ಕಲ್ಪ ಮೀಡಿಯಾ ಹೌಸ್
ಪುತ್ತೂರು: ಇಲ್ಲಿನ ನೆಹರೂನಗರದ ವಿವೇಕಾನಂದ ವಸತಿ ನಿಲಯಗಳಲ್ಲಿ ಯುಗಾದಿ ಹಬ್ಬ ಹಾಗೂ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಜಯಂತಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ನಳಂದಾ ಹುಡುಗರ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ತಿರುಮಲೇಶ್ವರ ಭಟ್, ಭಾರತೀಯರ ಹೊಸವರ್ಷ ಯುಗಾದಿ. ಇಂಗ್ಲೀಷ್ ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷ ಜನವರಿಯಲ್ಲಿ ಬರುತ್ತದೆ. ನಮ್ಮ ಜೀವನದಲ್ಲಿ ಅನುಭವಿಸಿದ ಸಿಹಿ-ಕಹಿ ಘಟನೆಗಳನ್ನು ಸಿಂಹಾವಲೋಕನ ಮಾಡಬೇಕು. ಹೊಸ ವರ್ಷವನ್ನು ಹೊಸಗುಣಗಳಿಂದ, ಹೊಸತನದಿಂದ ಸ್ವಾಗತಿಸಿ ಮುಂದೆ ಹೋಗಬೇಕು ಎಂದು ಹೇಳಿದರು.
ಯುಗಾದಿ ಸಂಭ್ರಮದ ಜೊತೆಗೆ ಇಂದು ಡಾ.ಹೆಡಗೇವಾರರ ಜಯಂತಿಯೂ ಹೌದು. ಅವರು ದೇಶಕ್ಕಾಗಿ ಹಿಂದೂ ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರು. ಈ ಶುಭ ಸಂದರ್ಭದಲ್ಲಿ ಮಹಾನ್ ಪುರುಷರ ಜೀವನದಿಂದ ಪ್ರೇರಣೆ ಪಡೆಯೋಣ. ಜೀವನದಲ್ಲಿ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸೋಣ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಳಂದಾ ವಸತಿ ನಿಲಯದ ನಿಲಯಪಾಲಕ ಶಿವಪ್ರಸಾದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಹಾಸ್ಟೆಲ್ಸ್ ನ ಮುಖ್ಯ ನಿಲಯಪಾಲಕ ಗೋವಿಂದರಾಜ ಶರ್ಮಾ, ನಿಲಯಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಣವ ಪ್ರಾರ್ಥಿಸಿ, ನಿಲಯ ಪಾಲಕ ಭರತ್ ಪೆರ್ಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ಹುಡುಗಿಯರ ವಸತಿ ನಿಲಯದ ಕಾರ್ಯಕ್ರಮದಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಘ್ನೇಶ್ ಮಾತನಾಡಿ, ಹಬ್ಬಗಳು ದೇವರನ್ನು ಸೇರಲು ನಮಗೆ ಸಹಾಯ ಮಾಡುವ ಮಾರ್ಗಗಳು. ಪ್ರತಿಯೊಂದು ಹಬ್ಬದ ವೈಶಿಷ್ಟ್ಯವನ್ನು ಅರ್ಥೈಸಿಕೊಳ್ಳಬೇಕು. ಯುಗಾದಿ ಹಬ್ಬದ ಮೂಲಕ ಸಿಹಿ-ಕಹಿ ಎರಡನ್ನೂ ಸ್ವೀಕರಿಸಿ ಅದರ ಸಾಮರಸ್ಯವನ್ನು ಅರಿಯಬೇಕು. ಹೊಸತನ ಮತ್ತು ಹರುಷ ಎರಡೂ ನಮ್ಮ ಸೃಷ್ಟಿಯಲ್ಲೇ ಇದೆ. ಅವುಗಳನ್ನು ಗುರುತಿಸುವವರು ನಾವಾಗಬೇಕು ಎಂದು ಹೇಳಿದರು.
ನಮ್ಮ ಸನಾತನ ಧರ್ಮದ ಆಚಾರ ವಿಚಾರಗಳ ಕುರಿತು ನಮಗೆ ಹೆಮ್ಮೆ ಇರಬೇಕು. ನಮ್ಮ ಪವಿತ್ರಗ್ರಂಥಗಳು ಕೇವಲ ಯಾರೋ ಓದಿದ್ದನ್ನೋ, ಕೇಳಿದ್ದನ್ನೋ ಬರೆದದ್ದಲ್ಲ. ಅಉ ನಮ್ಮ ಋಷಿಮುನಿಗಳು ಕಂಡುಕೊಂಡ ಸತ್ಯಗಳು. ಮಾಧ್ಯಮ, ಪತ್ರಿಕೆಗಳಲ್ಲಿ ನಮ್ಮ ಧರ್ಮದ ಬಗ್ಗೆ ಯಾರೋ ಮಾತನಾಡಿದರು ಅಂದ ಮಾತ್ರಕ್ಕೆ ನಮ್ಮ. ಧರ್ಮದ ಕುರಿತು ಸಂಶಯ ಪಡುವುದು ಸರಿಯಲ್ಲ. ನಮ್ಮ ಆಚರಣೆಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಕೆಂದಿಲ್ಲ. ಆದರೆ ಕಣ್ಣು ಮುಚ್ಚಿ ಯಾವುದನ್ನೂ ನಂಬಬಾರದು. ಸತ್ಯದ ಅರಿವಿಗಾಗಿ ಆಧ್ಯಯನ ಮಾಡಿದರೆ ಉತ್ತರ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಂಚಾಂಗ ಶ್ರವಣ ಮಾಡಲಾಯಿತು. ನಿಲಯ ಪಾಲಕಿ ಗೌತಮಿ ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿನಿ ವಿನೀತಾ ಸ್ವಾಗತಿಸಿ, ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ದೀಪ್ತಿ ಬಿ.ಎಸ್ ವಂದಿಸಿದರು. ವಿದ್ಯಾರ್ಥಿನಿಯರಾದ ಅಶ್ವಿನಿ, ಸಾಯಿಕೃಪಾ, ಸುಲಕ್ಷಣ ಮತ್ತು ಗಾಯತ್ರಿ ಸಾಮೂಹಿಕ ಗೀತೆಯನ್ನು ಹಾಡಿದರು. ಎಂಬಿಎ ವಿದ್ಯಾರ್ಥಿನಿ ಕಾವ್ಯ ಕಾರ್ಯಕ್ರಮದ ನಿರೂಪಣೆ ಮಾಡಿದರು.
ವರದಿ: ಅರುಣ್ ಕಿರಿಮಂಜೇಶ್ವರ, ಪುತ್ತೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post