ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸತ್ಯವಾಗಿರುವ ಜಗತ್ತಿನ ಪ್ರತಿಯೊಂದು ವಸ್ತು- ವೈವಿಧ್ಯಗಳನ್ನೂ ಪರಮಾತ್ಮನ ಮಹತ್ತರ ಕೊಡುಗೆಯೆಂದೇ ತಿಳಿದರೆ ಜೀವನ ಸುಂದರ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಅಗ್ರಹಾರದಲ್ಲಿರುವ ಉತ್ತರಾದಿಮಠದ ಶ್ರೀ ಧನ್ವಂತ್ರಿ ಸನ್ನಿಧಾನದಲ್ಲಿ `ಶ್ರೀ ಧನ್ವಂತರಿ ಪ್ರಾದುರ್ಭಾವ ಉತ್ಸವ’ 4 ದಿನಗಳ ವಿಶೇಷ ಕಾರ್ಯಕ್ರಮ ಸರಣಿಗೆ ಭಾಗವತ ತಾತ್ಪರ್ಯ ನಿರ್ಣಯ ಮಹಾನ್ ಗ್ರಂಥದ ಪಾಠ-ಪ್ರವಚನದ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ದೇವರ ವಶವಾಗಿರುವ ಈ ಜಗತ್ತನ್ನು ನನ್ನದು ಎಂದು ಭಾವಿಸಿದಾತ ಸಮಸ್ಯೆಗಳಿಗೆ ಸಿಲುಕುತ್ತಾನೆ. ನಮ್ಮದು ಎಂಬ ದುರಭಿಮಾನ ಬಿಟ್ಟು ದೇವರ ಮಹಾಕರುಣೆ ಎಂದು ವಿಶ್ವವನ್ನು ಭಾವಿಸಿ ಬದುಕೋಣ. ಆಗಮಾತ್ರ ಪ್ರೀತಿ, ಭಕ್ತಿ, ಸೌಹಾರ್ದ, ಸಾರ್ಥಕ್ಯಭಾವಗಳು ಮೇಳೈಸುತ್ತವೆ ಎಂದರು.
ಆಚಾರ್ಯ ಮಧ್ವರು ರಚಿಸಿದ `ಭಾಗವತ ತಾತ್ಪರ್ಯ ನಿರ್ಣಯ’ ಎಂಬ ಪವಿತ್ರ ಗ್ರಂಥವು ಧರ್ಮ-ಶಾಸ್ತ್ರ ಜಿಜ್ಞಾಸುಗಳಿಗೆ ಸೂಕ್ತವಾದ ತಿಳಿವಳಿಕೆ ಮೂಡಿಸುತ್ತದೆ. ಇದರ ಅಧ್ಯಯನದಿಂದ ದೊರಕುವ ಮಹತ್ತರ ಲಾಭ ಏನೆಂದರೆ ನಾವು ಇತರ ಗ್ರಂಥಗಳನ್ನು ಹೇಗೆ ತಿಳಿಯಬೇಕು ಎಂಬ ಜ್ಞಾನ ಮೂಡುತ್ತದೆ. ಪುರಾಣ, ಶಾಸ್ತ್ರಗಳ ಮಾರ್ಗ ತೆರೆದುಕೊಳ್ಳುತ್ತದೆ. ಅನಂತ ವೇದಗಳು, ಇತಿಹಾಸ ಮತ್ತು ಸತ್ ಶಾಸ್ತ್ರಗಳನ್ನು ಪರಿಪೂರ್ಣವಾಗಿ ಅರಿತಿದ್ದ ಆಚಾರ್ಯ ಮಧ್ವರು ಅವುಗಳಿಗೆ ಸಮರ್ಥವಾದ, ಸರ್ವ ದೇಶ ಕಾಲವೂ ಮೆಚ್ಚುವಂಥ ನಿರ್ಣಯಗಳನ್ನು ರಚಿಸಿ ಕೊಟ್ಟಿದ್ದಾರೆ. ಭಕ್ತಿ ಮತ್ತು ಶ್ರದ್ಧೆಯಿಂದ ಇವುಗಳ ಅಧ್ಯಯನ ಮಾಡಿ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಪರಮಾತ್ಮನಲ್ಲಿ ಮನಸ್ಸು ಸ್ಥಿರವಾಗಲಿ
ಯಾರು ಪರಮಾತ್ಮನಲ್ಲಿ ಮನವನ್ನು ಸ್ಥಿರವಾಗಿ ಇಡುವರೋ ಅವರು ಇಹ ಮತ್ತು ಪರದಲ್ಲಿ ಅನಂತ ಸುಖವನ್ನು ಅನುಭವಿಸುತ್ತಾರೆ. ಕೇವಲ ಲೌಕಿಕ ಜೀವನದ ಆಮಿಷಗಳಿಗೆ ಬೀಳದೇ ದಿನದ ಕೆಲವು ಸಮಯವಾದರೂ ಪರಮಾತ್ಮನ ಕತೆಗಳನ್ನು ಕೇಳುವ ಮನೋಸ್ಥಿತಿ ರೂಢಿಸಿಕೊಳ್ಳಬೇಕು. ದೇವರ ಸಖ್ಯದ ಪ್ರೀತಿ, ಆನಂದ ಮತ್ತು ಭಾವಗಳನ್ನು ಅನುಭವಿಸಬೇಕು. ಗಾಯನ, ನರ್ತನ ಮೊದಲಾದ ನವವಿಧ ಭಕುತಿಗಳು ನಮ್ಮಲ್ಲಿ ಮನೆ ಮಾಡಬೇಕು. ಯಾವುದೂ ಬೇಡವೆಂದರೂ ಅಂತರಂಗದಲ್ಲಿ ಅನನ್ಯವಾಗಿ ಪರಮಾತ್ಮನ ಚಿಂತನೆಯನ್ನಾದರೂ ಮಾಡಬೇಕು. ಮುಖ ಪ್ರಸಾದ ಮತ್ತು ದಾರ್ಢ್ಯಗಳೇ ಭಕ್ತಿಯ ಲಕ್ಷಣಗಳು ಎಂಬುದನ್ನು ನಾವು ತಿಳಿಯಬೇಕು ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಮೋಕ್ಷ ಸಾಧನೆ ಕಡೆಗೆ ಸಾಗಿ
ಭಾಗವತ ತಾತ್ಪರ್ಯ ನಿರ್ಣಯ ಗ್ರಂಥವು `ಕಂಡಕಂಡದ್ದೆಲ್ಲಾ ಕಮಲನಾಭನ ಮೂರ್ತಿ’ ಎಂದು ಸಾರಿ ಹೇಳಿದೆ. ಅಭಯ ನೀಡುವ ದೇವರನ್ನು ನಂಬಿದವರಿಗೆ ಎಂದೂ ಮೋಸವಾಗಿಲ್ಲ. ಗಂಭೀರವಾಗಿ ಇರುವವರನ್ನು ಕಂಡು ಇವರೆಲ್ಲಾ ಏನು ಮಾಡಿಯಾರು ಎಂದು ಹೀಯಾಳಿಸಬೇಡಿ. ದೇವರ ಬಗ್ಗೆ ಅಚಲ ವಿಶ್ವಾಸ ಇರುವ ಅಂತರಂಗದ ಭಕ್ತರಿಗೂ ದೇವರ ಕಾರುಣ್ಯ ಇದ್ದೇ ಇರುತ್ತದೆ. ಮಾನವ ಜನ್ಮ ದೊರಕಿರುವಾಗ ಮೋಕ್ಷ ಸಾಧನೆ ಕಡೆಗೆ ನಮ್ಮ ಮನಸ್ಸು ಸಾಗಬೇಕು ಎಂದು ಸ್ವಾಮೀಜಿ ಹೇಳಿದರು.
ಮಠದ ವಿದ್ವಾಂಸರು, ನೂರಾರು ಶಿಷ್ಯವರ್ಗದವರು ಹಾಜರಿದ್ದರು. ಪ್ರಾದುರ್ಭಾವ ಉತ್ಸವದ ಅಂಗವಾಗಿ ಮಠದ ಶ್ರೀ ಧನ್ವಂತರಿ ಮೂರ್ತಿ, ಶ್ರೀ ಸತ್ಯ ಸಂಕಲ್ಪರು ಮತ್ತು ಶ್ರೀ ಸತ್ಯ ಸಂತುಷ್ಟರ ಮೂಲ ವೃಂದಾವನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮೇ 28ರಂದು ಸಂಜೆ 5:30ರಿಂದ ಸುಪ್ರಸಿದ್ಧ ಗಾಯಕ ಪಂ. ಪ್ರಸನ್ನ ಗುಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 6:30ರಿಂದ ಗಣ್ಯರು ಹಾಗೂ ವಿಶೇಷ ಸೇವಾಕರ್ತರಿಗೆ ಶ್ರೀಪಾದಂಗಳವರಿಂದ ಅನುಗ್ರಹ ಫಲಮಂತ್ರಾಕ್ಷತೆ, ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ.
ಮೇ 29ರಂದು ಬೆಳಿಗ್ಗೆ 7ಗಂಟೆಗೆ ಶ್ರೀಮದ್ಭಾಗವತ ತಾತ್ಪರ್ಯ ಪಾಠ, ಸಂಜೆ 5:30ಕ್ಕೆ ಜಯತೀರ್ಥ ವಿದ್ಯಾಪೀಠ ಪ್ರಾಂಶುಪಾಲರಾದ ಪಂ ಸತ್ಯಧ್ಯಾನಚಾರ್ಯ ಕಟ್ಟಿ ಅವರಿಂದ ಪ್ರವಚನ, 7ಗಂಟೆಗೆ ಶ್ರೀಗಳಿಂದ ಅನುಗ್ರಹ ಸಂದೇಶ ಜರುಗಲಿದೆ.
ಮೇ 30ರಂದು ಬೆಳಿಗ್ಗೆ 7ಗಂಟೆಗೆ ಶ್ರೀಮದ್ಭಾಗವತ ತಾತ್ಪರ್ಯ ಪಾಠದ ಮಂಗಳ ಹಾಗೂ ಗುರುವಂದನೆ, 8:30ಕ್ಕೆ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ, 10:30ಕ್ಕೆ ಶ್ರೀಧನ್ವಂತರಿ ದೇವರಿಗೆ ಕಲಶಾಭಿಷೇಕ, ಮಧು ಅಭಿಷೇಕ ಮತ್ತು ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ. 11:30ಕ್ಕೆ ನೂತನ ಅಲಂಕೃತ ಗೋಡೆಯ ಲೋಕಾರ್ಪಣೆ ಶ್ರೀಪಾದಂಗಳವರ ಅನುಗ್ರಹ ವಚನ, ನಂತರ ಮೂಲರಾಮದೇವರ ಹಾಗೂ ಧನ್ವಂತರಿಯ ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post