ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಶಿವಮೊಗ್ಗ ರಘುರಾಮ |
ಶ್ರೀರಾಮನ ಪರಿವಾರದ ಪುರಾತನ ವಿಗ್ರಹಗಳಿರುವ ದೇವಾಲಯ ರಾಯರು ನೆಲೆಸುವ ತಾಣವಾಗುತ್ತದೆ, ಮುಂದೊಂದು ದಿನ ಶ್ರೀಮನ ಮಧ್ವಾಚಾರ್ಯ ಪರಂಪರೆಯ ಮಂತ್ರಾಲಯ ಮಠಕ್ಕೆ ಪೀಠಾಧೀಶರನ್ನು ಕೊಡುಗೆಯಾಗಿ ನೀಡುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಎಲ್ಲವೂ ಗುರು ಸಾರ್ವಭೌಮರ ಪವಾಡ. ಕರುನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿರುವ ಈ ರಾಯರ ಮಠ ಹಾಗಾಗಿಯೇ ದಕ್ಷಿಣ ಮಂತ್ರಾಲಯ ಎಂದು ಅನ್ವರ್ಥ ಪಡೆದಿದೆ. ಸಾವಿರ ಸಾವಿರ ಭಕ್ತರ ಶ್ರದ್ಧಾಕೇಂದ್ರವಾಗಿ ಖ್ಯಾತವಾಗಿದೆ.
ಮೈಸೂರಿನ ಹೃದಯ ಭಾಗದ ಸುಬ್ಬರಾಯನಕೆರೆ ದಡದಲ್ಲಿ ಒಂದು ರಾಮದೇವರ ದೇಗುಲ ಇತ್ತು. ಹಲವು ವರ್ಷದ ನಂತರ ಈ ದೇಗುಲದ ಮೇಲ್ವಿಚಾರಕ ರಾಮದಾಸಪ್ಪ ಎಂಬವರು ದೇಗುಲವನ್ನು ಮಂತ್ರಾಲಯ ಮಠದ ಅಂದಿನ ಪೀಠಾಧೀಶರಾಗಿದ್ದ ಶ್ರೀ ಸುವ್ರತೀಂದ್ರತೀರ್ಥರಿಗೆ ದಾನವಾಗಿ ನೀಡಿದರು. ನಂತರ ಪೀಠಕ್ಕೆ ವಿರಾಜಮಾನರಾದ ಶ್ರೀ ಸುಯಮೀಂದ್ರ ತೀರ್ಥರು 1948ರ ಆಶಾಢ ಶುದ್ಧ ನವಮಿಯಂದು ರಾಯರ ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠಾಪಿಸಿದರು. ಶ್ರೀರಾಮನ ಪರಿವಾರದ ಮೂರ್ತಿಗಳ ಕೆಳಗಿನ ವೇದಿಕೆಯಲ್ಲಿ ರಾಯರ ವೃಂದಾವನ ವಿರಾಜಮಾನವಾಯಿತು.ಅಂದಿನಿಂದ ಇದು ರಾಯರ ಮಹಿಮಾನ್ವಿತ ಭೂಮಿಕೆಯಾಯಿತು. ಪ್ರಮುಖರಾದ ವಿದ್ವಾನ್ ಹುಲಿಕುಂಟೆ ಶ್ರೀನಿವಾಸಾಚಾರ್, ಡಾ.ವೇದವ್ಯಾಸಾಚಾರ್, ರಾಜಾ ವೆಂಕಟ ರಾಘವೇಂದ್ರಾಚಾರ್, ರಾಜಾ ರಾಜಗೋಪಾಲಾಚಾರ್ ಈ ಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ರಿತ್ತಿ ಸುಬ್ಬಣ್ಣಾಚಾರ್ ಎಂಬವರು ಮೊದಲ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇದು 74 ವರ್ಷಗಳ ಇತಿಹಾಸ. ಮುಂದಿನ ವರ್ಷ ಈ ಮಠ ವಜ್ರ ಮಹೋತ್ಸವಕ್ಕೆ ಪದಾರ್ಪಣೆ ಮಾಡುತ್ತದೆ.
`ದಕ್ಷಿಣ ಮಂತ್ರಾಲಯ’
ಪ್ರತಿ ನಿತ್ಯವೂ ಪೂಜಾದಿಗಳ ನಂತರ ರಾಯರ ಪಾದೋದಕವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡಲಾಗುತ್ತದೆ. ಇದರಿಂದ ದುಷ್ಟ ಶಕ್ತಿಗಳೆಲ್ಲವೂ ನಿವಾರಣೆಯಾಗುತ್ತದೆ. ವೀರಾಸನದಲ್ಲಿರುವ ಆಂಜನೇಯ ಶೀಘ್ರಫಲದಾಯಕ. ವಾಯುಸ್ತುತಿ ಪುನಶ್ಚರಣಸಹಿತ ಮಧು ಅಭಿಷೇಕ ಮಾಡಿಸಿ ಧನ್ಯತೆ ಮೆರೆಯುವವರೂ ಅನೇಕರಿದ್ದಾರೆ. ರಾಮ, ಹನುಮ ಮತ್ತು ರಾಯರ ಭಕ್ತರ ಸಂಗಮಕ್ಷೇತ್ರವನ್ನು ಹಲವರು `ದಕ್ಷಿಣ ಮಂತ್ರಾಲಯ’ವೆಂದೇ ಕರೆಯುತ್ತಾರೆ. ಮಂತ್ರಾಲಯಕ್ಕೆ ಹೋಗುವ ಪ್ರೇರಣೆ ಮತ್ತು ಸಂಕಲ್ಪವೂ ಇಲ್ಲಾಗುತ್ತದೆ ಎನ್ನುತ್ತಾರೆ ಸ್ವಯಂಸೇವಕ ಕೆ. ಗುಂಡಾಚಾರ್. ಮಂತ್ರಾಲಯ ಮಠದ ಪದ್ಧತಿ ಅನುಸಾರವೇ ಇಲ್ಲಿ ನಿತ್ಯವೂ ವಿವಿಧ ಕೈಂಕರ್ಯ ನಡೆಯುತ್ತದೆ. ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಪಂಚಾಮೃತ, ಅರ್ಚನೆ, ಕನಕಾಭಿಷೇಕ, ಮಹಾ ನೈವೇದ್ಯ, ತೀರ್ಥ ಪ್ರಸಾದ ವಿನಿಯೋಗ, ಸಂಜೆ ರಥೋತ್ಸವ, ಡೋಲೋತ್ಸವ ನಡೆಯುತ್ತದೆ. ಪ್ರತಿ ಗುರುವಾರ ಜಾತ್ರೋಪಾದಿಯಲ್ಲಿ ಭಕ್ತರು ಸಂಗಮಿಸುವುದು ಗಮನೀಯ. ಅಂದು ಬೆಳಗಿನಿಂದ ರಾತ್ರಿ 10ರವರೆಗೆ ರಾಯರಿಗೆ ಭಕ್ತರೇ ರಾಯರಿಗೆ ದೀಪಾರತಿ ಮಾಡುತ್ತಾರೆ. ದೀಪಗಳನ್ನು ಮಠದಿಂದಲೇ ಕೊಡಲಾಗುತ್ತದೆ.
ಕಿಕ್ಕಿರಿದು ಸೇರುವ ಭಕ್ತಗಣ
ಸುಬ್ಬರಾಯನಕೆರೆ ಮಠದಲ್ಲಿ ಸೇವೆ ಸಲ್ಲಿಸಿದವರನ್ನು ಗುರು ರಾಯರು ಎಂದೂ ಕೈಬಿಟ್ಟಿಲ್ಲ. ತಾಪತ್ರಯ ನಾಶ ಮಾಡಿ, ಸಂತಾನ, ಸಂಪತ್ತುಗಳನ್ನು ನೀಡುವ ಮೂಲಕ ಪರಿಶುದ್ಧ ಭಕ್ತಿಯ ಮಹತ್ವವನ್ನು ಭಕ್ತರಲ್ಲಿ ಬಿತ್ತಿದ್ದಾರೆ. ಹಾಗಾಗಿ ಭಕ್ತಗಣ ಇಲ್ಲಿ ಸೇವೆಗೆ ಕಿಕ್ಕಿರಿದು ತುಂಬಿರುತ್ತದೆ. ಸತ್ಯತೆ ಇರುವ ಕಾರಣಕ್ಕೆ ಸಜ್ಜನರ ದಂಡು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತದೆ. ವಿದ್ಯೆ, ಉದ್ಯೋಗ, ವಿವಾಹ, ಸಂತಾನ ಅಪೇಕ್ಷಿತರು ಕೇವಲ ಪ್ರದಕ್ಷಿಣೆ ನಮಸ್ಕಾರದಿಂದಲೇ ಫಲ ಪಡೆದಿದ್ದಾರೆ.
ಇಲ್ಲಿ ಧರ್ಮಾಧಿಕಾರಿಯಾಗಿ 30 ವರ್ಷ ಅಧ್ಯಾತ್ಮ ಸಾಧನೆ ಮಾಡಿಕೊಂಡಿದ್ದ ಸುಪ್ರಜ್ಞೇಂದ್ರಾಚಾರ್ಯರು ಮಂತ್ರಾಲಯ ಮಠದ 38ನೇ ಪೀಠಾಧೀಶರಾಗಿ ವಿರಾಜಮಾನರಾಗಿದ್ದು ದಾಖಲಾರ್ಹ ಸಂಗತಿ. ಮಂತ್ರಾಲಯ ಹೊರತುಪಡಿಸಿದರೆ ರಾಯರ ಸನ್ನಿಧಿಯಲ್ಲಿ ಸಿದ್ಧಿಯಂತ್ರ ಕೊಡುವುದು ಇಲ್ಲಿ ಮಾತ್ರ. ರಾಯರಿಗೆ ಸೇವೆ ಸಲ್ಲಿಸುವವರಿಗೆ ಸಂತಾನಪ್ರಾಪ್ತಿ ಯಂತ್ರ, ಭೀತಿ ನಿವಾರಣಾ ಯಂತ್ರ ಮತ್ತು ಸರ್ವಸಿದ್ಧಿ ಯಂತ್ರ ನೀಡುತ್ತಾರೆ. ಇದನ್ನು ಧರಿಸಿದರೆ ಶೀಘ್ರಫಲ ದೊರಕುತ್ತದೆ. ಸರ್ವಸೇವೆ, ಕನಕಾಭಿಷೇಕ, ಪ್ರತಿ ಗುರುವಾರ ದೀಪಾರಾಧನೆ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಭಕ್ತರು ನಂಬಿದ್ದಾರೆ. ನಂಬಿಕೆ ಮತ್ತು ಶ್ರದ್ಧೆಗಳೇ ರಾಯರ ಕೃಪಾಸಿದ್ಧಿಗೆ ಪ್ರಧಾನ. ಇದೀಗ ರಾಯರ 351ನೇ ಆರಾಧನೆ ಅಂಗವಾಗಿ ಮೂರು ದಿನವೂ 10 ಸಾವಿರ ಜನರಿಗೆ ಮಹಾಪ್ರಸಾದ ವಿತರಣೆಗೆ ತಂಡ ಅಣಿಯಾಗಿದೆ.
ಏನೇನು ಚಟುವಟಿಕೆ
ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ, ಹರಿದಿನಗಳ ಆಚರಣೆ ಇಲ್ಲಿ ನಡೆಯುತ್ತದೆ. ನವರಾತ್ರಿಯಲ್ಲಿ ಶ್ರೀನಿವಾಸ ಕಲ್ಯಾಣ ಪಾರಾಯಣ, ಕಾರ್ತಿಕದಲ್ಲಿ ನಿತ್ಯವೂ ದೀಪೋತ್ಸವ, ಲಕ್ಷ ತುಳಸಿ-ಲಕ್ಷ ಪುಷ್ಪಾರ್ಚನೆ, ಅಕ್ಷಯ ತದಿಗೆ ರಾಯರಿಗೆ ಗಂಧಲೇಪನ, ಮಧ್ವನವಮಿ, ಟೀಕಾಪಂಚಮಿ, ಶ್ರಾವಣದಲ್ಲಿ ಆರಾಧನೋತ್ಸವ, ಫಾಲ್ಗುಣದಲ್ಲಿ ರಾಯರ ವರ್ಧಂತಿ ಸಪ್ತಾಹ, ಈ ಸಂದರ್ಭ ಸಂಗೀತ, ನೃತ್ಯ, ಉಪನ್ಯಾಸಗಳು ಮಾನಸೋಲ್ಲಾಸ ನೀಡುತ್ತವೆ. ಉಳಿದಂತೆ ನಾಮಕರಣ, ಅನ್ನಪ್ರಾಶನ, ಉಪನಯನ, ಹೋಮ, ಪಿತೃಕಾರ್ಯಗಳಿಗೆ ಇಲ್ಲಿ ಅವಕಾಶವಿದೆ ಎಂದು ವಿವರಿಸುತ್ತಾರೆ ಪುರೋಹಿತ ಮುರಳೀಧರ ಶರ್ಮ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post