ಕಲ್ಪ ಮೀಡಿಯಾ ಹೌಸ್
ಮೈಸೂರು: ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿಗಳ ಕುಟುಂಬದವರ ಹಸ್ತಕ್ಷೇಪವಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಸೋಮವಾರ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಮಾಜಿ ಉಪ ಪ್ರಧಾನ ಮಂತ್ರಿಗಳಾದ ದಿವಂಗತ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನೋತ್ಸವದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಚಿವರು ಮಾತನಾಡಿದರು.

ಮುಖ್ಯಮಂತ್ರಿಗಳು ಮಾಡುವ ಒಳ್ಳೆಯ ಕೆಲಸಗಳನ್ನು ವಿರೋಧ ಪಕ್ಷದವರಿಂದ ಹೇಳಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ನಮ್ಮ ಸಹಕಾರ ಇಲಾಖೆಗೂ ಯಾರೂ ಹಸ್ತಕ್ಷೇಪ ಮಾಡಿಲ್ಲ. ಮೈಸೂರು ಉಸ್ತುವಾರಿ ಆಡಳಿತವನ್ನು ಸ್ವತಂತ್ರವಾಗಿ ನಡೆಸಲು ಮುಕ್ತ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದರು.

ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಎಂಬುದು ವಿರೋಧ ಪಕ್ಷದವರಿಂದ ಮಾತ್ರ ಇದೆ. ರಾಜ್ಯದಲ್ಲಿ ಯಾವಾವ ಮುಖ್ಯಮಂತ್ರಿಗಳ ಕಾಲದಲ್ಲಿ ಯಾರಾರು ಅಧಿಕಾರ ನಡೆಸಿದ್ದಾರೆ ಎಂಬುದು ಕರ್ನಾಟಕದ ಜನತೆಗೂ ಗೊತ್ತಿದೆ. ಸೂಕ್ತ ಸಮಯ ಬಂದಾಗ ನಾವೂ ಕೂಡ ಅದನ್ನೆಲ್ಲ ತಿಳಿಸಲಾಗುವುದು ಎಂದು ಹೇಳಿದರು.
ವಿಧಾನ ಸಭೆ ನಡೆಯುವ ಸಂದರ್ಭದಲ್ಲಿ ಯಾವತ್ತಾದರೂ ಒಂದು ದಿವಸ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲಿಲ್ಲ. ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲಿಲ್ಲ. ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಲಾಹರಣ ಮಾಡಿದರು. ವಿಧಾನ ಸಭೆಯಲ್ಲಿ ನಡೆಯುವ ಚರ್ಚೆಯನ್ನು ರಾಜ್ಯದ ಜನರೆಲ್ಲಾ ವೀಕ್ಷಿಸುತ್ತಿರುತ್ತಾರೆ. ಜನರ ಕಷ್ಟ ಸುಖದ ಬಗ್ಗೆ ಮಾತನಾಡದೆ ಪ್ರತಿಭಟನೆ ನಡೆಸಿದರು ಎಂದರು.

ಇತ್ತೀಚಿಗೆ ಮೈಸೂರಿನಲ್ಲಿ ಕೊರೊನಾ ಹೆಚ್ಚು ಹರಡುತ್ತಿರುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಕಳೆದ ಬಾರಿಯೂ ಅಧಿಕಾರಿ ಸಭೆ ನಡೆಸಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಸೂಚಿಸಲಾಗಿತ್ತು. ಈಗಲೂ ಕೂಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಹಾಗೂ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ತಮಿಳುನಾಡಿನ ಚುನಾವಣೆಯಲ್ಲಿ ನನಗೆ ಒಂದು ಕ್ಷೇತ್ರಕ್ಕೆ ಉಸ್ತುವಾರಿ ನೀಡಲಾಗಿತ್ತು. ಅಲ್ಲಿ ಸ್ಪರ್ಧಿಸುತ್ತಿರುವ ಭೋಜರಾಜನ್ ಅವರು ಬಿಜೆಪಿ ಪಕ್ಷದ ಆಕಾಂಕ್ಷೆಯಾಗಿರಲಿಲ್ಲ. ಅಲ್ಲಿನ ಸ್ಥಳೀಯರು, ಎಲ್ಲಾ ಸಮುದಾಯದವರು ಹಾಗೂ ಸಂಘಸಂಸ್ಥೆಗಳು ಸೇರಿ ಅವರನ್ನು ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಒತ್ತಾಯಿಸಿದರು. ಅಲ್ಲಿನ ಮತದಾರರ ಸಂಪೂರ್ಣ ಬೆಂಬಲವಿದ್ದು, ನೂರಕ್ಕೆ ನೂರು ಭೋಜರಾಜನ್ ಅವರು 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಊಟಿಯಲ್ಲಿ ಬಹುತೇಕ ಮಂದಿ ಕರ್ನಾಟಕದಿಂದ ವಲಸೆ ಹೋದವರಿದ್ದಾರೆ. ಹಾಸನ, ಮಂಡ್ಯ, ಕೊಲಾರ, ನಾಗಮಂಗಲದವರಿದ್ದು, ಕನ್ನಡದವರೇ ಆಗಿದ್ದಾರೆ. ಅಲ್ಲಿರುವ ಕನ್ನಡಿಗರು ಸಂತೋಷವಾಗಿ ವ್ಯವಸ್ಥಿತ ಬದುಕನ್ನು ನಡೆಸುತ್ತಿದ್ದಾರೆ. ಯಾರೂ ಕೂಡ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ನಿದರ್ಶನೆವೇ ಇಲ್ಲ ಎಂದು ಮಾಹಿತಿ ನೀಡಿದರು.
ಸಿಡಿ ಪ್ರಕರಣದ ತನಿಖೆ ಮಾಡುತ್ತಿರುವ ಎಸ್‌ಐಟಿ ತಂಡದಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ. ಮುಖ್ಯಮಂತ್ರಿಗಳಾಗಲಿ, ಗೃಹಮಂತ್ರಿಗಳಾಗಲೀ ಯಾರೂ ಕೂಡ ಹಸ್ತಕ್ಷೇಪ ಮಾಡುತ್ತಿಲ್ಲ. ಅಧಿಕಾರಿಗಳು ಯಾರ ಹಸ್ತಕ್ಷೇಪಕ್ಕೆ ಒಳಗಾಗದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post