ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತ ಎರಡು-ದಿನಗಳ ಚರ್ಚೆ ಡಿಸೆಂಬರ್ 14 ಮತ್ತು 15 ರಂದು ರಾಜ್ಯವಿಧಾನಸಭೆಯಲ್ಲಿ ನಡೆಯಲಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಡಿಸೆಂಬರ್ 07 ರಿಂದ 15 ರ ವರೆಗೆ ನಡೆಯಲಿರುವ 15 ನೇ ವಿಧಾನಸಭೆಯ ಎಂಟನೇ ಅಧಿವೇಶನದ ಮುಖ್ಯಾಂಶಗಳ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನವೆಂಬರ್ 25 ಮತ್ತು 26 ರಂದು ಗುಜರಾತ್ ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ಎಲ್ಲಾ ಮಜಲುಗಳ ಚರ್ಚೆ ಪೂರ್ಣ ಪ್ರಮಾಣದಲ್ಲಿ ಆಗಬೇಕೆಂಬ ಸದುದ್ದೇಶದ ಹಿನ್ನೆಲೆಯಲ್ಲಿ ತಾವು ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜಾತ್ಯಾತೀತ ಜನತಾದಳದ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿ ಈಗಾಗಲೇ ಎಲ್ಲರ ಸಹಕಾರವನ್ನು ಕೋರಿರುವುದಾಗಿ ತಿಳಿಸಿದರು.
ಡಿ.7 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಒಳಗೊಂಡಂತೆ ಎಲ್ಲಾ ಕಾರ್ಯಕಲಾಪಗಳು ಇರುತ್ತವೆ ಎಂದು ಸ್ವಷ್ಟಪಡಿಸಿದ ಅವರು ಸದನದಲ್ಲಿ ಹತ್ತು ವಿಧೇಯಕಗಳು ಮಂಡನೆಗೆ ಸಿದ್ಧವಿದೆ.
ಕೊರೋನಾ ಹಿನ್ನೆಲೆಯಲ್ಲಿ ಈ ಹಿಂದೆ ಕೈಗೊಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ ಕಲಾಪದಲ್ಲಿ ಪಾಲ್ಗೊಳ್ಳುವ ಸದಸ್ಯರು, ಕಲಾಪದ ಚಟುವಟಿಕೆಗಳಿಗೆ ನೆರವಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಲಾಪದ ವರದಿಯ ವೀಕ್ಷಣೆಗೆ ಆಗಮಿಸುವ ಮಾಧ್ಯಮದವರಿಗೆ ಮತ್ತೆ ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಿಸಿಕೊಂಡು ಬರಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಯೋಚಿಸಲಾಗಿದೆ ಎಂದರು.
ಕಳೆದ ಅಧಿವೇಶನದಲ್ಲಿ ಸಂವಿಧಾನ ಕುರಿತಂತೆ ಎರಡು ದಿನಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಚರ್ಚೆಯಲ್ಲಿ 50 ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡು ಭಾರತೀಯ ಸಂವಿಧಾನದ ವಿವಿಧ ಮಜಲುಗಳತ್ತ ಬೆಳಕು ಚೆಲ್ಲಿದ್ದಾರೆ. ಸದಸ್ಯರ ಅಭಿಪ್ರಾಯಗಳಲ್ಲಿನ ಮುಖ್ಯಾಂಶಗಳನ್ನು ಮಡಿಕೆ ಪತ್ರ ರೂಪದಲ್ಲಿ ಕ್ರೋಢೀಕರಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಹಾಗೂ ಮುಖ್ಯಮಂತ್ರಿ ವಿಜಯ ರೂಪಾನಿ ಅವರನ್ನು ಒಳಗೊಂಡಂತೆ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಗಣ್ಯರಿಗೂ ಮಡಿಕೆ ಪತ್ರವನ್ನು ವಿತರಿಸಿದ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಈ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತಲ್ಲದೇ ಪ್ರೋತ್ಸಾಹದಾಯಕ ವಾತಾವರಣವನ್ನು ಸೃಷ್ಟಿಸಿತು ಎಂದು ವಿವರಿಸಿದರು.
ಕೆವಾಡಿಯಾಕ್ಕೆ ಒಮ್ಮೆ ಭೇಟಿ ಕೊಡಿ!
ಕೊರೋನಾ ಉಪಟಳ ಮುಗಿದೊಡನೆಯೇ ಎಲ್ಲರೂ ಕೆವಾಡಿಯಾಕ್ಕೆ ಒಮ್ಮೆ ಭೇಟಿ ಕೊಡಿ. ನರ್ಮದಾ ನದಿಯ ತಟದಲ್ಲಿ ನಿರ್ಮಿಸಿರುವ ಭಾರತದ ಉಕ್ಕಿನ ಮನುಷ್ಯ ಸರ್ದಾರ ಪಟೇಲ್ ಅವರ ಲೋಹದ ಏಕತಾ ಮೂರ್ತಿ, ಮಕ್ಕಳ ಪೋಷಕಾಂಶ ಉದ್ಯಾನ, ಆರೋಗ್ಯವನ, ಹೂಬನ, ಚಿಟ್ಟೆ ಉದ್ಯಾನ ಎಲ್ಲವನ್ನೂ ವರ್ಣಿಸಲು ಅಸಾಧ್ಯ. ಇದನ್ನು ಒಮ್ಮೆ ಕಂಡು ಕಣ್ತುಂಬಿಕೊಂಡರೆ ಮಾತ್ರ ಅರ್ಥವಾಗುತ್ತದೆ ಎಂದು ಅವರು ಬಣ್ಣಿಸಿದರು.

ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ಅಲ್ಲಿನ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post