ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಾನಹಾನಿ ಪ್ರಕರಣದಲ್ಲಿ ಅಪರಾಧಿ ಎಂದು 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ವಯನಾಡು ಸಂಸದ ರಾಹುಲ್ ಗಾಂಧಿ Rahul Gandhi ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಈ ಕುರಿತು ಲೋಕಸಭಾ ಸೆಕ್ರೆಟರಿಯೇಟ್ ಅಧಿಸೂಚನೆ ಹೊರಡಿಸಿದ್ದು, 1951ರ ಪ್ರಜಾಪ್ರತಿನಿಧಿ ಕಾಯ್ದೆ 8ನೆಯ ಪರಿಚ್ಛೇದದೊಂದಿಗೆ ಭಾರತ ಸಂವಿಧಾನದ 102(1)(ಇ) ವಿಧಿಯ ನಿಯಮದನ್ವಯ ಮಾರ್ಚ್ 21ರ ನಿನ್ನೆಯಿಂದಲೇ ಜಾರಿಗೆ ಬರುವಂತೆ ಲೋಕಸಭಾ ಸದಸ್ಯತ್ವ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ ಎಂದು ಆದೇಶಿಸಲಾಗಿದೆ.

ಕಳೆದ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ , ಪ್ರಧಾನಿ ಮೋದಿ PM Modi ಓರ್ವ ಕಳ್ಳ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಅವರೆಲ್ಲರ ಉಪನಾಮ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ನಮ್ಮ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧಾರದಲ್ಲಿ ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ರಾಹುಲ್ ಗಾಂಧಿ ಅನರ್ಹ ಕುರಿತು ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳ ಸಂಸದರು ಸಂಕ್ಷಿಪ್ತ ಸಭೆ ನಡೆಸಿದ್ದರು. ಆನಂತರ ರಾಷ್ಟ್ರಪತಿ ಭವನದತ್ತ “ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿಜಯ್ ಚೌಕ್ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕೆಲವು ಸಂಸದರನ್ನು ವಿಜಯ್ ಚೌಕ್‌ನಿಂದ ವಶಕ್ಕೆ ಪಡೆಯಲಾಯಿತು.
ಇಂದು ಬೆಳಿಗ್ಗೆ ಲೋಕಸಭೆಗೆ ಆಗಮಿಸಿದ ರಾಹುಲ್ ಗಾಂಧಿಯವರು ಮಾತನಾಡಲು ಅವಕಾಶ ಕೋರಿದರು. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಗಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















