ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದುಡ್ಡಿರುವ ಒಬ್ಬಾತನ ಹಿಂದೆ ಆತನಿಗೆ ಪ್ರತಿಭೆ ಇದೆಯೋ ಇಲ್ಲವೋ ಎಂದು ಯೋಚಿಸುವಷ್ಟು ತಾಳ್ಮೆಯೂ ಇರದ ನಮ್ಮ ಜನಗಳು, ಪ್ರಚಾರಕ್ಕಾಗಿ ಅಲೆದಾಡುವವರಿಗೆ ಪ್ರಚಾರ ಕೊಟ್ಟು ತಾವು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಇದು ಅವರ ಮೂರ್ಖತನದ ಪರಮಾವಧಿಯೋ ಇಲ್ಲ ಗೀಳೋ ತಿಳಿದಿಲ್ಲ. ಆದರೆ ಇದರ ನಡುವೆ ಒಂದಷ್ಟು ಪ್ರತಿಭೆಗಳು ಎಲೆಮರೆ ಕಾಯಿಯಾಗಿ ಬಿಡುತ್ತಾರೆ.
ಇಂತಹವರನ್ನು ಪರಿಚಯಿಸುವ ಹಿಂದೆ ಯಾವ ಲಾಭವೂ ನನಗಿಲ್ಲ ಆದರೂ ಕಾಣದೇ ಹೋದ ಕಲಾವಿದನ ಬಗ್ಗೆ ಬರೆಯುವ ಹುಚ್ಚು ಆಸೆಯಷ್ಟೇ. ಕೆಲವೊಂದು ವ್ಯಕ್ತಿಗಳೇ ಹಾಗೇ, ಅವರು ಮುಖ್ಯವಾಹಿನಿಗೆ ಬಂದರೆ ಬಹುಷಃ ನಮ್ಮ ಸಾಹಿತ್ಯ, ಸಂಗೀತ, ಕಲಾ ಲೋಕಕ್ಕೆ ಅವರಷ್ಟು ಒಳ್ಳೆಯ ಪ್ರತಿಭೆಗಳು ಸಿಗಲಾರರು. ಇಂತಹ ಪ್ರತಿಭೆಗಳಲ್ಲಿ ಒಂದು ಪ್ರತಿಭೆ ಇವತ್ತು ನಿಮ್ಮ ಮುಂದೆ.
ಇವರು ಅರ್ತಿದ ಪೂ ಆಯ ದಾಯೆ,
ತೆರಿಯಂದೆ ಮೋಕೆದ ಮಾಯೆ,
ಎನ್ನುಡಲ್ ದಂಕ್ ದ್ ಪೋಯನಾ???
(ಅತ್ತಿಯ ಹೂವಾದೆ ಏಕೆ, ಅರಿಯದೆ ಪ್ರೀತಿಯ ಮಾಯೆ, ನನ್ನೊಲವ ತುಳಿದು ಹೋದೆಯಾ??)
ಎನ್ನುತ್ತಾ ತಾವೇ ಒಂದರ್ಥದಲ್ಲಿ ಅತ್ತಿಯ ಹೂವಾಗಿ, ಪ್ರತಿಭೆ ಬೆಟ್ಟದಷ್ಟಿದ್ದರೂ ಮುಖ್ಯವಾಹಿನಿಗೆ ಬರದೇ, ಇಂದಿಗೂ ಹಲವಾರು ಭರ್ಜರಿ ಹಾಡುಗಳ ಸಾಹಿತ್ಯ ಗೀಚುತ್ತಾ, ಯಾವುದೇ ವಾಹಿನಿಗಳಿಗೆ ಕಾಣದೇ ಹೋದವರು.
ಸರಿಸುಮಾರು ವರ್ಷಗಳು ಕಳೆದರೂ ಇಂದಿಗೂ ಅರ್ತಿದ ಪೂ, ಮನಸ್ವಿ, ಕುಡ್ಲದ ಕೋರಿ ರೊಟ್ಟಿ, ಕ್ಯಾಂಪಸ್ ಕಿನ್ನರಿ, ಪೇರ್ ಕಡಲ್, ಪಟ್ಟದರಸೆ, ಮಂಡ್ಯದಬೆಲ್ಲ, ಉಡಲ ಬರಿಟ್, ಕಣ್ಣ ಮುಚ್ಚಾಲೆ, ವಾತ್ಸಲ್ಯ, ಉರಿ ಪಗರಿ, ದಿವಾನ, ತಬುರೆ, ಏತೋ ಜನ್ಮ, ಅನುರಾಗೊದ ಅಲೆ, ನನ್ನವಳು, ರಂಜಿತ ರಾಗ ಹಾಡುಗಳು ಜನಮಾನಸದಲ್ಲಿ ಭರ್ಜರಿಯಾಗಿ ಕುಳಿತು, ನಿನ್ನೆ ಮೊನ್ನೆ ಬಿಡುಗೊಂಡಿರುವ ಹಾಡಿನಂತೆ ಹೊಸದಾಗಿವೆ.
ಯಾವುದೋ ಎರಡು ಮೂರು ಹಾಡು ಬರೆದು ಪ್ರಚಾರ ಪಡ್ಕೊಂಡು ಸನ್ಮಾನ ಮಾಡಿಕೊಳ್ಳುವ ಜನರ ಮಧ್ಯೆ, ಇಂತಹ ಯಶಸ್ವೀ ಹಾಡು ಕೊಟ್ಟ ಮಹಾಶಯರು ಮೌನವಾಗಿಬಿಟ್ಟಿದ್ದಾರೆ.
ಇವರು ಯಾರು ಅಂತ ಇಗಾಗಲೇ ತಿಳಿದಿರಬೇಕಲ್ಲಾ?
ಹೌದು ಖಂಡಿತವಾಗಿಯೂ ಈ ಲೇಖನ, ಈ ಪದಗಳು ಗೌರವಪೂರ್ವಕ ಪ್ರೀತಿಯಿಂದ ಯೋಗಿಶ್ ಎ.ಎನ್. ಅಡೆಕಳಕಟ್ಟೆ ಇವರ ಸಾಹಿತ್ಯ ಚರಣಗಳಿಗೆ ಸಮರ್ಪಣೆಯಾಗುತ್ತಿದೆ.
ಇವರು ಮೂಲತಃ ಮಂಜೇಶ್ವರದ ಅಡೆಕಳಕಟ್ಟೆಯವರು. ಚಿಕ್ಕ ವಯಸ್ಸಿನಿಂದಲೇ ಪ್ರಾಸ ಪದಗಳನ್ನು ಜೋಡಿ ಮಾಡಿ ಬರೆಯುವ ಹವ್ಯಾಸ ಹೊಂದಿದ್ದ ಇವರು, ಬೆಳೆದಿದ್ದು ಮಧ್ಯಮ ವರ್ಗದಲ್ಲೇ.
ಸಾಮಾನ್ಯವಾಗಿ ಮಧ್ಯಮ ವರ್ಗ ಅಂದಮೇಲೆ ಅಲ್ಲಿ ಸಮಸ್ಯೆಗಳು ಕಷ್ಟಗಳು ಇದ್ದೇ ಇರುತ್ತದೆ. ಇವರೂ ಅವುಗಳಲ್ಲೇ ಪಳಗಿದವರು. ತನ್ನ ಅತ್ಯಂತ ನೋವಿನ ಸಂದರ್ಭದಲ್ಲೂ ಅದರಲ್ಲೂ ಒಳ್ಳೆಯ ವಿಚಾರಗಳನ್ನು ಹುಡುಕುವವನೇ ಪರಿಪೂರ್ಣ ಕಲಾವಿದ ಅಲ್ಲವೇ?
ಇಂತಹ ಪರಿಪೂರ್ಣ ಕಲಾವಿದರು ನಮ್ಮಲ್ಲಿ ಲಕ್ಷಕೊಬ್ಬರು ಅಲ್ಲವೇ? ಇನ್ನೂ ಎಷ್ಟೇ ವರುಷಗಳು ಕಳೆದರೂ ಯೋಗೀಶ್ ರವರ ಸಾಹಿತ್ಯಕ್ಕೆ ಅವರೇ ಸಾಟಿ. ಇಷ್ಟಕ್ಕೂ ಇವರು ತುಳು, ಕನ್ನಡಕ್ಕೆ ಮಾತ್ರ ಮೀಸಲು ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ, ಇವರು ಮಲಯಾಳಂನಲ್ಲೂ ತಮ್ಮ ಚಾಣಕ್ಯತೆ ಮೆರೆದವರು. ಇದರ ಜೊತೆಗೆ ಇವರೊಬ್ಬ ನಟ.
ಚೀಪೆ ಅತ್ತ್ ಕಯ್ಪೆ ಎಂಬ ನಾಟಕ, ಮಂಕು ಭಾಯ್ ಪಾಕ್ಸಿ ರಾಣಿ, ರೆಬಲ್ ಹುಡುಗ್ರು, ಮುದುಡಿದ ಎಲೆ ಸಿನೇಮಾಗಳಿಗೂ ಸಾಹಿತ್ಯ ರಚಿಸಿದ್ದಾರೆ. ಜೊತೆಗೆ ಮಸಣದ ಜಾತ್ರೆ, ವಿಸ್ಮಯ ಎಂಬ ಆಲ್ಬಂಗಳ ಕರ್ತ್ ಇವರೇ ಆಗಿದ್ದಾರೆ.
ಇವರ ಸಾಹಿತ್ಯದ ಪರಿಚಯದಲ್ಲಿ ಇವರ ವ್ಯಕ್ತಿತ್ವದ ಪರಿಚಯವೇ ಮರೆತು ಹೋಗಿಬಿಡುತ್ತದೆ. ಇನ್ನೂ ಹಲವಾರು ಹಾಡುಗಳು ಬಿಡುಗಡೆಯ ಹೊಸ್ತಿಲಲ್ಲಿದೆ. ಇವೆಲ್ಲವನ್ನೂ ನೋಡಿ ಖಂಡಿತಾ ಮನಸ್ಸಿಗೆ ಇಷ್ಟ ಆಗುತ್ತದೆ. ಇಂತಹ ಸಾವಿರಾರು ಕಲಾವಿದರು ನಮ್ಮ ನಡುವೆ ಇದ್ದಾರೆ. ಅಂತಹವರನ್ನು ಮುಂದೆ ತಂದು ಹತ್ತು ಜನರಿಗೆ ಪರಿಚಯಿಸಿದರೆ ಅವರಿಂದ ಮತ್ತಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಎಲ್ಲೋ ಒಂದು ಕಡೆ ಮೌನವಾಗಿ ಗೀಚುತ್ತಾ ಒಂದರ ಮೇಲೊಂದು ಹಾಡುಗಳನ್ನು ಕೊಟ್ಟು ತಾನು ಎಲ್ಲೋ ಒಂದು ಕಡೆ ಮೌನವಾಗಿ ಕುಳಿತ ತಪಸ್ವಿ ಇವರು. ಪ್ರಶಸ್ತಿ, ಹೊಗಳಿಕೆ ಹಿಂದೆ ಓಡುವ ಸಾವಿರ ಜನರಿಗೆ ತಿಳಿದೋ ತಿಳಿಯದೆಯೋ ನಾವು ಮಣೆ ಹಾಕಿ ಅಟ್ಟಕ್ಕೇರಿಸಿ ಬಿಡುತ್ತೇವೆ. ಆದರೆ ಇಂತಹ ಕಲಾವಿದರು ಅಂತವರ ಮಧ್ಯದಲ್ಲಿ ನಲುಗುತಿದ್ದಾರೆ.
ಇನ್ನಾದರೂ ಈ ಅಸಲಿ ಕಲಾವಿದರನ್ನು ಮತ್ತು ನಕಲಿ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಲಿ. ಇಂತಹ ಕಲಾವಿದರು ಪ್ರಖ್ಯಾತಿ ಹೊಂದಲಿ. ಅವರಿಗೆ ಸಿಗಬೇಕಾದ ಗೌರವ ದೊರೆಯಲಿ ಎಂಬುದೇ ಈ ಬರಹದ ಆಶಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post