ಸುಮಾರು ಐದು ಸಾವಿರ ವರ್ಷಗಳ ಹಿಂದೆ ಚರಕ-ಸುಶ್ರುತ-ವಾಗ್ಭಟಾದಿ ಮಹಾಮುನಿ ಪ್ರಣೀತವಾದ ಆಯುರ್ವೇದ ವೈದ್ಯವಿಜ್ಞಾನವು ಪರಕೀಯರ ಆಕ್ರಮಣ, ಅಲೋಪಥಿ ವೈದ್ಯವಿಜ್ಞಾನ-ಆವಿಷ್ಕಾರ ಇತ್ಯಾದಿಗಳ ಹಾವಳಿಗಳ ಮಧ್ಯೆಯೂ ತನ್ನ ಅಸ್ತಿತ್ವವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದೆಯೆಂದರೆ ಅದು ಆಯುರ್ವೇದದ ಅಂತಃಸತ್ವ ಮತ್ತು ಅಂತಃಶಕ್ತಿಯಿಂದ ಮಾತ್ರವೆಂಬುದ್ನು ನಾವು ಸಮ್ಮತಿಸಲೇಬೇಕಾಗುತ್ತದೆ.
ಕಳೆದ 400 ವರ್ಷಗಳ ಹಿಂದೆ ಬಳಕೆಗೆ ಬಂದ ಅಲೋಪಥಿ ವೈದ್ಯಕೀಯಕ್ಕೆ ವಿಶ್ವದೆಲ್ಲೆಡೆ ಸಾಕಷ್ಟು ಪ್ರಚಾರ-ಪ್ರೋತ್ಸಾಹ-ಬಂಡವಾಳಗಳನ್ನು ಸರ್ಕಾರ ಮತ್ತು ಖಾಸಗಿ ಬಂಡವಾಳಶಾಹಿಗಳು ನಿರಂತರವಾಗಿ ನೀಡುತ್ತ ಬಂದರೂ, ಅಧಿಕಾರಶಾಹಿಗಳ ಅವಿರತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ, ಜನಸಾಮಾನ್ಯರಲ್ಲಿ ಇಂದಿಗೂ ಆಯುರ್ವೇದ ವೈದ್ಯಪದ್ಧತಿಯ ಮೇಲಿನ ನಂಬಿಕೆ-ಶ್ರದ್ಧೆಗಳು ಎನಿತು ಕಡಿಮೆಯಾಗಿಲ್ಲ. ಯಾವುದೇ ಒಂದು ವೈದ್ಯಪದ್ಧತಿ ತನ್ನ ಮೇಲಿನ ವಿಶ್ವಾಸವನ್ನು ಅನವರತವೂ ವೃದ್ಧಿಸಿಕೊಳ್ಳುತ್ತಿದೆಯೆಂದರೆ ಅದು ತನ್ನಲ್ಲಡಗಿಸಿಕೊಂಡಿರುವ ವಿಶಿಷ್ಟ ಚಿಕಿತ್ಸಾಪದ್ಧತಿಯಿಂದ ಮಾತ್ರ ಸಾಧ್ಯ. ಯಾವುದೇ ಅಡ್ಡಪರಿಣಾಮಗಳಿಲ್ಲದ, ಅತ್ಯಂತ ನಿಸರ್ಗಸಹಜವಾದ, ಪ್ರಕೃತಿಗೆ ಪೂರಕವಾದ ಚಿಕಿತ್ಸಾ ಪದ್ಧತಿಗಳು ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಮಾತ್ರ ಲಭ್ಯವೆಂಬುದನ್ನು ಅಲ್ಲಗಳೆಯಲಾಗದು.
ಆಯುರ್ವೇದೋಕ್ತ ಚಿಕಿತ್ಸಾಪದ್ಧತಿಗಳು ಅನಂತಕಾಲವೂ ಅತ್ಯುಪಯುಕ್ತವಾಗಿವೆ. ಆಯುರ್ವೇದವನ್ನು ಸಂಶೋಧನೆ ಮಾಡುತ್ತೇವೆನ್ನುವುದು ಮೂರ್ಖತನದ ಮಾತಾಗುತ್ತದೆ. ಏಕೆಂದರೆ ಆರ್ಷೇಯಪ್ರಣೀತ ಈ ಸಿದ್ಧಾಂತಗಳು ಭೂಮಂಡಲದ ಭೂತ-ಭವಿಷ್ಯ-ವರ್ತಮಾನಗಳಲ್ಲಿ ಬದಲಾಗದಷ್ಟು, ಇನಿತು ಸ್ಥಿತ್ಯಂತರವಾಗದಷ್ಟು ಸಿದ್ಧಿ ಪಡೆದಿವೆ, ಸಾಧಿತವಾಗಿವೆ. ಅಂದಿನ ಕಾಲದಲ್ಲಿ ಯಾವುದೇ ಪರಿಕರ-ಪದಾರ್ಥಗಳ ನೆರವಿಲ್ಲದೆ ದೋಷ, ಧಾತು ಮತ್ತು ಮಲಸಿದ್ಧಾಂತಗಳ ಆಧಾರದಲ್ಲಿ ರೂಪುಗೊಂಡ ಆಯುರ್ವೇದ ವೈದ್ಯಪದ್ಧತಿ ಇಂದಿಗೂ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸುವಲ್ಲಿ ಸಂಶಯಾತೀತವಾಗಿ ಸಫಲವಾಗಿದೆ.
ಆದರೆ ಪರಕೀಯರ ದಾಳಿ, ಸ್ವಾರ್ಥ-ಸಂಕುಚಿತ ಮನೋಭಾವ, ನೈಸರ್ಗಿಕ ಶೀರ್ಣಗೊಳ್ಳುವಿಕೆ ಇತ್ಯಾದಿಗಳ ಕಾರಣದಿಂದಾಗಿ ಆಯುರ್ವೇದೋಕ್ತ ಹತ್ತು ಹಲವು ಸಾಹಿತ್ಯ-ಸಿದ್ಧಾಂತಗಳು ಆಸಕ್ತರಿಗೆ ಅಲಭ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯಪದ್ಧತಿಯ Research ನ್ನು ಮಾಡುವುದರ ಬದಲಾಗಿ Re-search ಮಾಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯದ ಅಗತ್ಯವಿದೆ. ಸರ್ಕಾರದಿಂದ ಸ್ಥಾಪಿತವಾದ ಇಂಥ ಒಂದೇ ಒಂದು ವಿಶ್ವವಿದ್ಯಾಲಯ ಇಡೀ ದಕ್ಷಿಣ ಭಾರತದಲ್ಲಿ ಇದುವರೆಗೂ ಕಾರ್ಯಾರಂಭ ಮಾಡಿಲ್ಲ.
ಆಗುಂಬೆ ಸನಿಹದ ಮಳೆಕಾಡುಗಳು, ಪಶ್ಚಿಮಘಟ್ಟಗಳ ಕಾನನದಲ್ಲಿ ಬೆಳೆಯುವ ವೈವಿಧ್ಯಮಯ ವನೌಷಧಿಗಳ ಕಾರಣವಾಗಿ ಮತ್ತು ಪ್ರಮುಖವಾಗಿ ಅನೂಚಾನವಾಗಿ ಬಳಕೆಯಲ್ಲಿರುವ – ಪರಂಪರಾಗತವಾಗಿ ಬಂದಿರುವ ಆಯುರ್ವೇದ ವೈದ್ಯ ವಿಜ್ಞಾನದ ಕುರಿತ ತಿಳಿವಳಿಕೆಗಳಿಗಾಗಿ ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರುವ ಶಿವಮೊಗ್ಗ ನಗರವು ಇಂಥ ಒಂದು ವಿಶಿಷ್ಟ-ವಿಭಿನ್ನ ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಶಸ್ತವಾಗಿದೆ.
ಕರ್ನಾಟಕದಲ್ಲಿ ಇದೀಗ ಶಿವಮೊಗ್ಗ ಜಿಲ್ಲೆಯವರೇ ಆದ ಸನ್ಮಾನ್ಯ ಶ್ರೀ ಬಿಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆಯನ್ನು ಒಂದು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕನಸು ಕಂಡವರು ಮಾನ್ಯ ಯಡಿಯೂರಪ್ಪನವರು. ಈಗಾಗಲೇ ಸೋಗಾನೆ ವಿಮಾನನಿಲ್ದಾಣದ ಸನಿಹ 100 ಎಕರೆ ಭೂಮಿಯನ್ನು ಆಯುಷ್ ಇಲಾಖೆಗೆ ಮಂಜೂರು ಮಾಡಿದ್ದು, ಅದಕ್ಕೆ ಲಗತ್ತಿವಾಗಿ ಇನ್ನೊಂದು 100 ಎಕರೆ ಭೂಮಿಯನ್ನು ಪಡೆದು, ಆ ಜಾಗದಲ್ಲಿ ದಕ್ಷಿಣ ಭಾರತದ ಪ್ರಪ್ರಥಮ, ಸರ್ಕಾರದಿಂದ ಸ್ಥಾಪಿತವಾದ ಒಂದು “ಆಯುರ್ವೇದ ವೈದ್ಯಪದ್ಧತಿಗಳ ವಿಶ್ವವಿದ್ಯಾಲಯ”ವನ್ನು ಕಾರ್ಯಾರಂಭಗೊಳಿಸಿದಲ್ಲಿ, ಅದರ ಪ್ರತೀತಿ ಮತ್ತು ಆಯುರ್ವೇದದ ಲಾಭ ಜಗತ್ತಿನೆಲ್ಲೆಡೆ ಪಸರಿಸಲು ಅನುವು ಮಾಡಿಕೊಟ್ಟ ಶ್ರೇಯ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಮುಂಬರುವ ದಿನಗಳಲ್ಲಿ ಈ ಆಲೋಚನೆ ಕಾರ್ಯರೂಪಕ್ಕೆ ಬರಬಹುದೆಂಬ ಆಶಯ ಮಲೆನಾಡಿನ ಜನರ ಮನದಲ್ಲಿ ಮನೆಮಾಡಿದೆ.
ಡಾ.ಸಿ.ಎ.ಹಿರೇಮಠ, ಶಿವಮೊಗ್ಗ
Discussion about this post