ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನದಿ ಹಾಗೂ ಅದರ ಸುತ್ತಲಿನ ಜಲಾನಯನ ಪ್ರದೇಶದ ಪುನಶ್ಚೇತನ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತದಲ್ಲಿ ಶಿವಮೊಗ್ಗ ಸೇರಿದಂತೆ 9 ಜಿಲ್ಲೆಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಬಗ್ಗೆ ಮಾಹಿತಿ ಒದಗಿಸಲು ಹಾಗೂ ಕ್ರಿಯಾ ಯೋಜನೆಯನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಚ್ 14ರಂದು ಶಿವಮೊಗ್ಗದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಮಾರ್ಚ್ 15ರಂದು ಕೋಲಾರದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದರು.
ಮಳೆಯ ನೀರು ಹರಿದು ಹೋಗಿ ವ್ಯರ್ಥವಾಗಲು ಬಿಡದೆ, ಭೂಮಿಯಲ್ಲಿಯೇ ಇಂಗಿ ಹೋಗುವಂತೆ ಯೋಜನೆಯಡಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಇದಕ್ಕಾಗಿ ನದಿಯ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಸಿಗಳನ್ನು ನೆಡುವುದು, ಸಣ್ಣಪುಟ್ಟ ಚೆಕ್’ಡ್ಯಾಂಗಳ ನಿರ್ಮಾಣ, ಇಂಗು ಗುಂಡಿಗಳ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಪ್ರಥಮ ಹಂತದಲ್ಲಿ ಪೂರ್ವಕ್ಕೆ ಹರಿಯುವ ನದಿಗಳನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ. ನದಿ ಮೂಲದ ಸಂರಕ್ಷಣೆಗೂ ಈ ಸಂದರ್ಭದಲ್ಲಿ ಒತ್ತು ನೀಡಲಾಗುವುದು ಎಂದರು.
ಈಗಾಗಲೇ ನದಿಗಳ ಪುನಶ್ಚೇತನ ಕಾರ್ಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರದಲ್ಲಿ ಕೈಗೊಳ್ಳಲಾಗಿದೆ. ಇದೀಗ ಶಿವಮೊಗ್ಗ, ಕೋಲಾರ, ತುಮಕೂರು, ಬಳ್ಳಾರಿ, ಯಾದಗಿರಿ, ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ಕೊಡಗು, ಉಡುಪಿ ಮತ್ತು ಕಾರವಾರ ಜಿಲ್ಲೆಯ 2 ತಾಲೂಕುಗಳಲ್ಲಿ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಡಿ ನದಿಗೆ ಸೇರುವ ಪ್ರಮುಖ ಹಳ್ಳಕೊಳ್ಳಗಳ ನಕ್ಷೆ ತಯಾರಿಸಿ, ಅದನ್ನು ಸಂರಕ್ಷಿಸುವ ಕಾರ್ಯವನ್ನು ಸಹ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚೆಕ್‌ಡ್ಯಾಂ
ತುಂಗಾ ನದಿಗೆ ಮತ್ತೂರು ಬಳಿ ನಿರ್ಮಿಸಲಾಗಿರುವ ಚೆಕ್‌ಡ್ಯಾಂ ಅತ್ಯಂತ ಯಶಸ್ವಿಯಾಗಿದ್ದು, ಇದೇ ರೀತಿ ಇನ್ನೂ ನಾಲ್ಕು ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲು ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ಉದ್ಯೋಗ ಖಾತ್ರಿ ಉತ್ತಮ ಸಾಧನೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲಾ ಬಾಕಿ ಪಾವತಿ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದ್ದು, 30ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, 130ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಯೋಜನಾ ನಿರ್ದೇಶಕ ವೀರಾಪುರ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post