ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆದಿಚುಂಚನಗಿರಿ (ಮಂಡ್ಯ): ಸಾಮಾಜಿಕ ಮತ್ತು ಆರ್ಥಿಕವಾಗಿ ತೀರಾ ತಳಹಂತದಿಂದ ಉನ್ನತ ಮಟ್ಟದವರೆಗೂ ಬದಲಾವಣೆಗಳನ್ನು ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಶಿಕ್ಷಣ ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ನಡೆದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಪಾಲೊಂಡು ಮಾತನಾಡಿದ ಅವರು, ದೇಶವನ್ನು ಕಟ್ಟುವಲ್ಲಿ ಹಾಗೂ ಪ್ರತಿಯೊಬ್ಬರ ಕನಸುಗಳನ್ನು ಸಾಕಾರಗೊಳಿಸಲು ಶಿಕ್ಷಣ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು
ಗುಣಮಟ್ಟದ ಶಿಕ್ಷಣಕ್ಕೆ ಇರುವ ಶಕ್ತಿ ಏನೆಂಬುದು ನಮಗೆ ಗೊತ್ತಿದೆ. ಇಡೀ ಸಮಾಜವನ್ನು ಬದಲಾವಣೆ ಮಾಡಬಲ್ಲ ಹಾಗೂ ಜೀವನಮಟ್ಟವನ್ನು ಸುಧಾರಿಸಬಲ್ಲ ಸಾಮರ್ಥ್ಯ ಶಿಕ್ಷಣಕ್ಕೆ ಮಾತ್ರ ಇದೆ ಎಂಬುದನ್ನು ಯಾರೂ ಮರೆಯಬಾರದು. ಇದೇ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ಬಲಿಷ್ಠ ಮತ್ತು ನವಭಾರತವನ್ನು ನಿರ್ಮಾಣ ಮಾಡಬೇಕಾದರೆ ಶಿಕ್ಷಣದಿಂದ ಸಾಧ್ಯ ಎಂದು ಅವರು ನಂಬಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡುತ್ತಿದೆ. ಹಾಗೂ ಉತ್ತಮ ಬೋಧನೆ ಮತ್ತು ಕಲಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಗುಣಮಟ್ಟದ ಎಲ್ಲಾ ಸೌಲಭ್ಯಗಳಿವೆ. ವಿದ್ಯಾರ್ಥಿ ಕೇಂದ್ರೀಯ ಬೋಧನಾ ವ್ಯವಸ್ಥೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಯಾವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದೇವೆ ಎಂಬುದನ್ನು ಮರೆಯದೇ ಕಲಿಕೆಯನ್ನು ಮುಂದುವರಿಸಿ ತಮ್ಮ ಗುರಿಯನ್ನು ಸಾಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಡಿಸಿಎಂ ಕಿವಿಮಾತು ಹೇಳಿದರು.
ವಿವಿಗೆ ಮಾತ್ರ ಸೀಮಿತವಾಗದಿರಿ:
ವಿದ್ಯಾಭ್ಯಾಸ ಮಾಡುವುದು ಎಂದರೆ ಕೇವಲ ತರಗತಿಗೆ ಬಂದೆವು, ಕಲಿತೆವು, ಪರೀಕ್ಷೆ ಬರೆದವು, ಪಾಸಾದೆವು ಎಂದರ್ಥವಲ್ಲ. ವಿದ್ಯಾರ್ಥಿ ಜೀವನ ಎನ್ನುವುದು ಇಷ್ಟಕ್ಕೆ ಸೀಮಿತ ಆಗಬಾರದು. ನಿಮ್ಮ ತರಗತಿ- ಹಾಸ್ಟೆಲ್‌ಗಳಿಂದ ಹೊರಬಂದು ವಾರಕ್ಕೊಮ್ಮೆಯಾದರೂ ಸುತ್ತಮುತ್ತಲ ಹಳ್ಳಿಗಳ ಜನರನ್ನು ನೋಡಿ. ದಿನನಿತ್ಯ ಅವರು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸಿ. ನಿಮ್ಮ ಕಲಿಕೆ ಆ ಗ್ರಾಮಗಳ ಜನರ ಬದುಕನ್ನು ಸುಧಾರಿಸಲು ಉಪಯೋಗವಾಗುತ್ತದಾ ಎಂಬುದನ್ನು ಆಲೋಚಿಸಿ. ಆಗ ಮಾತ್ರ ಯಾವುದೇ ವಿದ್ಯೆಗೆ ಸಾರ್ಥಕತೆ ಬರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ರಾಜ್ಯದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಉಪ ಕುಲಪತಿ ಡಾ.ಭೈರಪ್ಪ, ಕುಲಸಚಿವ ಸುಬ್ಬರಾಯಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post