ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವೀರಶೈವ ಧರ್ಮ #Veerashaiva ಪ್ರಾಚೀನ. ಇದರ ಇತಿಹಾಸ ಪರಂಪರೆ ಅಪೂರ್ವ. ಲೋಕೋತ್ತರ ಉಜ್ವಲ ಬದುಕಿಗೆ ವೀರಶೈವ ಧರ್ಮ ದಾರಿದೀಪ. ಅರಿವಿನ ಆದರ್ಶಗಳ ಮೂಲಕ ಜನಮನದ ಉನ್ನತಿಗೆ ಸದಾ ಶ್ರಮಿಸಿದೆ. ಜೀವ ಶಿವನಾಗಲು ಅಂಗ ಲಿಂಗವಾಗಲು ಭವಿ ಭಕ್ತನಾಗಲು ಸಂಸ್ಕಾರ ಕೊಟ್ಟು ಕಲಿಸಿದ ಧರ್ಮ. ಶಿವ ದೀಕ್ಷೆಯ ಮೂಲಕ ಜೀವನದಲ್ಲಿ ಸಿದ್ಧಿ ಸಾಧನೆಗಳನ್ನು ಕೈಗೊಳ್ಳಲು ಸ್ಫೂರ್ತಿಯಿಟ್ಟ ಧರ್ಮ. ಕಾಯಕ ಮತ್ತು ದಾಸೋಹದ ಮೂಲಕ ಜೀವ ಜಗತ್ತಿಗೆ ಸಂಜೀವಿನಿಯಾದ ಧರ್ಮ. ದೇಶಕ್ಕೊಂದು ಸಂವಿಧಾನವಿರುವಂತೆ ಧರ್ಮಕ್ಕೊಂದು ಉತ್ಕೃಷ್ಟ ಸಂವಿಧಾನ ಕೊಟ್ಟ ಧರ್ಮ. ಅಷ್ಟಾವರಣ ಪಂಚಾಚಾರ ಮತ್ತು ಷಟ್ಸ್ಥಲಗಳ ಮೂಲಕ ಆಧ್ಯಾತ್ಮದ ಚಿಂತನಗಳನ್ನು ಕೊಟ್ಟ ಧರ್ಮ. ಶಿವಶಕ್ತಿಯಿಂದ ನಿರ್ಮಾಣಗೊಂಡ ಈ ಜಗದಲ್ಲಿ ಹಲವಾರು ಧರ್ಮಗಳು ಉದಯಿಸಿ ಜನಸಮುದಾಯದ ಬಾಳಿಗೆ ಬೆಳಕು ತೋರಿವೆ. ಪರಶಿವನ ಪಂಚಮುಖಗಳಿಂದ ಪರಮ ಪಂಚಾಚಾರ್ಯರು ಭೂ ಮಂಡಲದಲ್ಲಿ ಅವತರಿಸಿ ವೀರಶೈವ ಸಿದ್ಧಾಂತವನ್ನು ಸಂಸ್ಥಾಪಿಸಿ ಸಕಲರಿಗೂ ಒಳಿತನ್ನು ಉಂಟು ಮಾಡಿದ ಧರ್ಮ ಇದಾಗಿದೆ.
ಪಂಚಪೀಠಗಳು ವೀರಶೈವ ಧರ್ಮದ ಮೂಲ ಕೇಂದ್ರಗಳು . ಶಿವಾದ್ವೈತ ಸಿದ್ಧಾಂತದ ಪವಿತ್ರ ತಾಣಗಳು. ಶ್ರೀ ರಂಭಾಪುರಿ, #Rambhapuri ಶ್ರೀ ಉಜ್ಜಯಿನಿ #Ujjaini ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶಿ ಪೀಠಗಳು. ಪಂಚಪೀಠಗಳ ಪವಿತ್ರ ಗುರು ಪರಂಪರೆ ಎಲ್ಲ ಪರಂಪರೆಗಳಿಗೆ ಪವಿತ್ರ ಗಂಗೋತ್ರಿ. ಪ್ರಥಮ ಗುರುಪೀಠವಾಗಿರುವ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಪೀಠವನ್ನು ಸೃಷ್ಟಿ ಸೌಂದರ್ಯದ ಮಡಿಲಲ್ಲಿ ಭದ್ರಾ ನದಿ #BhadraRiver ತಟದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸಂಸ್ಥಾಪಿಸಿದ ಭವ್ಯ ಇತಿಹಾಸವಿದೆ. ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಉದ್ದರಿಸಿದ ಪವಿತ್ರತಾಣವಿದು. ಈ ಭವ್ಯ ಪೀಠ ಪರಂಪರೆಯಲ್ಲಿ 120 ಜನ ಪರಮಾಚಾರ್ಯರು ಶ್ರೀ ಪೀಠವನ್ನು ಆರೋಹಣ ಮಾಡಿ ಭಕ್ತ ಸಂಕುಲದ ಬಾಳಿಗೆ ದಾರಿ ತೋರಿದ್ದಾರೆ. ಜನ ಜಾಗೃತಿಯ ಮೂಲಕ ಲೋಕ ಕಲ್ಯಾಣ ಸತ್ಕಾರ್ಯಗಳನ್ನು ಮಾಡಿ ಜನಮನದ ಉಸಿರಾಗಿ ಬೆಳಕು ತೋರಿದ್ದಾರೆ.
ಶ್ರೀ ಜಗದ್ಗುರು ರಂಭಾಪುರಿ ಪೀಠ ಪರಂಪರೆಯ 119ನೆಯ ಜಗದ್ಗುರುಗಳಾಗಿ ವೀರಸಿಂಹಾಸನ ಮಹಾಪೀಠವನ್ನು 1947ರಲ್ಲಿ ಆರೋಹಣ ಮಾಡಿದ ಪರಮಾಚಾರ್ಯರೇ ಶ್ರೀಮದ್ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳವರು. ಇವರ ಜನನ ಬೆಳೆದ ರೀತಿ ತೋರಿದ ದಾರಿ ಸಕಲರ ಬಾಳಿನ ಮೇಲೆ ಅಗಾಧ ಪರಿಣಾಮವನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಹುಬ್ಬಳ್ಳಿ ತಾಲೂಕಿನಲ್ಲೊಂದು ಚಿಕ್ಕ ಗ್ರಾಮ ಪಾಲಿಕೊಪ್ಪ. ಅಲ್ಲಿರುವ ಹಿರೇಮಠ ಶ್ರೀಮದ್ರಾಂಭಾಪುರಿ ಶಾಖಾಮಠ. ಶ್ರೀ ವೇ.ಅಡವಯ್ಯ-ಶ್ರೀಮತಿ ಸಿದ್ದಮ್ಮರ ಪವಿತ್ರ ಗರ್ಭದಿಂದ ದಿನಾಂಕ 8-4-1903ರಂದು ಸಂಜನಿಸಿದವರೇ ಶ್ರೀಮದ್ರಾಂಭಾಪುರಿ ವೀರ ಗಂಗಾಧರ ಜಗದ್ಗುರುಗಳು #Veeragangadharaswamiji
ಜನ್ಮದಾತರಿಂದ ಅತ್ಯುತ್ತಮ ಸಂಸ್ಕಾರ ಪಡೆದ ಇವರು ಭೌತಿಕ ಶಿಕ್ಷಣ ಜೊತೆ ಜೊತೆಗೆ ಯೋಗ ಧ್ಯಾನ ತಪಸ್ಸು ಇವುಗಳ ಮೂಲಕ ಆತ್ಮ ಬಲವನ್ನು ಪಡೆದುಕೊಂಡರು. ಗಿರಿ ಬೆಟ್ಟಗಳಲ್ಲಿ ನದಿಕೊಳ್ಳಗಳ ಪವಿತ್ರ ಪ್ರಶಾಂತ ಪರಿಸರದಲ್ಲಿ ಶಿವ ತಪೋನುಷ್ಟಾನಗಳನ್ನು ಕೈಗೊಂಡು ಸಿದ್ಧಿ ಪುರುಷರಾದರು. ಓದಿದ ಜ್ಞಾನಕ್ಕಿಂತ ಲೋಕಾನುಭವದ ಜ್ಞಾನಸಿದ್ಧಿ ಪಡೆದಿದ್ದರು. ಇವರ ಸದ್ಗುಣಗಳನ್ನು ಕಂಡ ಬಂಕಾಪುರ ಅರಳೆಲೆ ಹಿರೇಮಠದ ಸಾತ್ವಿಕ ಮೂರ್ತಿಯಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಪಾಲಿಕೊಪ್ಪ ಹಿರೇಮಠದ ಪಟ್ಟಾಧಿಕಾರಿಗಳನ್ನಾಗಿ ಮಾಡಿ ಶುಭ ಹಾರೈಸಿದರು. ಮುಂದಡಿ ಇಟ್ಟ ಗುರು ಗಂಗಾಧರ ಶಿವಾಚಾರ್ಯರು ಹಿಂದೆ ಎಂದೂ ಉಳಿಯಲಿಲ್ಲ. ಆಧ್ಯಾತ್ಮ ಲೋಕದ ಅದ್ಭುತ ಶಕ್ತಿಯಾಗಿ ಕಾರ್ಯ ನಿರ್ವಹಿಸಿದರು.
ಶಿವಮೊಗ್ಗ #Shivamogga ಜಿಲ್ಲೆ ಆನವಟ್ಟಿ ವಾಸ್ತವ್ಯದಲ್ಲಿದ್ದ ರಾಜಾಧಿರಾಜ ಪೂಜಿತರಾದ ಶ್ರೀಮದ್ರಾಂಭಾಪುರಿ ಶಿವಾನಂದ ಜಗದ್ಗುರುಗಳ ಪ್ರಥಮ ದರ್ಶನ ಇವರಿಗಾಗುತ್ತದೆ. ಇದಕ್ಕೆ ಬಂಕಾಪುರದ ಶ್ರೀರುದ್ರಮುನಿ ಶಿವಾಚಾರ್ಯರೇ ಕಾರಣ. ಇಡೀ ರಾತ್ರಿ ತಂಗಿದ ಕುಟೀರದ ಸುತ್ತ ಗಸ್ತು ತಿರುಗಿ ಮಹಾಗುರುವಿನ ಸಂರಕ್ಷಣಾ ಕಾರ್ಯದ ವೈಖರಿಯನ್ನು ಕಂಡು ಶ್ರೀ ಶಿವಾನಂದ ಜಗದ್ಗುರುಗಳು ಭಾವ ಮನ ತುಂಬಿ ಆಶೀರ್ವದಿಸಿದರು. ಪಾಲಿಕೊಪ್ಪ ಹಿರೇಮಠದ ಗುರು ಗಂಗಾಧರ ಶಿವಾಚಾರ್ಯರ ಜೀವನ ಸಂಪೂರ್ಣವಾಗಿ ಪರಿವರ್ತನೆಗೊಂಡಿತು. ಇವರ ನಿಷ್ಠ ಸ್ವಾಭಿಮಾನ ಕರ್ತವ್ಯ ನಿಷ್ಠ ಕಂಡ ಜಗದ್ಗುರುಗಳು ಬೆಂಗಳೂರಿನ ಶ್ರೀ ಪೀಠದ ಖಾಸಾ ಶಾಖಾಮಠಗಳಾಗಿರುವ ಶ್ರೀ ಮಹಂತಿನ ಮಠದ ಮತ್ತು ವಿಭೂತಿಪುರ ಮಠದ ಒಡೆಯರಾಗಿ ಕಾರ್ಯ ನಿರ್ವಹಿಸಲು ನಿಯಮಿಸುತ್ತಾರೆ.
ಈ ಅವಧಿಯಲ್ಲಿ ಅವರು ಭಕ್ತಾದಿಗಳಿಗೆ ಕೊಟ್ಟ ಸಂಸ್ಕಾರ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಬೇವಿನ ರಸ-ಹೆಸರು ಕಾಳು ಸೇವಿಸಿ ತಪಸ್ಸು ಮಾಡಿ ಅದ್ಭುತ ಶಕ್ತಿಯನ್ನು ಸಂಪಾದಿಸಿಕೊಂಡರು. ಸೂರ್ಯ ತಾನು ಬೆಳಗಿ ಜಗತ್ತಿಗೆ ಬೆಳಕು ನೀಡುತ್ತಾನೆ. ಊದುಬತ್ತಿ ತಾನು ಸುಟ್ಟುಕೊಂಡು ಸುಗಂಧ ಬೀರುತ್ತದೆ. ದೀಪಸ್ಥಂಬದ ಬತ್ತಿ ತಾನು ಸುಟ್ಟು ಇತರರಿಗೆ ಬೆಳಕು ನೀಡುತ್ತದೆ. ಇದೇ ರೀತಿ ಗುರು ಗಂಗಾಧರ ಶಿವಾಚಾರ್ಯರು ನಿರಂತರ ಶ್ರಮಿಸಿ ಪರಮ ಪಂಚಾಚಾರ್ಯರ ಧರ್ಮ ಧ್ವಜವನ್ನು ಎತ್ತಿ ಮೆರೆಸಿದರು. ಭಕ್ತ ಸಂಕುಲದ ಬಾಳಿನ ಭಾಗ್ಯೋದಯಕ್ಕೆ ಬೆಳಕು ತೋರಿದರು.
ಶ್ರೀಮದ್ರಂಭಾಪುರಿ ಶಿವಾನಂದ ಜಗದ್ಗುರುಗಳ ಆರೋಗ್ಯದಲ್ಲಿ ತೊಂದರೆ ಕಂಡು ಬಂದ ಪ್ರಸಂಗದಲ್ಲಿ ಪಾಲಿಕೊಪ್ಪ ಹಿರೇಮಠದ ಗುರು ಗಂಗಾಧರ ಶಿವಾಚಾರ್ಯರಿಗೆ ಮೃತ್ಯುಪತ್ರ ಬರೆದಿಟ್ಟು ದಿನಾಂಕ 1-8-1946ರಂದು ಶಿವೈಕ್ಯರಾದರು. ಅವರ ಆಣತಿಯಂತೆ 1947ರಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ 119ನೆಯ ಜಗದ್ಗುರುಗಳಾಗಿ ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರ ಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಎಂಬ ಅಭಿದಾನದಿಂದ ಸಮಾನ ಪೀಠಾಚಾರ್ಯರ ಸಾನ್ನಿಧ್ಯದಲ್ಲಿ ವೀರಸಿಂಹಾಸನವನ್ನು ಆರೋಹಣ ಮಾಡುತ್ತಾರೆ.
ವೀರಶೈವ ಧರ್ಮ ಮಾನವ ಧರ್ಮದ ಆದರ್ಶಗಳನ್ನು ಕಂಡ ಜಗದ್ಗುರುಗಳು “ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಘೋಷಣೆಗೈದು ಭಾವೈಕ್ಯತೆಗೆ ಮತ್ತು ಧರ್ಮ ಸಾಮರಸ್ಯಕ್ಕೆ ದಿಕ್ಸೂಚಿಯಾದರು. ಅವರು ತಮ್ಮ ಜೀವನದ ಉದ್ದಕ್ಕೂ ದಿಟ್ಟತನದಿಂದ ಗಟ್ಟಿ ಧ್ವನಿಯಲ್ಲಿ ಜನ ಜಾಗೃತಿಯನ್ನು ಉಂಟು ಮಾಡಿದರು. ಧರ್ಮ ವಿರೋಧಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಂಗೊಳಿಸಿದರು. ಅಧರ್ಮದ ವಿರುದ್ಧ ಸದಾ ದಂಡಯಾತ್ರೆ ಕೈಗೊಂಡು ವೀರಭದ್ರನಂತೆ ಘರ್ಜಿಸಿ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಿದರು. ಶ್ರೀ ಪೀಠದ ಉಜ್ವಲ ಪರಂಪರೆ ಉತ್ತರೋತ್ತರವಾಗಿ ಬೆಳೆದು ಬಲಗೊಳ್ಳಲು ಸಂಕಲ್ಪಿಸಿ ದಿನಾಂಕ 15-5-1972ರಲ್ಲಿ ವೈರಾಗ ಹಿರೇಮಠದ ಪಂಡಿತವರ್ಯರಾದ ಪಂಚಾಕ್ಷರ ಶಿವಾಚಾರ್ಯರಿಗೆ ಜಗದ್ಗುರು ಪಟ್ಟವನ್ನು ಸಮಾನ ಪೀಠಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿ ದೇವ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಎಂಬ ನೂತನ ಅಭಿದಾನದಿಂದ ಆಶೀರ್ವದಿಸಿದರು. ಪರಮ ಪೂಜ್ಯ ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸರ್ವತ್ರ ಸಂಚರಿಸಿ ಧರ್ಮ ಶಕ್ತಿಗೆ ಉಸಿರಾಗಿ ಕಾರ್ಯ ನಿರ್ವಹಿಸಿದರು.
ಆಪತ್ಕಾಲದಲ್ಲಿದ್ದ ಶ್ರೀ ಕೇದಾರ ಪೀಠಕ್ಕೆ ಶಾಂತಲಿಂಗ ಜಗದ್ಗುರುಗಳಿಗೆ ಜಗದ್ಗುರು ಪಟ್ಟಾಭಿಷೇಕವನ್ನು ಮಾಡಿ 1975ರಲ್ಲಿ ಶ್ರೀಜಗದ್ಗುರು ಪಂಚ ಪೀಠಾಧೀಶ್ವರ ಸಮಾಗಮ ಸಮ್ಮೇಳನ ನಡೆಸಿದ್ದು ಅವರ ಗುರು ಪೀಠಾಭಿಮಾನಕ್ಕೆ ಸಾಕ್ಷಿಯಾಗಿವೆ. ಸಾವಿರದೆಂಟು ಪಲ್ಲಕ್ಕಿ, ನೂರೊಂದು ತೇರು, ಸಹಸ್ರ ಕುಂಬಾಷೇಕ, ಕೋಟಿ ಬಿಲ್ವಾರ್ಚನೆ ಮಹತ್ಕಾರ್ಯಗಳನ್ನು ಕೈಗೊಂಡು ವಿನೂತನ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಅವರದು. ಶರನ್ನವರಾತ್ರಿ ದಸರಾ ನಾಡಹಬ್ಬವನ್ನು ಬೆಳೆಸಿ ಬಲಿಸಿದ ಶ್ರೇಯಸ್ಸು ಅವರ ಪಾದಕ್ಕೆ ಸಲ್ಲುತ್ತದೆ.
ಬರದ ನಾಡಿನಲ್ಲಿ ಮಳೆ ಸುರಿಸಿ ರೇಣುಕರ ಮಹಿಮೆಯನ್ನು ತೋರಿ ಮೆರೆದವರು. ಶ್ರೀಜಗದ್ಗುರು ರೇಣುಕಾಚಾರ್ಯರಲ್ಲಿ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯಲ್ಲಿ ಅವರಿಟ್ಟ ನಿಷ್ಠೆ ಯಾವುದೇ ಶಬ್ದದಿಂದ ವರ್ಣಿಸಲಾಗದು. ಕುಂಭಾಭಿಷೇಕ ಮೂಲಕ ಶಕ್ತಿ ಮಾತೆ ಜಗಜ್ಜನನಿ ಶ್ರೀ ದೇವಿಯ ವರವನ್ನು ಪಡೆದ ಅವರು ಭಕ್ತರ ಕಣ್ಣಿನಲ್ಲಿ ಭೂಲೋಕದ ಶಿವನಾಗಿ ಕಾಣುತ್ತಿದ್ದರು. ಅಭಿನವ ರೇಣುಕರಾಗಿ ಜನಮನದ ಹೃದಯ ಸಿಂಹಾಸನದಲ್ಲಿ ಸದಾ ನೆಲೆಸಿದವರು. ಪೂರ್ವಾಶ್ರಮದಲ್ಲಿ ತಾವು ಕಟ್ಟಿ ಬೆಳೆಸಿದ ಶ್ರೀಮದ್ರಂಭಾಪುರಿ ಶಾಖಾ ಮಠವಾದ ಮುಕ್ತಿಮಂದಿರ ತಪೋ ಕ್ಷೇತ್ರದಲ್ಲಿ ಆಶ್ವೀಜ ಬಹುಳ ತೃತೀಯ ದಿನಾಂಕ 5-10-1982ರಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಶಿವೈಕ್ಯರಾದರು.
ಗುರುಗಳು ಅಗಲಿ 40 ವರುಷಗಳಾದರೂ ಅವರ ನೆನಹು, ಮಾಡಿದ ಧರ್ಮ ಸಂಗ್ರಾಮ, ಕೊಟ್ಟ ಸಂದೇಶ ಎಲ್ಲರಿಗೂ ಬೆಳಕು ಬಲ ತರುತ್ತಿವೆ. ಈ ವರುಷ ಅಕ್ಟೋಬರ್ 31ರಂದು ಮಂಗಳವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹಾಗೂ ಮುಕ್ತಿಮಂದಿರ ಶಾಖಾ ಮಠದ ಪರಿಸರದಲ್ಲಿ ಅವರ ಲಿಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೋತ್ಸವವನ್ನು ಆಚರಿಸಲಾಗುವುದು. ಪರಮಪೂಜ್ಯರ ಪಾದ ಪದ್ಮಂಗಳಿಗೆ ಕೋಟಿ ಕೋಟಿ ಭಕ್ತಿಯ ಪ್ರಣಾಮಗಳನ್ನು ಸಲ್ಲಿಸುತ್ತೇವೆ. ಅವರ ಅಖಂಡ ಆಶೀರ್ವಾದ ಜೀವ ಜಗತ್ತಿಗೆ ಸದಾ ಇರುವಂತಾಗಲಿ.
ವಿಶೇಷ ಲೇಖನ: ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post