ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮುಖ್ಯಮಂತ್ರಿ ಸಿದ್ದರಾಮಯ್ಯ CMSiddaramaiah ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ಅವರನ್ನು ಭೇಟಿಯಾಗಿ ಪ್ರಕೃತಿ ವಿಕೋಪ ಕುರಿತಂತೆ ಉನ್ನತ ಮಟ್ಟದ ಸಮಿತಿ ಸಭೆಯನ್ನು ಕೂಡಲೇ ಕರೆದು, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರ ಪೀಡಿತವಾಗಿವೆ. ಸುಮಾರು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ ರೈತರು. ಅದರಲ್ಲೂ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಬರ ಪರಿಹಾರ ಬಿಡುಗಡೆಗಾಗಿ ಮೊದಲ ಪ್ರಸ್ತಾವನೆ ಸಲ್ಲಿಸಿ ಮೂರು ತಿಂಗಳು ಕಳೆದಿದೆ. ಆದ್ದರಿಂದ ಕೂಡಲೇ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ,,18,177.44 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

Also read: ಭದ್ರಾವತಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಹತ್ಯೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿಗಳ ಬಂಧನ
ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಪರಿಗಣಿಸುವಾಗ ಕೇಂದ್ರ ಸರ್ಕಾರವು 2015-16ರ ಕೃಷಿ ಗಣತಿಯ ದತ್ತಾಂಶವನ್ನು ಪರಿಗಣಿಸುತ್ತಿದೆ. ಆದರೆ ಇದು 8 ವರ್ಷ ಹಳೆಯ ಮಾಹಿತಿಯಾಗಿದ್ದು, ಆಸ್ತಿ ವಿಭಜನೆ ಮತ್ತಿತರ ಕಾರಣಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಾಗಿದ್ದು, 83 ಲಕ್ಷಕ್ಕೂ ಹೆಚ್ಚಿದೆ. ಪಿಎಂ-ಕಿಸಾನ್ ಯೋಜನೆಗೆ ರಾಜ್ಯದ ರೈತರ ದತ್ತಾಂಶ ಸಂಗ್ರಹಿಸುವ ತಂತ್ರಾಂಶ ಫ್ರೂಟ್ಸ್‌ನಲ್ಲಿ ದಾಖಲಿಸಿದ ಮಾಹಿತಿಯನ್ನು ಪರಿಗಣಿಸಲಾಗುತ್ತಿದೆ. ಅಂತೆಯೇ ಬೆಳೆ ಪರಿಹಾರ ವಿತರಣೆಗೂ ಈ ದತ್ತಾಂಶವನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು










Discussion about this post