ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಥೆ
ಎಂದರೆ ಹೇಗಿರಬೇಕು
ಅಲ್ಲಿ
ನಾನಿರಬೇಕು
ನೀನಿರಬೇಕು
ನೆನಪಿರಬೇಕು
ಕನಸಿರಬೇಕು
ಕೆಲವು ಕಥೆಗಳೇ ಹಾಗೆ ಮನದಲ್ಲಿ ನೆನಪುಗಳ ಗೀಚುತ್ತಾ ಸಾಗುತ್ತವೆ. ಅದರ ಆಗುಹೋಗುಗಳೊಂದಿಗೆ ನಾವು ತೇಲುತ್ತಾ ಮುಳುಗುತ್ತಾ ಹೋಗುತ್ತೇವೆ. ಅಲ್ಲಿ ಎಲ್ಲವೂ ಇರುತ್ತದೆ. ಬದುಕು ಬವಣೆ, ನಿನ್ನೆ ನಾಳೆ, ನಾನು ನೀನು ಹೀಗೆ ಎಲ್ಲವೂ. ಅಂತಹ ಕತೆಗಳಿಗೆ ಕೊಟ್ಟ ಸಮಯ ನೆನಪಿನಲ್ಲಿ ಉಳಿಯುವುದು ಸಹಜ. ಆ ನೆನಪುಗಳೇ ಕಥೆಯಾದದ್ದು ಇದೆ. ಇತ್ತೀಚೆಗೆ ಓದಿದ ಕಥೆಗಳ ಗುಚ್ಛವೇ “ಲಾಲಿಪಾಪ್ ಮತ್ತು ಇತರ ಕಥೆಗಳು.” ಅದರ ಕುರಿತು ಒಂದಿಷ್ಟು ಮಾತು. ಲಾಲಿಪಪ್ ಮತ್ತು ಇತರ ಕಥೆಗಳು, ಭರ್ತಿ ಹತ್ತು ಕಥೆಗಳ ಪುಟ್ಟ ಸಂಕಲನ. ಹರಿಕಿರಣ್ ಹೆಚ್ ಇದರ ಕರ್ತೃ. ಅಲೆಗಳೇ ಏಳದ ಪುಟ್ಟ ನದಿಯೆದುರು ಕುಳಿತ ಅನುಭವ. ಸರಳತೆಯೇ ವಿಭಿನ್ನ ಎನ್ನಿಸುವ ಸಂದರ್ಭ ಇದು. ಅಂತಹುದರಲ್ಲಿ ಒಂದೊಂದೇ ಕತೆಯನ್ನು ದಾಟುತ್ತಾ, ಒಮ್ಮೊಮ್ಮೆ ಇದು ನನಗೆ ಆಗಿತ್ತು ಅಲ್ಲವೆ ಎನ್ನಿಸುವುದು, ಮತ್ತೊಮ್ಮೆ ಇದು ಅವರಿಗೆ ಆಗಿತ್ತು ಅಲ್ವಾ ಅನ್ನಿಸುವಂತದ್ದು. ಹುಟ್ಟಿದ ಕಥೆ ಕಾಡಲು ಇಷ್ಟು ಸಾಕು ಅಲ್ಲವೆ?
ಸಂಕಲನದ ಆರಂಭ ನಿರ್ಭಯ ಎಂಬ ಪುಟ್ಟ ಕಥೆಯೊಂದಿಗೆ. ನಿರ್ಭಯ ಎಂದಾಗೆಲ್ಲಾ ಮನಸ್ಸು ಮತ್ತೊಂದು ದಿಕ್ಕಿನಲ್ಲಿ ಓಡುವುದು ಸಹಜ. ಆದರೆ ಇದು ಆ ಕುರಿತಲ್ಲ. ಒಬ್ಬ ಸಾಮಾನ್ಯನ ಬದುಕು ಕ್ಷಣಗಳಲ್ಲಿ ಬದಲಾಗಿ ಮತ್ತೊಂದು ಹಂತ ತಲುಪುವ ಕಥೆ. ಯಾಕೆ ಇದನ್ನು ಮೊದಲು ಆರಿಸಿದರೋ ಗೊತ್ತಿಲ್ಲ. ಆದರೆ ಒಂದೇ ಗುಟುಕಿಗೆ ಮುಗಿಸುವ ವೇಗದಲ್ಲಿ ಕಥೆ ಸಾಗುತ್ತದೆ.
ಕೆಲವೊಮ್ಮೆ ಸಂಬಂಧಗಳು ಅತಿ ಸರಳವಾಗಿ ಮತ್ತು ಅನಿರೀಕ್ಷಿತವಾಗಿ ಹುಟ್ಟುತ್ತವೆ. ಬೆಸುಗೆ ಇನ್ನಿಲ್ಲದಂತೆ ಕಟ್ಟಿಕೊಂಡು ಬಿಡುತ್ತದೆ. ಅಂತಹುದೇ ಕಥೆ ‘ಕಷ್ಟಮರ್ ದೇವೋ ಭವ’. ಅಲ್ಲಿಯ ಕಂಪ್ಯೂಟರ್ ಅಂಗಡಿಯ ಮಾಲೀಕ, ಆತನ ಬದುಕು ನಿಮಗೆ ಎಲ್ಲಿಯೋ ನೋಡಿದಂತೆ ಇದೆಯಲ್ಲ ಎನ್ನುತ್ತಿರುವಂತೆ ಆತನಿಗೆ ದೊರಕುವ ಮೃದು ಮನಸ್ಸಿನ ಕಠಿಣ ಲೆಕ್ಕಾಚಾರದ ಗ್ರಾಹಕ, ಆತನ ಕುಟುಂಬ, ಆತನದೇ ಕಾರಣಗಳು ಹೀಗೆ ಕಥೆ ವಿಶಾಲವಾಗುತ್ತದೆ. ಏನೋ ಒಂದು ದೊಡ್ಡ ಘಟನೆ ಇಲ್ಲದೆ ಕಥೆ ಸರಳವಾಗಿ ಮುಗಿದು ಹೇಳಲು ಹೊರಟಿರುವುದನ್ನು ಹೇಳಿ ತೀರುತ್ತದೆ.
ಈ ಚೀನೀ ವೈರಸ್ಸಿನ ಹಾಗಡದಲ್ಲಿ ಒಂದೊಮ್ಮೆ ಅನ್ನಿಸಿತ್ತು ಕೂಡ, ಅಲ್ಲ ಈಗ ಆಕಸ್ಮಾತ್ ಈ ಮೊಬೈಲೇ ಹಾಳಾದರೆ ಓಡುವುದಾದರೂ ಎಲ್ಲಿಗೆ? ಇದರ ರಿಪೇರಿಗೆ ಜನ ಸಿಕ್ಕುವುದಿಲ್ಲ, ಹೊಸದು ಕೊಳ್ಳಲು ಅವಕಾಶವೂ ಇಲ್ಲ. ಹೀಗೆ ಕೆಲಸ ಇಲ್ಲದೆ ಕೂತಾಗ ತಲೆ ಕೆರೆಯಲು ಯೋಚನೆಗಳು. ಅಂತಹುದೇ ಒಂದು ಕಥೆ ಮೊಬೈಲ್ ಮತ್ತು ನಾನು. ಕಥೆಯ ವಿವರಣೆ ನೀಡಲಾರೆ. ಆದರೆ ಸುಲಿದ ಬಾಳೆ ಹಣ್ಣಿನಂದದಿ ನಿಮಗೊಂದು ತಟ್ಟನೆ ಸಲ್ಯೂಶನ್ ತಲೆಯೊಳಗೆ ಹಾದು ಹೋಗಲಿಕ್ಕೆ ಸಾಕು. ಮೊಬೈಲಿನಲ್ಲಿ ಬದುಕುವ ಜಗತ್ತು, ಅದರ ಪ್ರತಿನಿಧಿ.
ಇಷ್ಟೆಲ್ಲ ಆಗಿಯೂ ಬಾಲ್ಯವನ್ನು ಬರಸೆಳೆಯದಿದ್ದರೆ ಹೇಗೆ?! ಅದು ‘ಪರೀಕ್ಷೆ’ ಕಥೆಯಲ್ಲಿ ಸಿಗುತ್ತದೆ. ಎಲ್ಲರೂ ಎಂದಾದರೂ ಕಾಪಿ ಮಾಡಿಯೇ ಇರುತ್ತಾರೆ. ಅಂತಹುದೇ ಒಂದು ಘಟನೆ ಅದು. ನಂತರ ಸಿಗುವುದು ಆಸೆಗೆ ಮರುಳಾದ ‘ಉರುಳು’ ಕಥೆ. ಬದುಕಿನಲ್ಲಿ ಕೆಲವೊಮ್ಮೆ ತಿಳಿದೂ ತಿಳಿದೂ ಮೋಸ ಹೋಗಿಬಿಡುತ್ತೇವೆ. ಕೈಲಿರುವುದು ಖರ್ಚಾಗುವುದು ಸಾಮಾನ್ಯ. ಆದರೆ ಅದನ್ನು ಕಳೆದುಕೊಳ್ಳುವುದು ಬದುಕನ್ನೇ ಆವರಿಸುವ ಕತ್ತಲಿನಂತೆ. ಹಾಗೆ ಆಗದಿರಲಿ ಎನ್ನುವ ಮುಖ ಹೊತ್ತ ಕಥೆ.
ಈ ಲಿಂಕ್ ಮೂಲಕ ಲಾಲಿಪಾಪ್ ಮತ್ತು ಇತರ ಕಥೆಗಳು ಓದಿ
https://play.google.com/store/books/details?id=dnPcDwAAQBAJ
ಹೊಸ ಪ್ರಯತ್ನದ ‘ಕ್ಷಣಿಕ’, ಮದ್ಯ ವ್ಯಸನಿಯ ‘ಬಾಟ್ಲಿ’, ಮತ್ತೇನನ್ನೋ ಹೇಳಲು ಬಯಸುವ ‘ಭಯ’, ಸೇಡಿನ ‘ಕಾಫಿ ಬೈಟ್’ ಹೀಗೆ ಒಂದೊಂದೇ ನವಾನುಭವಗಳು. ಮೊದಲೇ ಹೇಳಿದಂತೆ ಇಲ್ಲಿ ಆಳದ ಕಣಿವೆಗಳಿಲ್ಲ, ತಿಳಿ ನೀರಿನ ಮೇಲಿನ ದೋಣಿಗಳು.
ಕೊನೆಯಲ್ಲಿ ಬರುವ ಕತೆ ‘ಲಾಲಿಪಾಪ್’. ಕಾಲದ ಹಿಂದೆ ಓಡುತ್ತಿರುವ ಈ ಬದುಕಿನಲ್ಲಿ ನಾವು ಕಂಡದ್ದೇ ಸತ್ಯ ಎಂದು ತಿಳಿದುಕೊಂಡಿರುತ್ತೇವೆ. ಅಲ್ಲಿ ಹಣ, ಸಮಯ, ಶಕ್ತಿ ಹೀಗೆ ಎಲ್ಲಾ ಇರುತ್ತದೆ, ಮಾನವೀಯತೆ ಒಂದನ್ನು ಬಿಟ್ಟು. ಅದನ್ನು ತಿಳಿಸುವ ಪ್ರಯತ್ನ ‘ಲಾಲಿಪಾಪ್’.
ಪ್ರತಿ ಕಥೆಗಾರ ಹುಟ್ಟುವುದು ಕಥೆಯೆಂಬ ಬಸಿರ ಪೆತ್ತಾಗ. ಆತನಲ್ಲಿ ಆ ಓಘವನ್ನು ಕಾಯುವ ಜತನತೆಯು ಇರಬೇಕು. ಕೇಳಿದ್ದು, ಕಂಡಿದ್ದು, ಓದಿದ್ದು, ಬಯಸಿದ್ದು, ಕಾಡಿದ್ದು ಹೀಗೆ ಹಲವು ಇದ್ದುಗಳು ಇದ್ದಾಗ ಅವು ಕರಗಿ ಅಲ್ಲೊಂದು ಅದ್ಭುತ ಹುಟ್ಟುತ್ತದೆ. ಅದೇ ಕಥೆ. ಪ್ರಸ್ತುತ ಕಥಾಜೀವಿ ಹರಿಕೃಷ್ಣ ಹೇಳುವಂತೆ ಪ್ರತಿ ಕಥೆಯೂ ಬೇರೆ ಬೇರೆ ವಿಷಯಗಳ ಅರುಹುತ್ತದೆ. ಅವರ ಚೊಚ್ಚಲ ಫಸಲು ‘ಲಾಲಿಪಾಪ್ ಮತ್ತು ಇತರ ಕಥೆಗಳು’. ಅವರು ಇನ್ನಷ್ಟು ಕಥೆಗಳನ್ನು ರಚಿಸಲಿ. ಯಶಸ್ಸು ಬೆನ್ನಟ್ಟಿ ಅವರ ಕೈ ಸೇರಲಿ. ಶುಭಾಶಯಗಳು ಮೊದಲ ಪ್ರಯತ್ನಕ್ಕೆ.
Get in Touch With Us info@kalpa.news Whatsapp: 9481252093
Discussion about this post