ವಿಷ್ಣು ಸ್ವರೂಪದ ಪ್ರಮುಖ ವರ್ಗೀಕರಣಕ್ಕೆ ಸೇರಿಲ್ಲದಿದ್ದರೂ, ಅವುಗಳಷ್ಟೇ ಪ್ರಸಿದ್ಧವಾದ ಮತ್ತೊಂದು ಸ್ವರೂಪವೆಂದರೆ ವಿಠಲನದು. ಇವನನ್ನು ‘ನಾದಬ್ರಹ್ಮ’ ಸಂಗೀತ ಅಥವಾ ನಾದದ ಅಧಿಪತಿಯಾದ ವಿಠಲ ಅಥವಾ ವಿಠೋಬ ಎಂದು ಕರೆಯುತ್ತಾರೆ. ವಿಷ್ಣುವಿನ ಮತ್ತೊಬ್ಬ ಪ್ರಸಿದ್ಧ ಭಕ್ತನಾದ ಪುಂಡಲೀಕ ಅಥವಾ ಪುಂಡರೀಕನಿಂದಾಗಿ ಅವನನ್ನು ಪಾಂಡುರಂಗ ವಿಠಲ ಎಂಬ ಹೆಸರಿನಿಂದ ಕರೆಯಲಾಗಿದೆ. ಇದು ವಿಷ್ಣುವಿನ ಮತ್ತೊಂದು ಏಕಮೂರ್ತಿ ಸ್ವರೂಪ. ಐತಿಹಾಸಿಕವಾಗಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ‘ಪಂಡರ್‍ಪುರ್’ ಅಥವಾ ‘ಪಂಡರಾಪುರ’ ಎಂಬಲ್ಲಿ ಮಾತ್ರ ಒಂದು ಪಾಂಡುರಂಗ ವಿಠಲನ ದೇವಸ್ಥಾನವಿದೆ. ಭೀಮಾ ನದಿಯ ಬಲದಂಡೆಯ ಮೇಲೆ ಈ ದೇಗುಲವಿದೆ. ಕೃಷ್ಣಾ ನದಿಯ ಉಪನದಿಯಾದ ಭೀಮಾ ನದಿಯನ್ನು ಪಂಡರಪುರದಲ್ಲಿ ‘ಚಂದ್ರಭಾಗ’ ನದಿಯೆಂದು ಕರೆಯುತ್ತಾರೆ.
ಪ್ರಾಚೀನ ಶಿಲ್ಪಶಾಸ್ತ್ರದ ಯಾವುದೇ ಗ್ರಂಥದಲ್ಲಿ ಈ ಬಗೆಯ ಮೂರ್ತಿಯ ವಿವರಣೆ ಕಂಡುಬರುವುದಿಲ್ಲ. ಈ ಸ್ವರೂಪದ ವಿಷ್ಣುವಿನ ಯಾವುದೇ ಅವತಾರಗಳಲ್ಲಾಗಲೀ, ವಿಷ್ಣುವಿನ ಸ್ವರೂಪವನ್ನು ವಿವರಿಸುವ ಯಾವುದೇ ಬಗೆಯ ಮೂರ್ತಿಗಳಲ್ಲಾಗಲೀ ಕಂಡುಬರುವುದಿಲ್ಲ. ಪಾಂಡುರಂಗ ವಿಠಲನ ಬಲಗೈಯಲ್ಲಿ ಹಿಡಿದಿರುವ ಶಂಖವೊಂದನ್ನು ಬಿಟ್ಟರೆ ಬೇರೆ ಯಾವುದೇ ಹೋಲಿಕೆ ಸಿಗುವುದಿಲ್ಲ. ಈ ಕಾರಣದಿಂದಾಗಿಯೇ ಇದು ವಿಷ್ಣುವನ್ನು ಪ್ರತಿನಿಧಿಸುವ ಮೂರ್ತಿಯೇ ಅಲ್ಲವೋ ಎಂಬ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿ ಇದನ್ನು ಕೃಷ್ಣನ ಲೀಲಾ ರೂಪವೆಂದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯವಾಗಿದೆ. ಕೃಷ್ಣನು ವಿಷ್ಣುವಿನ ಪೂರ್ಣಾವತಾರವಾದುದರಿಂದ ಕೃಷ್ಣನನ್ನು ಅಸಂಖ್ಯ ಭಂಗಿಯಲ್ಲಿ ಪ್ರತಿನಿಧಿಸಬಹುದು, ಹಾಗಾಗಿ ಪಾಂಡುರಂಗನನ್ನು ಕೃಷ್ಣನೇ ಎಂದು ಅಥವಾ ಅವನು ತನ್ನ ಪ್ರಿಯ ಭಕ್ತ ಪುಂಡಲೀಕನನ್ನು ಆರ್ಶೀವದಿಸಲು ಅಥವಾ ರುಕ್ಮಿಣಿಯನ್ನು ಸಮಾಧಾನಪಡಿಸುವುದಕ್ಕಾಗಿ ಪಂಡರಾಪುರಕ್ಕೆ ಬಂದಾಗಿನ ರೂಪವೆಂದು ಪೂಜಿಸಲಾಗುತ್ತದೆ.
ಗರ್ಭಗೃಹದಲ್ಲಿ ಪಾಂಡುರಂಗನ ಮೂರ್ತಿಯನ್ನು ಕಪ್ಪು ಶಿಲೆಯಿಂದ ಕೆತ್ತಲಾಗಿದೆ. ಅದರ ಎತ್ತರ ಸುಮಾರು 3 ಅಡಿ 9 ಇಂಚು ಅಥವಾ ಅಂದಾಜು 1.12 ಮೀಟರುಗಳು. ಇತರ ವಿಷ್ಣು ವಿಗ್ರಹಗಳಂತಲ್ಲದೆ, ಇದಕ್ಕೆ ಎರಡೇ ಕೈಗಳಿವೆ. ಪಾಂಡುರಂಗನು ಇಟ್ಟಿಗೆಯಂತಿರುವ ಪೀಠದ ಮೇಲೆ ತನ್ನ ಎರಡು ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ನಿಂತಿದ್ದಾನೆ. ಮೇಲ್ನೋಟಕ್ಕೆ ವಿಗ್ರಹದ ಎಲ್ಲ ಭಾಗಗಳು ಸಮ ಪ್ರಮಾಣದಲ್ಲಿರುವುದು ತಿಳಿಯುತ್ತದೆ. ದೇವರ ಮುಖವು ಅತ್ಯಂತ ಪ್ರಶಾಂತವಾಗಿದ್ದು ನಗುಮೊಗದಿಂದ ಕೂಡಿದೆ. ಕುತ್ತಿಗೆಯು ಸ್ವಲ್ಪ ದಪ್ಪವಾಗಿದ್ದು, ಮೂರ್ತಿಯು ವಿಶಾಲವಾದ ಎದ್ದು ಕಾಣುವ ವಕ್ಷಸ್ಥಲ ಹೊಂದಿದೆ. ಕೈಕಾಲುಗಳು ದಷ್ಟಪುಷ್ಟವಾಗಿದೆ. ಉತ್ತಮ ಮೈಕಟ್ಟನ್ನು ಹೊಂದಿರುವುದು ಸ್ಪಷ್ಟವಾಗಿದೆ. ಪಾಂಡುರಂಗನು ಏಕವಸ್ತ್ರಧಾರಿಯಾಗಿದ್ದು ಸೊಂಟ ಮತ್ತು ಮೊಣಕಾಲಿನವರೆಗೆ ಕಾಲುಗಳನ್ನು ಸುತ್ತಿರುವ ವಸ್ತ್ರದ ಕೊನೆಯ ಭಾಗವು ಕಾಲುಗಳ ಮಧ್ಯಭಾಗದಲ್ಲಿ ಕೆಳಗೆ ಇಳಿಬಿದ್ದಿರುವುದನ್ನು ಕಾಣಬಹುದು. ಬಲಗೈ ಸೊಂಟದ ಬಳಿ ಕಟ್ಟಿರುವ ವಸ್ತ್ರದ ಗಂಟನ್ನು ಹಿಡಿದಿರುವಂತೆ ಕಾಣುತ್ತದೆ. ಕೆಲವು ವಿದ್ವಾಂಸರು ಬಲಗೈಯಲ್ಲಿ ಚಕ್ರ ಹಿಡಿದಿರುವಂತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರೆ ಮತ್ತೆ ಕೆಲವರು ಬಲಗೈಯಲ್ಲಿ ಪದ್ಮವನ್ನು ಹಿಡಿದಿದ್ದಾನೆ ಎನ್ನುತ್ತಾರೆ.
ಎಡಗೈಯಲ್ಲಿ ಶಂಖವಿದೆ. ತಲೆಯ ಮೇಲೆ ಸಾದಾ ಟೋಪಿಯಂತಹ ಕಿರೀಟವನ್ನು ನೋಡಬಹುದು. ಕಿರೀಟವು ಎತ್ತರವಾಗಿದ್ದು ಮೇಲೆ ಸಮತಟ್ಟಾಗಿದೆ. ಮಧ್ಯದಲ್ಲಿ ಪದಕವಿರುವ ಒಂದೇ ಒಂದು ಕಂಠಮಾಲೆಯನ್ನು ವಿಠಲನು ಧರಿಸಿದ್ದಾನೆ. ಈ ಹಾರವು ಕೌಸ್ತುಭ ಅಥವಾ ಶ್ರೀವತ್ಸದ ಪ್ರತೀಕವಾಗಿದೆ. ಮೀನುಗಳಂತೆ ಕಾಣುವ ಸ್ವಲ್ಪ ದೊಡ್ಡದು ಎನಿಸಬಹುದಾದ ಕುಂಡಲಗಳು ಕಿವಿಯನ್ನು ಅಲಂಕರಿಸಿವೆ. ಅದನ್ನು ಮೀನ ಕುಂಡಲಿ ಅಥವಾ ಮಕರ ಕುಂಡಲವೆನ್ನುತ್ತಾರೆ. ಭುಜಗಳ ಮೇಲೆ ಎರಡು ಜೊತೆ ಭುಜಕೀರ್ತಿಗಳಿವೆ. ಮುಂಗೈಗಳಲ್ಲಿ ಒಂದು ಜೊತೆ ಹಸ್ತಾಭರಣಗಳಿವೆ. ಕಾಲುಗಳಲ್ಲಿ ಕಡಗಗಳಿವೆ. ಇಷ್ಟು ಮಾತ್ರವಲ್ಲದೆ ಮತ್ಯಾವುದೇ ಅಲಂಕಾರ ಆಭರಣಗಳಿರುವುದಿಲ್ಲ. ಮೂರು ಮಡಿಕೆಯುಳ್ಳ ವಸ್ತ್ರವನ್ನು ಸೊಂಟದ ಸುತ್ತಾ ಸುತ್ತಲಾಗಿದೆ. ಅವು ಸೊಂಟದ ವಸ್ತ್ರವನ್ನು ಗಟ್ಟಿಯಾಗಿ ಹಿಡಿದಿಡಲು ‘ಮೇಖಲಾ’ ಎಂದು ಕರೆಯಬಹುದು. ವಿಗ್ರಹವು ಪ್ರಾಚೀನವಾದದ್ದೆನುವುದು ಅದರ ಮೇಲೆ ಮೂಡಿರುವ ಅನೇಕ ಗುರುತುಗಳಿಂದ ತಿಳಿಯುತ್ತದೆ.
ಆ ಗುರುತುಗಳನ್ನು ಗಮನಿಸಿದಾಗ, ವಿಗ್ರಹವನ್ನು ಅನೇಕ ಬಾರಿ ಸ್ಥಳ ಬದಲಾಯಿಸಿ, ಪುನರ್ ಪ್ರತಿಷ್ಠಾಪನೆ ಮಾಡಿರುವುದನ್ನು ಊಹಿಸಬಹುದು. ಅಸಂಖ್ಯಾತ ಭಕ್ತರು ಪಾದವನ್ನು ಮುಟ್ಟಿ ನಮಸ್ಕರಿಸಿದುದರ ಫಲವಾಗಿ ಪಾದಗಳು ಸವೆದಿರುವುದು ಕಂಡುಬರುತ್ತದೆ. ಎದೆಯ ಬಲಭಾಗದಲ್ಲಿ ಸ್ಪಷ್ಟವಾದ ಗುಂಡನೆಯ ಚಿಹ್ನೆಯಿದ್ದು ಅದನ್ನು ಲಕ್ಷ್ಮಿಯ ಪ್ರತೀಕವಾದ ಶ್ರೀವತ್ಸ ಚಿಹ್ನೆಯೆಂದು ಗುರುತಿಸಲಾಗಿದೆ. ಪಾಂಡುರಂಗನ ಪತ್ನಿಯಾದ ರುಕ್ಮಿಣಿಯ ಪ್ರತಿಮೆಯು ಎತ್ತರ ಹಾಗೂ ಪ್ರಮಾಣದಲ್ಲಿ ಅತ್ಯಂತ ಚಿಕ್ಕದಾಗಿದೆ. ಅದನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದ್ದು, ಇತ್ತೀಚೆಗೆ ಸ್ಥಾಪಿಸಲಾದ ನವಿರಾದ ಮೂರ್ತಿಯಾಗಿದೆ.
ಪಾಂಡುರಂಗನ ಮಾದರಿಯ ಪ್ರತಿಮೆಗಳನ್ನು ಅನೇಕ ದೇವಾಲಯಗಳಲ್ಲಿ ಸ್ಥಾಪಿಸಲಾಗಿದೆ. ಹಾಗೆಯೇ ಲೋಹಗಳಲ್ಲಿ ಮಾಡಿದ ಪಾಂಡುರಂಗನ ಪ್ರತಿಮೆಗಳನ್ನು ಮನೆಗಳಲ್ಲಿ ಹಾಗೂ ಮಠಗಳಲ್ಲಿ ಪೂಜೆಗಾಗಿ ಉಪಯೋಗಿಸಲಾಗುತ್ತಿದೆ. ಹೀಗೆ ತಯಾರಿಸಲಾದ ಮೂರ್ತಿಯ ಲಕ್ಷಣಗಳು ಭಕ್ತರ ಆಸಕ್ತಿ, ಕಲ್ಪನೆ ಹಾಗೂ ಅಭಿರುಚಿಗೆ ಅನುಗುಣವಾಗಿ ಮಾಡಲ್ಪಟ್ಟಿದ್ದು, ಏಕರೂಪತೆ ಇರುವುದಿಲ್ಲ. ಕೆಲವು ಮೂರ್ತಿಗಳಲ್ಲಿ ಎರಡೂ ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡಿರುವಂತೆ ರೂಪಿಸಲಾಗಿದೆ. ಮತ್ತೆ ಕೆಲವು ಪ್ರತಿಮೆಗಳಲ್ಲಿ ಬಲಗೈ ವರದ ಮುದ್ರೆಯಲ್ಲಿ, ಎಡಗೈ ಸೊಂಟದ ಮೇಲಿರುವಂತೆಯೂ, ಬಲ ಮತ್ತು ಎಡಗೈಗಳಲ್ಲಿ ಕ್ರಮವಾಗಿ ಪದ್ಮ ಮತ್ತು ಶಂಖಗಳನ್ನು ಹಿಡಿದಿರುವಂತೆಯೂ, ಇಲ್ಲವೆ ಪಾಂಡುರಂಗನ ಪತ್ನಿಯರಾದ ರುಕ್ಮಿಣಿ ಮತ್ತು ಸತ್ಯಭಾಮರನ್ನು ಎರಡೂ ಪಕ್ಕಗಳಲ್ಲಿರುವಂತೆ ಕಾಣಬಹುದು.
ಉಡುಪಿಯ ಅಷ್ಟಮಠಗಳಲ್ಲಿ ಮೂರು ಮಠದವರು ಕೃಷ್ಣನನ್ನು ವಿಠಲನ ರೂಪದಲ್ಲಿ ತಮ್ಮ ಸಂಸ್ಥಾನ ಅಥವಾ ಪಟ್ಟದ ದೇವರಾಗಿ ಪೂಜಿಸಿ ಆರಾಧಿಸುತ್ತಾರೆ, ವೈಷ್ಣವ ದಾಸವರೇಣ್ಯರಿಗೆ ಈ ಪಾಂಡುರಂಗ ಅಚ್ಚುಮೆಚ್ಚಿನ ದೈವ. ಪಾಂಡುರಂಗನಿಗೂ ಸಂಗೀತಕ್ಕೂ ಇರುವ ಸಂಬಂಧ ಹಾಗೂ ಪಾಂಡುರಂಗನನ್ನು ಸಂಗೀತದಿಂದ ಆರಾಧಿಸುವುದು ಹೆಚ್ಚಾಗಿ ಕಂಡುಬರುವುದೇ ಈ ಪ್ರಸಿದ್ಧಿಗೆ ಮುಖ್ಯ ಕಾರಣ. ಪ್ರಾರಂಭದಲ್ಲಿ ತಿಳಿಸಿರುವಂತೆ ಪಾಂಡುರಂಗ ವಿಠಲನು ನಾದಬ್ರಹ್ಮನೆಂದೇ ಪ್ರಸಿದ್ಧನಾಗಿದ್ದಾನೆ. ಅನೇಕ ಕವಿಗಳು ಪಾಂಡುರಂಗನ ಬಗ್ಗೆ ಅನೇಕ ಹಾಡುಗಳನ್ನು ರಚಿಸಿ, ಹಾಡಿ ಹೊಗಳಿದ್ದಾರೆ. ವಿಠಲ ಮತ್ತು ವಿಠಲನನ್ನು ಹೊಗಳುವ ‘ಅಭಂಗ್’ ಎರಡನ್ನು ಬೇರೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ವಿಠಲನ ದೇವಾಲಯಗಳಲ್ಲಿ ಅನೇಕ ವಾದ್ಯಗಳ ಜೊತೆಗೆ ಅಭಂಗ್‍ಗಳನ್ನು ಹಾಡದ ದಿನವೇ ಇಲ್ಲವೆಂದು ಹೇಳಬಹುದು. ಅಮೂಲ್ಯವಾದಂತಹ ಅನೇಕ ವಿಠಲನ ಕೀರ್ತನೆಗಳನ್ನು ರಚಿಸಿದ ಪ್ರಸಿದ್ಧ ಮಹಾನುಭಾವರುಗಳಲ್ಲಿ ನಾಮದೇವ, ತುಕಾರಾಂ, ಪುರಂದರದಾಸರು, ವಿಜಯದಾಸರು ಅತಿ ಹೆಚ್ಚು ಕೀರ್ತನೆಗಳ ಕರ್ತರು. ಇವರುಗಳು ನವವಿಧ ಭಕ್ತಿಯಲ್ಲಿ ಎರಡನೆಯದಾದ ಕೀರ್ತನೆಗಳು, ಹಾಡುಗಳ ಮೂಲಕ ಭಗವಂತನನ್ನು ಹೊಗಳುವ ಮೂಲಕ ಭಕ್ತಿಯ ಸ್ವರೂಪದಲ್ಲಿ ತಮ್ಮನ್ನು ತಾವು ಮರೆತ ಮಹನೀಯರುಗಳಾಗಿದ್ದಾರೆ. ವಿಠಲನು ಎಲ್ಲ ಕೀರ್ತನಕಾರರ ಹಾಗೂ ಭಜನೆಗಳ ಹಾಡುವ ಮೂಲಕ ದೇವರನ್ನು ಒಲಿಸಿಕೊಳ್ಳಲು ಬಯಸುವವರಿಗೆ ಅತ್ಯಂತ ಪ್ರಿಯವಾದ ದೈವ.
ಭಕ್ತಿಗೆ ಮೆಚ್ಚಿ ಭುವಿಗೆ ಬಂದ
ಪರಮಾತ್ಮ ನಾರಾಯಣನು ಸ್ವತಃ ಭೂಮಿಗಿಳಿದು ಬಂದು ಪಾಂಡುರಂಗನ ಸ್ವರೂಪ ಪಡೆದ ಸಂದರ್ಭವನ್ನು ವಿವರಿಸುವುದಕ್ಕೆ ಅನೇಕ ಕಥೆಗಳೀವೆ. ಕೃಷ್ಣನು ಗೊಲ್ಲರ ಬಾಲಕನಾಗಿ ಗೋವುಗಳನ್ನು ಕಾಯಲು ಕಾಡಿಗೆ ಹೊರತಾಗಿನ ಸ್ವರೂಪವೇ ವಿಠಲನೆಂಬ ಭಾವನೆಯಿದೆ. ಅದಕ್ಕೆ ಪೂರಕವಾಗಿ ವಿಠಲನ ಮೂರ್ತಿಯು ಕೇವಲ ಒಂದು ಧೋತಿಯನ್ನು ಉಟ್ಟಿದ್ದು ಅತಿ ಕಡಿಮೆ ಆಭರಣಗಳಿಂದ ಸರಳವಾಗಿ ಅಲಂಕೃತನಾಗಿದ್ದಾನೆ. ಇಂದ್ರನ ಪತ್ನಿಯಾದ ಶಚಿದೇವಿಯು ಮೋಹದಿಂದ ವಿಷ್ಣುವನ್ನು ವರಿಸುವಂತೆ ಕೇಳಿದಾಗ ವಿಷ್ಣುವು ತಾನು ಕೃಷ್ಣನಾಗಿ ಅವತರಿಸಿದಾಗ, ಶುಚಿಯನ್ನು ರುಕ್ಮಿಣಿಯಾಗಿ ಹುಟ್ಟುವಂತೆಯೂ, ಆಗ ಅವಳನ್ನು ವಿವಾಹವಾಗುವುದಾಗಿಯೂ ವಚನ ನೀಡುತ್ತಾನೆ. ಕೃಷ್ಣ ರುಕ್ಮಿಣಿಯರ ವಿವಾಹದ ಸಂತೋಷದ ಸಂದರ್ಭದಲ್ಲಿ, ಕೃಷ್ಣನು ರಾಧೆಯ ಮೇಲೆ ತೋರಿದ ಒಲವಿನಿಂದ ಕೋಪಗೊಂಡ ರುಕ್ಮಿಣಿಯು ಪಂಡರಾಪುರಕ್ಕೆ ಹೋಗಿ ತಪಸ್ಸಿಗೆ ನಿಲ್ಲುತ್ತಾಳೆ. ಅವಳನ್ನು ಅನುಸರಿಸಿ ಹೊರಟ ಪಾಂಡುರಂಗನು ಅವಳ ಮನವೊಲಿಸಿ ಮನೆಗೆ ಕರೆದೊಯ್ಯಲು ಅವಳ ಮುಂದೆ ನಿಲ್ಲುತ್ತಾನೆ. ಪಂಡರಾಪುರದ ಪಾಂಡುರಂಗ ಮತ್ತು ರುಕ್ಮಿಣಿಯರ ಪ್ರತಿಮೆಗಳು ಈ ಪ್ರಸಂಗವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೆಯಿದೆ.
ಇನ್ನೊಂದು ಪ್ರಸಿದ್ಧ ಕಥೆಯು ಭಕ್ತ ಪುಂಡಲೀಕ ಮತ್ತು ಪಾಂಡುರಂಗನ ಸಂಬಂಧವನ್ನು ವಿವರಿಸುವುದಾಗಿದೆ. ಪುಂಡಲೀಕನು ಒಬ್ಬ ಬ್ರಾಹ್ಮಣ ಪುತ್ರನಾಗಿದ್ದು ಪ್ರಾಪಂಚಿಕ ಭೋಗವಸ್ತುಗಳಲ್ಲಿ ಮುಳುಗಿ ಹೋಗಿರುತ್ತಾನೆ. ಮೊದಲಿಗೆ ತನ್ನ ವೃದ್ಧ ತಂದೆತಾಯಿರೊಂದಿಗೆ ಬಹಳ ಅಸಹನೆಯಿಂದ ವರ್ತಿಸುತ್ತಿರುತ್ತಾನೆ. ಹೀಗಿರುವಾಗ ಒಂದು ದಿನ ಮುಂಜಾನೆ ಅವನು ಕುಕ್ಕುಟ ಮಹರ್ಷಿಯ ಆಶ್ರಮದ ಮುಂಬಾಗಿಲನ್ನು ಮೂವರು ಲಾವಣ್ಯವತಿಯರು ಶುದ್ಧ ಮಾಡುತ್ತಿರುವುದನ್ನು ಕಂಡು, ಅವರುಗಳು ಯಾರೆಂದು ಪ್ರಶ್ನಿಸುತ್ತಾನೆ. ಆಗ ಆ ಲಾವಣ್ಯವತಿಯರು ತಾವು ಗಂಗಾ, ಯಮುನಾ ಸರಸ್ವತಿಯೆಂಬ ನದಿ ದೇವತೆಗಳೆಂದು, ಕುಕ್ಕುಟ ಮಹರ್ಷಿಯು ಮಹಾ ಸಚ್ಛಾರಿತ್ರ್ಯವುಳ್ಳವನಾದುದರಿಂದ ಪ್ರತಿದಿನ ಆಶ್ರಮದ ಬಾಗಿಲನ್ನು ಶುದ್ಧ ಮಾಡಲು ತಾವು ಬರುವರೆಂದೂ ತಿಳಿಸುತ್ತಾರೆ. ಅಷ್ಟೇ ಅಲ್ಲದೆ ಪುಂಡಲೀಕನು ಅವನ ಹಿಂದಿನ ಜನ್ಮದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಆಕಳನ್ನು ರಕ್ಷಿಸಿದ ಪುಣ್ಯದಿಂದ ಅವನಿಗೆ ಅವರ (ನದಿ ದೇವತೆಗಳ) ದರ್ಶನವಾಯಿತೆಂದು ತಿಳಿಸುತ್ತಾರೆ. ಇದನ್ನು ಕೇಳಿದ ಪುಂಡಲೀಕನ ಮನಸ್ಸು ಪರಿವರ್ತನೆಯಾಗುತ್ತದೆ. ಅವನ ಜೀವನ ಶೈಲಿ ಆಶ್ಚರ್ಯಕರವೆನಿಸುವಂತೆ ಬದಲಾಗಿ, ತನ್ನ ತಂದೆತಾಯಿಯರನ್ನು ಪ್ರತ್ಯಕ್ಷ ದೇವರುಗಳೆಂದು ಪರಿಗಣಿಸಿ ನಿರ್ಮಲವಾದ ಪ್ರೀತಿ ಶ್ರದ್ಧೆಗಳಿಂದ ಅವರ ಸೇವೆಯಲ್ಲಿ ತೊಡಗುತ್ತಾನೆ. ವಿಷ್ಣುವು ಅವನ ಶ್ರದ್ಧೆ ಭಕ್ತಿಗೆ ಮೆಚ್ಚಿ ಅವನನ್ನು ಆಶೀರ್ವದಿಸಿ ಅವನ ಆಸೆಗಳನ್ನು ಪೂರೈಸುವುದಕ್ಕಾಗಿ ಭೂಮಿಗಿಳಿದು ಬರುತ್ತಾನೆ. ಸಕಲ ಚರಾಚರಗಳಿಗೆ ಒಡೆಯನಾದ ಜಗದ್ರಕ್ಷಕನಾದ ಭಗವಂತನು ಪುಂಡಲೀಕನ ಮನೆಯ ಬಾಗಿಲಿಗೆ ಬಂದಾಗ, ಈ ಭಕ್ತನು ತನ್ನ ವೃದ್ಧ ತಂದೆತಾಯಿಯರ ಸೇವೆಯಲ್ಲಿ ತೊಡಗಿರುತ್ತಾನೆ.
ದೇವರು ಬಂದಿರುವುದನ್ನು ನೋಡಿದ ಪುಂಡಲೀಕನು ಹತ್ತಿರದಲ್ಲಿದ್ದ ಒಂದು ಇಟ್ಟಿಗೆಯನ್ನು ಭಗವಂತನ ಕಡೆಗೆ ಹಾಕಿ ಆ ಪೀಠದ ಮೇಲೆ ನಿಂತಿರುವಂತೆಯೂ, ತಂದೆ ತಾಯಿಯರ ಸೇವೆ ಮುಗಿದ ನಂತರ ತಾನು ಬರುವವರೆಗೆ ಕಾಯಬೇಕೆಂದೂ ಹೇಳುತ್ತಾನೆ. ಭಗವಂತನು ತನ್ನ ಎರಡು ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು ಪುಂಡಲೀಕನು ಕೊಟ್ಟ ಇಟ್ಟಿಗೆಯ ಮೇಲೆ ಕಾಯುತ್ತಾ ನಿಲ್ಲುತ್ತಾನೆ. ಪುಂಡಲೀಕನು ತನ್ನ ಕರ್ತವ್ಯವು ಮುಗಿದ ಕೂಡಲೇ ಓಡಿ ಬಂದು ಭಗವಂತನನ್ನು ಪೂಜಿಸುತ್ತಾನೆ. ಆಗ ಭಗವಂತನು ಏನು ವರಬೇಕೆಂದು ಪುಂಡಲೀಕನನ್ನು ಕೇಳುತ್ತಾನೆ. ಆಗ ಪುಂಡಲೀಕನು, ಭಗವಂತನು ಈಗ ನಿಂತಿರುವ ಸ್ಥಳದಲ್ಲಿಯೇ ಶಾಶ್ವತವಾಗಿ ನಿಂತು, ಅವನ ಪುಣ್ಯಪಾದಗಳನ್ನು ಪೂಜಿಸುವ ಎಲ್ಲ ಭಕ್ತರನ್ನು ಆಶೀರ್ವದಿಸಬೇಕೆಂದು ಪ್ರಾರ್ಥಿಸುತ್ತಾನೆ. ಇದರಿಂದ ಸಂತೋಷಗೊಂಡ ಭಗವಂತನು ಪುಂಡಲೀಕನ ಇಷ್ಟದಂತೆಯೇ ಅಲ್ಲಿ ಶಾಶ್ವತವಾಗಿ ಇಟ್ಟಿಗೆಯ ಮೇಲೆ ಅದೇ ಭಂಗಿಯಲ್ಲಿ ನಿಲ್ಲುತ್ತಾನೆ. ಅವನೇ ಪಾಂಡುರಂಗ. ಹೀಗೆ ವಿಷ್ಣುವಿನ ಈ ಭಂಗಿಗೆ ಪುಂಡಲೀಕನೇ ಕಾರಣ ಎಂಬ ನಂಬಿಕೆಯಿದೆ.
ಪಾಂಡುರಂಗನೆಂದರೆ ವಿಷ್ಣುವಿನ ದಶಾವತಾರಗಳಲ್ಲಿ ಒಂಬತ್ತನೆಯ ಅವತಾರವಾದ ಬುದ್ಧನ ರೂಪವೆಂಬ ಸಿದ್ಧಾಂತವೂ ಪ್ರಚಲಿತವಾಗಿದೆ. ಮೂಲ ಗ್ರಂಥಗಳಲ್ಲಿ ಬುದ್ಧನು ವಸ್ತ್ರಹೀನ ಅಂದರೆ ಬೆತ್ತಲೆ ಎಂದು ಹೇಳಲ್ಪಟ್ಟಿದೆ. ಇದು ವಿಷ್ಣುವಿನ ಮೋಹವತಾರ. ವೇದಾಧ್ಯಯನ ಅಧಿಕಾರ ಇಲ್ಲದವರನ್ನು, ವೇದಮಾರ್ಗದಿಂದ ದೂರವಿರಿಸಿ, ಶಾರೀರಿಕ ಸುಖಭೋಗಗಳತ್ತ ಅವರನ್ನು ಪ್ರಚೋದಿಸುವುದು ಮೋಹಾವತಾರದ ಉದ್ದೇಶವಾಗಿದೆ. ವಿಷ್ಣು ಕಲಿಯುಗದಲ್ಲಿ ಈ ರೂಪದಲ್ಲಿ ಅವತರಿಸಿ ಸೃಷ್ಟಿಯನ್ನು ಪ್ರಳಯದ ಕಡೆಗೆ ಒಯ್ಯುವನೆಂಬ ಹೇಳಿಕೆಯಿದೆ. ಇದೇ ರೀತಿಯ ಸಿದ್ಧಾಂತವು ಶ್ರೀನಿವಾಸನನ್ನು ವಿಷ್ಣುವಿನ ಕಲ್ಕಿ ಅವತಾರವೆಂದೂ ಮತ್ತು ಕರ್ನಾಟಕದ ಉಡುಪಿಯ ಅವತಾರವೆಂದೂ ತಿಳಿಸುತ್ತದೆ. ಕಲಿಯುಗದಲ್ಲಿ ವಿಷ್ಣು ಕೃಷ್ಣ, ಬುದ್ಧ, ಕಲ್ಕಿ ಎಂಬ ಮೂರು ಅವತಾರಗಳನ್ನು ಎತ್ತುತ್ತಾನೆ ಎಂಬ ಅಂಶವನ್ನು ಈ ಸಿದ್ಧಾಂತವು ಅವಲಂಬಿಸಿದೆ. ವಿಷ್ಣುವಿನ ರೂಪಗಳ ಪ್ರತಿಮಾಶಾಸ್ತ್ರಗಳ ಗ್ರಂಥಗಳು ಕಲಿಯುಗದ ಪೂರ್ವದಲ್ಲಿ ಬರೆದವುಗಳಾದ್ದರಿಂದ, ಈ ಮೂರು ಅವತಾರದ ವಿವರಣೆಯು ಅಲ್ಲಿ ಕಂಡುಬರುವುದಿಲ್ಲ.
ಭಕ್ತಿಯ ಮಹಾ ಉತ್ಸವ
ಮಹಾರಾಷ್ಟ್ರದ ಭಕ್ತಿ ಚಳುವಳಿಯ ಕೇಂದ್ರ ಬಿಂದು ಪಾಂಡುರಂಗ. ಮಹಾ ಸಂತರುಗಳಾದ ಸಂತ ಜ್ಞಾನೇಶ್ವರ, ಸಂತ ತುಕಾರಾಮ್, ಸಂತ ಏಕನಾಥ್ ಇನ್ನು ಅನೇಕ ಸಂತರು ತಮ್ಮ ಜೀವನ ಪೂರ್ತಿ ಪಾಂಡುರಂಗನನ್ನು ಪೂಜಿಸುತ್ತಾ ಅವರ ಭಕ್ತಿಭಾವವನ್ನು ಜನ ಸಾಮಾನ್ಯರಲ್ಲಿ ಪಸರಿಸುತ್ತಾ ಬಂದವರು. ಇತರ ಪೂಜೆಗಳಂತೆ, ಶುದ್ಧವಾದ ಪವಿತ್ರವಾದ ಶ್ರದ್ಧಾ ಮತ್ತು ಭಕ್ತಿಗೆ ಯಾವುದೇ ರೀತಿಯ ನಿಯಮಗಳಾಗಲೀ, ತೊಡರುಗಳಾಗಲೀ ಇರುವುದಿಲ್ಲವಾದುದರಿಂದ, ಅದನ್ನು ಸುಲಭವಾಗಿ ಅನುಸರಿಸಬಹುದು. ಇತರ ಪೂಜೆ ವ್ರತಗಳಿಗೆ ಅವಶ್ಯಕವಿರುವಂತೆ, ಭಕ್ತಿಗೆ ಯಾವುದೇ ವಸ್ತುಗಳ ಅಥವಾ ಉಪಕರಣಗಳ ಅಗತ್ಯವಿಲ್ಲ. ವ್ಯಕ್ತಿಯ ಬುದ್ಧಿಶಕ್ತಿಯಾಗಲಿ, ಆಧ್ಯಾತ್ಮಿಕ ವಿಕಸನವಾಗಲಿ, ಎಲ್ಲವೂ ಭಕ್ತಿಗೆ ಒಂದೇ. ಅರ್ಥವಿಲ್ಲದ ಕಾರಣಗಳಿಂದ ವಿಭಜಿಸಲ್ಪಟ್ಟಿರುವ ಮಾನವ ಸಮಾಜದ ಒಡಕುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ, ಎಲ್ಲರನ್ನು ಒಗ್ಗೂಡಿಸಬಹುದಾದ್ದೇ ಭಕ್ತಿ. ಪವಿತ್ರವಾದ ಭಕ್ತಿಗೆ ಬೇಕಾದುದು ಒಬ್ಬ ಭಕ್ತ ಹಾಗೂ ಅವನ ದೇವರು ಮಾತ್ರ. ಈ ಅತಿ ಸರಳವಾದ ಮತ್ತು ಅತಿ ಪರಿಣಾಮಕಾರಿಯಾದ ವಿಧಾನವನ್ನು ಪಂಡರಾಪುರದ ಸಂತರು ಯಶಸ್ವಿಯಾಗಿ ಬಳಸಿಕೊಂಡು, ಭಂಗಿಗಳ ಮೂಲಕ ಜನಸಾಮಾನ್ಯರ ಭಕ್ತಿಯನ್ನು ಹರಡಿ ಅವರನ್ನು ಒಗ್ಗೂಡಿಸಿ, ಆಧ್ಯಾತ್ಮಿಕವಾಗಿ ಉನ್ನತಗೇರಿಸಲು ಪ್ರಯತ್ನಪಟ್ಟಿದ್ದಾರೆ.
ಅಭಂಗಗಳು ಸ್ಥಳೀಯ ಭಾಷೆಯ ಸರಳ ಪದಗಳಿಂದ ರಚಿಸಲಾಗಿರುವ ಭಕ್ತಿಯ ಹಾಡುಗಳು. ಆ ಹಾಡುಗಳಲ್ಲಿ ಭಗವಂತನ ಹಿರಿಮೆ ಮತ್ತು ಭಕ್ತಿಯ ಸಾರವಿದೆ. ಅವುಗಳಲ್ಲಿನ ಸರಳ ಪದಗಳು ಸಾಮಾನ್ಯರಿಗೂ ಮಹತ್ತರ ಅಂಶಗಳನ್ನು ಅರ್ಥವಾಗುವಂತೆ ದಿನ ನಿತ್ಯ ಮಾತನಾಡುವ ಭಾಷೆಯಲ್ಲಿ ತಿಳಿಸುತ್ತವೆ. ವಿಠೋಬನ ಜೊತೆ ಹೊಂದಿಕೊಂಡಿರುವ ಭಕ್ತಿ ಚಳುವಳಿಯ ಮತ್ತೊಂದು ಸಂಗತಿಯೆಂದರೆ, ‘ವಾರಕರಿ ಪಂಥ’ ಅಂದರೆ ಯಾತ್ರಿಕನ ಪಥ. ವಿಠಲನ ಎಲ್ಲ ಭಕ್ತರು ವರ್ಷಕ್ಕೊಮ್ಮೆ ತಮ್ಮ ಹಳ್ಳಿಗಳಿಂದ ಗುಂಪು ಕಟ್ಟಿಕೊಂಡು, ಪಂಡರಾಪುರ ದೇವಸ್ಥಾನಕ್ಕೆ ಬರುತ್ತಾರೆ. ಅವರು ದಾರಿಯುದ್ಧಕ್ಕೂ ವಿಠಲನನ್ನು ಹಾಡಿ ಹೋಗಳುತ್ತಾ, ಭಕ್ತಿಯ ಪರಾಕಾಷ್ಠೆಯಲ್ಲಿ ತಾಳ ವಾದ್ಯಗಳ ಲಯಕ್ಕೆ ಸಮನಾಗಿ ತಮ್ಮನ್ನು ತಾವು ಮರೆತು ಕುಣಿಯುತ್ತಾ, ಹಾದಿಯಲ್ಲಿ ಬರುವ ಹಳ್ಳಿಗಳಲ್ಲಿರುವ ಭಕ್ತರನ್ನೂ ಸೇರಿಸಿಕೊಂಡು. ಪಂಡರಾಪುರವನ್ನು ಸೇರುತ್ತಾರೆ. ಯಾತ್ರಿಕರು ತಮ್ಮ ಜೊತೆಯಲ್ಲಿ ಕೃಷ್ಣನಿಗೆ ಪ್ರಿಯವಾದ ತುಳಸಿ ಗಿಡಗಳನ್ನು, ಹಾಲು ಮೊಸರಿನ ಗಡಿಗೆಗಳನ್ನು ಹೊತ್ತು ತರುತ್ತಾರೆ. ಜೊತೆಗೆ ಮಹಾನ್ ಸಂತರ ಪ್ರತಿನಿಧಿಯಾಗಿ ಅವರ ಪಾದುಕೆಗಳನ್ನು ಭಕ್ತಿಪೂರ್ವಕವಾಗಿ ಮೆರವಣಿಗೆಯಲ್ಲಿ ತರುತ್ತಾರೆ. ಲಕ್ಷಾಂತರ ಜನ ಹೀಗೆ ಸಾಗುವುದನ್ನು ನೋಡುವ ವೀಕ್ಷಕರಿಗೆ ವಾರ್ಷಿಕ ವರ್ಕಾರಿಯು ಒಂದು ಅಪೂರ್ವವಾದ ಭಗವಂತನ ಭಕ್ತ ಸಾಗರವನ್ನು ತೋರಿ, ಮೈನವಿರೇಳುವಂತೆ ಮಾಡುತ್ತದೆ.
ಬಹುಮಟ್ಟಿಗೆ ವಿಷ್ಣುವಿನ ದೇವಾಲಯಗಳಲ್ಲಿ ಭಕ್ತರು ಗರ್ಭಗುಡಿಯ ಒಳಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಆದರೆ ಪಂಡರಾಪುರದಲ್ಲಿ ಭಕ್ತರು ಗರ್ಭಗುಡಿಯಲ್ಲಿರುವ ಪಾಂಡುರಂಗನ ಪಾದಗಳನ್ನು ಮುಟ್ಟಿ ಪೂಜೆ ಸಲ್ಲಿಸಬಹುದು. ಎಲ್ಲರೂ ಮುಟ್ಟಿ ಪೂಜಿಸಬಹುದದಂತಹ ಎಲ್ಲರೂ ತಲುಪಬಹುದಾದ ವಿಷ್ಣುವಿನ ಸ್ವರೂಪ ಪಾಂಡುರಂಗನದು. ಪವಿತ್ರವಾದ ಭಕ್ತಿಯನ್ನು ಹೊಂದಿರುವ ಎಲ್ಲರು ದಿವ್ಯಮಂಗಳ ಸ್ವರೂಪನನ್ನು ಯಾವುದೇ ಅಡಚಣೆಯಿಲ್ಲದೆ ಮುಟ್ಟಿ ಪೂಜಿಸಿ, ಆನಂದಿಸಬಹುದಾದ ಪ್ರತಿಮೆಯೇ ಪಾಂಡುರಂಗ ವಿಠಲನದು. ಪಂಡರಾಪುರದ ಸಂತರು ಅವನನ್ನು ಪರಬ್ರಹ್ಮ ಸ್ವರೂಪವೆನ್ನುತ್ತಾರೆ. ಮೋಕ್ಷ್‍ವನ್ನು ಪಡೆಯಲು ವಿಠಲನಲ್ಲಿ ಭಕ್ತಿ ಹಾಗೂ ಸಾಧನೆಯೊಂದೇ ಸಾಕು ಸಾರುತ್ತಾರೆ. ಬಹಳ ಸುಲಭವಾದ ಹಾಡುಗಳನ್ನು ಹಾಡುವುದೇ ವಿಠಲನ ಪೂಜೆ ಎಂಬ ಅಚಲವಾದ ನಂಬಿಕೆ ಅವರಿಗಿದೆ. ವಿಠಲನಿಗೆ ಅಭಿಷೇಕವೆಂಬ ವಿಸ್ತಾರವಾದ ಆಚರಣೆಯಾಗಲಿ, ಅಲಂಕಾರವೆಂಬ ಒಡೆವೆ ವಸ್ತ್ರಗಳ ಸಂಭ್ರಮವಾಗಲಿ, ದಕ್ಷಿಣೆಯ ಹಣ, ಮತ್ತಿತರು ವಸ್ತುಗಳ ಸಂದಾಯವಾಗಲಿ, ಅಥವಾ ಬೇರೆ ಬೇರೆ ಯಾತ್ರೆ ಮಾಡುವುದಾಗಲಿ, ಅವಶ್ಯಕವಿಲ್ಲವೆಂದು ದೃಢವಾಗಿ ಹೇಳುತ್ತಾರೆ. ಯಾರು ನಿರ್ಮಲವಾದ, ಸರಳವಾದ, ಅಚಲವಾದ ಭಕ್ತಿಯಿಂದ ತಮ್ಮನ್ನು ತಾವೇ ವಿಠಲನಿಗೆ ಅರ್ಪಿಸಿಕೊಳ್ಳುತ್ತಾರೋ, ಅವರೆಲ್ಲರೂ ವಿಠಲನ ಕೃಪೆಗೆ ಪಾತ್ರರಾಗುತ್ತಾರೆ.
ಎಷ್ಟು ಸರಳವೆಂದರೆ, ವಿಠಲನು ಭಕ್ತರನ್ನು ಆಶೀರ್ವದಿಸಲು ತಾಳಿದ ಪಾಂಡುರಂಗನ ರೂಪದಷ್ಟೇ ಸರಳ. ಕರ್ನಾಟಕದ ಪ್ರಸಿದ್ಧ ದಾಸವರೇಣ್ಯರಾದ ಪುರಂದರದಾದರು ಮಹಾನ್ ವೈಷ್ಣವ ಸಂತ ಕವಿಗಳಾಗಿದ್ದು ಅಸಂಖ್ಯಾತ ಹಾಡು/ಪದಗಳನ್ನು ರಚಿಸಿ ವಿಷ್ಣುವಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ್ದಾರೆ. ಅವರ ಪ್ರತಿಯೊಂದು ಪದಗಳಲ್ಲೂ ಅವರ ಅಂಕಿತ ನಾಮವಾದ ಪುರಂದರವಿಠಲ ಎಂದಿರುವುದನ್ನು ಕಾಣಬಹುದು. ಅವರ ಇಷ್ಟ ದೈವವು ಪುರಂದರ ವಿಠಲನಾಗಿದ್ದು, ಪಂಡರಪುರದಲ್ಲಿ ಬಹಳ ಕಾಲದವರೆಗೆ ಇದ್ದು, ವಿಠಲನ ಸೇವೆ ಮಾಡಿ, ಅನೇಕ ಪದಗಳ ರಚನೆಯನ್ನು ವಿಠಲನ ಸಮ್ಮುಖದಲ್ಲೇ ಮಾಡಿ ಹಾಡಿ ಅರ್ಪಿಸಿದ್ದಾರೆ. ಅವರು ನಿಂತು ಹಾಡುತ್ತಿದ್ದ ವಿಠಲನ ದೇಗುಲದ ಒಂದು ಕಂಬಕ್ಕೆ, ಈಗ ಬೆಳ್ಳಿಯ ಹೊದಿಕೆ ಹಾಕಿ ಅದನ್ನು ಪುರಂದರ ಕಂಬವೆಂದು ಹೆಸರಿಸಲಾಗಿದೆ.
ವಿಠಲನ ಇನ್ನು ಅನೇಕ ಭಕ್ತರ ಸಮಾಧಿಗಳನ್ನು ದೇವಾಲಯದ ಆವರಣದಲ್ಲಿ ಕಾಣಬಹುದು. ಪರಮ ಭಕ್ತನಾದ ಪುಂಡಲೀಕನ ಸಮಾಧಿಯನ್ನು ಚಂದ್ರಭಾಗ ನದಿಯ ಸಮೀಪದಲ್ಲಿರುವ ರುದ್ರನ ದೇವಾಲಯದ ಪುಂಡರೀಕೇಶ್ವರ ಮಂದಿರದಲ್ಲಿ ಕಟ್ಟಲಾಗಿದೆ.
ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ,) ಯುವ-ಸಂಸ್ಕøತಿ ಚಿಂತಕರು
Discussion about this post