ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೂನ್ ಮೂರನೆಯ ವಾರ ಬಂದರೂ ಮಳೆ ಬಾರಲಿಲ್ಲ ಎಂಬ ಕೊರಗನ್ನು ಮರೆಸಿರುವ ಮಳೆರಾಯ ಇಂದು ಮಧ್ಯಾಹ್ನ ಜಿಲ್ಲೆಗೆ ಅಡಿಯಿಟ್ಟಿದ್ದು, ಮಲೆನಾಡಿನ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ಒಂದೇ ಮಳೆಗೆ ಸ್ಮಾರ್ಟ್ ಸಿಟಿಯ ಅವಾಂತರಗಳು ತೆರೆದುಕೊಂಡಿವೆ.
ಮಳೆಯ ಪರಿಣಾಮ ನಗರದ ಹಲವು ಪ್ರದೇಶ ಹಾಗೂ ರಸ್ತೆಗಳಲ್ಲಿ ಸುಮಾರು 2 ಅಡಿಗೂ ಎತ್ತರ ನೀರು ಹರಿಯುತ್ತಿದ್ದು, ಚರಂಡಿಗಳಲ್ಲಿನ ಕಸ ಕಡ್ಡಿ ಗಲೀಜು ರಸ್ತೆಯಲ್ಲಿ ತೇಲುತ್ತಿವೆ.
ಎಲ್ಲೆಲ್ಲಿ ಹೆಚ್ಚು ನೀರು ಹರಿವು?
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆಯಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಹಾಗೆಯೇ, ಕೆಆರ್ ಪುರಂ ಮುಖ್ಯ ರಸ್ತೆಯಲ್ಲಿಯೂ ಸಹ ಸುಮಾರು ಒಂದೂವರೆ ಅಡಿಗೂ ಅಧಿಕ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು ಚಕ್ರದವರೆಗೂ ಮುಳುಗಿದ್ದವು.
ಇನ್ನು, ಯುಜಿಡಿ ನಿರ್ಮಾಣ ಲೋಪದಿಂದಾಗಿ ಮಳೆ ನೀರಿನೊಂದಿಗೆ ಚರಂಡಿಯಲ್ಲಿನ ಕೊಳಚ ರಸ್ತೆಗೆ ಬರುತ್ತಿದ್ದು, ಅಸಹ್ಯ ಹುಟ್ಟಿಸುತ್ತಿದೆ.
ಎಲ್’ಎಲ್’ಆರ್ ರಸ್ತೆಯಲ್ಲಿಯೂ ಸಹ ನೀರು ಹರಿಯುತ್ತಿದ್ದ ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.
ಹೊಸಮನೆಯಲ್ಲಿ ನುಗ್ಗಿನ ನೀರು
ನಗರದ ಹೊಸಮನೆ ಬಡಾವಣೆಯ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಠಿಯಾಗಿದೆ. ಹಲವು ಮನೆಗಳ ಮುಂಭಾಗದ ಆವರಣದಲ್ಲಿ 2 ಅಡಿಗೂ ಅಧಿಕ ಎತ್ತರ ನೀರು ನಿಂತಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಒಂದೆಡೆ ಮಳೆ ಬಾರಲಿಲ್ಲ ಎಂಬ ಕೊರಗಿಗೆ ವಿರಾಮ ದೊರೆತಿದ್ದರೆ, ಇನ್ನೊಂದೆಡೆ ಮಳೆಗಾಲದಲ್ಲಿ ಏನೆಲ್ಲಾ ಅವಾಂತರವಾಗಬಹುದು ಎಂಬ ಆತಂಕವೂ ಸಹ ಸಾರ್ವಜನಿಕರಲ್ಲಿ ಕಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















