ಏಕಾದಶಿ ದಿನ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಅತ್ಯಂತ ಮಹತ್ತರವಾದ ಪಾತ್ರ ವಹಿಸುತ್ತದೆ. ಮಾನವನು ದೈವತ್ವದೆಡೆಗೆ ಪಥಿಸಲು ಅತ್ಯಂತ ಮುಖ್ಯವಾದುದು ಎಂದರೆ ಮನೋನಿಗ್ರಹ. ಚಂಚಲತೆಯ ಮಿಂಚಿನ ಗೊಂಚಲಿನಲ್ಲಿ ಸಿಲುಕಿ, ಬಸವಳಿದು, ಪರಿತಪಿಸುತ್ತಿರುವವರಿಗೆ, ಉಪವಾಸ ಅತ್ಯಂತ ಮುಖ್ಯವಾದ ವ್ರತ ಹಾಗೂ ವಿಧಾನ. ಏಕಾದಶಿಯ ದಿನ ಆಹಾರ-ವಿಹಾರ-ಸುಖೀಮಯ ಜೀವನಕ್ಕೆ ಒಂದು ನಿಯಂತ್ರಣ ತಂದು ಆ ಮನಸ್ಸನ್ನು ಊಧ್ರ್ವಮುಖವಾಗಿ ಹರಿಸಲು ಮಾನವನಿಗೆ ಸಿಕ್ಕಿರುವ ಅತ್ಯಂತ ಪವಿತ್ರ ದಿನ. ಮಾನವನ ಜೀವನದಲ್ಲಿ ದೈವತ್ವವನ್ನು ಪಡೆಯುವ ವಿಧಾನಗಳಲ್ಲಿ ಅತ್ಯಂತ ಮೇರು ಪಾತ್ರವನ್ನು ವಹಿಸುತ್ತದೆ, ಏಕಾದಶಿ ವ್ರತ. ಏಕಾದಶಿಯನ್ನು ಹರಿದಿನ ಎಂದೂ ಕರೆಯಲಾಗುತ್ತದೆ. ಉಪವಾಸ ಎಂದರೆ ಭಗವಂತನನ್ನು ಸ್ಮರಿಸುತ್ತಾ ಅದರ ಸಾನಿಧ್ಯದಲ್ಲಿ ವ್ರತನಿಷ್ಠವಾಗಿ ಕಳೆಯುವುದೇ ಈ ಪದದ ಅರ್ಥ. ಭಾರತೀಯ ಅಧ್ಯಾತ್ಮಿಕ ಪರಂಪರೆಯಲ್ಲಿ ಮನಸ್ಸಿನ ನಿಗ್ರಹ ಅತ್ಯಂತ ಮುಖ್ಯವಾದುದು. ಈ ಮನೋನಿಗ್ರಹದ ಮೊದಲ ಮೆಟ್ಟಿಲೇ ಆಹಾರದ ನಿಯಂತ್ರಣ. ಅಂದರೆ ದೇಹಕ್ಕೆ ತಿಂಗಳಿಗೊಮ್ಮೆಯಾದರೂ ಆಹಾರದ ನಿಯಂತ್ರಣದಲ್ಲಿಟ್ಟುಕೊಂಡು ಮುಕ್ತಿಯ ಪಥದೆಡೆ ಮುಂದುವರಿಯುವ ಸ್ಥಿತಿ, ವ್ರತ ಎನ್ನಬಹುದು.
ಸಾಮಾನ್ಯವಾಗಿ ಏಕಾದಶಿಯ ದಿನ ಅಂದರೆ ಹನ್ನೊಂದನೇ ದಿನ (ಕೃಷ್ಣಪಕ್ಷ-ಶುಕ್ಲಪಕ್ಷ) ಷೋಡಶಕಳಾ ಪರಿಪೂರ್ಣವಾದ ಚಂದ್ರನ ಹನ್ನೊಂದನೆಯ ರಶ್ಮಿ ಕ್ಷಿತಿಜ ಕತ್ತಿಯ ಮೇಲಿರುತ್ತದೆ. ಈ ಸಂದರ್ಭ ಮನಸನ್ನು ನಿಗ್ರಹಿಸಲು ಅತ್ಯಂತ ಸುಲಭ ಎಂಬ ವಾಡಿಕೆಯ ಮಾತಿದೆ. ಏಕಾದಶಿ ದಿನದ ಅಭಿಮಾನಿ ದೇವತೆ ಶ್ರೀವಿಷ್ಣು. ಸಾಕ್ಷಾತ್ ಶ್ರೀಹರಿ ಈ ಕಾರಣದಿಂದಲೇ ಈ ದಿನಕ್ಕೆ ಶ್ರೀಹರಿಯದಿನ ಎಂದೂ ಕರೆಯುತ್ತಾರೆ.
ಆಚರಣೆ
ದಿನವಿಡೀ ಉಪವಾಸ, ಮೌನವ್ರತವನ್ನು ಆಚರಿಸುತ್ತಾರೆ. ನಾರಾಯಣನ ಸ್ಮರಣೆ ಮಾಡುತ್ತಾ ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತಾರೆ. ಶ್ರೀವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಹೀಗೆಂದರೆ ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು ಮತ್ತು ಎಲ್ಲ ವಸ್ತುವಿನಲ್ಲೂ ಅಂತರ್ಗತನಾಗಿರುವವನು ಎಂದರ್ಥ. ಈ ವಿಷ್ಣುವಿಗೆ ಅನ್ವಯವಾಗುವ ಜನಪ್ರಿಯವಾದ ಮತ್ತೊಂದು ಹೆಸರು ‘ನಾರಾಯಣ’. ಈ ಹೆಸರಿನ ಒಂದೊಂದು ಅಕ್ಷರದಲ್ಲೂ ವಿಶೇಷತೆಯಿದೆ-
‘ನಾ’ ಎಂದರೆ ಕಾರಣರೂಪ ಜಲದ ಮೇಲೆ ನಿವಾಸವನ್ನು ಕಲ್ಪಿಸಿಕೊಂಡಿರುವವನು.
‘ರಾ’ ಎಂದರೆ ಎಲ್ಲ ಮಾನವ ಜೀವಿಗಳೂ ನೆಲೆಗೊಳ್ಳುವ ಸ್ಥಾನ,
‘ಯ’ ಎಂದರೆ ಎಲ್ಲ ಮಾನವರ ಹೃದಯಗಳಲ್ಲಿ ವಾಸಿಸುವವನು,
‘ಣ’ ಎಂದರೆ ಮಾನವಕೋಟಿಯ ಅಂತಿಮ ಗಮ್ಯಸ್ಥಾನ ಎಂದರ್ಥ.
ಮಹಾವಿಷ್ಣುವನ್ನು ‘ನೀಲಮೇಘಶ್ಯಾಮ’ ಎಂದು ಕರೆಯುತ್ತಾರೆ. ವಿಷ್ಣುವಿಗೆ 4ಕೈಗಳಿವೆ. ಈ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇರುವುವು. ಶಂಖವು ಪಂಚಭೂತಗಳನ್ನು, ಚಕ್ರವು ಸಮಸ್ತ ಚಿತ್ತಗಳನ್ನೂ, ಗದೆಯು ಬುದ್ಧಿಯನ್ನೂ ಸೂಚಿಸಿದರೆ, ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ವಿಷ್ಣುವು ಸೃಷ್ಟಿಕರ್ತನೂ ಆಗಿರುವನು. ಧರ್ಮವು ಇಳಿಮುಖವಾಗಿ ಅಧರ್ಮವು ತಾಂಡವವಾಡುತ್ತಿರುವಾಗ ಧರ್ಮವನ್ನು ಉದ್ಧರಿಸಲು ವಿಷ್ಣುವು ದೇಹಧಾರಿಯಾಗಿ ಅವತರಿಸುತ್ತಾನೆ. ಈತನದು 10 ಅವತಾರಗಳಿವೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ ಮತ್ತು ಕಲ್ಕಿ.
ಮನೋನಿಗ್ರಹಕ್ಕೆ ಸಹಕಾರಿ
ಏಕಾದಶಿಯ ಮಹತ್ವ: ಏಕಾದಶಿ ಎಂದರೆ ಹನ್ನೊಂದು ಎಂದರ್ಥ. 5 ಕರ್ಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು ಮನಸ್ಸಿನಿಂದ ಅಂದರೆ, ಧರ್ಮ, ಕರ್ಮ, ಜ್ಞಾನಸಾಧನ ಕರಣಗಳಿಂದ ಭಗವತ್‍ಚಿಂತನೆಯಲ್ಲಿ ತೊಡಗಿಕೊಳ್ಳುವ ಕ್ರಿಯೆಯೇ ‘ಏಕಾದಶಿ’. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಈ ದಿನವನ್ನು ‘ಹರಿದಿನ’ ಎಂತಲೂ ಕರೆಯುವರು.
ಏಕಾದಶಿ ಎನ್ನುವ ದೇವಿಯು ವಿಷ್ಣುವಿನಿಂದ ಉದ್ಭವಳಾಗಿ, ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣುವು ಏನಾದರೂ ವರ ಕೇಳು ಎಂದಾಗ, ‘ವೈಕುಂಠ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರುಗಳ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು’ ಎಂದು ಏಕಾದಶಿ ದೇವಿಯು ವರವನ್ನು ಕೇಳುತ್ತಾಳೆ. ಇದಕ್ಕೆ ವಿಷ್ಣುವು ‘ಅದರಂತೆ ಆಗಲಿ’ ಎಂದು ವರವನ್ನು ನೀಡುತ್ತಾನೆ ಎಂಬುದನ್ನು ನಾವು ಭವಿಷ್ಯೋತ್ತರ ಪುರಾಣದಲ್ಲಿ ಕಾಣಬಹುದು. ಉಪವಾಸದ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು ಹಾಗೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟಿರಬೇಕು.
ಉಪವಾಸದ ಅರ್ಥ:
‘ಉಪ’ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ವಾಸಿಸುವುದೇ ಉಪವಾಸದ ಅರ್ಥ. ಆ ದಿನ ಯಾರು ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ, ಪೂಜೆ ಮಾಡಿ ಜಾಗರಣೆಯನ್ನು ಮಾಡುತ್ತಾರೋ ಅವರಿಗೆ ಭಗವಂತ ಎಲ್ಲ ಸೌಭಾಗ್ಯಗಳನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ಕರುಣಿಸುವನು. ಉಪವಾಸ ವ್ರತ ಮಾಡುವುದರಿಂದ ಶಾಂತಿ, ತಾಳ್ಮೆ ದೊರೆಯುವುದಲ್ಲದೆ, ರಕ್ತದೊತ್ತಡ, ರಕ್ತಹೀನತೆ ಸೇರಿದಂತೆ ಅನೇಕ ರೋಗಗಳು ನಿವಾರಣೆ ಆಗುವುವು.
ಬುಧಗ್ರಹದ ಅನುಗ್ರಹ: ಯಾರದೇ ಜಾತಕದಲ್ಲಿ ಬುಧಗ್ರಹವು ನೀಚಸ್ಥಾನದಲ್ಲಿದ್ದರೆ ಅಥವಾ ಪಾಪಗ್ರಹಗಳ ಜತೆಯಲ್ಲಿದ್ದರೆ ಅಥವಾ ಪಾಪಗ್ರಹಗಳ ದೃಷ್ಟಿಗೆ ಒಳಗಾಗಿದ್ದರೆ, ಅವರು ವೈಕುಂಠ ಏಕಾದಶಿ ದಿನದಂದು ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಬುಧಗ್ರಹದ ಅನುಗ್ರಹವನ್ನು ಪಡೆಯಬಹುದು.
ಆಷಾಢ ಏಕಾದಶಿಗೆ ತಪ್ತಮುದ್ರಾಧಾರಣೆ
ಆಷಾಢ ಶುದ್ಧ ಏಕಾದಶಿಯೊಂದಿಗೆ ಚಾತುರ್ಮಾಸ್ಯ ವ್ರತಾಚರಣೆಯೂ ಆರಂಭವಾಗುತ್ತದೆ. ಕಾರ್ತಿಕಉತ್ಥಾನ ದ್ವಾದಶಿಯವರೆಗೂ ಮುಂದುವರೆಯುತ್ತದೆ. ಚಾತುರ್ಮಾಸ ವ್ರತಾಚರಣೆಯ ಸಂದರ್ಭದಲ್ಲಿ ದೇವತೆಗಳೆಲ್ಲರೂ ಶ್ರೀಮನ್ ನಾರಾಯಣನ ಪಾದ ಸೇವೆಯಲ್ಲಿ ನಿರತರಾಗಿತ್ತಾರೆ.ಆ ಕಾರಣ ಉಪನಯನ ಅಥವಾ ಮದುವೆ ಮತ್ತಿತರ ಶುಭಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದಿಲ್ಲ.
ಆಷಾಢ ಮಾಸದಲ್ಲಿ ಸೂರ್ಯದಕ್ಷಿಣ ದಿಕ್ಕಿನತ್ತ ಪ್ರಯಾಣಿಸುತ್ತಾನೆ. ಆಷಾಢ ಮಾಸ ದಕ್ಷಿಣಾಯಣ ಪುಣ್ಯಕಾಲಕ್ಕೆ ನಾಂದಿಯೂ ಆಗಿದೆ. ಮುದ್ರಾಧಾರಣೆಯಲ್ಲಿ ಎರಡು ವಿಧ. ಮೊದಲನೆಯದು ಶೀತಲ ಮುದ್ರೆ ಮತ್ತೊಂದು ತಪ್ತಮುದ್ರೆ. ಕಂಚಿನ ಮುದ್ರೆಗಳನ್ನು ಗೋಪಿಚಂದನದಲ್ಲಿ ಅದ್ದಿ ಮೈಮೇಲೆ ಹಾಕಿಕೊಳ್ಳುವುದೇ ಶೀತಲ ಮುದ್ರಾಧಾರಣೆ. ಈ ಮುದ್ರೆಯನ್ನು ವೈಷ್ಣವ ಅನುಯಾಯಿಗಳು ಪ್ರತಿನಿತ್ಯ ಸಂಧ್ಯಾವಂದನೆಯ ಸಂದರ್ಭದಲ್ಲಿ ಹಾಕಿಕೊಳ್ಳುತ್ತಾರೆ. ತಪ್ತಮುದ್ರೆ ಆಷಾಢ ಶುದ್ಧ ಏಕಾದಶಿಯಂದು ಹಾಕಿಕೊಳ್ಳುವ ಪ್ರಕ್ರಿಯೆ. ಸುದರ್ಶನ ಹೋಮದ ಕುಂಡದಲ್ಲಿ ಮಂತ್ರಗಳನ್ನು ಪಠಿಸುತ್ತ ಬೆಳ್ಳಿ ಅಥವಾ ಚಿನ್ನದ ಮುದ್ರೆಗಳನ್ನು ಚೆನ್ನಾಗಿ ಕಾಯಿಸಿ ಸ್ಥೂಲ ದೇಹದ ಮೇಲೆ ಧಾರಣೆ ಮಾಡಿಕೊಳ್ಳುವುದು.
ದೇವತಾರಾಧನೆಯೇ ಉದ್ದೇಶ
ದೇವತಾರಾಧನೆಯ ಮೂಲ ಉದ್ದೇಶವೇ ಭಗವಂತನ ಅನುಗ್ರಹ ಪಡೆಯುವುದು. ಆ ಹಿನ್ನೆಲೆಯಲ್ಲೇ ಆರಾಧನಾಕ್ರಮದಲ್ಲಿ ಪೂಜೆ, ಪುನಸ್ಕಾರಗಳಿರುತ್ತವೆ. ಆಷಾಢ ಮಾಸದಲ್ಲಿ ದೇವತೆಗಳೆಲ್ಲರೂ ತಮ್ಮ ಪವಿತ್ರ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ತಾವು ಗ್ರಹಿಸಿದ ತತ್ವಜ್ಞಾನವನ್ನು ವಿಷ್ಣುವಿನ ಪದತಲದಲ್ಲಿ ಸಮರ್ಪಣೆ ಮಾಡುವ ತರಾತುರಿಯಲ್ಲಿರುತ್ತಾರೆ. ಭಗವಂತನೋ ಭಕ್ತಜನರ ಪ್ರಿಯ. ಅವರು ಕೊಟ್ಟಿದುದೆಲ್ಲವನ್ನೂ ಸ್ವೀಕರಿಸುತ್ತಾನೆ. ಹೀಗೆ ದೇವತೆಗಳು ಕ್ರಿಯಾಶೀಲರಾಗಿರುವ ಸಂದರ್ಭದಲ್ಲಿ ಧಾರ್ಮಿಕ ಆಚರಣೆ ಮಾಡಬಾರದು ಎನ್ನುತ್ತಾರೆ.
ಶಯನಿ ಏಕಾದಶಿ
ಚಾತುರ್ಮಾಸದ ಮೊದಲ ದಿನವೇ ಶಯನಿ ಏಕಾದಶಿ.ಅಂದೇ ಯತಿಗಳ ಉಪಸ್ಥಿತಿಯಲ್ಲಿ ನಡೆಯುವ ತಪ್ತ ಮುದ್ರಾಧಾರಣೆ. ತಪ್ತಮುದ್ರೆಯನ್ನು ಹಾಕಿಕೊಳ್ಳುವ ಮೂಲಕ, ದೇಹ ಶುದ್ಧಿಯಾಗುತ್ತದೆ. ಸಾಧಕರಿಗೆ ಸಾಧನೆ ಮಾಡಲು ಯೋಗ್ಯ ಸಮಯ ದೊರೆತಂತಾಗುತ್ತದೆ. ತಪ್ತಮುದ್ರಾಧಾರಣೆಯ ವಿಧಿವಿಧಾನ ವಿಷ್ಣು ರಹಸ್ಯ ಮತ್ತು ವೇದಗಳಲ್ಲಿ ಉಲ್ಲೇಖವಾಗಿದೆ. ಅಷ್ಟೇ ಅಲ್ಲ ಆಯುರ್ವೇದ ಶಾಸ್ತ್ರಗಳೂ ತಪ್ತಮುದ್ರಾಧಾರಣೆಯ ಪ್ರಯೋಜನಗಳನ್ನು ವಿವರಿಸುತ್ತದೆ.
ಪುರಾಣಗಳಲ್ಲಿ ಉಲ್ಲೇಖ
ತಪ್ತಮುದ್ರಾಧಾರಣೆಯನ್ನು ಹೇಗೆ ಮಾಡಬೇಕು? ಎಂಬ ಬಗ್ಗೆ ಋಗ್ವೇದ, ಪದ್ಮಪುರಾಣ, ಮಹಾಭಾರತ ಮತ್ತಿತರ ಪುರಾಣಗಳಲ್ಲಿ ನೋಡಬಹುದು.ಶ್ರೀಮತ್ ಮಧ್ವಾಚಾರ್ಯರು ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮಧ್ವವಿಜಯದಲ್ಲಿ ಉಕ್ತವಾಗಿದೆ. ಆಚಾರ್ಯ ಮಧ್ವರಿಂದರಚಿಸಲ್ಪಟ್ಟ ‘ಸುಮಧ್ವ ವಿಜಯ’ಕೃತಿಯಲ್ಲಿ ಆಚರಣೆಯ ಹಿಂದಿನ ಉದ್ದೇಶ, ವೈವಿಧ್ಯತೆಯ ವಿವರಗಳನ್ನು 9ನೇ ಅಧ್ಯಾಯ 39ನೇ ಶ್ಲೋಕದಲ್ಲಿ ನೋಡಬಹುದು. ಈ ಪಠ್ಯವಲ್ಲದೇ ವಿವಿಧ ಕಾಲಮಾನದಲ್ಲಿ ಸಂತರು, ವಿದ್ವಾಂಸರು ತಪ್ತಮುದ್ರಾಧಾರಣೆ ಕುರಿತ ಮಾಹಿತಿಯನ್ನು ನೀಡಿದ್ದಾರೆ. ಅದರಲ್ಲಿ ಶ್ರೀ ವಾದಿರಾಜ ಮಹಾಸ್ವಾಮಿಗಳ ಚಕ್ರಸ್ತುತಿ, ಶ್ರೀ ವಿಜಯೀಂದ್ರರ ತಪ್ತಚಕ್ರ ಮೀಮಾಂಸ, ಶ್ರೀ ಸತ್ಯಾಭಿನವತೀರ್ಥರ ರಾಮಾಮೃತ ಮಹಾರ್ಣವ, ಶ್ರೀ ಕೃಷ್ಣಾಚಾರ್ಯರ ಸ್ಮøತಿ ಮುಕ್ತಾವಲಿ ಹಾಗೂ ತಪ್ತಚಕ್ರ ಭೂಷಣಗಳು ಪ್ರಮುಖವಾಗಿವೆ.
ಯೋಗನಿದ್ರೆಗೆ ಜಾರುವ ನಾರಾಯಣ
ಶಯನಿ ಏಕಾದಶಿಯಂದು ಮಹಾವಿಷ್ಣುವು ಆದಿಶೇಷನ ಮೇಲೆ ಯೋಗನಿದ್ರೆಯಲ್ಲಿ ಪವಡಿಸುತ್ತಾನೆ. ಯೋಗನಿದ್ರೆ ಎಂದರೆ ಜಾಗೃತಾವಸ್ಥೆಯಲ್ಲಿರುವುದು ಎಂದರ್ಥ. ‘ದೇಹೋ ದೇವಾಲಯೋ ಪ್ರೋಕ್ತೋ ಜೀವೋದೇವ ಸನಾತನಃ’ ಎಂಬ ಶ್ರುತಿವಾಕ್ಯದಂತೆ ತಮ್ಮ ದೇಹದೊಳಗಿರುವ ಪರಮಾತ್ಮನ ತೃಪ್ತಿಗಾಗಿ ಶಂಖ, ಚಕ್ರಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ. ತಪ್ತಮುದ್ರಾಧಾರಣೆ ವೈದಿಕ ಅಥವಾ ವೈಷ್ಣವ ಧಾರ್ಮಿಕ ವಿಧಿ. ನಮ್ಮ ದೇಹವನ್ನು ಪವಿತ್ರಗೊಳಿಸುವ ಪ್ರಕ್ರಿಯೆಗಳಲ್ಲಿ ಒಂದು. ಮಹಾಭಾರತಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಪಾಂಡವರಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಪಾಂಡವರ ಪರವಾಗಿ ಕಾದಾಡುತ್ತಿರುವ ಸೈನಿಕರನ್ನು ರಕ್ಷಿಸುವ ಸಲುವಾಗಿ ಅವರೆಲ್ಲರಿಗೂ ತಪ್ತಮುದ್ರಾಧಾರಣೆ ಮಾಡಿಸಿದ ಎನ್ನುವ ಉಲ್ಲೇಖವಿದೆ. ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುವ ಮೂಲಕ ಭಗವಾನ್ ವಿಷ್ಣುವಿನಲ್ಲಿ ಭಕ್ತಿಯನ್ನು ತೋರುವುದಾಗಿದೆ.
ಮುದ್ರಾಧಾರಣೆಯ ವಿಜ್ಞಾನ
ತಪ್ತಮುದ್ರಾಧಾರಣೆಯ ಹಿಂದೊಂದು ವಿಜ್ಞಾನವಿದೆ. ಕಾಯಾ, ವಾಚಾ, ಮನಸಾ ಸಾಧನೆಗೆ ನಶ್ವರವಾದ ಶರೀರವೇ ವೇದಿಕೆ, ದೇವತಾರಾಧನೆ, ಯಜ್ಞ, ಆವಾಹನೆ, ಶ್ರವಣ, ಮನನ, ನಿಧಿಧ್ಯಾನಕ್ಕೂ ಶರೀರವೇ ಆಧಾರ. ಶರೀರವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮುದ್ರಾಧಾರಣೆ.
ಮುದ್ರಾಧಾರಣೆಯ ಮೂಲಕ ದೇಹದ ನರಕೋಶ ವ್ಯವಸ್ಥೆ ಸುಲಲಿತವಾಗುತ್ತದೆ. ಇಂದಿಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಕಾಮಾಲೆ ಪೀಡಿತ ರೋಗಿಗಳಿಗೆ ಚೆನ್ನಾಗಿಕಾದ ಕಂಚಿನ ಸರಳಿಯಿಂದ ಬರೆ ಹಾಕುವ ಪದ್ಧತಿಯಿದೆ. ಹೀಗೆ ಚೆನ್ನಾಗಿ ಕಾಯಿಸಿದ ಸರಳಿನಿಂದ ಬರೆ ಹಾಕಿದಾಗ ದೇಹದೊಳಗಿನ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಕಾಯಿಲೆಯೂ ಗುಣವಾಗುತ್ತದೆ ಎನ್ನುವ ನಂಬಿಕೆ ಅವರಲ್ಲಿದೆ. ಆಯುರ್ವೇದ ಶಾಸ್ತ್ರವೂ ಕಾದಕಂಚಿನ ಲೋಹವು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ನಮ್ಮ ಪ್ರಾಚೀನರು ಹೇಳಿದ ಮಾತುಗಳು ನಮಗೆ ವ್ಮರೆತಂತಾಗಿದೆ .ಆದರೆ ಐರಿಷ್ ಆಸ್ಪತ್ರೆಗಳಲ್ಲಿ ಇಂದಿಗೂ ಆಸ್ಪತ್ರೆಯ ಬಾಗಿಲಿಗೆ ಕಂಚಿನಚಿಲಕ ಮತ್ತು ಹ್ಯಾಂಡಲ್‍ಗಳನ್ನು ಬಳಸಲಾಗುತ್ತಿದೆ.
ಮುದ್ರಾಧಾರಣೆ ಹೇಗೆ?
ಸುದರ್ಶನ ಹೋಮದ ಅಗ್ನಿಯಲ್ಲಿ ಬೆಳ್ಳಿ ಅಥವಾ ಬಂಗಾರದ ಲೋಹದಿಂದ ತಯಾರಿಸಿದ ಶಂಖು, ಚಕ್ರಾದಿ ಮುದ್ರೆಗಳನ್ನು ಚೆನ್ನಾಗಿ ಕಾಯಿಸಬೇಕು. ನಂತರ ಸುದರ್ಶನ ಅಭಿಮಾನಿ ದೇವತೆಗಳನ್ನು ಸ್ಮರಿಸಬೇಕು. ನಂತರ ಬಲಭುಜದಲ್ಲಿ ಚಕ್ರ, ಎಡಭುಜದಲ್ಲಿ ಶಂಖು ಧಾರಣೆ ಮಾಡಿಸಿಕೊಳ್ಳಬೇಕು. ನಂತರ ವಕ್ಷಸ್ಥಳದ ಎಡಭಾಗದಲ್ಲಿ ಶಂಖುವನ್ನು, ಬಲಭಾಗದಲ್ಲಿ ಚಕ್ರವನ್ನು ಧರಿಸಬೇಕು. ಉದರದ ಮೇಲೆ ಚಕ್ರಧಾರಣೆ ಮಾಡಬೇಕು. ಹೆಣ್ಣುಮಕ್ಕಳು ಎಡ ಹಾಗೂ ಬಲಕೈಗಳ ಮೇಲೆ ಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ.
ಲೇಖನ: ಡಾ.ಗುರುರಾಜ ಪೋಶೆಟ್ಟಿಹಳ್ಳಿ
Discussion about this post