ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ಪೊಲೀಸರು ನಂಬರ್ 1 ಆಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಆರೋಪಿಗಳನ್ನು ಬಂಧಿಸಿದ್ದೇ ಕರ್ನಾಟಕ ಪೊಲೀಸರು. ನಮ್ಮ ಪೊಲೀಸ್ ಇಲಾಖೆ ದೇಶದಲ್ಲಿಯೇ ಮಾದರಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಇಲ್ಲಿನ ಪೋಲಿಸ್ ಅಕಾಡೆಮಿಯಲ್ಲಿ ಡಿವೈಎಸ್ಪಿ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬ್ಯಾಚ್‌ನ ಪ್ರಶಿಕ್ಷಣಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಕರ್ನಾಟಕ ಪೊಲೀಸ್ ಬಗ್ಗೆ ಅಭಿಮಾನ ಹಾಗೂ ಮಾದರಿಯಾಗಿ ಹೇಳಲಾಗುತ್ತದೆ ಎಂದು ಅಭಿಮಾನವನ್ನು ವ್ಯಕ್ತಪಡಿಸಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್ ಅವರು ಸಮರ್ಥ ಹಾಗೂ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಅಕಾಡೆಮಿಯನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಆಸ್ಪತ್ರೆ, ಜಿಮ್, ಮೈದಾನ ಸೇರಿದಂತೆ ಇನ್ನಿತರ ವಿಭಾಗಗಳನ್ನು ಗಮನಿಸಿದ್ದು, ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ನಾನು ಕಳೆದ ಒಂದು ವರ್ಷದಿಂದ ಸಂಚರಿಸುತ್ತಿದ್ದೇನೆ. ಇದುವರೆಗೆ ಒಂದು ಸಣ್ಣ ಗಲಾಟೆ ಸಹ ಆಗಿಲ್ಲ. ಕೋವಿಡ್ ಸಂದರ್ಭದಲ್ಲಿಯೂ ಸಹ ಉತ್ತಮವಾಗಿ ಪೋಲಿಸರು ಕಾರ್ಯನಿರ್ವಹಣೆ ಮಾಡಿದ್ದಾರೆ. ಇಂದು ರಾಜ್ಯದ ಜನ ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಿದ್ದಾರೆ ಎಂದರೆ, ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ನೂತನ ಪೊಲೀಸರ ಜವಾಬ್ದಾರಿ ಹೆಚ್ಚಿದೆ ಎಂದು ಕೇಂದ್ರ ಸಚಿವ ಸೋಮಶೇಖರ್ ಕಿವಿಮಾತು ಹೇಳಿದರು.
ದಕ್ಷ ಪ್ರಾಮಾಣಿಕ ಅಧಿಕಾರಿಗಳಾಗಿ
ಪೊಲೀಸರು ಉತ್ತಮ ತರಬೇತಿ ಪಡೆಯಬೇಕು. ಜೊತೆಗೆ ಮೈಸೂರಿನಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ಕೆಲವೊಂದು ಮಹತ್ವದ ತೀರ್ಪುಗಳ ಪ್ರತಿಗಳು ಸಿಗಲಿವೆ. ಇಂಥವುಗಳನ್ನು ಅಭ್ಯಾಸ ಮಾಡಬೇಕು. ಯಾವುದೇ ಒಂದು ಪ್ರಕರಣ ಇರಲಿ, ಅದರ ಸಂಪೂರ್ಣ ಆಯಾಮದಲ್ಲಿ ತನಿಖೆ ನಡೆಸಬೇಕಿದೆ. ನೀವು ದಕ್ಷ, ಪ್ರಾಮಾಣಿಕ ಅಧಿಕಾರಿಯಾದರೆ ಜನರು ಅಭಿಮಾನಿಸುವುದರ ಜೊತೆಗೆ ಕ್ರಿಮಿನಲ್‌ಗಳು ಹೆದರುತ್ತಾರೆ ಎಂದು ಸಚಿವರು ಸಲಹೆ ನೀಡಿದರು.
ನೂತನ ಪೊಲೀಸ್ ಅಧಿಕಾರಿಗಳು ಉತ್ಸುಕತೆಯಿಂದ ಕೆಲಸ ಮಾಡಬೇಕು. ತಮ್ಮ ಸೇವೆ ನಮ್ಮ ಕರ್ನಾಟಕದ ಜನತೆಗೆ ಉತ್ತಮ ರೀತಿಯಲ್ಲಿ ಸಿಗಲಿ ಎಂದು ಸಚಿವ ಸೋಮಶೇಖರ್ ಹಾರೈಸಿದರು.
ನೂತನ ಪ್ರಶಿಕ್ಷಣಾರ್ಥಿಗಳ ಜತೆ ಸಚಿವರ ಸಂವಾದ
ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ನಡುವೆ ಯಾವ ರೀತಿ ಸಮನ್ವಯತೆ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನಪ್ರತಿನಿಧಿಗಳು ಸಾಮಾನ್ಯವಾಗಿ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ. ಜೊತೆಗೆ ಹಸ್ತಕ್ಷೇಪ ಮಾಡುವುದಿಲ್ಲ. ನೀವು ನಿಮ್ಮ ವ್ಯಾಪ್ತಿಯಲ್ಲಿ ದಕ್ಷತೆಯಿಂದ ಪ್ರಾಮಾಣಿಕತೆಯಿಂದಿದ್ದರೆ ಜನಪ್ರತಿನಿಧಿಗಳೂ ಸಹ ಗೌರವವನ್ನು ಕೊಡುತ್ತಾರೆ ಎಂದು ತಿಳಿಸಿದರು.
ಕಾನೂನು ರೀತಿ ಪೊಲೀಸ್ ಅಧಿಕಾರಿ ನಡೆದರೆ ಯಾರೂ ಹಸ್ತಕ್ಷೇಪ ಮಾಡಲ್ಲ:
ನೀವು ಮೊದಲು ನಿಮ್ಮ ಠಾಣಾ ವ್ಯಾಪ್ತಿಯ ಆಳ-ಅಗಲ ತಿಳಿದುಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಿ, ನೀವು ಕಾನೂನು ರೀತಿಯಲ್ಲಿ ನಡೆದುಕೊಂಡರೆ ಯಾರೊಬ್ಬರೂ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ ಎಂದು ಕಿವಿಮಾತು ಹೇಳಿದರು.
ಸಹಕಾರ ಸಂಸ್ಥೆಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಅವ್ಯವಹಾರ ಆಗುತ್ತಿರುವ ಬಗ್ಗೆ ಪ್ರಶಿಕ್ಷಣಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸುಮಾರು ೨೮೦ ಕೋ ಆಪರೇಟಿವ್ ಬ್ಯಾಂಕ್‌ಗಳಿವೆ. ಇದರಲ್ಲಿ ಸುಮಾರು 3-4 ಬ್ಯಾಂಕ್‌ಗಳಿಂದ ಅವ್ಯವಹಾರಗಳಾಗಿವೆ. ಇದಕ್ಕಾಗಿ ಕಠಿಣ ಕಾನೂನುಗಳನ್ನು ರೂಪಿಸುತ್ತಿದ್ದು ಅಂತಹ ಸಂಸ್ಥೆಗಳ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಇದಲ್ಲದೆ ಅವ್ಯವಹಾರ ಮಾಡಿದವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನನ್ನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಹೀಗಾಗಿ ಸಹಕಾರಿ ಬ್ಯಾಂಕಲ್ಲಿ ಯಾರು ಅವ್ಯವಹಾರ ನಡೆಸುತ್ತಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ೨೯ಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅದಕ್ಕಿಂತ ಮುಂಚಿತವಾಗಿ ನಮ್ಮ ಇಲಾಖೆ ವತಿಯಿಂದ ಒಂದು ತನಿಖೆ ನಡೆಸಿ ಯಾರು ತಪ್ಪಿತಸ್ಥರು ಎಂಬುದನ್ನು ತೀರ್ಮಾನಿಸಲಾಗುವುದು. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಧ್ಯಕ್ಷರನ್ನು ವಜಾ ಮಾಡುವ ನಿರ್ಧಾರವನ್ನೂ ನಾವು ತೆಗೆದುಕೊಂಡಿದ್ದೇವೆ. ಎಲ್ಲ ಪ್ರಕ್ರಿಯೆಗಳ ಬಳಿಕ ಎಫ್‌ಐಆರ್ ಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಅಲ್ಲದೆ ಈಗಿರುವ ನ್ಯೂನತೆಯುಳ್ಳ ಕಾನೂನುಗಳನ್ನು ಸರಿಪಡಿಸಿ ಬಿಗಿ ಮಾಡಲು ಕಠಿಣ ಕಾಯ್ದೆಗಳನ್ನು ರೂಪಿಸಲು ಮುಂದಾಗಿದ್ದು, ಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ತಿದ್ದುಪಡಿ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಸಹಕಾರ ಸಂಘಗಳ ಆಡಿಟ್ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಆರ್‌ಬಿಐ ನಿಯಂತ್ರಣಕ್ಕೊಳಪಡಿಸುತ್ತಿರುವುದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಇದರಿಂದ ಜನರಿಗೂ ತಮ್ಮ ಹೂಡಿಕೆ ಹಣಕ್ಕೆ ಭದ್ರತೆ ಸಿಕ್ಕಂತಾಗುತ್ತದೆ. ಜನರಿಗೆ ಸಹಕಾರ ಸಂಸ್ಥೆಗಳ ಮೇಲೆ ನಂಬಿಕೆ ಹೋಗಬಾರದು ಈ ನಿಟ್ಟಿನಲ್ಲಿ ಇಂತಹ ಕ್ರಮಗಳು ಆರೋಗ್ಯದಾಯಕ ಬೆಳವಣಿಗೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಸಿಸಿ ಬ್ಯಾಂಕ್‌ನಲ್ಲಿ ಪೊಲೀಸರಿಗೂ ಸಾಲ
ನಿಮ್ಮ ಜಿಲ್ಲೆಯಲ್ಲಿ ಯಾವ ಡಿಸಿಸಿ ಬ್ಯಾಂಕ್ ಹಾಗೂ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಪೊಲೀಸರಿಗೂ ಸಾಲ ಸಿಗುತ್ತಿದ್ದು, ಶಿಕ್ಷಣ ಸೇರಿದಂತೆ ಇನ್ನಿತರ ಅವಕಾಶಗಳ ಮೂಲಕ ಸಾಲ ಸೌಲಭ್ಯ ನೀಡಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಕ್ಷವಾಗಿ ಕಾರ್ಯ ನಿರ್ವಹಿಸಿ, ಯಾರೂ ಹಸ್ತಕ್ಷೇಪ ಮಾಡಲ್ಲ
ಆ ಜನಪ್ರತಿನಿಧಿ ಯಾರು? ಏನು? ಅವರ ಕಾರ್ಯವೈಖರಿ ಏನು? ಎಂಬಿತ್ಯಾದಿಗಳನ್ನು ನೀವು ನಿಯೋಜನೆಗೊಳಗಾದ ತಕ್ಷಣ ಮಾಹಿತಿ ಇಟ್ಟುಕೊಂಡು ಅದರಂತೆ ದಕ್ಷವಾಗಿ ಕಾರ್ಯನಿರ್ವಹಣೆ ಮಾಡಿದರೆ ಯಾವುದೇ ಜನಪ್ರತಿನಿಧಿಗಳು ನಿಮ್ಮ ಸೇವೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸಿಗುತ್ತಿದೆ
ಸಹಕಾರ ಇಲಾಖೆ ಮೂಲಕ 2020-21ನೇ ಸಾಲಿನಲ್ಲಿ ಅಲ್ಲಾವಧಿ, ಮಧ್ಯಮಾವಧಿ ಸೇರಿದಂತೆ ಇನ್ನಿತರ ಯೋಜನೆಯಡಿ 15300 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಡಿಸಿಸಿ ಬ್ಯಾಂಕ್‌ಗಳ ಮೂಲಕ ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳಿಗೆ ನೂರಕ್ಕೆ ನೂರು ಸಾಲ ಸೌಲಭ್ಯಗಳು ಸಿಗುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಮಾಹಿತಿ ನೀಡಿದರು.
ಸಚಿವ ಸೋಮಶೇಖರ್ ರೋಲ್ ಮಾಡೆಲ್: ವಿಪುಲ್ ಕುಮಾರ್
ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್ ಮಾತನಾಡಿ, ಪೊಲೀಸರ ಬಗ್ಗೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಅರಿವಿದೆ. ಅವರು ನಮ್ಮ ಇಲಾಖೆ ಬಗ್ಗೆ ಮುತುವರ್ಜಿ, ಕಾಳಜಿ ವಹಿಸುವಂತಹ ಉತ್ತಮ ರಾಜಕಾರಣಿಗಳಾಗಿದ್ದಾರೆ. ಅವರು ಒಬ್ಬ ರೋಲ್ ಮಾಡಲ್ ಆಗಿದ್ದಾರೆ ಎಂದು ಹೇಳಿದರು.
ಅವರು ಉಸ್ತುವಾರಿ ಸಚಿವರಾಗಿ ಮೈಸೂರಿಗೆ ಆಗಮಿಸಿದಾಗ ನಾನು ಹೋಗಿ ನಮಗೆ ನಿಮ್ಮಿಂದ ಸಲಹೆಗಳಿದ್ದರೆ ಯಾವುದೇ ಸಮಯದಲ್ಲಿ ಕೊಡಬಹುದು ಎಂದು ಹೇಳಿದೆ. ಅದಕ್ಕವರು ತಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಅದರಂತೆ ಇಲ್ಲಿಯವರೆಗೂ ಯಾವುದೇ ಒಂದು ವರ್ಗಾವಣೆ ಸಂಬಂಧ ಸಹ ಸಚಿವ ಸೋಮಶೇಖರ್ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.
ಸಚಿವ ಸೋಮಶೇಖರ್ ಅವರ ಬಗ್ಗೆ ಮೈಸೂರಿನಲ್ಲಿ ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಲ್ಲಿಯೂ ಇವರೇ ಉಸ್ತುವಾರಿ ಸಚಿವರಾಗಬೇಕು ಎಂಬ ಕೂಗು ಕೇಳಿಬರುತ್ತದೆ ಎಂಬುದಿದ್ದರೆ ಅದು ಅವರ ಸಹಾಯ ಮನೋಭಾವಕ್ಕೆ ಹಿಡಿದ ಕೈಗನ್ನಡಿ. ಅವರ ಸಮಾಜಪರ ಕಾಳಜಿ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ವಿಪುಲ್ ಕುಮಾರ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post