ಶಿವಮೊಗ್ಗ: ಫೆ.3ರಿಂದ ಆರಂಭವಾಗಲಿರುವ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಬದಲಾವಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಗ್ರಹ ಕೇಳಿಬಂದಿದೆ.
ಸಂಸದ ಬಿ.ವೈ. ರಾಘವೇಂದ್ರ ಈಗಾಗಲೇ ಘೋಷಿಸಿರುವಂತೆ, ಫೆ.3ರಿಂದ ನೂತನ ರೈಲು ಸಂಚಾರ ಆರಂಭವಾಗಲಿದೆ. ನಿಗದಿಯಂತೆ, ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು 10 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 5.30ಕ್ಕೆ ಹೊರಡುವ ರೈಲು ರಾತ್ರಿ 10 ಗಂಟೆಗೆ ಶಿವಮೊಗ್ಗಕ್ಕೆ ತಲುಪಲಿದೆ.
ಆದರೆ, ಈಗ ನಿಗದಿಯಾಗಿರುವ ಸಂಚಾರ ಸಮಯ ಬದಲಾವಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಗ್ರಹ ಕೇಳಿಬಂದಿದೆ.
ಬೆಳಗ್ಗೆ ಶಿವಮೊಗ್ಗದಿಂದ ಬೆಂಗಳೂರು ತಲುಪಲು 4 ಗಂಟೆಗೆ ಪ್ಯಾಸೆಂಜರ್ ರೈಲು, 6.40ಕ್ಕೆ ಇಂಟರ್ ಸಿಟಿ ನೇರ ರೈಲುಗಳಿವೆ. ಹಾಗೆಯೇ, 7.50ಕ್ಕೆ ಹೊರಟು ಮೈಸೂರು ಪ್ಯಾಸೆಂಜರ್ ಮೂಲಕ ಬೀರೂರು ತಲುಪಿದರೆ, 10.50ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರು ತಲುಪುವ ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು ಸಂಪರ್ಕ ದೊರೆಯುತ್ತದೆ. ಅದಲ್ಲದೆ, ವಾರಕ್ಕೆ ಒಮ್ಮೆ, ಎರಡು ಬಾರಿ, ಮೂರು ಬಾರಿ ಸಂಚರಿಸುವ ವಿಶೇಷ ರೈಲುಗಳ ಸಂಪರ್ಕವೂ ಸಹ ದೊರೆಯುತ್ತದೆ.
ಆದರೆ, ಬೆಂಗಳೂರಿನಿಂದ ಶಿವಮೊಗ್ಗ ನೇರವಾಗಿ ತಲುಪಲು, ಬೆಳಗ್ಗೆ 6.30ಕ್ಕೆ ಬೆಂಗಳೂರು ಬಿಡುವ ಪ್ಯಾಸೆಂಜರ್ ರೈಲು ಮಾತ್ರ ಇದೆ. ಇದರ ಹೊರತಾಗಿ ವಾರದಲ್ಲಿ ಮೂರು ದಿನ ಯಶವಂತಪುರದಿಂದ ಶಿವಮೊಗ್ಗಕ್ಕೆ ಬೆಳಗ್ಗೆ 9 ಗಂಟೆಗೆ ವಿಶೇಷ ರೈಲು ಸಂಚಾರ ಮಾಡುತ್ತದೆ. ಇದರ ಹೊರತಾಗಿ ಮುಂಜಾನೆಯೆ ಬೆಂಗಳೂರಿನಿಂದ ಹೊರಟು 10.30ರ ಒಳಗೆ ಶಿವಮೊಗ್ಗ ತಲುಪುವ ಯಾವುದೇ ಎಕ್ಸ್’ಪ್ರೆಸ್ ರೈಲುಗಳಿಲ್ಲ. ಹೀಗಾಗಿ, ನೂತನ ಜನಶತಾಬ್ದಿ ರೈಲಿನ ಸಂಚಾರವನ್ನು ಬದಲಾವನೆ ಮಾಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿಬಂದಿದೆ.
ಅದೇ ರೀತಿ, ಈಗ ನಿಗದಿಯಾಗಿರುವ ಸಮಯವೇ ಉತ್ತಮವಾಗಿದ್ದು, ಇದು ಬೆಂಗಳೂರಿಗೆ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಸಹಕಾರಿಯಾಗಿದೆ ಎಂಬ ಅಭಿಪ್ರಾಯವೂ ಸಹ ಕೇಳಿಬಂದಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿರುವ ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯಗಳು ಹೀಗಿವೆ:
ಸದ್ಯ ಈ ರೈಲು ಸೌಲಭ್ಯ ಬಂದಿರುವುದು ಅದೃಷ್ಟವೇ ಸರಿ. ಸಮಯ ಈಗ ಸರಿಯಾಗೇ ಇದೆ. ಚತುಷ್ಪಥ ಹಳಿ ವ್ಯವಸ್ಥೆ ಆದನಂತರ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆ ಅವಧಿಯ ಪ್ರಯಾಣ ಸಾಕಾಗುತ್ತದೆ. ಆ ವೇಳೆಯಲ್ಲಿ ಹೊರಡುವ ಸೇರುವ ಸಮಯ ಮಾರ್ಪಾಡು ಮಾಡಬಹುದಾಗಿದೆ. ತಮಗಿರುವ ಅಲ್ಪ ಅವಧಿಯಲ್ಲೇ ಸಂಸದರು ಸಾರ್ವಜನಿಕ ಉಪಯೋಗಿ ಕೆಲಸ ಮಾಡಿದ್ದಾರೆ. ಉದ್ಯಮಿಗಳಿಗೆ ತುಂಬ ನೆರವಾಗಿದೆ.
– ಕೆ.ಎನ್. ಗೋಪಿನಾಥ್, ಹೋಟೆಲ್ ಉದ್ಯಮಿ, ಶಿವಮೊಗ್ಗ
ಈಗಿರುವ ವೇಳೆ ಸರಿ. ಆದರೆ ನಿತ್ಯವೂ ನಮಗೆ ಈ ರೈಲು ಓಡಬೇಕು. ಬಹಳಷ್ಟು ಮಂದಿಗೆ ಬೆಂಗಳೂರಿನಲ್ಲಿ ಕೆಲಸವಿರುತ್ತದೆ. ನೂತನ ರೈಲಿಗೆ ವ್ಯವಸ್ಥೆಗೊಳಿಸಿದ ಸಂಸದರಿಗೆ ಅಭಿನಂದನೆಗಳು.
-ಕೆ.ಜಿ. ಮಂಜುನಾಥ ಶರ್ಮ,
ನಿವೃತ್ತ ತಹಶಿಲ್ದಾರ್, ಶಿವಮೊಗ್ಗ
ಶಿವಮೊಗ್ಗದಿಂದ ಬೆಂಗಳೂರು ತಲುಪಲು ಬೆಳಗಿನ ಸಮಯದಲ್ಲಿ ಎಕ್ಸ್’ಪ್ರೆಸ್ ರೈಲು ಹಾಗೂ ಪ್ಯಾಸೆಂಜರ್ ರೈಲುಗಳಿವೆ. ಆದರೆ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬೆಳಗ್ಗೆ ಒಂದು ನೇರ ಪ್ಯಾಸೆಂಜರ್ ರೈಲು ಬಿಟ್ಟರೆ ಇನ್ನಾವುದೇ ಎಕ್ಸ್’ಪ್ರೆಸ್ ರೈಲುಗಳಿಲ್ಲ. ಹೀಗಾಗಿ, ಈಗ ಆರಂಭಿಸುವ ಜನಶತಾಬ್ದಿ ರೈಲಿನ ಸಮಯವನ್ನು ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಹೊರಟು 10 ಗಂಟೆಗೆ ಶಿವಮೊಗ್ಗ ತಲುಪುವಂತೆ ಬದಲಾವಣೆ ಮಾಡಿದರೆ ಸಾರ್ವಜನಿಕರಿಗೆ ಉಪಕಾರಿಯಾಗುತ್ತದೆ.
-ಎಚ್.ಎಸ್. ಮನೋರಮಾ, ಶಿಕ್ಷಕಿ, ಭದ್ರಾವತಿ
ಶಿವಮೊಗ್ಗದಿಂದ ಬೆಂಗಳೂರಿಗೆ ಜನಶತಾಬ್ದಿ ರೈಲು ಸಂಚಾರ ಆರಂಭಿಸಿರುವುದು ಟ್ರಾವೆಲ್ಸ್’ಗಳಿಗೆ ಹೊಡೆತ ಬಿದ್ದತಾಂಗುತ್ತದೆ. ಆದರೂ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ನಮ್ಮ ಜಿಲ್ಲೆಗೆ ಜನಶತಾಬ್ದಿ ರೈಲು ನೀಡಿರುವುದು ಸಂತಸದ ವಿಚಾರ. ಆದರೆ, ರೈಲು ಸಂಚಾರ ಸಮಯ ಮಲೆನಾಡಿಗರಿಗೆ ಅಷ್ಟು ಪ್ರಯೋಜನಕಾರಿಯಲ್ಲ. ಇದರ ಬದಲಾವಣೆಗೆ ಅಗತ್ಯ.
-ಎಚ್.ವಿ. ಗೋವಿಂದರಾಜು,
ಬಾಲಾಜಿ ಟ್ರಾವೆಲ್ಸ್, ಭದ್ರಾವತಿ
ರೈಲು ವ್ಯವಸ್ಥೆ ಸ್ವಾಗತಾರ್ಹ. ಆದರೆ ನಮ್ಮ ಬೇಡಿಕೆ ನಿತ್ಯವೂ ಇರಲಿ. ದಿನ ಬಿಟ್ಟು ದಿನ ಬೇಡ. ನಿತ್ಯವೂ ರೈಲು ಓಡಿಸಬೇಕು. ಉದ್ಯಮಿಗಳಿಗೆ ತುಂಬ ಸಹಕಾರಿಯಾಗಲು ದಿನವೂ ಈ ರೈಲು ಬೇಕು ಎಂದು ಒತ್ತಾಯ ಮಾಡುತ್ತೇವೆ.
-ಡಿ.ಎಂ. ಶಂಕರಪ್ಪ
ಮಾಜಿ ಅಧ್ಯಕ್ಷರು, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘ
ಬೆಂಗಳೂರು-ಶಿವಮೊಗ್ಗ ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭಿಸುತ್ತಿರುವುದು ಸಂತಸದ ವಿಚಾರ. ಆದರೆ, ಪ್ರಯಾಣ ದರವನ್ನು ಕೊಂಚ ಕಡಿಮೆ ಮಾಡುವ ಜೊತೆಯಲ್ಲಿ, ಬೆಳಗಿನ ವೇಳೆ ಬೆಂಗಳೂರಿನಿಂದ ಹೊರಟು ಶಿವಮೊಗ್ಗ ತಲುಪುವಂತೆ ಸಮಯ ನಿಗದಿ ಮಾಡಿದರೆ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ.
-ಡಾ. ಸುದರ್ಶನ್ ಕೆ. ಆಚಾರ್,
ಆರ್ಯುವೇದ ತಜ್ಞ, ಭದ್ರಾವತಿ
ಪ್ರಸ್ತುತ ಬೆಳಗ್ಗೆ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿ ತಲುಪುವ ಜನಶತಾಬ್ದಿ ರೈಲಿಗೆ ಶಿವಮೊಗ್ಗದ 10 ಬೋಗಿಗಳನ್ನು ಜೋಡಿಸಿ, ಬೀರೂರಿನಿಂದ ಅದನ್ನು ಪ್ರತ್ಯೇಕಿಸಿ, ಪ್ರತ್ಯೇಕ ಎಂಜಿನ್ ಮೂಲಕ ಶಿವಮೊಗಕ್ಕೆ ಜನಶತಾಬ್ದಿ ರೈಲನ್ನು ಓಡಿಸಬಹುದು. ಆಗ, ಮುಂಜಾನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲು ಆದಂತಾಗುತ್ತದೆ ಅಲ್ಲದೇ, ಸಮಯದ ಹೊಂದಾಣಿಕೆಯೂ ಸಹ ಇಲಾಖೆಗೆ ಸಮಸ್ಯೆಯಾಗುವುದಿಲ್ಲ. ನಂತರ ಜನದಟ್ಟಣೆ ಹಾಗೂ ಸಮಯ ಹೊಂದಾಣಿಕೆ ನೋಡಿಕೊಂಡು ಪ್ರತ್ಯೇಕವಾಗಿ ಓಡಿಸುವ ವಿಚಾರ ಮಾಡಬಹುದು.
-ಎಸ್.ಎನ್. ರಂಗನಾಥ್,
ಭದ್ರಾವತಿ
ವಿಶೇಷ ವರದಿ: ಡಾ. ಸುಧೀಂದ್ರ, ಕಾರ್ಯನಿರ್ವಾಹಕ ಸಂಪಾದಕರು, ಕಲ್ಪ ನ್ಯೂಸ್
Discussion about this post