ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-13 |
ಈ ಪ್ರಪಂಚವೊಂದು ದೊಡ್ಡ ನಾಟಕರಂಗ. ಈ ರಂಗಮಂಟಪದಲ್ಲಿರುವ ಎಲ್ಲ ವ್ಯಕ್ತಿ, ವಸ್ತುಗಳ ನಿಜಸ್ವರೂಪ ಕಾಲ ಕಾಲಕ್ಕೆ ಅನಾವರಣಗೊಳ್ಳುತ್ತದೆ. ಇಲ್ಲಿ ಸ್ವಾರಸ್ಯವೇನೆಂದರೆ ವ್ಯಕ್ತಿಗಳಿಂದಾಗಿ ವಸ್ತುಗಳಿಗೆ ಬೆಲೆ ಅಥವಾ ಮಹತ್ವ ಬರುವುದು ಕಡಿಮೆ. ಆದರೆ, ಜಡವಾದ ವಸ್ತುಗಳ ಸಂಗದಿಂದಲೇ ವ್ಯಕ್ತಿಯು ತನ್ನನ್ನು ತಾನೆ ಮಹಾನ್ ಎ೦ದು ಭಾವಿಸುತ್ತಾನೆ. ದುಡ್ಡು ಅವುಗಳ ಮೆಲ್ಪಂಕ್ತಿಯನ್ನು ಆವರಿಸಿದೆ.
ಈ ದುಡ್ಡೆಂಬ ಜೇಡವು ತನ್ನ ಜಾಲದಲ್ಲಿ ಎಲ್ಲರನ್ನು ಸಿಲುಕಿಸಿ ಪೀಡಿಸುತ್ತದೆ. ಮನುಷ್ಯ ತನ್ನನ್ನು ತಾನು “ದುಡ್ಡಿಲ್ಲದ ಜೀವನವೇ !… ಛೇ.. ಅದು ತೃಣಕ್ಕೆ ಸಮಾನ” ಎ೦ದು ಹಳಿದುಕೊಳ್ಳುವನು.
ಅದೊಂದು ಕಾಲವಿತ್ತು! ಯಾವುದೇ ದುಡ್ಡಿನ ಹಂಗೆ ಇಲ್ಲದೆ ಮನುಷ್ಯನು ಆನಂದವಾಗಿ ತನ್ನ ಜೀವನವನ್ನು ಸಾಗಿಸುವವನಾಗಿದ್ದ. ಆಗಿನ ಕಾಲದ ಸಂಪತ್ತು ಕೇವಲ ಪೇಪರ್ ಆಗಿರಲಿಲ್ಲ. ಹೊರತು ಅವರವರ ಜೀವನದ ಅವಿಭಾಜ್ಯ ಸಾಮಗ್ರಿಗಳೇ ಆಗಿದ್ದವು. ಅಂದರೆ ಕೃಷಿಕನಿಗೆ ತನ್ನ ಹಸುಗಳು ಮತ್ತು ನೇಗಿಲು ಮುಂತಾದ ಸಂಪತ್ತು. ಮತ್ತು ವಿಪ್ರನಿಗೆ ತನ್ನ ಷಟ್ಕರ್ಮ ಸಂಪತ್ತಾದರೆ, ವೈದ್ಯನಿಗೆ ತನ್ನ ಔಷಧಗಳ ಬಗೆಗಿರುವ ಜ್ಞಾನ ಮತ್ತು ಔಷಧೀಯ ಸಸ್ಯಗಳೇ ಸಂಪತ್ತು. ಹೀಗೆಯೇ ಎಲ್ಲರ ಬಳಿಯೂ.
ಅಂದಿನ ಸಂಪತ್ತಾದರೋ ದುರ್ಬಳಕೆಗೆ ಕಾರಣವಾಗುತ್ತಿರಲಿಲ್ಲ. ಆದರೆ ಈ ದುಡ್ಡು ನಿಷ್ಪ್ರಯೋಜಕವೂ ದುರುಪಯುಕ್ತವೂ ಆಗುತ್ತಿದೆ. ಈ ದುಡ್ಡೆಂಬ ಮಾಯೆ ಜನರಿಗೆ ಅಹಂಕಾರ, ಸ್ವಾರ್ಥ, ಕೋಪ, ಆಸಹನೆ, ಮೋಸ, ವಂಚನೆ ಎಂಬ ಅನೇಕ ಮುಖಗಳ ಬಗ್ಗೆ ಪರಿಚಯ ಮಾಡಿಸಿ ಅದರಲ್ಲಿ ಅಭಿರುಚಿ ಹುಟ್ಟಿಸಿ ಅವರ ಜೀವನವನ್ನೇ ಹಾಳುಮಾಡುತ್ತಿದೆ ಎಂಬುದು ನನ್ನ ಅಭಿಮತ.
ಸದುಪಯೋಗಿಸುವವರ ಬಳಿಯೇ ಹೋದರೂ ಅವರನ್ನು, ಸತಾಯಿಸಿ, ಪೀಡಿಸಿ ಅವರನ್ನೂ ಅವನತಿಯ ದಾರಿಯಲ್ಲೇ ಕರೆದೊಯ್ಯುತ್ತದೆ. ದುಡ್ಡು ದುಡ್ಡು ದುಡ್ಡು ಎ೦ದು ಹಪಹಪಿಸುವಂತೆ ಮಾಡಿ ಜನರು ತಮ್ಮ ಜೀವನದ ಅತ್ಯಮೂಲ್ಯವಾದ ವ್ಯಕ್ತಿತ್ವಗಳಾದ ತಂದೆ-ತಾಯಿ, ಅಣ್ಣ-ತಮ್ಮ, ಹೆಂಡತಿ, ಮಕ್ಕಳೊಡಗಿನ ಬಾಂಧವ್ಯ, ಸುಖ ಸಂತೋಷಗಳ ಮೌಲ್ಯಗಳನ್ನು ಕಳೆಯುತ್ತಿದೆ. ಅಂತಹ ಆ ಮಾಯಾವಿಗೆ ಇಷ್ಟೆಲ್ಲಾ ಶಕ್ತಿ ಇದ್ದರೂ ಒಬ್ಬರನ್ನು ಮಾತ್ರ ತಾನು ಗೆಲ್ಲಲಾಗುತ್ತಿಲ್ಲ. ಅವರೇ “ಸಾಧು-ವಿರಾಗಿಗಳು”. ಇವರನ್ನು ನೋಡಿದರೆ ಆ ದುಡ್ಡಿಗೆ ಅತ್ಯಂತ ಕೋಪ. “ಛೇ ಎಷ್ಟು ಓಲೈಸಿದರೂ ನನ್ನ ಮಾಯಾಜಾಲಕ್ಕೆ ಸಿಲುಕುವುದೇ ಇಲ್ಲವಲ್ಲ” ಎಂಬ ಸಿಡುಕು ಅದಕ್ಕೆ.
ಒಟ್ಟಿನಲ್ಲಿ ಜನರ ಜೀವನ, ಸಮಾಜದ ಸ್ವಾಸ್ಥ್ಯ, ಆದರ್ಶ ಮೌಲ್ಯಗಳನ್ನು ಹಣ ಹಾಳು ಮಾಡುತ್ತಿದೆ. ತನ್ನನ್ನು ತಾನೇ ಬಿಸಿ ತುಪ್ಪವನ್ನಾಗಿ ಮಾಡಿಕೊಂಡು ಜನರ ಬಾಯಿಯನ್ನು ಸೇರುತ್ತದೆ. ಅದು ಜನರಿಗೆ ರುಚಿ ಹೆಚ್ಚಿದರೆ ತುಪ್ಪಕ್ಕಿಂತಲೂ ದಪ್ಪಟ್ಟು ಬಿಸಿಯಾಗಿ ಬುದ್ಧಿಯನ್ನು ಸುಡುವುದು. ಆಕಸ್ಮಾತ್ ಬಿಸಿಯೆಂದು ಉಗುಳಿದರೆ ಹೊಟ್ಟೆಗಿಲ್ಲದೆ ಬೀದಿಪಾಲಾಗುವ ಪರಿಸ್ಥಿತಿಯನ್ನುಂಟುಮಾಡುತ್ತದೆ.
ಇಷ್ಟೆಲ್ಲಾ ಅನರ್ಥವನ್ನುಂಟು ಮಾಡುವುದರ ಬಗೆಗೆ ತಿಳಿದೂ “ದುಡ್ಡು ದುಡ್ಡು “ಎಂಬ ದುರಾಸೆಯನ್ನು ಬಿಡದೆ ಮಾಂಸದಾಸೆಗೆ ಗಾಳಕ್ಕೆ ಸಿಲುಕಿದ ಮತ್ಸ್ಯದಂತೆ ನಮ್ಮನ್ನು ನಾವೇ ಸಿಕ್ಕಿಸಿಕೊಳ್ಳುತ್ತೇವೆ. ಅದನ್ನೇ ಶ್ರೀಕೃಷ್ಣಪರಮಾತ್ಮ ಗೀತೆಯಲ್ಲಿ ಹೇಳುತ್ತಾನೆ. ಯಾವುದು ತನ್ನ ಪರಿಚಯವನ್ನು ಹೊರಗಿನಿಂದಾಗಿ ಅಮೃತದಂತೆ ತೋರಿಕೊಳ್ಳುತ್ತದೋ ಅದು ಒಳಗಿನಿಂದಾಗಿ ವಿಷಪೂರಿತವಾಗಿದ್ದರೆ ಅದು ರಾಜಸ ಪದಾರ್ಥವೆಂದು. ದುಡ್ಡು ಆ ಸ್ಥಿತಿಯನ್ನೂ ಮೀರಿ ಒಳಗೂ ಹೊರಗೂ ಸುಖದ ಆಕರ್ಷಕವಾಗಿ ಮೋಹಿಸುವ ತಾಮಾಸ ಸುಖವಾಗಿ ಪರಿವರ್ತಿತವಾಗುತ್ತಿದೆ. ಆದ್ದರಿಂದ ವಸ್ತುಗಳ ಆಯ್ಕೆಯಲ್ಲಿ ನಮ್ಮ ಎಚ್ಚರ ಸದಾ ಇರಬೇಕು. ಅದರಲ್ಲೂ ಈ ದುಡ್ಡಿನಂತಹ ವಸ್ತುಗಳನ್ನಂತು ಅತಿ ಸೂಕ್ಷ್ಮವಾದ ನೀರಿನ ಗುಳ್ಳೆಯಂತೆ ಕಾಣಬೇಕು. ಜೋರಾಗಿ ಒತ್ತಿದರೂ,ಬೇಡವೆಂದು ನೂಕಿದರೂ ಒಡೆದು ಹೋಗುತ್ತದೆ.
ಅಕಸ್ಮಾತ್ ದುಡ್ಡೇ ದೊಡ್ಡಪ್ಪ ಎಂದು “ಬೀಗಿ“ದರೆ ನಮ್ಮನ್ನು ಯಾರಿಗೂ ಬೇಡವಾದ ಲೋಕಕ್ಕೆ ತಳ್ಳಿ “ಬೀಗ“ ಹಾಕುತ್ತದೆ.
ಆದ್ದರಿಂದ ನಾವೆಲ್ಲರೂ ದುಡ್ಡಿನ ದಾಸರಾಗದೇ ಸಾಧನೆಯ ಅರಸರಾಗೋಣ. ಜೀವನ ನಿರ್ವಹಣೆಗಾಗಿ ಹಣವೇ ಹೊರತು ಹಣವೇ ಜೀವನವಲ್ಲ. ಜಡಧನವನ್ನು ಬಿಟ್ಟು ಸಾತ್ವಿಕವಾದ ಜೈವಿಕ ಧನ [ಜ್ಞಾನ, ಧಾನ್ಯ, ಅಭಯ, ಸಹಾಯ, ಕರುಣೆ….. ]ವನ್ನು ಸಮಾಜದಲ್ಲಿ ಹಂಚೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post