಸ್, ಜೂಜಾಟಗಳು, ಅಶ್ಲೀಲ ವಿಡಿಯೋ ತುಣುಕುಗಳು ಹತ್ತು ಹಲವು ಬಗೆಯ ಅನಿಯಂತ್ರಿತ ಆರೋಗ್ಯಕರವಲ್ಲದ ಮನೋರಂಜನೆಗೆ ದಾಸರಾಗಿ ಮಾನಸಿಕ ವ್ಯಸನಿಗಳಾಗುತ್ತಿದ್ದಾರೆ.
ವಿಶೇಷವಾಗಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಮೊಬೈಲ್ ನೀಡಿ ಕ್ಷಣಿಕವಾಗಿ ಖುಷಿಪಡಿಸಲು ಹೋಗಿ ಅವರ ಮುಂದಿನ ಭವಿಷ್ಯನನ್ನೇ ಪೋಷಕರು ತಮ್ಮ ಕೈಯಾರೇ ಹಾಳುಗೆಡವುತ್ತಿದ್ದಾರೆ.
ಇದೆಲ್ಲದರ ಮೂಲ ನಮ್ಮ ಸಾಂಪ್ರಾದಾಯಿಕ ಜೀವನ ಶೈಲಿ ನಶಿಸಿ ಹೋಗಿರುವುದಾಗಿದೆ. ಹಿಂದಿನವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವಾಗ ಕುಟುಂಬವೇ ಮೊದಲ ಪಾಠ ಶಾಲೆಯಾಗಿ ಅಪ್ಪ, ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಮಾವ, ಅಜ್ಜ, ಅಜ್ಜಿ, ಅಕ್ಕ, ತಂಗಿ, ಅಣ್ಣ, ತಮ್ಮ ಇವೇ ಇತ್ಯಾದಿ ಸಂಬಂಧಗಳಿಂದ ಮಗು ತನ್ನ ಭಾಷೆ ಹಾಗು ತಾನು ವಾಸಿಸುತ್ತಿರುವ ಸೀಮೆಯ ಸೊಬಗು ಹಾಗು ಸಂಬಂಧವನ್ನ ಅದರ ಬೆಳವಣಿಗೆಯ ಜೊತೆಯಲ್ಲೇ ಗ್ರಹಿಸುವ ಅವಕಾಶವಿತ್ತು. ಇನ್ನು ಶಾಲೆಗೆ ಸೇರುವ ಹಂತದಲ್ಲಿ ಬಹುತೇಕ ಮಕ್ಕಳು ಮಾತೃಭಾಷಾ ಮಾಧ್ಯಮದ ಶಾಲೆಗಳಲ್ಲಿ ಕಲಿಯಬೇಕಾಗಿತ್ತು. ಜಾಗತೀಕರಣದ ಪರಿಣಾಮವಾಗಿ ಪೋಷಕರಿಗೆ ಎಲ್ಲಿಲ್ಲದ ಇಂಗ್ಲೀಷ್ ವ್ಯಾಮೋಹದಿಂದ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಸೇರಿಸುವ ಪರಿಪಾಠ ಸರ್ವೇಸಾಮಾನ್ಯವಾಗಿದೆ.
ಪೋಷಕರು ತಾವು ಇಂಗ್ಲೀಷ್ ಕಲಿಕೆಯಲ್ಲಿ ಕೀಳರಿಮೆಯನ್ನು ಬೆಳಸಿಕೊಂಡು ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದ ಕಾರಣ ತಮ್ಮ ಮಕ್ಕಳಿಗೆ ಈ ಪರಿಸ್ಥಿತಿ ಬಾರದಿರಲೆಂಬ ಮೂಢನಿರ್ಧಾರದಿಂದ ಮಕ್ಕಳೊಂದಿಗೂ ಸಹ ಆಂಗ್ಲ ಭಾಷೆಯಲ್ಲಿ ಮಾತಾನಾಡುವ ಹುಂಬುತನ ಪ್ರದರ್ಶಿಸುತ್ತಿದ್ದಾರೆ.
ಪೋಷಕರಾದವರು ಗಂಭೀರವಾಗಿ ಆಲೋಚಿಸಬೇಕಾಗಿರುವುದು ಮಕ್ಕಳನ್ನ ಕೇವಲ ಆಂಗ್ಲ ಭಾಷಾ ಪ್ರಾವಿಣ್ಯರನ್ನಾಗಿಸದೇ ಕನ್ನಡದಲ್ಲಿ ಸಂಪನ್ಮೂಲಭರಿತವಾಗಿ ಲಭ್ಯವಿರುವ ಸಣ್ಣ ಕಥೆ ಕಾದಂಬರಿ ಕವನಗಳನ್ನು ಪೋಷಕರು ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಜೊತೆಗೆ ಮಕ್ಕಳಿಗೂ ಕಲೆ ಸಾಹಿತ್ಯ ಸಂಗೀತದ ಕುರಿತು ಅಭಿರುಚಿ ಹುಟ್ಟುವಂತೆ ಬೆಳೆಸಬೇಕು. ಇಲ್ಲವಾದಲ್ಲಿ ಶಿಕ್ಷಣ ಪದ್ದತಿ ಹಾಗು ಪೋಷಕರ ಧೋರಣೆ ಆಂಗ್ಲಮಾಧ್ಯಮದ ಸೆಳೆತದಿಂದಾಗಿ ಮಕ್ಕಳು ಮಾತೃಭಾಷೆಯನ್ನೂ ಮರೆತು ಅನ್ಯಭಾಷೆಯಲ್ಲಿಯೂ ಪ್ರಬುದ್ಧರಾಗದೇ ಅರೆಬೆಂದಾವಸ್ಥೆಯಿಂದ ಸಮಾಜಕ್ಕೆ ಮಾರಕರಾಗುತ್ತಿದ್ದಾರೆ.
ಇಂದಿನ ಶಿಕ್ಷಣದಲ್ಲಿ ಕೇವಲ ಅಂಕ ಗಳಿಕೆಯ ದೃಷ್ಠಿಯಿಂದ ಕನ್ನಡ ಪ್ರಥಮ ಭಾಷೆಯಾಗಿ ಮಾತ್ರ ಮಕ್ಕಳಿಗೆ ಪಠ್ಯಕ್ರಮದಲ್ಲಿ ಉಳಿದಿದೆ. ಈ ಮನೋಭಾವದಿಂದ ಪೋಷಕರು ಹಾಗೂ ಸರ್ಕಾರ ವಿನೂತನ ಮಾದರಿಯ ಶಿಕ್ಷಣ ಕಲಿಕಾ ಪ್ರಕಾರವನ್ನು ರೂಪಿಸುವ ಅನಿವಾರ್ಯತೆ ಇದೆ. ಶಾಲ ಹಂತದಲ್ಲಿಯೇ ಕನ್ನಡ ಭಾಷಾ ಸಂಘಟನೆಗಳನ್ನು ಕಟ್ಟಿ ಕಲೆ-ಸಾಹಿತ್ಯ ನಾಟಕ ಹಾಗೂ ಕನ್ನಡದ ಪರಂಪರೆಯ ಸಂರಕ್ಷಣೆಗೆ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. ದಿನ ಪತ್ರಿಕೆ-ವಾರ ಪತ್ರಿಕೆಗಳನ್ನು ಓದುವ ಹವ್ಯಾಸದ ಅಭಿರುಚಿ ಮಕ್ಕಳಲ್ಲಿ ಮೂಡುವಂತೆ ಮಾಡಿದಲ್ಲಿ ಮಕ್ಕಳ ಮುಂದಿನ ಭವಿಷ್ಯ ಸದೃಡವಾಗಿರುತ್ತದೆ. ಯಾವ ವ್ಯಕ್ತಿ ತನ್ನ ಮಾತೃ ಭಾಷೆಯಲ್ಲಿನ ಸತ್ವವನ್ನು ಅರಿತಿರುತ್ತಾನೋ ಆತ ಯಶಸ್ವಿ ಭಾಷಾ ಪ್ರವೀಣನಾಗುತ್ತಾನೆ.
ಸರ್ಕಾರಿ ಇಲಾಖೆ ಹಾಗೂ ಕೋರ್ಟ್ ಆದೇಶಗಳ ಪ್ರತಿಗಳನ್ನು ಕನ್ನಡದಲ್ಲಿಯೇ ಮುದ್ರಣವಾಗಬೇಕು ಆಗ ಪ್ರತಿ ಪ್ರಜೆಯು ವ್ಯಾಜ್ಯಗಳ ಕುರಿತು ಮಾಹಿತಿ ಪಡೆಯಲು ಸುಲಭವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡುವುದರ ಜೊತೆಗೆ ಆ ನಿಯಮಗಳು ಜಾರಿಯಾಗುವಂತೆ ಮಾಡಬೇಕು. ಭವಿಷ್ಯದ ಪ್ರಜೆಗಳಿಗಾದರೂ ಮಾತೃ ಭಾಷೆಯ ಮಹತ್ವ ತಿಳಿಯುವಂತ್ತಾಗುವ ನಿರ್ಣಂiÀi ಅತ್ಯವಶ್ಯಕವಾಗಿದೆ.
ಕನ್ನಡ ರಾಜ್ಯೋತ್ಸವದ ದಿನಾಚರಣೆಯ ದಿನದಲ್ಲಿ ಮಾತ್ರ ಗಣ್ಯರು ಕನ್ನಡವನ್ನು ನೆನಪಿಸಿಕೊಳ್ಳುವ ಪರಂಪರೆಯನ್ನು ಬಿಡಬೇಕು. ಸತ್ತವರನ್ನು ನೆನೆದ ಹಾಗೆ ಕನ್ನಡವನ್ನು ಸ್ಮರಿಸಲು ಕನ್ನಡ ಸತ್ತ ಭಾಷೆಯೂ ಅಲ್ಲ ಅಥವಾ ಅಳಿದು ಹೋಗುವಂತಹ ಭಾಷೆಯೂ ಅಲ್ಲ ಕನ್ನಡ ಸೂರ್ಯ ಚಂದ್ರರಂತೇ ಶಾಶ್ವತವಾಗಿರುವÀ ಭಾಷೆ. ಇದನ್ನ ಅರಿತು ಕನ್ನಡದ ಉಳಿವಿಗೆ ಕಾರ್ಯಪ್ರವೃತ್ತರಾಗೋಣ ಕನ್ನಡವೇ ಸತ್ಯ ಕನ್ನಡ ನಿತ್ಯ.

ಡಾ.ಬಿ.ಪಿ.ಸುರೇಶ್
ಮುಖ್ಯಸ್ಥರು, ಶಸ್ತ್ರ ಚಿಕಿತ್ಸಾ ವಿಭಾಗ,
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ,
ಪುರಲೆ, ಶಿವಮೊಗ್ಗ
Discussion about this post