ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಫೆ.25ರಿಂದ ನಗರದಲ್ಲಿ ನಡೆಯಲಿರುವ ಐದು ದಿನಗಳ ಕೋಟೆ ಶ್ರೀಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ಇಂದು ಮಾರಿಕಾಂಬಾ ಸೇವಾ ಸಮಿತಿಯು ಮಹಾನಗರ ಪಾಲಿಕೆ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.
ಜಾತ್ರೆಯ ಆರಂಭಿಕ ದಿನವಾದ ಫೆ.25 ರಂದು ಗಾಂಧಿಬಜಾರಿನಲ್ಲಿ ಹೆಚ್ಚುವರಿ ಬೆಳಕಿನ ವ್ಯವಸ್ಥೆ, ಈ ಟಾಯ್ಲೆಟ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಅದೇ ರೀತಿ ನಾಲ್ಕು ದಿನಗಳ ಕಾಲ ಗದ್ದುಗೆಯಲ್ಲಿ ಜಾತ್ರೆ ನಡೆಯಲಿದ್ದು ಅಲ್ಲೂ ಕೂಡ ಬೆಳಕು, ಕುಡಿಯುವ ನೀರು, ಶೌಚಾಲಯ, ಸ್ವಚ್ವಚತೆ ವ್ಯವಸ್ಥೆಗೆ ಯಾವುದೇ ರೀತಿ ಅಡಚಣೆ ಯಾಗದಂತೆ ಕ್ರಮಕೈಗೊಳ್ಳಲು ಸಭೆಯಲ್ಲಿ ಉಪಸ್ಥಿತರಿದ್ದ ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ, ಆಡಳಿತ ಪಕ್ಷದ ನಾಯಕ ಚೆನ್ನಿ, ಪಾಲಿಕೆ ಸದಸ್ಯಪ್ರಭು ಭರವಸೆ ನೀಡಿದರು.
ಪಾಲಿಕೆ ಮತ್ತು ನೀರು ಸರಬರಾಜು ಮಂಡಳಿ ಸಿಬ್ಬಂದಿಗಳನ್ನು ಈ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾತ್ರೆಯ ಪೂಜಾ ವಿಧಿ ವಿಧಾನಗಳು ಸಮನ್ವಯದಿಂದ ನಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಬಾಬುದಾರ ಸಮುದಾಯಗಳಾದ ಹರಿಜನ, ಮಡಿವಾಳ, ಉಪ್ಪಾರ, ಬ್ರಾಹ್ಮಣ, ವಿಶ್ವಕರ್ಮ, ವಾಲ್ಮೀಕಿ, ಕುರುಬ ಸಮಾಜದ ಚೌಡಿಕೆ, ಗಂಗಾಮತಸ್ತ ಸಮುದಾಯ ಪ್ರತಿನಿಧಿಗಳ ಸಭೆ ನಡೆಸಿ ಜಾತ್ರೆಯು ವಿಧಿವತ್ತಾಗಿ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಪದಾಧಿಕಾರಿಗಳಾದ ಹನುಮಂತಪ್ಪ, ಡಿ.ಎಂ. ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post