ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸನಾತನ ಭಾರತೀಯ ವೇದಾಂತ, ಶಾಸ್ತ್ರ ಮತ್ತು ಮಧ್ವ ಸಿದ್ಧಾಂತದ ಸಮಗ್ರ ಅಧ್ಯಯನದಿಂದ ಜೀವನ ಸಾರ್ಥಕವಾಗಲಿದೆ ಎಂದು ಸೋಸಲೆ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸತೀರ್ಥವಿದ್ಯಾಪೀಠದ 8ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಾಲ್ಕು ವಿದ್ಯಾರ್ಥಿಗಳು ಮತ್ತು ಒಬ್ಬ ಅಧ್ಯಾಪಕರಿಂದ ಪ್ರಾರಂಭವಾದ ಗುರುಕುಲ ಮಾದರಿ ಶಿಕ್ಷಣದ ವಿದ್ಯಾಪೀಠ ಇಂದು 8 ಪೂರ್ಣಕಾಲಿಕ ಅಧ್ಯಾಪಕರು ಮತ್ತು 50 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ. ರಾಮಾಯಣ- ಮಹಾಭಾರತ, ಭಾಗವತ ಮತ್ತು ಶ್ರೀ ವ್ಯಾಸರಾಜರ ಮಹೋನ್ನತ ಗ್ರಂಥಗಳ ಕುರಿತಾದ ಅನೇಕ ಉಪನ್ಯಾಸ, ಪ್ರವಚನ, ವಿಚಾರಸಂಕಿರಣ, ಮಧ್ವ ಸಿದ್ಧಾಂತ ಪ್ರತಿಪಾದನೆ ಮಹತ್ವ ನೀಡಿದೆ. ನೂರಾರು ಪಂಡಿತರಿಗೆ ವೇದಿಕೆ ಕಲ್ಪಿಸಿಕೊಡುವುದರೊಂದಿಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪ್ರೋತ್ಸಾಹ ನೀಡಿ 8 ವರ್ಷದ ಮೈಲಿಗಲ್ಲನ್ನು ಸಮರ್ಥವಾಗಿ ಕ್ರಮಿಸಿದೆ ಎಂದರು.

Also read: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಯೊಂದಿಗೆ ಎಸ್‌ಪಿ ಮಿಥುನ್ ಕುಮಾರ್ ಹೊಸ ವರ್ಷಾಚರಣೆ
ಗುರುಕುಲ ಪದ್ಧತಿ ಶಿಕ್ಷಣ ಉಳಿಸಿ:
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಗುರುಕುಲ ಪದ್ಧತಿ ಶಿಕ್ಷಣದಿಂದ ಮಾತ್ರ ನಮ್ಮ ದೇಶದ ಸಂಸ್ಕೃತ -ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಭಾರತೀಯ ಸಂಸ್ಕೃತಿಗೆ ಮಾರಕವಾಗುವ ಅನೇಕ ಘಟನೆಗಳು ಇಂದು ನಮ್ಮ ಸುತ್ತಮುತ್ತಲು ನಡೆಯುತ್ತಿವೆ. ಈ ಬಗ್ಗೆ ನಾವು ಜಾಗೃತರಾಗಿರಬೇಕು. ನಮ್ಮತನ, ನಮ್ಮ ನೆಲದ ಅಧ್ಯಾತ್ಮಿಕ ಮಹತ್ವ ಉಳಿಯಬೇಕು ಎಂದರೆ ಅದು ಇಂಥ ವಿದ್ಯಾಪೀಠಗಳಿಂದ ಮಾತ್ರ ಸಾಧ್ಯ ಎಂದರು. ದೇಶದ ಅಗ್ರಪಂಕ್ತಿಯ ತರ್ಕ ಮತ್ತು ನ್ಯಾಯಶಾಸ್ತ್ರ ಜ್ಞಾನಿಗಳಾದ ಶ್ರೀವಿದ್ಯಾಶ್ರೀಶ ತೀರ್ಥರೇ ವಿದ್ಯಾಪೀಠದ ಸಾರಥ್ಯ ವಹಿಸಿರುವ ಕಾರಣ 8 ವರ್ಷದ ಸಂಸ್ಥೆ 80 ವರ್ಷ ಮಾಡಬಹುದಾದ ಸಾಧನೆಗಳನ್ನು ಮಾಡಿದೆ.ಈ ವಿದ್ಯಾಪೀಠಕ್ಕೆ ಉಜ್ವಲ ಭವಿಷ್ಯವಿದೆ ಎಂದು ಪ್ರಶಂಸಿಸಿದರು.

ಗಮನ ಸೆಳೆದ ಪ್ರದರ್ಶಿನಿ:
ವಾರ್ಷಿಕೋತ್ಸವ ಸಂದರ್ಭ ವಿದ್ಯಾಪೀಠದ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿಯಾದ ‘ಪ್ರದರ್ಶಿನಿ’ ಅತಿಥಿ- ಗಣ್ಯರ ಗಮನ ಸೆಳೆಯಿತು. ಶಾಸಕ ಶ್ರೀವತ್ಸ ಪ್ರದರ್ಶಿನಿ ಉದ್ಘಾಟಿಸಿದರು. ತೀರ್ಥಪ್ರಬಂಧ ಚಿತ್ರ ಪ್ರದರ್ಶಿನಿ, ಸಂಸ್ಕೃತ ಮಾರುಕಟ್ಟೆ ಮಳಿಗೆಗೆ ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಪ್ರದರ್ಶಿನಿಯಲ್ಲಿ ಚಂದ್ರಯಾನ ಸಾಧನೆ, ಸೋಲಾರ್ ಎನರ್ಜಿ ಬಳಕೆ, ಸ್ವಚ್ಛ ಭಾರತ್ ಅಭಿಯಾನ, ಡಿಜಿಟಲ್ ಭಾರತ, ಕುರಿತಾದ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿ ಪ್ರತಿಭೆ ಪ್ರದರ್ಶಿಸಿದರು.










Discussion about this post