ಶಿವಮೊಗ್ಗ: ‘ಶಾಲಾ ಬಾಲಕ ಶಿಕ್ಷಕರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ’
‘ರೈತರ ಆತ್ಮಹತ್ಯೆ ಪ್ರಕರಣಗಳು’
‘ಖ್ಯಾತ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡರು’
‘ಸಾಲದ ಭಾರ ತಾಳಲಾರದೆ 5 ಜನರ ಇಡೀ ಕುಟುಂಬ ಚಾಮರಾಜಪೇಟೆಯಲ್ಲಿ ಆತ್ಮಹತ್ಯೆ’
‘ರೋತಕ್ ಮೆಡಿಕಲ್ ಕಾಲೇಜಿನಲ್ಲಿ ಧಾರವಾಡದ ವೈದ್ಯ ವಿದ್ಯಾರ್ಥಿ ನೇಣಿಗೆ ಶರಣು’
ಕರ್ನಾಟಕ ಭಾರತದಲ್ಲಿಯೇ ಆತ್ಮಹತ್ಯೆ ಪ್ರಕರಣಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದೆ. ಪ್ರತಿ ಆತ್ಮಹತ್ಯೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದರೆ, ಅಂದಾಜು 135 ಜನ ಆ ಆತ್ಮಹತ್ಯೆಯಿಂದ ವಿವಿಧ ರೀತಿಗಳಲ್ಲಿ ನೋವಿಗೊಳಗಾಗುತ್ತಾರೆ! ಅಂದರೆ ‘ಆತ್ಮಹತ್ಯೆ’ ಎನ್ನುವುದು ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯಲ್ಲ. ಅದು ಇಡೀ ಸಮಾಜಕ್ಕೆ ಸಂಬಂಧಿಸಿದ್ದು.
ಆತ್ಮಹತ್ಯೆಯನ್ನು ತಡೆಯುವಲ್ಲಿ ಒಬ್ಬ ಸ್ನೇಹಿತ-ಸಂಬಂಧಿ-ನೆರೆಹೊರೆ-ಸಹೋದ್ಯೋಗಿ ಯಾರೂ ಸಹಾಯಕರಾಗಲು ಸಾಧ್ಯವಿದೆ. ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವುದು, ಇತರರಲ್ಲಿ ಅರಿವು ಮೂಡಿಸುವುದು, ಆತ್ಮಹತ್ಯೆಯ ಬಗೆಗಿನ ತಪ್ಪು ನಂಬಿಕೆಗಳನ್ನು ಹೋಗಲಾಡಿಸುವುದು, ನಿಮ್ಮದೇ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಇವು ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ಹಿನ್ನೆಲೆಯಲ್ಲಿ ವಿಶ್ವ ಆತ್ಮಹತ್ಯಾ ತಡೆಯುವಿಕೆಯ ದಿನವನ್ನು ಆಚರಿಸುವುದಕ್ಕಾಗಿ ಸೆ.8ರ ನಾಳೆ ಬೆಳಿಗ್ಗೆ 7 ಗಂಟೆಗೆ ‘‘ಆತ್ಮಹತ್ಯೆ ತಡೆಯುವುದಕ್ಕಾಗಿ ಒಟ್ಟಿಗೆ ದುಡಿಯೋಣ’’ ಎಂಬ ಧ್ಯೇಯದಡಿ ಭಾರತೀಯ ಮನೋ ವೈದ್ಯಕೀಯ ಸಂಸ್ಥೆ, ದಕ್ಷಿಣ ವಲಯ ಶಾಖೆಯ ನೇತೃತ್ವದಲ್ಲಿ, ಕ್ಷೇಮ ಟ್ರಸ್ಟ್, ಭಾರತೀಯ ವೈದ್ಯಕೀಯ ಸಂಘ, ಸಹ್ಯಾದ್ರಿ ನರ-ಮಾನಸಿಕ ವೈದ್ಯಕೀಯ ಸಂಘ, ರೋಟರಿ ಮಿಡ್ಟೌನ್, ರೋಟರಿ ರಿವರ್ ಸೈಡ್ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ಸಂಸ್ಥೆಗಳು ಈ ನಡಿಗೆಯನ್ನು ಸಂಯುಕ್ತವಾಗಿ ಸಂಘಟಿಸಿವೆ.
ನಡಿಗೆ ಐಎಂಎ ಹಾಲ್ ನಿಂದ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ನೆಹರೂ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಆಸಕ್ತ ಸಾರ್ವಜನಿಕರು ಪಾಲ್ಗೊಳ್ಳಲು ಕೋರಲಾಗಿದೆ.
‘‘ಬನ್ನಿ, ಆತ್ಮಹತ್ಯೆ ತಡೆಯುವುದಕ್ಕಾಗಿ ಒಟ್ಟಿಗೆ ದುಡಿಯೋಣ’’
Discussion about this post