ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮುಂಬರುವ ಕೋವಿಡ್ ನ ಸಂಭಾವ್ಯ ಮೂರನೆ ಅಲೆಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಹೇಳಿದರು.
ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವಾಕ್ಸಿಜನ್ ಜನರೇಟರ್ ಮತ್ತು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‌ಗಳ ಉದ್ಘಾಟನೆ, ಜೆ.ಎಸ್.ಎಸ್. ಶ್ರವಣ ಮಿತ್ರ ಆಪ್ ಹಾಗೂ ಕೋವಿಡ್ -19 ಕಾಂಪೆಂಡಿಯಮ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಹೊಸ ಐಸಿಯುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಹಾಕಲಾಗಿದ್ದ ಆಕ್ಸಿಜನ್ ಪ್ಲಾಂಟ್ ಅನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಔಷಧಿಗಳನ್ನು ತಯಾರಿಸಿಕೊಳ್ಳಲಾಗಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್ ಶೇ.97ರಷ್ಟಾಗಿದ್ದು, ಎರಡನೆ ಡೋಸ್ ವ್ಯಾಕ್ಸಿನೇಷನ್ ಶೇ.76 ರಷ್ಟಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಹೇಳಿದರು.
ವ್ಯಾಕ್ಸಿನೇಷನ್ ಶೇ 100ರಷ್ಟು ಆದಾಗ ಮಾತ್ರ ಕೋವಿಡ್ ನಿಂದ ಪಾರಾಗಬಹುದು. ಇದಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಇದರ ಜೊತೆಗೆ ಸರ್ಕಾರ ಕಠಿಣ ಕ್ರಮ ಕೈಗೊಳಲಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಅಕ್ಷರ ದಾಸೋಹ, ಅನ್ನ ದಾಸೋಹದ ಜೊತೆಗೂ ಜೆ.ಎಸ್.ಎಸ್. ಸಂಸ್ಥೆ ಆರೋಗ್ಯ ದಾಸೋಹವನ್ನು ನೀಡುತ್ತಿದೆ. ಸರ್ಕಾರಕ್ಕೆ ಕೋವಿಡ್ ಒಂದು ಸವಾಲಾಗಿತ್ತು. ಈ ಸವಾಲನ್ನು ಸರ್ಕಾರದ ಜೊತೆಗೆ ಹಲವಾರು ಸಂಘ ಸಂಸ್ಥೆಗಳು, ಆಸ್ಪತ್ರೆಗಳ ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್, ಮಹಾಪೌರರಾದ ಸುನಂದ ಪಾಲನೇತ್ರ, , ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post