ಕಲ್ಪ ಮೀಡಿಯಾ ಹೌಸ್ | ಸೊರಬ |
ಅರಣ್ಯ ನಾಡಿನ ಸಂಪತ್ತು, ಕಾಡು ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ ಎಂದು ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಬಿ. ಈಶ್ವರ ಹೇಳಿದರು.
ಸೋಮವಾರ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಗ್ರಾಮ ಸಲಹಾ ಸಮಿತಿ ನೇತೃತ್ವದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡ ಹಸಿರೀಕರಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಪರಿಸರವನ್ನು ಸುಧಾರಿಸಲು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಹಸಿರು ಹೆಚ್ಚುತ್ತದೆ. ಜೊತೆಗೆ ಉತ್ತಮ ಗಾಳಿ ದೊರೆಯುತ್ತದೆ. ವನ್ಯ ಜೀವಿಗಳು ಕಾಡಿನಲ್ಲಿ ಆಹಾರ ದೊರೆಯದೇ ನಾಡಿನಡೆ ವಲಸೆ ಬಂದು ಸಾವನ್ನಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಇದಲ್ಲದೇ, ರೈತರು ಬೆಳೆದ ಮಾವು, ಹಲಸು, ಅಡಕೆ, ತೆಂಗು, ಬಾಳೆ, ಜೋಳ ಸೇರಿದಂತೆ ಇತರೆ ಬೆಳೆಗಳ ಮೇಲೆ ಲಗ್ಗೆ ಇಡುತ್ತಿವೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರತಿ ವರ್ಷ ಐದು ನೂರು ಹಣ್ಣು ಬಿಡುವ ಸಸಿಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ. ಈ ಮೂಲಕ ವನ್ಯ ಸಂಪತ್ತನ್ನು ಹೆಚ್ಚಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು.
Also read>> ಭದ್ರಾವತಿ | ಗಾಂಜಾ ಮಾರಾಟ | ಇಬ್ಬರು ಆರೋಪಿಗಳ ಬಂಧನ, 627 ಗ್ರಾಂ ಗಾಂಜಾ ವಶ
ಉಪವಲಯ ಅರಣ್ಯಾಧಿಕಾರಿ ಜಿ. ರವೀಂದ್ರ ಮಾತನಾಡಿ, ಕಾಡಿನ ರಕ್ಷಣೆ ಮತ್ತು ವೃದ್ಧಿಗೆ ಸರ್ಕಾರ ಕೋಟ್ಯಂತರ ರೂ., ವ್ಯಯಿಸುತ್ತಿದೆ. ಇದರ ನಡುವೆ ಕೆರೆಕೊಪ್ಪ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸಸಿ ನೆಡಲು ಮುಂದೆ ಬಂದಿರುವುದು ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಪ್ರತಿ ಗ್ರಾಮದಲ್ಲಿ ನಡೆದರೆ ಉತ್ತಮ ಬೆಳವಣಿಗೆಯಾಗುತ್ತದೆ. ಮುಂದಿನ ಪೀಳಿಗೆಗೆ ಕಾಡನ್ನು ಉಳಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು.
ಗ್ರಾಮ ಸಲಹಾ ಸಮಿತಿ ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷ ಮೂಡಿ ಕೃಷ್ಣಪ್ಪ, ಖಜಾಂಚಿ ಸಿದ್ದಪ್ಪ, ಅರಣ್ಯ ಸಮಿತಿ ಅಧ್ಯಕ್ಷ ಓಂಕಾರಪ್ಪ ಬೆಳ್ಳಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಶಾಂತಪ್ಪ, ಜೆ.ಎಸ್. ಸುರೇಶ್, ಪರಶುರಾಮ್, ಟೋಪಯ್ಯ, ದೇವೇಂದ್ರಪ್ಪ, ಯಂಕರಾಜ್, ಬಂಗಾರಪ್ಪ, ಶ್ರೀಕಾಂತ್, ಕೆ. ನಾಗೇಶ್, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜ್ ಸೇರಿದಂತೆ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







