ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಇಲ್ಲಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ 29 ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆದಿದ್ದು, ಕಾರ್ಯಕ್ರಮಗಳು ಕಲಾರಸಿಕರ ಮನಸೂರೆಗೊಂಡವು.
ಸಂಗೀತ-ನೃತ್ಯೋತ್ಸವ 2025 ಎಂಬ ಶೀರ್ಷಿಕೆಯಡಿಯಲ್ಲಿ ನಗರದ ಜೈನ್ ಭವನದಲ್ಲಿ ನಡೆದ ಕಾರ್ಯಕ್ರಮ ಸಂಗೀತ ಹಾಗೂ ನೃತ್ಯ ಪ್ರಕಾರಗಳ ವೈಭವವನ್ನು ತೆರೆದಿಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ್ ಬೆಡೆಕರ್, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಸಂಸ್ಥೆಯ ಸಂಸ್ಥಾಪಕರಾದ ಭವಾನಿಶಂಕರ ರಾಯರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸುತ್ತಿದ್ದರು. ಅವರ ಮಕ್ಕಳು ಇಂದಿಗೂ ಅವಿರತವಾಗಿ ಕಲಾ ಸೇವೆ ಮಾಡುತ್ತಾ ಬರುತ್ತಿರುವುದು ಸಂತೋಷದ ವಿಚಾರ ಎಂದರು.
ದೀಪಕ್ ಅವರ ತಂದೆ ಎಂತಹುದ್ದೇ ಪರಿಸ್ಥಿತಿಯಲ್ಲೂ ಸಹ ತಮ್ಮ ಮಕ್ಕಳಿಗೆ ಸಂಗೀತ ಹಾಗೂ ನೃತ್ಯ ಅಭ್ಯಾಸವನ್ನು ತಪ್ಪದೇ ಮಾಡಿಸಿದ್ದು, ಇವರು ಚಿಕ್ಕಂದಿನಿಂದಲೇ ಆರಂಭಿಸಿ ಇಂದಿನವರೆಗೂ ನಿರಂತರವಾಗಿ ಕಲಾಸೇವೆ ಮಾಡುತ್ತಿರುವುದು ಮಾದರಿಯಾದುದು ಎಂದು ಶ್ಲಾಘಿಸಿದರು.

ಸಮಾಜಕ್ಕೆ ಉತ್ತಮ, ಸಂಸ್ಕಾರಯುತ ಜನಾಂಗವನ್ನು ಕೊಡಬೇಕು ಎಂಬ ಆಶಯದೊಂದಿಗೆ ದೀಪಕ್, ಪ್ರೀತಿಕಲಾ ಹಾಗೂ ಕುಟುಂಬಸ್ಥರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯಗಳು ಮುಂದುವರೆಯಬೇಕಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗುರುಗಳಾದ ದೀಪಕ್ ಅವರು ಮಾತನಾಡಿ, ಪುತ್ತೂರಿನ ಮಣ್ಣಿನ ಶಕ್ತಿಯಿಂದಾಗಿ ನಾವು ಇಂತಹ ಕಲಾಸೇವೆ ಮಾಡಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಯೋಚನೆಯಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.
ನಮ್ಮ ಪರಿಸರ ಹಾಗೂ ಊರನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ, ನಮ್ಮ ಪರಿಸರ, ನಮ್ಮ ಸಾರ್ವಜನಿಕ ಆಸ್ತಿಯ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ಸಹ ಸಹಕರಿಸಬೇಕು. ಇಂತಹ ಮನೋಭಾವನೆಯನ್ನು ಪ್ರಮುಖವಾಗಿ ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.

ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಗೆ ಇತ್ತೀಚೆಗಷ್ಟೇ ಸೇರಿದ ಪುಟ್ಟ ಮಕ್ಕಳಾದಿಯಾಗಿ, ಇಲ್ಲೇ ಕಲಿತು ವಿದೂಷಿಗಳಾಗಿ ರಾಜ್ಯದ ಹಲವು ಕಡೆಗಳಲ್ಲಿ ಕಲಾ ಸೇವೆ ಮಾಡುತ್ತಿರುವ ಶಿಷ್ಯರೂ ಸಹ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಆರಂಭದಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ನಂತರ ಭರತನಾಟ್ಯ ನೃತ್ಯ ಪ್ರದರ್ಶನಗಳು ನಡೆಯಿತು. ಅದ್ದೂರಿಯಾಗಿ ನಡೆದ ಕಾರ್ಯಕ್ರಮ ಹಾಗೂ ಎಲ್ಲ ವಯೋಮಾನದ ಕಲಾವಿದರ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.
ನಟುವಾಂಗದಲ್ಲಿ ಗುರುಗಳಾದ ಬಿ. ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದ್ವಾನ್ ಪ್ರೀತಿಕಲಾ, ಮೃದಂಗದಲ್ಲಿ ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲನ್ ಕಾಇಂಗಾಡ್, ರಿದಂ ಪ್ಯಾಡ್’ನಲ್ಲಿ ಸುಹಾಸ್ ಹೆಬ್ಬಾರ್ ಹಾಗೂ ಪಿಟೀಲಿನಲ್ಲಿ ಮಂಗಳೂರಿನ ಕು.ಧನುಶ್ರೀ ಶಬರಾಯ ಅವರುಗಳು ನಿರ್ವಹಿಸಿದರು.
ಇನ್ನು, ವಿಘ್ನೇಶ್ ವಿಶ್ವಕರ್ಮ ಅವರು ಅತ್ಯುತ್ತಮವಾಗಿ ವರ್ಣಾಲಂಕಾರ ಮಾಡಿದ್ದು, ಶ್ರೀ ಮೂಕಾಂಬಿಕಾ ಕಾಸ್ಟ್ಯೂಮ್ಸ್, ಭಾವನಾ ಕಲಾ ಆರ್ಟ್ಸ್ ಹಾಗೂ ವಿಶ್ವಕಲಾ ಆರ್ಟ್ಸ್ ಜಂಟಿಯಾಗಿ ವಸ್ತ್ರಾಲಂಕಾರ ಹಾಗೂ ಮಂಗಳೂರಿನ ದೇವ್ ಪ್ರೊ ಸೌಂಡ್ಸ್ ಅವರು ಧ್ವನಿ ಬೆಳಕು ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post