ಕಲ್ಪ ಮೀಡಿಯಾ ಹೌಸ್ | ಭದ್ರಾವತಿ | ವಿಶೇಷ ವರದಿ: ಶಿವಮೊಗ್ಗ ರಾಮ |
ನಗರದ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅತಿಥಿ ಗೃಹದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ತಾಲೂಕಿನ 35 ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಸಮಗ್ರ ವಿಕಸನಕ್ಕೆ ಸಂಕಲ್ಪ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ತಾಲೂಕಿನ 35 ಶಾಲೆಗಳ 9ನೇ ತರಗತಿಯ ಮಕ್ಕಳನ್ನು ದತ್ತು ಪಡೆದು, ಅವರ ಸಾಮಾಜಿಕ ಶೈಕ್ಷಣಿಕ ಬೌದ್ಧಿಕ, ಮಾನಸಿಕ ವಿಕಾಸಕ್ಕೆ ಪೂರಕವಾಗುವ ಎಲ್ಲಾ ಅಂಶಗಳನ್ನು ಉಚಿತವಾಗಿ ಒದಗಿಸುವ, ಅವರು ಉದ್ಯೋಗ ಪಡೆದುಕೊಳ್ಳುವ ತನಕವೂ ಬೆಂಬಲಿಸುವುದು ಯೋಜನೆಯ ಪ್ರಮುಖ ಉದ್ದೇಶ.
ಭದ್ರಾವತಿ ಮೂಲದ, ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿ ಉನ್ನತ ಹುದ್ದೆ, ಗೌರವ, ಸ್ಥಾನ ಗಳಿಸಿರುವ ವೈದ್ಯರು ಇಂಜಿನಿಯರ್‌ಗಳು, ಶಿಕ್ಷಣ ತಜ್ಞರು, ಮಾನಸಿಕ ತಜ್ಞರು, ಮಾಧ್ಯಮ ರಂಗದ ಗಣ್ಯರು, ಉದ್ಯಮಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಹೊಂದಿರುವ ಟ್ರಸ್ಟಿನಲ್ಲಿ ಶೈಕ್ಷಣಿಕ ಪ್ರಗತಿಗೆ ಬೇಕಾದಂತಹ ಎಲ್ಲ ಸಂಗತಿಗಳು ಲಭ್ಯವಿದ್ದು, ಅದನ್ನು ಸರ್ಕಾರಿ ಶಾಲೆಗಳಿಗೆ ಧಾರೆಯೆರೆಯುವ ಮಂಗಳಕರ ಸಂದರ್ಭ ಇದಾಗಿತ್ತು.
ಗುರು ಹಿರಿಯರ ಬಗ್ಗೆ ಗೌರವ ಇರಲಿ
ಸಮಾರಂಭ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯ ಬಿ.ಕೆ. ಮೋಹನ್ ಅವರು, ಗುರು ಹಿರಿಯರ ಬಗ್ಗೆ ವೃದ್ಧರ ಬಗ್ಗೆ ಗೌರವ ಪ್ರೀತಿ ಅಭಿಮಾನ ವೃದ್ಧಿಸಿಕೊಂಡವರು ಮಾತ್ರ ಜೀವನದಲ್ಲಿ ವಿಶೇಷವಾದದ್ದನ್ನು ಸಾಧಿಸಬಲ್ಲರು ಎಂದರು.
ವಿದ್ಯಾರ್ಥಿ ದಿಸೆಯಲ್ಲಿ ಒಳ್ಳೆಯತನ ರೂಢಿಸಿಕೊಂಡವರಿಗೆ ಉತ್ತಮ ಸಂಸ್ಕಾರ, ಜ್ಞಾನ, ವ್ಯಕ್ತಿತ್ವ ವಿಕಸನವಾಗಲಿದೆ. ಈ ನಿಟ್ಟಿನಲ್ಲಿ ಪ್ರೌಢ ಹಂತದ ಶಿಕ್ಷಣ ಬಹಳ ಮಹತ್ವದ್ದು ಎಂದರು.ಕಾರುಣ್ಯ ಟ್ರಸ್ಟ್ ಪ್ರೌಢಶಾಲಾ ವಿದ್ಯಾರ್ಥಿಗಳ ಸಮಗ್ರ ಅಭ್ಯುದಯಕ್ಕೆ ಸಂಕಲ್ಪ ಮಾಡಿರುವುದು ಶ್ಲಾಘನೀಯ. ಈ ಸೇವೆಗಾಗಿ ಶಾಸಕ ಸಂಗಮೇಶ್ವರ್ ಪರವಾಗಿ 5 ಲಕ್ಷ ರೂ ದೇಣಿಗೆ ವಿತರಿಸುತ್ತಿರುವೆ ಎಂದರು.
ಟ್ರಸ್ಟಿನ ಪ್ರತಿಯೊಂದು ಚಟುವಟಿಕೆಯಲ್ಲೂ ತಾವು ಸಕ್ರಿಯವಾಗಿ ಪಾಲ್ಗೊಳ್ಳುವ ಭರವಸೆ ನೀಡಿದರು. ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿಗದಿತ ಸ್ಥಳದಲ್ಲಿ ನಿವೇಶನವನ್ನೂ ಕೊಡಿಸಲು ಯತ್ನಿಸುವುದಾಗಿ ಅವರು ಭರವಸೆ ನೀಡಿದರು.ಜತೆಗೆ ಇರುವೆ
ಭದ್ರಾವತಿ ನಗರಸಭೆ ಅಧ್ಯಕ್ಷ ಈ ಎಸ್.ಎಸ್. ಮಣಿ ಮಾತನಾಡಿ, ಸದಾ ಕಾಲವು ಪ್ರಶ್ನೆ ಮಾಡುವ ಜೊತೆಯಲ್ಲಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಜೊತೆಗೆ ಇರುವುದಾಗಿ ಘೋಷಣೆ ಮಾಡಿದರು.
ಟ್ರಸ್ಟ್ ಅಧ್ಯಕ್ಷ ರಾಜು ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯ ಮಣಿ ಶೇಖರ, ವಕೀಲರ ತಾಲೂಕು ಸಂಘದ ಅಧ್ಯಕ್ಷ ಶ್ರೀ ಹರ್ಷ, ಯುವ ಮುಖಂಡ ಅಶೋಕ್, ಟ್ರಸ್ಟಿಗಳಾದ ದುಬೈ ವಿಜಯ್ ಗುಜ್ಜರ್, ಟ್ರಸ್ಟ್ ಪದಾಧಿಕಾರಿಗಳಾದ ಅನ್ನಪೂರ್ಣ, ನಾಗವೇಣಿ, ಪರಮೇಶ್ ಇತರರು ಇದ್ದರು. ಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು.
ಸಂವಾದ, ಚರ್ಚೆ
ಮಧ್ಯಾಹ್ನದ ಅವಧಿಯಲ್ಲಿ ನಡೆದ ಚರ್ಚೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎ.ಆರ್. ರಘುರಾಮ, ಖ್ಯಾತ ಹಾಸ್ಯ ಕಲಾವಿದ, ಸಮಾಜ ಸೇವಕ ರವಿ ಸಂತು, ದುಬೈನ ಮಾರಿಸ್ ಲೈನ್ಸ್ ಕಂಪನಿಯ ಹಿರಿಯ ತಂತ್ರಜ್ಞ, ವ್ಯವಸ್ಥಾಪಕ ನಿರ್ದೇಶಕ ಮತ್ತು ದಾನಿ ಭದ್ರಾವತಿ ವಿಜಯ್ ಗುಜ್ಜರ್
ಭಾಗವಹಿಸಿ ವಿಚಾರ ಮಂಡಿಸಿದರು.
ಮುಂಬರುವ ದಿನಗಳಲ್ಲಿ ಭದ್ರಾವತಿ ತಾಲೂಕಿನ 35 ಪ್ರೌಢಶಾಲಾ ವ್ಯಾಪ್ತಿಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಕಾರ್ಯಗಾರ, ಕ್ರಿಯಾಶೀಲ ಬರವಣಿಗೆ ಕುರಿತ ಶಿಬಿರಗಳು, ವ್ಯಕ್ತಿತ್ವ ವಿಕಸನ ಕಮ್ಮಟ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳುತ್ತೇವೆ. ಎಲ್ಲವೂ ಶಿಕ್ಷಕರ ಸಲಹೆ, ಸೂಚನೆ, ಸಹಕಾರದಿಂದ ನೆರವೇರಲಿದೆ.
-ವಿಜಯ್ ಗುಜ್ಜರ್, ದಾನಿ ಮತ್ತು ವ್ಯವಸ್ಥಾ ಪಕ ನಿರ್ದೇಶಕ, ಮಾರಿಸ್ ಲೈನ್ ಕಂಪನಿ, ದುಬೈ
ವಿವಿಧ ಸ್ಪರ್ಧೆ
ಕಾರ್ಯಕ್ರಮದ ನಡುವೆ ಮಕ್ಕಳಿಗೆ ವಿವಿಧ ಸ್ಪರ್ಧೆ ರಸಪ್ರಶ್ನೆ ಮತ್ತು ಬಹುಮಾನ ವಿತರಣೆ ನೆರವೇರಿದ್ದು ವಿಶೇಷವಾಗಿ ಗಮನ ಸೆಳೆಯಿತು. ಪ್ರೌಢಶಾಲಾ ಶಿಕ್ಷಕ ಶಿಕ್ಷಕಿಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post