ಮೂಷಿಕ ವಾಹನವಲ್ಲ…ಬದಲಿಗೆ ಮೂಷಿಕಾಸುರ… ದಯವಿಟ್ಟು ತಲೆಬರಹ ಓದಿ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಲೇಖನ ಬರೆಯುತ್ತಿರುದು ಗಣಪತಿ ಕುರಿತು ಅಲ್ಲ. ಬದಲಿಗೆ ಗಣೇಶನ ವಾಹನ ಮೂಷಿಕನ ಕುರಿತಂತೆ.
ಮಂಗಳಮೂರ್ತಿ, ವಿಘ್ನ ಹರತಾ ಏಕದಂತ ಎಂಬ ಹೆಸರು ಹೊಂದಿರುವ ಇತರ ಎಲ್ಲ ದೇವರಿಂದ ಸ್ವತಃ ಮಹಾದೇವನಿಂದಲೂ ಪೂಜೆಗೊಳಪಡುವ ಗಣೇಶ ಇತರ ದೇವರಿಂಗಿಂತ ಸ್ವಲ್ಪ ವಿಭಿನ್ನ. ಆನೆ ಮುಖ ಮಾನವನ ದೇಹ ಹೊಂದಿರುವ ಗಣಪತಿಯ ವಾಹನ ಕೂಡಾ ಇತರ ದೇವರಿಂತ ಭಿನ್ನ. ಇಲಿಯು ಗಣಪತಿ ವಾಹನ.
ಗಣೇಶನ ವಿಗ್ರಹ ಎಲ್ಲಿರುತ್ತದೆಯೋ ಅಲ್ಲಿ ಮೂಷಿಕವನ್ನು ಸಹ ನಾವು ಕಾಣಬಹುದು. ಆದರೆ ಮೂಷಿಕವನ್ನು ಹೇಗೆ ವಾಹನವನ್ನಾಗಿ ಗಣಪತಿ ಆಯ್ಕೆ ಮಾಡಿಕೊಂಡ ಎಂಬ ಕಥೆ ಬಹು ಜನರಿಗೆ ತಿಳಿದಿಲ್ಲ.
ಈ ಮೂಷಿಕ ಒಬ್ಬ ರಾಕ್ಷಸ. ಈ ಕಥೆ ಬಹು ರೋಚಕ. ಮುಂದೆ ಓದಿ. ಒಮ್ಮೆ ಒಬ್ಬ ಗಂಧರ್ವ ಪಾರ್ವತಿ ಕುರಿತು ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿ ಬಂದ ದೇವಿಯಲ್ಲಿ ತನಗೆ ಅಮೃತ ಕೇಳುತ್ತಾನೆ. ಆದರೆ ಅದಕ್ಕೆ ತಾಯಿ ಒಪ್ಪಿಕೊಳ್ಳುವುದಿಲ್ಲ. ಇದರಿಂದ ಗಂಧರ್ವ ಇಲಿಯ ರೂಪ ಧರಿಸಿ ತಾಯಿ ಕೈಯಲ್ಲಿ ಇದ್ದ ಅಮೃತ ಪಾತ್ರೆಯಿಂದ ಅಮೃತ ಕದ್ದು ಸೇವಿಸುತ್ತಾನೆ. ಇದರಿಂದ ಕೋಪಗೊಂಡ ತಾಯಿ ಅವನಿಗೆ ಇಲಿಯ ರೂಪದ ಅಸುರನಾಗಿ ಮೂಷಿಕಾಸುರನಾಗುವಂತೆ ಶಪಿಸುತ್ತಾಳೆ.
ಮಾಹಿತಿಗಾಗಿ ಫೋಟೋ ಮೇಲೆ ಕ್ಲಿಕ್ ಮಾಡಿ
ಆಗ ತನ್ನ ಶಾಪಕ್ಕೆ ಪರಿಹಾರ ಏನೆಂದು ಕೇಳಿದಾಗ ಮುಂದೆ ಮಹಾ ಗಣಪತಿ ಭೂಮಿಯ ಮೇಲೆ ಅವತಾರ ಎತ್ತುವನು. ನೀನು ಅವನ ಶರಣು ಹೋಗಿ ಸೇವೆ ಮಾಡಬೇಕೆಂದು ಹೇಳುತ್ತಾಳೆ. ಹೀಗೆ. ಗಂಧರ್ವನೋರ್ವ ಅಸುರನಾಗಿ ಬದಲಾಗುತ್ತಾನೆ. ಅಮೃತ ಸೇವನೆಯಿಂದ ಆತ ಅಮರನಾಗುತ್ತಾನೆ.
ಮುಂದೆ ಅಸುರ ಗುರು ಶುಕ್ರಾಚಾರ್ಯರ ಬೋಧನೆಯಂತೆ ಜಗನ್ಮಾತೆಯಿಂದ ವರ ಪಡೆದ ಯುವತಿಯನ್ನು ಮೋಸ ಮಾಡಿ ವಿವಾಹ ಆಗುತ್ತಾನೆ.(ತಾನು ಸದಾ ಸೌಭಾಗ್ಯವತಿ ಆಗಿರಬೇಕೆಂದೂ, ತನ್ನ ಪತಿಯ ಜೀವಕ್ಕೆ ಅಪಾಯ ಬಂದಾಗ ತಾಯಿಯೇ ರಕ್ಷಣೆ ಮಾಡಬೇಕೆಂದು ವರ ಪಡೆದಿರುತ್ತಾಳೆ). ತನ್ನ ಪತ್ನಿ ಪಡೆದ ವರದ ಬಲದಿಂದ ದೇವಲೋಕದ ಮೇಲೆ ಯುದ್ಧ ಮಾಡಿ ಇಂದ್ರನನ್ನು ಸೋಲಿಸುತ್ತಾನೆ. ಇದರಿಂದ ದೇವತೆಗಳು ಗಣೇಶನ ಮೊರೆ ಇಡುತ್ತಾರೆ. ಇದರಿಂದ ಗಣೇಶ ಮೂಷಿಕಾಸುರನ ಜೊತೆ ಯುದ್ದಕ್ಕೆ ಬರುತ್ತಾನೆ.
ಯುದ್ಧ ತುಂಬಾ ಹೊತ್ತು ನಡೆದರೂ ಪ್ರಯೋಜನ ಆಗುವುದಿಲ್ಲ. ಯಾವುದೇ ಶಸ್ತ್ರ ಮೂಷಿಕಾಸುರನ ಮೇಲೆ ಪ್ರಭಾವ ಬೀರುವುದಿಲ್ಲ. ಕೊನೆಗೆ ಸಲಹೆ ಮೇರೆಗೆ ಗಣಪತಿ ತನ್ನ ದಂತ ಮುರಿದು ಅದನ್ನು ಮೂಷಿಕಾಸುರನ ಮೇಲೆ ಪ್ರಯೋಗ ಮಾಡುತ್ತಾನೆ. ಅದರಿಂದ ಮೂಷಿಕಾಸುರನ ಜೀವಕ್ಕೆ ಅಪಾಯ ಬರುತ್ತದೆ. ಹೀಗಾಗಿ ಜಗನ್ಮಾತೆ ಪಾರ್ವತಿ ತನ್ನ ಬಳೆ ಬಳಸಿ ಅವನ ಜೀವ ರಕ್ಷಣೆ ಮಾಡುತ್ತಾಳೆ ಮತ್ತು ಗಣೇಶನ ಬಳಿ ತನ್ನ ದಂತ ಮರಳಿ ಪಡೆಯುವಂತೆ ಹೇಳುತ್ತಾಳೆ.
ಗಣೇಶ ತನ್ನ ದಂತಕ್ಕೆ ಮರಳಿ ಬರುವಂತೆ ಹೇಳುತ್ತಾನೆ. ಮೂಷಿಕಾಸುರ ಗಣೇಶನಿಗೆ ಶರಣಾಗಿ ಕ್ಷಮೆ ಬೇಡುತ್ತಾನೆ. ದಯಾಳು ಗಣೇಶ ಅವನನ್ನು ಕ್ಷಮಿಸಿ ತನ್ನ ವಾಹನವಾಗುವಂತೆ ಕೇಳುತ್ತಾನೆ. ಅದನ್ನು ಮೂಷಿಕಾಸುರ ಸಂತಸದಿಂದ ಒಪ್ಪಿಕೊಳ್ಳುತ್ತಾನೆ. ಜಗನ್ಮಾತೆ ಮೂಷಿಕಾಸುರನ ಪತ್ನಿಗೆ ಶೀಘ್ರದಲ್ಲೇ ಪತಿಯನ್ನು ನೀನು ಸೇರುತ್ತಿ ಎಂದು ಭರವಸೆ ನೀಡುತ್ತಾಳೆ. ಹೀಗೆ ಗಣೇಶನ ವಾಹನ ರೂಪದಲ್ಲಿ ಮೂಷಿಕಾಸುರ ಗಣೇಶನ ಸೇವೆ ಮಾಡುತ್ತಾನೆ. ಇದು ಗಣೇಶನ ವಾಹನ ಮೂಷಿಕದ ಕತೆಯಾಗಿದೆ.
-ರೋಹನ್ ಪಿಂಟೋ, ಗೇರುಸೊಪ್ಪ
Discussion about this post