ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಮ್ಮ ಕೆಲಸ ಕಾರ್ಯಗಳಿಂದ ಮತ್ತೊಬ್ಬರ ಕೆಡುಕಿಗೆ ಕಾರಣವಾಗದಂತೆ ಎಂದಿಗೂ ನೋಡಿಕೊಳ್ಳಬೇಕು ಎಂದು ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು Vishwaprasanna Thirtha Shri ಬೋಧನೆ ಮಾಡಿದರು.
ಮೈಸೂರಿನ ತಮ್ಮ 36 ನೆಯ ಚಾತುರ್ಮಾಸ್ಯ ವ್ರತದ Chathurmasa Vratha ಕೊನೆಯ ದಿನ ಶುಕ್ರವಾರದಂದು ಮೈಸೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರೋಟರಿ ಇನ್ನರ್ ವೀಲ್ ಕ್ಲಬ್’ಗಳ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿವಿಧ ಸವಲತ್ತು ವಿತರಣೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಖೈದಿಗಳಿಗೆ ರಾಮ ಮಂತ್ರ ಬೋಧಿಸಿ ಸಂದೇಶ ನೀಡಿದರು.
ತಿಳಿದೋ ತಿಳಿಯದೆಯೋ ಅಪರಾಧಗಳು ನಮ್ಮಿಂದಾಗುತ್ತವೆ. ನಾಗರಿಕ ಸಮಾಜದ ನಿಯಮಾನುಸಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ನಮ್ಮ ಅಂತಃಸಾಕ್ಷಿಯಾಗಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ಪರಿಶುದ್ಧರಾಗಲು ಸಾಧ್ಯವಿದೆ. ಮುಂದೆ ಇಂಥಹ ಅಪರಾಧಗಳನ್ನು ನಡೆಸದೇ ಒಳ್ಳೆಯ ನಾಗರಿಕರಾಗಿ ಬದುಕುವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.
ಮಾನವರೆನಿಸಿಕೊಂಡ ನಾವು ಸಂಘ ಜೀವಿಗಳು. ನಾವು ಯಾರೂ ಒಬ್ಬರೇ ಜೀವಿಸಲು ಕಷ್ಟ. ಹೀಗಿರುವಾಗ ಎಲ್ಲರೂ ಸುಖ ಸಂತೋಷಕ್ಕಾಗಿ ಹಂಬಲಿಸುತ್ತೇವೆ. ಆದರೆ ಕೆಲವು ಬಾರಿ ನಮ್ಮ ಸುಖ ಸಂತೋಷಕ್ಕಾಗಿ ಅನ್ಯರಿಗೆ ಕಷ್ಟ ದುಃಖ ಕೊಡುತ್ತೇವೆ. ಇದಕ್ಕಾಗಿ ಕೆಟ್ಟ ಕೆಲಸಗಳಿಗೂ ಮುಂದಾಗುತ್ತೇವೆ. ಅದರಿಂದಾಗಿ ಸಮಾಜದಲ್ಲಿ ಅಶಾಂತಿ ಅಪರಾಧಗಳು, ದುಃಖ ಕಷ್ಟ ನಷ್ಟಗಳು ಉಂಟಾಗುತ್ತವೆ. ಆದ್ದರಿಂದ ಅನ್ಯರಿಗೆ ದುಃಖವಾದರೂ ಪರವಾಗಿಲ್ಲ, ನಮ್ಮ ಸುಖ ಸಂತೋಷ ಮುಖ್ಯ ಎಂಬ ಮನಸ್ಥಿತಿಯಿಂದ ಹೊರಬಂದು ನಮ್ಮಸಂತೋಷ ಅನ್ಯರ ಸಂತೋಷಕ್ಕೂ ಕಾರಣವಾಗುವ ಸತ್ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು ಎಂದರು.
ಒಂದು ವೇಳೆ ಇನ್ನೊಬ್ಬರಿಗೆ ನಮ್ಮಿಂದ ಒಳಿತಾಗದಿದ್ದರೂ ಕೆಡುಕಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಇಹದಲ್ಲೂ ಪರದಲ್ಲೂ ನಮಗೆಲ್ಲ ಶ್ರೇಯಸ್ಸಿದೆ. ಅದನ್ನೇ ಧರ್ಮ ಎನ್ನುವುದು. ಅಂಥಹ ಸನಾತನ ಧರ್ಮವೇ ಶಾಶ್ವತವೂ ಆಗಿದೆ. ಬೇಟೆ, ದರೋಡೆ ಮೊದಲಾದ ಕೆಲಸಗಳಲ್ಲಿಯೇ ಬದುಕುತ್ತಿದ್ದ ವಾಲ್ಮೀಕಿ ಒಂದು ತಿರುವಿನಿಂದ ತಿಳಿವಳಿಕೆ ಪಡೆದು ರಾಮಮಂತ್ರವನ್ನು ಜಪಿಸುತ್ತಾ ರಾಮಾಯಣವನ್ನೇ ರಚಿಸಿ ಇವತ್ತು ಲೋಕವೆಲ್ಲ ಪೂಜಿಸುವ ಮಹರ್ಷಿಯಾದ. ಇದು ನಮಗೆ ಮಾದರಿಯಾಗಬೇಕು. ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸಂದೇಶ ನೀಡಿದರು.
ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಪಿ.ಎಸ್. ರಮೇಶ್, ಲಯನ್ಸ್, ರೋಟರಿ, ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post