ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಡಿ.25ರ ಶುಕ್ರವಾರ ವೈಕುಂಠ ಏಕಾದಶಿ ನಡೆಯಲಿದ್ದು, ಪ್ರತಿವರ್ಷದಂತೆ ಈ ಬಾರಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ವೈಕುಂಠ ದರ್ಶನದ ವಿಶೇಷ ಅಲಂಕಾರ ಇರುವುದಿಲ್ಲ ಎಂದು ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಅವರು, ಡಿ.25ರಿಂದ 26ರವರೆಗೂ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನಡೆಯಲಿರುವ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಪ್ರಸ್ತುತ ಕೋವಿಡ್19 ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿ ವಿಶೇಷ ಅಲಂಕಾರ ಇರುವುದಿಲ್ಲ. ಬದಲಾಗಿ, ದೇವಾಲಯದ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಾಂಕೇತಿಕವಾಗಿ ಹೋಮ, ಪ್ರಾಯಶ್ಚಿತ್ತಾದಿಗಳನ್ನು ನಡೆಸಲಿದ್ದು, ಉತ್ಸವವೂ ಸಹ ದೇವಾಲಯದ ಒಳಪ್ರಾಕಾರದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು, ಸರಳವಾಗಿ ನಡೆಯುವ ವೈಕುಂಠ ಏಕಾದಶಿ ಕಾರ್ಯಕ್ರಮದ ವೇಳೆ ಯಾವುದೇ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶವಿರುವುದಿಲ್ಲ. ಅಲ್ಲದೇ ತೀರ್ಥ, ಪ್ರಸಾದ ವಿತರಣೆಯೂ ಸಹ ಇರುವುದಿಲ್ಲ. ಸೀಮಿತ ಭಕ್ತರಿಗೆ ಮಾತ್ರ ಅವಕಾಶವಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post