ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಕೇಂದ್ರದಲ್ಲಿ ಎಫ್’ಎಂ ಕೇಂದ್ರವನ್ನು ಸ್ಥಾಪಿಸುವಂತೆ ಈ ಹಿಂದೆ ಮಾಡಲಾಗಿದ್ದ ಪ್ರಸ್ತಾವನೆಗೆ ಮತ್ತೆ ಮರು ಜೀವ ತುಂಬಲು ಇಂದು ಸಂಸದ ಬಿ.ವೈ. ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮನವಿ ಸಲ್ಲಿಸಿದರು.
ಈ ಕುರಿತಂತೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಸಂಸದರು, ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲಾ ಕೇಂದ್ರವಾಗಿದ್ದರೂ ಶಿವಮೊಗ್ಗದಲ್ಲಿ ಒಂದು ಎಫ್’ಎಂ ಕೇಂದ್ರ ಈವರೆಗೂ ಸ್ಥಾಪನೆಯಾಗಿಲ್ಲ ಎಂಬ ವಿಚಾರವನ್ನು ಮತ್ತೊಮ್ಮೆ ಗಮನಕ್ಕೆ ತಂದರು.
ಭದ್ರಾವತಿ ಆಕಾಶವಾಣಿಯು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಶಕ್ತಿಯ ಟ್ರಾನ್ಸ್‌ಮೀಟರ್’ನಿಂದಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಕೂಡ ಕೇವಲ 25 ಕಿಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಕೇಂದ್ರ ಸ್ಥಾನಕ್ಕೂ ತಲುಪುತ್ತಿಲ್ಲ. ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಿಮೆ ಶಕ್ತಿಯ ದೂರದರ್ಶನ ಕೇಂದ್ರವನ್ನು ಹೆಚ್ಚಿನ ಸ್ಥಳಾವಕಾಶವಿರುವ ನಿಟ್ಟಿನಲ್ಲಿ ಹೆಚ್ಚಿನ ಶಕ್ತಿಯ ಟ್ರಾನ್ಸ್‌ಮೀಟರ್’ಗೆ ಉನ್ನತಿಕರಿಸಿ, ಇಲ್ಲಿರುವ ಸ್ಥಳವಾಕಾಶ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುವ ಹಿನ್ನೆಲೆಯಲ್ಲಿ ಈಗಿರುವ ಟ್ರಾನ್ಸ್‌ಮೀಟರ್‌ನ್ನು 10 ಕೆವಿಗೆ ಹೆಚ್ಚಿಸಿ, ಎಫ್’ಎಂ ಕೇಂದ್ರವನ್ನು ಮಂಜೂರು ಮಾಡಿದಲ್ಲಿ, ಮಲೆನಾಡಿನಲ್ಲಿನ ಹೆಚ್ಚಿನ ಸಂಖ್ಯೆಯ ಕಲಾವಿಧರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಆಕಾಶವಾಣಿ ಕೇಂದ್ರವು ಶಿವಮೊಗ್ಗದಿಂದ 20 ಕಿಮೀ ದೂರದಲ್ಲಿರುವ ಭದ್ರಾವತಿಯಲ್ಲಿದ್ದರೂ, ಅದೂ ನಗರ ವ್ಯಾಪ್ತಿ ಪ್ರದೇಶದಿಂದ 5 ಕಿಮೀ ದೂರದಲ್ಲಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ಭಾಗಗಳಿಂದ ಇಲ್ಲಿಗೆ ಜನರು ಬರಲು ತುಂಬಾ ತೊಂದರೆಯಾಗುತ್ತಿದೆ. ಅದೂ ಅಲ್ಲದೇ ಈ ಕೇಂದ್ರಕ್ಕೆ ಯಾರೂ ಸಹ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದ ಪ್ರಯುಕ್ತ ಉತ್ತಮ ಆಡಳಿತ ವ್ಯವಸ್ಥೆ ಇಲ್ಲದ ಕಾರಣ, ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ. ಪ್ರಯುಕ್ತ ಕೂಡಲೇ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ಮಂಜೂರು ಮಾಡಿ ಎಂದು ಕೋರಿದ್ದಾರೆ.
ಶಿವಮೊಗ್ಗದಲ್ಲಿ ಯಾವುದೇ ರೀತಿಯ ರೇಡಿಯೋ ಚಾನಲ್‌ಗಳು ಇಲ್ಲ. ಎಫ್’ಎಂ ಕೇಂದ್ರ ಪ್ರಾರಂಭವಾದಲ್ಲಿ ಇದೊಂದು ಅತ್ಯುತ್ತಮ ರೇಡಿಯೋ ಚಾನಲ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರಿ ಎಫ್’ಎಂ ಕೇಂದ್ರ ಸ್ಥಾಪನೆಯಾದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಅವುಗಳ ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post