ಸಣ್ಣ ಪುಟ್ಟ ಚಟುವಟಿಕೆ ನಡೆಸುವವರೆಲ್ಲಾ ಸೇವೆ ಎಂಬ ಟ್ಯಾಗ್ ಜೋಡಿಸಿಕೊಂಡು ಬಹುವಿಧ ಪ್ರಚಾರ ಪಡೆಯುತ್ತ ಇದ್ದಾರೆ. ಇಂಥ ಕಾಲ ಘಟ್ಟದಲ್ಲೂ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ ಸಂಘಟನೆಯೊಂದು ವಿಶೇಷ ಗಮನ ಸೆಳೆದಿದೆ.
ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹತ್ತು ಹಲವು ಯೋಜನೆಗಳಿಗೆ. ಅವೆಲ್ಲವೂ ಬಹುತೇಕ ಸೌಲಭ್ಯಗಳನ್ನು ನೀಡುವ ಉದ್ದೇಶವನ್ನು ಹೊಂದಿರುತ್ತವೆ. ಆದರೆ ಸವಲತ್ತುಗಳನ್ನು ಕಲ್ಪಿಸುವುದರೊಂದಿಗೆ ಜಿಲ್ಲಾ ವ್ಯಾಪ್ತಿಯ ಮಕ್ಕಳಲ್ಲಿ ಸಂಸ್ಕಾರವನ್ನೂ ರೂಢಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದೆ ಮೈಸೂರಿನ ಬಾಲ ಸಂಸ್ಕಾರ ಕೇಂದ್ರ.
ಹೌದು. ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ದಿಸೆಯಲ್ಲಿ ಪ್ರತಿ ವರ್ಷವೂ ವಿದ್ಯಾನಿಧಿ ಯೋಜನೆಯಡಿ ಉಚಿತವಾಗಿ ನೋಟ್ ಪುಸ್ತಕ ಸೇರಿ ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಈಗದು ಒಂದು ಲಕ್ಷಕ್ಕೂ ಮೀರಿದ ಮಕ್ಕಳಿಗೆ ಲಭ್ಯವಾಗುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ.
ಮೈಸೂರಿನ ವಿಜಯನಗರದಲ್ಲಿರುವ ಬಾಲ ಸಂಸ್ಕಾರ ಕೇಂದ್ರದ 15 ತಜ್ಞರ ತಂಡ ಪ್ರತಿ ವರ್ಷ ಯಾವ ಸರ್ಕಾರಿ ಶಾಲೆ ಮಕ್ಕಳಿಗೆ ಲೇಖನ ಸಾಮಗ್ರಿ ಅವಶ್ಯವಿದೆ ಎಂಬುದನ್ನು ಪಟ್ಟಿ ಮಾಡುತ್ತದೆ. ಈಗ 200ಕ್ಕೂ ಹೆಚ್ಚು ಶಾಲೆಗಳು ಈ ವ್ಯಾಪ್ತಿಗೆ ಸೇರಿವೆ. ಶೈಕ್ಷಣಿಕ ವರ್ಷಾರಂಭದಲ್ಲಿ ಒಂದು ಶಾಲೆಯಲ್ಲಿ ಅರ್ಧ ದಿನ ಶಾಲೆ ಹೊರ ಆವರಣದಲ್ಲಿ ಚಟುವಟಿಕೆ ರೂಪಿಸಿ, ಮಕ್ಕಳಿಗೆ ಶಾರದಾ ಸ್ತುತಿ, ಭಜನೆ, ದೇಶಭಕ್ತಿಗೀತೆ, ನೀತಿಬೋಧಕ ಕತೆ ಹೇಳಿಕೊಟ್ಟು, ಚಿಕ್ಕ ಚಿಕ್ಕ ಆಟಗಳನ್ನೂ ಆಡಿಸಿ ನೋಟ್‌ಬುಕ್‌ನೊಂದಿಗೆ ಲೇಖನ ಸಾಮಗ್ರಿಗಳನ್ನೂ ಹಂಚಲಾಗುತ್ತದೆ. ಒಬ್ಬ ವಿದ್ಯಾರ್ಥಿಗೆ 200 ಪುಟದ 6 ಲಾಂಗ್ ನೋಟ್‌ಬುಕ್‌ನೊಂದಿಗೆ ಪೆನ್, ಪೆನ್ಸಿಲ್, ಜಾಮಿಟ್ರಿ, ಶಾಲಾ ಬ್ಯಾಗ್ ನೀಡಲಾಗುತ್ತದೆ. ಇವೆಲ್ಲವನ್ನೂ ಸೇವಾಭಾರತಿ ಸಂಘಟನೆ ಪೂರೈಕೆ ಮಾಡುತ್ತಿದ್ದು, ಆಯಾ ವರ್ಷದಲ್ಲಿ ದಾನಿಗಳ ಲಭ್ಯತೆ ಅನುಸರಿಸಿ ಸಾಮಗ್ರಿಗಳ ಸಂಖ್ಯೆಯೂ ಏರಿಕೆಯಾಗುತ್ತದೆ.
ಉಚಿತ ನೋಟ್‌ಪುಸ್ತಕ ಮತ್ತಿತರ ಸಾಮಗ್ರಿ ಪಡೆದ ಅನೇಕ ಮಕ್ಕಳು ಈಗ ಡಾಕ್ಟರ್, ಇಂಜಿನಿಯರ್, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೇರಿದ್ದಾರೆ. ಅವರೆಲ್ಲರೂ ಈ ಸೇವಾಕಾರ್ಯಕ್ಕೆ ಬೆಂಬಲಿಸಲು ಮುಂದಾಗಿದ್ದಾರೆ. ಎರಡು ದಶಕದ ಚಟುವಟಿಕೆ ನಮಗೇ ಅಚ್ಚರಿ ತರಿಸಿದೆ. ಉತ್ತಮ ಕೆಲಸಗಳು ಒಂದಲ್ಲಾ ಒಂದು ದಿನ ಉತ್ತಮ ಫಲ ನೀಡುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಂತಸದಿಂದ ಹೇಳುತ್ತಾರೆ ಬಾಲ ಸಂಸ್ಕಾರ ಕೇಂದ್ರದ ಮುಖ್ಯಸ್ಥ ಸಿ.ವಿ. ಕೇಶವಮೂರ್ತಿ.
ಕೊರೋನಾ ಕಾರಣಕ್ಕಾಗಿ ಪ್ರಸ್ತುತ ವರ್ಷ ಮಕ್ಕಳನ್ನು ತಲುಪುವುದು ಸಲ್ಪ ಕಷ್ಟಕರವಾದರೂ ಕಳೆದ ಒಂದು ತಿಂಗಳಲ್ಲಿ 120 ಶಾಲೆಗಳಿಗೆ ತೆರಳಿ ಲೇಖನ ಸಾಮಗ್ರಿ ಹಂಚಿರುವುದು ಸಂಸ್ಥೆಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ರಕ್ಷಾಪುಟದ ಹಿಂದೆ ಆದರ್ಶದ ಕತೆಗಳು
ಸಿ.ವಿ. ಕೇಶವಮೂರ್ತಿ
200 ಪುಟದ ಲಾಂಗ್ ನೋಟ್‌ಬುಕ್‌ನ ರಕ್ಷಾಪುಟಗಳ ಮುಂಭಾಗ ರಾಷ್ಟ್ರಪುರುಷರ ಚಿತ್ರಗಳು ಮತ್ತು ಅದರ ಹಿಂಭಾಗದ ಪುಟದಲ್ಲಿ ನೀತಿ, ಆದರ್ಶ ಬಿಂಬಿಸುವ ಚಿಕ್ಕ ಕತೆಗಳನ್ನು ಮುದ್ರಣ ಮಾಡಲಾಗಿರುತ್ತದೆ. ಆಲ್ಬರ್ಟ್ ಐನ್‌ಸ್ಟೀನ್, ಥಾಮಸ್ ಆಲ್ವ ಎಡಿಸನ್ ಜೀವನದ ಯಶೋಗಾಥೆ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಜೀವನಾದರ್ಶ, ನಂಬಿಕೆ, ವಿಶ್ವಾಸ ಗಳಿಸಿ ಸಾಧನೆ ಮಾಡುವ ವಿಧಾನ, ಭಾರತದ ಚಂದ್ರಯಾನದ ಮೈಲಿಗಲ್ಲು- ಹೀಗೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಬಲ್ಲ ಸಂಗತಿಗಳನ್ನು ಸರಳ ಕನ್ನಡ ಭಾಷೆಯಲ್ಲಿ ನಿರೂಪಿಸಲಾಗಿದೆ. ಪ್ರತಿ ವರ್ಷವೂ ಹೊಸ ಹೊಸ ಕತೆಗಳನ್ನು ಮುದ್ರಣ ಮಾಡಲಾಗುತ್ತದೆ. ಚಿಕ್ಕ ಚಿಕ್ಕ ಕತೆಗಳ ಮೂಲಕ ಮಕ್ಕಳು ಸಮಾಜ ಮೆಚ್ಚುವ ನಡೆಗಳನ್ನು ರೂಢಿಸಿಕೊಳ್ಳಲಿ ಎಂಬುದು ಇದರ ಉದ್ದೇಶ ಎನ್ನುತ್ತಾರೆ ಬಾಲ ಸಂಸ್ಕಾರ ಕೇಂದ್ರದ ಮುಖ್ಯಸ್ಥ ಸಿ.ವಿ. ಕೇಶವಮೂರ್ತಿ. ಸೇವಾಭಾರತಿ ಬೆಂಬಲ
ಬಾಲ ಸಂಸ್ಕಾರ ಕೇಂದ್ರದ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿರುವುದು ಸೇವಾಭಾರತಿ. ಅಖಿಲ ಭಾರತ ಮಟ್ಟದ ಈ ಸಂಘಟನೆ ಮೈಸೂರು ಜಿಲ್ಲೆಯಲ್ಲಿ ಯಾವುದೇ ಪ್ರಚಾರ ಬಯಸದೇ ತನ್ನ ಚಟುವಟಿಕೆಯನ್ನು 22 ವರ್ಷಗಳಿಂದ ಮಾಡುತ್ತಿದೆ. ವಿದ್ಯಾನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಕೊಡುವ ಸೇವಾಕಾರ್ಯ 22 ವರ್ಷಗಳಿಂದ ಏರಿಕೆ ಕ್ರಮದಲ್ಲೇ ಸಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 400ಕ್ಕೂ ಹೆಚ್ಚು ಶಾಲೆಯ ಒಂದು ಲಕ್ಷ ಮಕ್ಕಳಿಗೆ 7.5 ಲಕ್ಷ ನೋಟ್‌ಬುಕ್ ವಿತರಿಸಲಾಗಿದೆ. ಪ್ರಸ್ತುತ ಕೊರೋನಾ ಕೊಂಚ ಅಡ್ಡಿಯಾದರೂ 120 ಶಾಲೆ ಮಕ್ಕಳಿಗೆ ಈಗಾಗಲೇ ನೋಟ್‌ಬುಕ್ ನೀಡಲಾಗಿದೆ. ಇನ್ನೆರಡು ತಿಂಗಳಲ್ಲಿ 150 ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಿಸುವ ಗುರಿ ಹೊಂದಲಾಗಿದೆ. ಈ ಸೌಲಭ್ಯ ಬಯಸುವವರು 98442 83356 ಸಂಪರ್ಕಿಸಬಹುದು.
22 ವರ್ಷದ ಹಿಂದೆ ನನ್ನ ತಂದೆ ತೀರಿಕೊಂಡಾಗ ಅವರ ಹೆಸರಿನಲ್ಲಿ 100 ಜನ ಮಕ್ಕಳಿಗೆ ನೋಟ್‌ಬುಕ್ ಹಂಚಿದೆ. ನಂತರದ ವರ್ಷಗಳಲ್ಲಿ ಸೇವಾಭಾರತಿಯಿಂದ ಈ ಚಟುವಟಿಕೆ ಆರಂಭಿಸಿದೆವು. ನನ್ನ ಅಳಿಲು ಸೇವೆಗೆ ಸಮಾನ ಮನಸ್ಕ ದಾನಿಗಳು ಕೈ ಜೋಡಿಸಿದರು. ಬಾಲ ಸಂಸ್ಕಾರ ಕೇಂದ್ರ ನಮ್ಮ ಉದ್ದೇಶವನ್ನು ಅರ್ಹರಿಗೆ ತಲುಪಿಸುವಲ್ಲಿ ನೆರವಾಗುತ್ತಿದೆ. ಪ್ರತಿ ವರ್ಷವೂ ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗ 7.5 ಲಕ್ಷ ನೋಟ್‌ಬುಕ್ ಹಂಚುವ ಮಟ್ಟಕ್ಕೆ ಬಂದಿದ್ದೇವೆ ಎಂಬುದೇ ಧನ್ಯತೆ ಮೂಡಿಸಿದೆ.
ಡಾ. ಎ.ಎಸ್. ಚಂದ್ರಶೇಖರ್ ಸೇವಾಭಾರತಿ ಕಾರ್ಯದರ್ಶಿ
(ಲೇಖನ: ಎ.ಆರ್. ರಘುರಾಮ್ ಶಿವಮೊಗ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post