ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾನುವಾರ ಜನವರಿ 12ರ ಸಂಜೆ ನಗರ ಒಂದು ಅಪರೂಪದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ನಗರದ ಕೇರ್ಗಳ್ಳಿಯಲ್ಲಿರುವ “ನಿನಾದ ಗೃಹ ಸಂಗೀತ” ಸರಣಿಯ 16ನೇ ಕಾರ್ಯಕ್ರಮವಾಗಿ ಹಿಂದುಸ್ತಾನಿ ವಯೋಲಿನ್ ವೃಂದ ವಾದನ ‘ಸ್ವರಸ್ವಪ್ನ’ವನ್ನು ಪುಣೆಯ ಸುಪ್ರಸಿದ್ಧ ವಯೋಲಿನ್ ವಾದಕಿ, ಗುರು ವಿ.ಸ್ವಪ್ನಾ ದಾತಾರ್ ಅವರ ಆಯ್ದ ಯುವ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಅಂದು ಸಂಜೆ 6.30ಕ್ಕೆ ಕೇರ್ಗಳ್ಳಿಯ ‘ನಿನಾದ’ ಸಭಾಂಗಣದಲ್ಲಿ ಈ ಸಂಗೀತ ಸಂಜೆ ಮೂಡಿಬರಲಿದೆ.
ಈ ದೇಶದ ಅಗ್ರಪಂಕ್ತಿಯ ವಯೋಲಿನ್ ವಾದಕರಲ್ಲಿ ಒಬ್ಬರಾಗಿರುವ ವಿ. ಸ್ವಪ್ನ ದಾತಾರ್ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂ. ವಸಂತರಾವ್ ಶಿವಲೇಕರ್ ಅವರ ಹಿರಿಯ ಶಿಷ್ಯರು. ಗಾಯಕಿ ಅಂಗ ಹಾಗೂ ತಂತ್ರಕಾರ್ ಎರಡೂ ಅಂಗಗಳ ಸಮ್ಮಿಲನದೊಂದಿಗೆ ಆಕರ್ಷಕವಾಗಿ ವಯೋಲಿನ್ ನುಡಿಸಬಲ್ಲ ಸ್ವಪ್ನಾ ದಾತಾರ್ ಅವರು ವಿಶೇಷವಾದ ಪ್ರತಿಭೆ, ಸಾಮರ್ಥ್ಯ ಮತ್ತು ದೂರದರ್ಶಿತ್ವವುಳ್ಳ ಕಲಾವಿದೆ.
‘ಸ್ವರಸ್ವಪ್ನ’ ಅವರ ಕನಸಿನ ಕೂಸು. ಎಳೆಯ ಮಕ್ಕಳಲ್ಲಿ ಎಲ್ಲಾ ಕಲಾ ಪ್ರಕಾರಗಳ ಬಗ್ಗೆ ಅರಿವು ಮೂಡಿಸಿ, ಅವರನ್ನು ಅವುಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಅವರ ಪ್ರಯತ್ನದ ಫಲವೇ ‘ಸ್ವರಸ್ವಪ್ನ’. ಇಲ್ಲಿ ಶಾಸ್ತ್ರೀಯ ಸಂಗೀತದ ವಾದನವಿದೆ. ಜೊತೆಯಲ್ಲಿ ರಾಗಬದ್ಧ ಚಲನಚಿತ್ರದ ಹಾಡುಗಳಿವೆ, ಅಭಂಗ, ದೇಶಭಕ್ತಿಗೀತೆ, ಬೇರೆ ಬೇರೆ ಭಾಷೆಗಳ ಸುಪ್ರಸಿದ್ಧ ಹಾಡು ಜೊತೆಗೆ ಪಾಶ್ಚಾತ್ಯ ರಚನೆಗಳನ್ನೂ ಕಾಣಬಹುದು. ಸ್ವತಃ ವಿ.ಸ್ವಪ್ನಾ ಅವರೇ ರಚನೆಗಳ ಬಗ್ಗೆ, ತಮ್ಮ ವಿಚಾರಗಳ ಬಗ್ಗೆ ಅತ್ಯಂತ ಮನಮುಟ್ಟುವ ನಿವೇದನೆಯನ್ನು ಮಾಡುತ್ತಾರೆ. ತಬಲಾ, ಪಖಾವಾಜ್, ತಾಳ ಮುಂತಾದವುಗಳ ಉಪಯೋಗ ಅವಶ್ಯಕತೆಗೆ ತಕ್ಕಂತೆ ಮಾಡಲಾಗುತ್ತದೆ.
Also read: ಕೃಷಿಕರಿಗೆ ಉಪಕಾರಿಯಾದ ಸೈಲೇಜ್ ತಯಾರಿಕೆ ಹೇಗೆ? ಕೃಷಿ ವಿದ್ಯಾರ್ಥಿಗಳು ಹೇಳಿದ್ದಾರೆ ಓದಿ…
ಈವರೆಗೆ ಸುಮಾರು 80ಕ್ಕೂ ಅಧಿಕ ಪ್ರಯೋಗ ಕಂಡಿರುವ ‘ಸ್ವರಸ್ವಪ್ನ’ ಇತ್ತೀಚಿಗೆ ಜರ್ಮನ್ ನಲ್ಲಿಯೂ ಸಂಗೀತ ಪ್ರಿಯರ ಮನಸೂರೆಗೊಂಡಿತ್ತು.
ಸಂಗೀತಾಸಕ್ತ ಮಕ್ಕಳಿಗೆ ಸಂಗೀತದ ಅಭ್ಯಾಸ, ಕಾರ್ಯಕ್ರಮ ನೀಡುವ ಅವಕಾಶ, ವಿಚಾರ ವಿನಿಮಯ ಇವೆಲ್ಲವುಗಳನ್ನು ಪೂರೈಸಲು ‘ಪರಿವಾರ್’ ಎಂಬ ಹೆಸರಿನಲ್ಲಿ ಸಂಗೀತ ತರಗತಿಗೆ ಬೇಕಾದ ಕೊಠಡಿಗಳು, ಸಭಾಂಗಣ, ಧ್ವನಿ ವ್ಯವಸ್ಥೆ ಎಲ್ಲವನ್ನು ಒದಗಿಸಿಕೊಟ್ಟು ನೂರಾರು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅನೇಕ ಬಗೆಯ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿರುತ್ತವೆ.
‘ಸ್ವರಸ್ವಪ್ನ’ ಕಾರ್ಯಕ್ರಮದ ಕುರಿತು ಅನೇಕ ಹಿರಿಯ ಸಂಗೀತಗಾರರು ಮೆಚ್ಚುಗೆ ವ್ಯಕ್ತ ಪಡಿಸಿರುವುದು ಅದರ ವಿಶೇಷತೆಯನ್ನು ಸಾರುತ್ತವೆ. ಅವರಲ್ಲಿ ಪ್ರಮುಖರು ಡಾ.ಎನ್ ರಾಜಂ, ಪಂ.ಬುದ್ಧಾದಿತ್ಯ ಮುಖರ್ಜೀ, ಪಂ.ಅರವಿಂದ ಥತ್ತೆ, ಪಂ.ಮಧುಪ್ ಮುದ್ಗಲ್, ‘ಭಾವ ಗಂಧರ್ವ’ ಹೃದಯನಾಥ ಮಂಗೇಶ್ಕರ್ ಮುಂತಾದವರು.
ಪ್ರಸ್ತುತ ಕಾರ್ಯಕ್ರಮದಲ್ಲಿ ವಿ.ಸ್ವಪ್ನಾ ಅವರ ಶಿಷ್ಯರಾದ ಕು.ವೇದಾ ಪೋಲ್, ಕು.ಸಿದ್ಧಿ ದೇಶಪಾಂಡೆ, ಮಾ.ಶ್ರೇಯಸ್ ಅಭ್ಯಂಕರ್ ಇವರುಗಳು ವಯೋಲಿನ್ ಮತ್ತು ಕು.ತನಿಶ್ಕಾ ಜೋಶಿ ಸೆಲ್ಲೊ ನುಡಿಸಲಿದ್ದಾರೆ. ಶ್ರೀ ಶುಭಂ ಶಹಾ ಇವರ ಜೊತೆ ತಬಲಾದಲ್ಲಿ ಸಹಕರಿಸಲಿದ್ದಾರೆ. ವಿ.ಸ್ವಪ್ನಾ ದಾತಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ವಿಳಾಸ: ‘ನಿನಾದ’, 37, ರಿಷಭ್ ಸಿದ್ಧಿ ಲೇಔಟ್, ಕೇರ್ಗಳ್ಳಿ, ಮೈಸೂರು. ಸಂಪರ್ಕ 9449676014.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post