ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
“ಮಕ್ಕಳು ಕನಸನ್ನು ಕಾಣಬೇಕು. ಆ ಕನಸನ್ನು ಸಾಕಾರಗೊಳಿಸಲು ಶ್ರಮ ಪಡಬೇಕು, ಜೀವನದಲ್ಲಿ ತ್ಯಾಗ ಹಾಗೂ ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕುಳಿತಲ್ಲಿಯೇ ಕುಳಿತು ಕನಸು ಕಂಡರೆ ಪ್ರಯೋಜನವಿಲ್ಲ, ಅದಕ್ಕೆ ಪ್ರಯತ್ನ ಪಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ #D K Shivakumar ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು #Jawaharlal Nehru ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ #Childrens Day ಅಂಗವಾಗಿ ವಿಧಾನಸೌಧದಲ್ಲಿ ನಡೆದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡಿದರು.
“ನೀವು ಸಾಗಿದ ಹಾದಿಯನ್ನು ಮರೆತರೆ ಫಲ ದೊರೆಯುವುದಿಲ್ಲ. ನಿಮ್ಮನ್ನು ಸಾಕಿದ ಪೋಷಕರು, ವ್ಯಕ್ತಿತ್ವ ಬೆಳೆಸಿದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಯಾವುದನ್ನು ಬೇಕಾದರೂ ಬದಲಿಯಾಗಿ ಪಡೆಯಬಹುದು. ಪೋಷಕರು ಮತ್ತು ಶಿಕ್ಷಕರನ್ನು ಬದಲಿಯಾಗಿ ಪಡೆಯಲು ಸಾಧ್ಯವಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದರೂ ನೀವು ಈ ಪ್ರಾಥಮಿಕ ವಿಚಾರಗಳನ್ನು ಮರೆಯಬಾರದು” ಎಂದು ಹೇಳಿದರು.
“ಮಕ್ಕಳೇ ಈ ದೇಶದ ಆಸ್ತಿ. ನೀವು ಸಹ ಮುಂದಿನ ದಿನಗಳಲ್ಲಿ ವಿಧಾನಸೌಧದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುವ, ಅತ್ಯುನ್ನತ ಅಧಿಕಾರಿಗಳಾಗಿ, ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರೀತಿ ಬೆಳೆಯಬೇಕು ಎಂಬುದು ನಮ್ಮ ಆಶಯ” ಎಂದರು.
Also read: 50 ಜನ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್
ಸಾಧನೆಗೆ, ಆಕಾಶಕ್ಕೆ ಮಿತಿಯಿಲ್ಲ
“ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಯಾರು ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು. ಸಾಧನೆಗೆ ಹಾಗೂ ಆಕಾಶಕ್ಕೆ ಮಿತಿ ಇಲ್ಲ. ಜಾಗತಿಕವಾದ ಸ್ಪರ್ಧಾತ್ಮಕ ಯುಗದಲ್ಲಿ ನೀವಿದ್ದೀರಿ. ಅಧ್ಯಾಪಕರು ಯಾವುದಾದರು ಹೊಸ ಮಾಹಿತಿ ಕೊಡುವುದನ್ನು ಮರೆಯಬಹುದು. ಆದರೆ, ನಿಮ್ಮ ಬಳಿ ಇರುವ ಪುಟ್ಟ ಮೊಬೈಲ್ ನಿಂದಲೇ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು ಮತ್ತು ತಿಳಿದುಕೊಂಡಿರುತ್ತೀರಿ. ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ” ಎಂದು ಕಿವಿಮಾತು ಹೇಳಿದರು.
“ಎಲ್ಲಾ ಮಕ್ಕಳ ತಂದೆ- ತಾಯಂದಿರಿಗೆ, ನಮ್ಮ ಮಕ್ಕಳು ನಮಗಿಂತ ಉತ್ತಮ ಜೀವನ ನಡೆಸಬೇಕು. ನಾವು ಪಟ್ಟಂತ ಕಷ್ಟ ಅವರು ಪಡಬಾರದು ಎನ್ನುವ ಆಸೆ, ಕನಸು ಹೊಂದಿರುತ್ತಾರೆ. ನೀವು ಪ್ರಭುದ್ಧವಾಗಿ ಬೆಳೆದಷ್ಟು ಶಿಕ್ಷಕರು ಅತ್ಯಂತ ಹೆಚ್ಚು ಹೆಮ್ಮೆ ಪಡುತ್ತಾರೆ. ನೀವು ನಾಯಕರಾಗಿ ಹೊರಹೊಮ್ಮಬೇಕು.” ಎಂದು ಹೇಳಿದರು.
ಹೊಸ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ನೆಹರು
“ಈ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಅವರು ಈ ದೇಶಕ್ಕೆ ಅಡಿಪಾಯವನ್ನು ಕಟ್ಟಿದವರು. ಸ್ವಾತಂತ್ರ ಬಂದ ನಂತರ ಹೊಸ ಭಾರತವನ್ನು ನಿರ್ಮಾಣ ಮಾಡಲು ಶ್ರಮಪಟ್ಟವರು. ನಮ್ಮ ರಾಜ್ಯ ಹಾಗೂ ದೇಶದಲ್ಲಿ ಅನೇಕ ಸಾಕ್ಷಿ ಗುಡ್ಡಗಳನ್ನು ನಿರ್ಮಾಣ ಮಾಡಿ ಹೋಗಿದ್ದಾರೆ. ಹಲವಾರು ಸಾರ್ವಜನಿಕ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ಹೆಚ್ ಎಮ್ ಟಿ, ಬಿಇ ಎಲ್, ಬಿಇಎಂ ಎಲ್ ಕಾರ್ಖಾನೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು” ಎಂದರು.
“ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಅನೇಕ ವಿಚಾರಗಳಲ್ಲಿ ಸಾಕಷ್ಟು ಮಂದಿದ್ದೇವೆ. ಶಿಕ್ಷಣ, ಆರೋಗ್ಯ, ಆಡಳಿತದಲ್ಲಿ ಸಾಕಷ್ಟು ಪ್ರಗತಿ ಸಾದಿಸಿದ್ದೇವೆ. ಮಂಗಳಯಾನ ಚಂದ್ರಯಾನಕ್ಕೆ ಇಸ್ರೋ ಸಂಸ್ಥೆಯವರು ಬೆಂಗಳೂರಲ್ಲಿ ಉಪಗ್ರಹಗಳನ್ನು ತಯಾರು ಮಾಡುತ್ತಾರೆ. ದೇಶದಲ್ಲಿ ಅತ್ಯಂತ ಹೆಚ್ಚು ವೈದ್ಯರು, ಶುಶ್ರೂಷಕಿಯರು, ಇಂಜಿನಿಯರ್ ಗಳು, ವಿಜ್ಞಾನಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಇದು ನಿಮ್ಮ ಸಾಧನೆಗಳಿಗೆ ಸ್ಪೂರ್ತಿ ಆಗಬೇಕು” ಎಂದು ಹುರಿದುಂಬಿಸಿದರು.
“ಒಂದು ಶಾಲಾ ಆವರಣದಲ್ಲಿಯೇ ಮಕ್ಕಳ ದಿನಾಚರಣೆಯನ್ನು ಮಾಡಿ ಮುಗಿಸಬಹುದಿತ್ತು. ಮುಂದಿನ ಭವಿಷ್ಯಗಳಾದ ನಿಮಗೆ, ಈ ಆಡಳಿತ ಕೇಂದ್ರದಿಂದ ಸ್ಪೂರ್ತಿ ದೊರೆಯಲಿ ಎಂದು ವಿಧಾನಸೌಧಕ್ಕೆ ನಿಮ್ಮನ್ನು ಆಹ್ವಾನಿಸಿ ಆಚರಣೆ ಮಾಡುತ್ತಿದ್ದೇವೆ” ಎಂದರು.
ಶಕ್ತಿ ಸ್ಥಳ ನಿಮಗೆ ಸ್ಫೂರ್ತಿಯಾಗಬೇಕು
“ನೀವು ವಿಶೇಷವಾದ ಶಕ್ತಿ ಸ್ಥಳದಲ್ಲಿ ಕುಳಿತಿದ್ದೀರಿ. ಇಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗ ಮುಖಾಮುಖಿಯಾಗಿವೆ. ಹೈಕೋರ್ಟಿನ ಮುಂಭಾಗ ವಿಧಾನಸೌಧವಿದೆ. ಇಡೀ ಜಗತ್ತಿನಲ್ಲಿಯೇ ಈ ರೀತಿಯ ಸಂಗತಿ ಎಲ್ಲೂ ಕಾಣಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ. ಈ ಸ್ಥಳ ನಿಮಗೆ ಸ್ಪೂರ್ತಿಯಾಗಬೇಕು.” ಎಂದರು.
“ಈ ಮೊದಲು ಹೈಕೋರ್ಟನ್ನು ಅಠಾರ ಕಚೇರಿ ಎಂದು ಕರೆಯಲಾಗುತ್ತಿತ್ತು. ಈ ಮೊದಲು ಜನಪ್ರತಿನಿಧಿಗಳ ಸಭೆ ಅಲ್ಲಿ ಚಿಕ್ಕದಾಗಿ ನಡೆಯುತ್ತಿತ್ತು. ಕೆಂಗಲ್ ಹನುಮಂತಯ್ಯ ನವರು ವಿಧಾನಸೌಧ ಕಟ್ಟಿದ ಮೇಲೆ ಇಲ್ಲಿ ನಡೆಯಲು ಪ್ರಾರಂಭವಾಯಿತು. ವಿಧಾನಸೌಧದ ಬಲಭಾಗದಲ್ಲಿ ವಿಕಾಸ ಸೌಧವನ್ನು ಕಟ್ಟಲಾಗಿದೆ. ಅಲ್ಲಿಂದಲೂ ಸಹ ಮಂತ್ರಿಗಳು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಎಡಭಾಗಕ್ಕೆ ರಾಜಭವನವಿದೆ. ಅಲ್ಲಿ ರಾಜ್ಯಪಾಲರ ಮನೆ ಹಾಗೂ ಕಚೇರಿಯಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ಮಧ್ಯೆ ನೀವು ಈ ಬಾರಿಯ ಮಕ್ಕಳ ದಿನವನ್ನು ಆಚರಿಸುತ್ತಾ ಇರುವಿರಿ. ನಿಮ್ಮ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ.” ಎಂದು ಹೇಳಿದರು.
“ವರ್ಷದಲ್ಲಿ 50 ರಿಂದ 60 ದಿನ ಕುಳಿತು ನಾವುಗಳು ಚರ್ಚೆ ಮಾಡುವಂತಹ ವಿಧಾನ ಮಂಡಲವನ್ನು ನೀವು ವೀಕ್ಷಣೆ ಮಾಡಬಹುದು. ಅಲ್ಲಿ ನಾವು ಈ ರಾಜ್ಯದ ಹಾಗೂ ಹೋಗುಗಳ ಬಗ್ಗೆ ಚರ್ಚೆ ಮಾಡುತ್ತೇವೆ ಮತ್ತು ಶಾಸನಗಳನ್ನು ರಚಿಸಿ ಜಾರಿಗೆ ತರುತ್ತೇವೆ” ಎಂದರು.
ಮಾಧ್ಯಮ ಪ್ರತಿಕ್ರಿಯೆ
ಮಕ್ಕಳ ದಿನಾಚರಣೆಯ ನಂತರ ವಿಧಾನಸೌಧ ಆವರಣದಲ್ಲಿ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು “ಬಿಬಿಎಂಪಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೊಟ್ಟಿಗೆ ಮಕ್ಕಳ ದಿನವನ್ನು ಆಚರಿಸಲಾಯಿತು. ಇದೇ ವೇಳೆ ಅವರ ಸಮಸ್ಯೆಗಳನ್ನು ಆಲಿಸಲಾಯಿತು. ಇದೊಂದು ವಿಭಿನ್ನವಾದ ಕಾರ್ಯಕ್ರಮ. ಮುಂದಿನ ವರ್ಷದಿಂದ ಇನ್ನು ವಿಶೇಷವಾಗಿ ಆಚರಿಸಲಾಗುವುದು” ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post