ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮುಡಾ ಅಕ್ರಮ ಹಗರಣ #MUDA Scam ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿ ಮೇಲೆ ಇಡಿ #ED ಅಧಿಕಾರಿಗಳು 2ನೇ ದಿನವಾದ ಶನಿವಾರವೂ ದಾಳಿ ಮುಂದುವರೆಸಿದ್ದು, ಅಗತ್ಯ ಮಾಹಿತಿಗಳಿಗಾಗಿ ಪರಿಶೀಲನೆ ಚುರುಕುಗೊಳಿಸಿದ್ದಾರೆ.
ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ 10:50ರ ಸುಮಾರಿಗೆ ಮೈಸೂಲಿನ ಜೆಎಲ್’ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಭೇಟಿ ನೀಡಿದ್ದು, ಪಾರ್ವತಿ ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಮೂಲ ದಾಖಲಾತಿ ಕೊಡಿ ಎಂದು ಇಡಿ ಅಧಿಕಾರಿಗಳು ಮುಡಾ ಆಯುಕ್ತರ ಬಳಿ ಕೇಳಿದ್ದಾರೆ. ಅಲ್ಲದೆ, ಪಾರ್ವತಿ ಸಿದ್ದರಾಮಯ್ಯ ಅವರು ಬದಲಿ ನಿವೇಶನ ಕೋರಿ ಬರೆದ ಪತ್ರದಲ್ಲಿ ಕೆಲ ಪದಗಳನ್ನು ವೈಟ್ನರ್ ಹಾಕಿ ಅಳಿಸಿದ್ದು ಯಾರು? ಯಾವ ಪದಗಳನ್ನು ಅಳಿಸಲಾಗಿದೆ ಎಂದೂ ಇಡಿ ಅಧಿಕಾರಿಗಳು ಮಾಹಿತಿ ಕೋರಿದ್ದಾರೆ ಈ ಬಗ್ಗೆ ಅಧಿಕಾರಿಗಳು ದಾಖಲೆಗಳ ಹುಡುಕಾಟ ಆರಂಭಿಸಿದ್ದಾರೆಂದು ತಿಳಿದುಬಂದಿದೆ.
Also read: ದುಶ್ಚಟಗಳಿಂದ ದೂರವಾಗಬೇಕೆಂಬ ಕಲ್ಪನೆ ನಮ್ಮಲ್ಲಿಯೇ ಮೂಡಬೇಕು: ಡಾ.ಪಿ.ವಿ. ಭಂಡಾರಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50:50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಯ್ಯನವರ ಪತ್ನಿ ಪಾರ್ವತಿ ಹೆಸರಿಗೂ ನಿವೇಶನ ಮಂಜೂರಾಗಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಇಡಿ ಅಧಿಕಾರಿಗಳು ನಡೆಸಿದ್ದು, ಇಂದೂ ಕೂಡ ಪರಿಶೀಲನೆ ಮುಂದುವರೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post