ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಂಗಕರ್ಮಿ, ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಹಾಗೂ ರಂಗಕರ್ಮಿ ಕೆ.ಜಿ. ಮಹಾಬಲೇಶ್ವರ ಅವರಿಗೆ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ.
ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ವತಿಯಿಂದ ರಂಗಭೂಮಿಯಲ್ಲಿ 2022-23 ರಿಂದ 2024-25ರ ಅವಧಿಗೆ ಸಂಬಂಧಿಸಿದಂತೆ ಸೇವೆ ಸಲ್ಲಿಸಿರುವ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇನ್ನು, ಶಿವಮೊಗ್ಗ ಜಿಲ್ಲೆಯಿಂದ 2023-24ನೇ ಸಾಲಿನಲ್ಲಿ ಕೆ.ಜಿ. ಮಹಾಬಲೇಶ್ವರ್ ಹಾಗೂ 2024-25ನೇ ಹೊನ್ನಾಳಿ ಚಂದ್ರಶೇಖರ್ ಅವರುಗಳಿಗೆ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇಬ್ಬರು ಸಾಧಕರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಯಾರೆಲ್ಲಾ ಪ್ರಮುಖರಿಗೆ ಪ್ರಶಸ್ತಿ?
ಮೂರು ವರ್ಷಗಳಿಗೆ 3 ಜನರ ಕಲಾವಿದರನ್ನು ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2022ರ ಸಾಲಿಗೆ ಪ್ರಖ್ಯಾತ ನಟಿ ಉಮಾಶ್ರೀ, 2023ರ ಸಾಲಿಗೆ ನಾಟಕಕಾರ ಎಚ್.ಎಸ್. ಶಿವಪ್ರಕಾಶ್, 2024ರ ಸಾಲಿಗೆ ಪ್ರಸಿದ್ಧ ರಂಗಸಂಘಟಕ, ನಾಟಕಕಾರ ಮತ್ತು ಕೋಲಾರದ ಅದಮ್ಯ ಸಾಂಸ್ಕೃತಿಕ ಪ್ರತಿಷ್ಠಾನದ ರೂವಾರಿ ಕೆ. ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು, ವಾರ್ಷಿಕ ಪ್ರಶಸ್ತಿಗಳಲ್ಲಿ ನಟ ಪ್ರಕಾಶ್ ರೈ, ಬಿ. ಸುರೇಶ್, ಅಚ್ಯುತ ಕುಮಾರ್, ರಮೇಶ್ ಪಂಡಿತ್ ಹಾಗೂ ಡಾ.ಲಕ್ಷ್ಮೀಪತಿ ಕೋಲಾರ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಗಿದೆ.
ಯುವ ಪ್ರಶಸ್ತಿಗೆ ಡಾ.ಬೇಲೂರು ರಘುನಂದನ್, ರಾಜಗುರು ಹೊಸಕೋಟೆ, ಅಪ್ಪಣ್ಣ ರಾಮದುರ್ಗ, ಕಾಲೇಜು ರಂಗಭೂಮಿಯ ಪ್ರಸಿದ್ಧ ಸಂಘಟಕ ಹಾಗೂ ನಟ ರಂಗಸ್ವಾಮಿ ಜಿ. ಅವರನ್ನು ಆಯ್ಕೆ ಮಾಡಲಾಗಿದೆ.
ಹೊರನಾಡ ಕಲಾವಿದರಲ್ಲಿ ಮುಂಬೈನ ಪ್ರಸಿದ್ಧ ರಂಗ ನಿರ್ದೇಶಕಿ ಕನ್ನಡತಿ ನಂದಿತಾ ಯಾದವ್ ಮತ್ತು ಪಾಂಡಿಚೆರಿ ವಿವಿ ರಂಗತಜ್ಞೆ ಪ್ರಾಧ್ಯಾಪಕಿ ಡಾ. ಪವಿತ್ರಾ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದಾದ್ಯಂತ ವೃತ್ತಿ ರಂಗಭೂಮಿಯ 30ಕ್ಕೂ ಅಧಿಕ ಕಲಾವಿದರನ್ನು ವಾರ್ಷಿಕ ಪ್ರಶಸ್ತಿ ಮತ್ತು ದತ್ತಿನಿಧಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಒಟ್ಟಾರೆ 3 ಜೀವಮಾನ ಸಾಧನೆ, 75 ವಾರ್ಷಿಕ ಪ್ರಶಸ್ತಿಗಳು ಮತ್ತು 15 ದತ್ತಿನಿಧಿ ಪ್ರಶಸ್ತಿಗಳನ್ನು ಮೂರು ವರ್ಷದ ಸಾಲಿಗೆ ನೀಡಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post