ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ (KPSC Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು (ED Raid) ಮಂಗಳವಾರ ರಾಜ್ಯದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕ ಮತ್ತು ಗುಜರಾತ್‌ನ ಒಟ್ಟು 21 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಅಮಾನತುಗೊಂಡಿರುವ ಕೆಪಿಎಸ್‌ಸಿ ಸದಸ್ಯ ಶಿವಶಂಕರಪ್ಪ ಸಾಹುಕಾರ್ ಅವರ ಮನೆ, ಕೆಪಿಎಸ್‌ಸಿ ಕಚೇರಿ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸ ಹಾಗೂ ‘M/s ಎಡುಟೆಸ್ಟ್ ಸೊಲ್ಯೂಷನ್ಸ್’ ಸಂಸ್ಥೆಯ ಕಚೇರಿ ಸೇರಿದಂತೆ ಮಧ್ಯವರ್ತಿಗಳು ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ತಲಾ ₹70ರಿಂದ ₹80 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಲ್ಲದೆ, ಉತ್ತರ ಪತ್ರಿಕೆಗಳನ್ನು ತಿದ್ದುಪಡಿ ಮಾಡುವುದು ಹಾಗೂ ಕೆಪಿಎಸ್‌ಸಿ ಅಧಿಕಾರಿಗಳ ಸಂಬಂಧಿಕರಿಗೆ ಅಕ್ರಮವಾಗಿ ಹುದ್ದೆಗಳನ್ನು ಕೊಡಿಸಿರುವ ಆರೋಪವೂ ಪ್ರಕರಣದಲ್ಲಿ ಕೇಳಿಬಂದಿದೆ.
KPSC Scam : ಏಕಕಾಲದಲ್ಲಿ ಶೋಧ ಕಾರ್ಯಾಚರಣೆ
ಈ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಇಡಿ ಅಧಿಕಾರಿಗಳು ಇದೀಗ ಕರ್ನಾಟಕ ಮತ್ತು ಗುಜರಾತ್‌ನ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
Also Read>> ಕುವೆಂಪು ವಿವಿ | PG ಪ್ರವೇಶಾತಿ ಅವಧಿ ವಿಸ್ತರಣೆ | ಪೇಮೆಂಟ್ ಸೀಟು ಶುಲ್ಕದಲ್ಲಿ ಭಾರೀ ವಿನಾಯಿತಿ
ಇನ್ನು ತಮ್ಮ ಪುತ್ರಿಯರ ಅಕ್ರಮ ನೇಮಕಾತಿಗೆ ನೆರವಾದ ಆರೋಪದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಸದಸ್ಯರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜುಲೈ 13ರಂದು ರಾಜ್ಯಪಾಲರು ಅಮಾನತುಗೊಳಿಸಿದ್ದರು.
ಪ್ರಸ್ತುತ ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಸ್ಥಳಗಳಲ್ಲಿ ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





