ಮಹಾಲಯ ಎಂದರೇನು?
ಮಹಾ ಆಲಯ. ದೊಡ್ಡ ಮನೆ ಎಂದಾಗುತ್ತದೆ. ಆದರೆ ಇದರ ಅರ್ಥ ದೊಡ್ಡ ಕೂಡು ಕುಟುಂಬ ಎಂದು ಸೂಚಿಸುತ್ತದೆ.
ಇದನ್ನು ಸಕೃನ್ ಮಹಾಲಯ ಶ್ರಾದ್ಧ ಎಂದೂ ಕರೆದಿದ್ದಾರೆ. ರವಿಯ ಕನ್ಯಾರಾಶಿ ಸಂಚಾರ ಕಾಲದ ಕೃಷ್ಣ ಪಕ್ಷವು ಪಿತೃಗಳಿಗೆ ಸ್ವರ್ಗ ಲೋಕದಲ್ಲಿ ಸಿಗುವ ಆನಂದ ಕಾಲ. ಈ ಸಮಯದಲ್ಲಿ ಆಯಾಯ ಪಿತೃ ವಂಶಸ್ತರು ಇಡುವ ಪಿಂಡ, ತಿಲೋದಕಾದಿಗಳು ಪಿತೃಗಳಿಗೆ ಚೈತನ್ಯ ನೀಡುತ್ತದೆ. ಆಗ ಆ ಪಿತೃಗಳು ಸಾಕಷ್ಟು ಸ್ವರ್ಗ ಸುಖ ಅನುಭವಿಸಿ ಮತ್ತೆ ಇಳೆಗಿಳಿದು ಅದೇ ಕುಟುಂಬದಲ್ಲಿ ತಾನು ಪೂರ್ವ ಜನ್ಮದಲ್ಲಿ ಮಾಡಿದ ಪರಿಪೂರ್ಣವಾಗದ ಕೆಲಸಗಳನ್ನು ಪೂರ್ಣಗೊಳಿಸಿ ತೃಪ್ತರಾಗಿ ಮತ್ತೆಂದೂ ಬಾರದಂತಹ ಪುನರ್ಜನ್ಮದ ಸಂಕೋಲೆಯಿಂದ ಮುಕ್ತರಾಗಿ ವಿಷ್ಣುಪದವನ್ನು ಸೇರುತ್ತಾರೆ.
ಇನ್ನೊಂದೆಡೆ ಪಿತೃಗಳಿಗೆ ದೇವತೆಗಳಿಂದಲೂ ಬಲ ಜಾಸ್ತಿ. ಅವರು ತೃಪ್ತರಾದರೆ ನಮ್ಮ ಜೀವನದ ತೃಪ್ತಿಗೂ ಕಾರಣವಾಗುತ್ತಾರೆ. ತೃಪ್ತ ಜೀವನದಲ್ಲಿ ಮತ್ತೆ ಅದೇ ಸ್ವರ್ಗಸ್ಥ ಪಿತೃಗಳು ಜನಿಸಿ ಮೋಕ್ಷ ಹೊಂದಬಹುದು. ನೀವು ಯಾವುದೇ ಪಿತೃ ಕಾರ್ಯದಲ್ಲಿ ಕೊನೆಗೆ
॥ಸ್ವರ್ಗಂ ಗಚ್ಛತು ಪಿತರಃ ॥ ಎಂದೇ ಎಳ್ಳನ್ನು ಹೆಬ್ಬೆರಳಿನಿಂದ ಹಾರಿಸುತ್ತಾರೆ.
॥ಮೋಕ್ಷಂ ಗಚ್ಛತು ಪಿತರಃ ॥ ಎಂದು ಹೇಳುವುದಿಲ್ಲ. ಮತ್ತೆ ನಮ್ಮ ಹಿರಿಯರು ನಮ್ಮ ವಂಶದಲ್ಲಿ ಹುಟ್ಟಿಬರಲಿ ಎಂದರ್ಥ.
ಮಹಾಲಯದ ಒಂದು ಚಿಂತನೆಯಲ್ಲಿ:
ನಮ್ಮ ಋಷಿಮುನಿಗಳು ದಿವ್ಯದೃಷ್ಟಿಯಲ್ಲಿ ಇಡೀ ಬ್ರಹ್ಮಾಂಡವನ್ನೇ ತಿಳಿದವರು. ಹಾಗಾಗಿ ಶ್ರಾದ್ಧ ಕ್ರಿಯೆಗೆ ಬಹಳಷ್ಟು ಮಹತ್ವ ನೀಡಿದ್ದಾರೆ. ಮನುಷ್ಯನು ಪರಾವಲಂಬಿ. ತನ್ನ ಜೀವನಕ್ಕೆ ಅನೇಕ ಮನುಷ್ಯರ ಸಹಾಯ, ಪ್ರಾಣಿ ಪಕ್ಷಿಗಳ ಸಹಾಯ, ಇಡೀ ಪೃಥ್ವಿಯ ಚರಾಚರಗಳ ಸಹಾಯ ಪಡೆದು ಋಣಿಯಾಗಿರುತ್ತಾನೆ.
ಒಬ್ಬ ರೈತನು ಅವನ ಜೀವನೋಪಾಯಕ್ಕಾಗಿ ಬೆಳೆ ಬೆಳೆಸಿದರೂ ಅದರಿಂದ ನಮ್ಮ ಹೊಟ್ಟೆ ತುಂಬುತ್ತೋ ಇಲ್ಲವೋ? ಈಗಿನ advanced ಯುಗದಲ್ಲಿ ಉದಾಃ ಮನೆಗೆ ವಿದ್ಯುತ್ ಬೇಕು. ಅದರ maintenance ಕೆಲಸ line manಗಳು ಮಾಡುತ್ತಾರೆ. ಅವರ ಜೀವನೋಪಾಯ, ಲಾಭ ಆದರೂ ಅದು ನಮಗೆ ಪ್ರಯೋಜನ ಇದೆಯೋ ಇಲ್ಲವೋ? ಇಂತಹ ಕರ್ಮಚಾರಿಗಳು ಅಕಾಲ ಮೃತ್ಯುವಿಗೆ ಈಡಾದಾಗ ಅದು ನಮಗೂ ದೋಷ ಪ್ರದವೇ ಆಗುತ್ತದೆ. ಗಡಿ ರಕ್ಷಣಾ ಪಡೆಗಳು ಮಡಿದರೂ ಅದು ಕೂಡಾ ನಮಗೆ ದೋಷಪ್ರದವೇ ಆಗುತ್ತದೆ. ಯಾರೋ ಮಾಂಸಾಹಾರಿಗಳು ಪ್ರಾಣಿಗಳನ್ನು ಹತ್ಯೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಆ ಪ್ರಾಣಿಗೆ ದುರಂತ ಮರಣವಾಗುತ್ತದೆ. ಅದು ಕೂಡಾ ಮಾನವರಿಗೆ ದೋಷವೇ ಆಗುತ್ತದೆ. ಆದರೆ ಪರಾವಲಂಬಿ ಮನುಷ್ಯ ಬದುಕಿ ಕರ್ಮ ಮಾಡಬೇಕಾದರೆ ಇಂತಹ ದೋಷಗಳನ್ನು ಮಾಡುವುದು ಅನಿವಾರ್ಯ. ಹಾಗಾಗಿ ಇಡೀ ಜಗತ್ತಿನ ಸಂಕೋಲೆಯೊಳಗೆ ನಾವು ಪರಸ್ಪರ ಬಂಧಿತರಾಗಿದ್ದೇವೆ. ಇದರ ಪ್ರಾಯಶ್ಚಿತ್ತ ಹೇಗೆ ಎಂದು ಋಷಿಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಇಂತಹದ್ದರಲ್ಲಿ ಸರ್ವ ಪಿತೃ ಮಹಾಲಯವೂ ಪ್ರಧಾನ ಪ್ರಾಯಶ್ಚಿತ್ತ.
ಇದರಲ್ಲಿ ಅನೇಕ ಪಿಂಡಗಳು, ಬಲಿಹರಣಾದಿಗಳನ್ನು ಹಾಕುವಾಗ ಈ ಋಣದ ಉಚ್ಛಾರ ಬರುತ್ತದೆ. ಶಸ್ತ್ರಹತೇ, ಕ್ರೂರ ಮೃಗ ಹತೇ, ವಿದ್ಯುದ್ದಾಘಾತೇ ಮೃತಃ(ಹಿಂದಿನ ಕಾಲದಲ್ಲಿ ಇದು ಸಿಡಿಲು ಬಡಿದು. ಈಗ ವಿದ್ಯುತ್ ಶಾಕ್ ನಿಂದ ಮೃತ) ಇತ್ಯಾದಿ ಗತಿಸಿದವರಿಗೂ ಪಿಂಡ ಹಾಕಲಾಗುತ್ತದೆ. ಗತಿಸಿದ ದೂರದ ಬಂಧುಬಾಂಧವರಿಗೆ, ಹತ್ತಿರ ಸಂಬಂಧಿಗಳಿಗೆಲ್ಲ ಪಿಂಡ ತಿಲೋದಕಗಳಿವೆ.
ಪ್ರಧಾನವಾಗಿ ಪಿತುಃ ಪಿತಾಮಃ ಪ್ರಪಿತಾಮಃ; ಮಾತು ಮಾತಾಮಹಿ, ಪ್ರಪಿತಾಮಹಿ ಎಂದು ಆರು ಪಿಂಡಗಳು. ಇನ್ನೊಂದು ಭಾಗದಲ್ಲಿ ಉಭಯ ಕುಲ ಪಿತೃ ಅಂದರೆ ಮಾತೃಭಾಗ. ಮಾತಸ್ಯ ಪಿತುಪಿತಾಮಹಪ್ರಪಿತಾಮಹ, ಮಾತಸ್ಯ ಮಾತುಮಾತಾಮಹಿಪ್ರಪಿತಾಮಹಿ ಎಂದು ಆರು ಪಿಂಡ. ಇವೆಲ್ಲ ಪ್ರಧಾನ ಪಿಂಡಗಳು. ಅಂದರೆ ಇವರೆಲ್ಲ ನಮ್ಮ ಶರೀರಕ್ಕೆ ಕಾರಕರು DNA. ನಂತರ ಜೇಷ್ಠಾದಿ ಕನಿಷ್ಠ ಒಂದು ಪಿಂಡ. ಇದು ಈ ಪಿತೃವರ್ಗದಲ್ಲಿ ಎಲ್ಲೋ ಬಿಟ್ಟು ಹೋದಂತಹ ಹಿರಿಯ ಕಿರಿಯರಿಗೆ. ಇನ್ನು ಇದರ ಸುತ್ತ ತಂದೆಯ ಸಪತ್ನೀಕ ಸಹೋದರ ಸಹೋದರಿಯರು; ತಾಯಿಯ ಸಪತ್ನೀಕ ಸಹೋದರ ಸಹೋದರಿಯರು, ಹೆಣ್ಣು ಕೊಟ್ಟ ಅತ್ತೆ ಮಾವನವರ ಪರಿವಾರ. ಇದೆಲ್ಲ ಅಲ್ಲದೆ ಮೇಲೆ ಹೇಳಿದ ನಾವು ಯಾರಿಗೆಲ್ಲ ಋಣಿಗಳಾಗಿದ್ದೇವೋ ಅವರೆಲ್ಲರಿಗೆ ಬಲಿಹರಣದ ಮೂಲಕ ತಿಲತರ್ಪಣಾದಿಗಳನ್ನು ನೀಡಬೇಕು.(ಗತಿಸಿದವರಿಗೆ ಮಾತ್ರ ಪಿಂಡ ತಿಲೋದಕ) ಎಲ್ಲ ಬಿಟ್ಟರೆ ನಮ್ಮ ಮನೆಯ ನಾಯಿಯ ಉದ್ದಿಶ್ಯವಾಗಿ ಶಾನಕ್ಕೂ (ಹೊರಗಡೆ ಅಂದರೆ ಈ ಶ್ರಾದ್ಧ ಮಂಡಲದಿಂದ ಹೊರ ಆವರಣ) ಒಂದು ತುತ್ತು ಅನ್ನ ಇಡಬೇಕು.
ನಂತರ ಇವರೆಲ್ಲರಿಗೂ ಶೋಡಶೋಪಚಾರ ಪೂಜೆ ನೆರವೇರಿಸಿ, ಉಳಿದ ಪಿತೃ ಶೇಷವನ್ನು ಪಿತೃಗಣಗಳಿಗೆ ಇಡಬೇಕು. ಇದನ್ನು ವಾಯಸ ಬಲಿ ಎಂದರು. ಮನೆಯ ದಕ್ಷಿಣ ಭಾಗದಲ್ಲಿ ಇದನ್ನು ಇಡುತ್ತಾರೆ. ಇಲ್ಲಿಗೆ ಗತಿಸಿದ ಎಲ್ಲರಿಗೂ ನಾವು ಶ್ರದ್ಧಾಂಜಲಿ ಪೂರ್ವಕ ಸೇವೆ ಮಾಡಿದಂತಾಗುತ್ತದೆ.
ಯಾರು ಈ ಕಾರ್ಯ ಮಾಡಬೇಕು?
ತಂದೆತಾಯಿ ಇದ್ದವರಿಗೆ ಅರ್ಹತೆ ಇಲ್ಲ. ಪಿಂಡ ತಿಲತರ್ಪಣ ಅರ್ಹತೆ ಇರುವವರೆಲ್ಲರೂ ಮಾಡಬೇಕು. ಈಗ ಒಂದು ಮಾತಿದೆ. ನಿಮ್ಮಲ್ಲಿ ಮಹಾಲಯ ಇಲ್ವೋ? ಅಂತ ಕೇಳಿದರೆ ಇದೆ. ಆದರೆ ನಾವು ಮಾಡುವುದಿಲ್ಲ. ನಮ್ಮ ಮೂಲ ಮನೆಯಲ್ಲಿ ಮಾತ್ರ ಮಾಡ್ತಾರೆ. ಹಾಗಾಗಿ ಎಲ್ಲಾದರೂ ಕುಟುಂಬದಲ್ಲಿ ಒಬ್ಬರು ಮಾಡಿದರೆ ಸಾಕಲ್ವೇ? ಎನ್ನುತ್ತಾರೆ. ಮಾಡುವ ಮನಸ್ಸಿದ್ದರೆ, ಮಾಡುವ ಅರ್ಹತೆ ಇದ್ದರೆ ಪ್ರತಿಯೊಬ್ಬರೂ ಮಾಡಲೇ ಬೇಕಾದ ಕ್ರಿಯೆ ಇದು.
ಒಂದು ಮನೆಯಲ್ಲಿ ನಾಲ್ಕು ಜನ ಸಹೋದರರಿದ್ದರೆ ಅರ್ಹತೆ ಇರುವ ಎಲ್ಲರೂ ಮಾಡಿದರೆ ಎಲ್ಲರಿಗೂ ಪುಣ್ಯ ಫಲವಿದೆ. ಒಬ್ಬ ಮಾತ್ರ ಉಂಡರೆ ಹೊಟ್ಟೆ ತುಂಬುತ್ತದೆಯೇ? ಹಾಗೆಯೇ ಅರ್ಹರೆಲ್ಲರೂ ಮಾಡಿದರೆ ಉತ್ತಮ. ಭಾರತ ದೇಶದ ಧರ್ಮವು ಅತ್ಯಂತ ಶ್ರೇಷ್ಠ. ಇಡೀ ಜಗತ್ತಿನಲ್ಲಿ ಕೃತಜ್ಞರಾಗುವ ದೇಶವೆಂದರೆ ಭಾರತ. ಹಾಗಾಗಿ ಲಕ್ಷಾಂತರ ವರ್ಷದಿಂದ ಇರುವ ಈ ವೇದೋಕ್ತ ಧರ್ಮವು ಅಳಿವಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಾರಣವೇ ಈ ಪಿತೃ ಭಕ್ತಿ. ಚರಿತ್ರೆಯು ಎಲ್ಲಿಯವರೆಗೆ ನಮ್ಮಲ್ಲಿ ನೆನಪುಳಿಯುತ್ತೋ ಅಲ್ಲಿಯವರೆಗೆ ಈ ಧರ್ಮಕ್ಕೆ ಅಳಿವಿಲ್ಲ. ಅಂತಹ ಚರಿತ್ರೆಯನ್ನು ನೆನಪಿಸುವಂತಹ ಶ್ರದ್ಧಾ ಕಾರ್ಯವೇ ಮಹಾಲಯ ಶ್ರಾದ್ಧ.
ಲೇಖನ: ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ
Discussion about this post