ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಾತ್ಮರಿಗೆ ಏನನ್ನೇ ಕೊಟ್ಟರೂ ಅದು ಹತ್ತಾಗಿ ನಮಗೆ ಮರಳಿ ಬರುತ್ತದೆ. ಆದರೆ ಇದನ್ನು ವ್ಯಾಪಾರದ ದೃಷ್ಟಿಯಿಂದ ನೋಡಬಾರದು. ಒಂದಕ್ಕೆ ಒಂದನ್ನು ಹಿಂತಿರುಗಿಸಿದರೆ ಅದು ವ್ಯಾಪಾರವಾಗುತ್ತದೆ. ಮಹಾತ್ಮರಿಗೆ ಶುದ್ಧ ಮನಸ್ಸಿನಿಂದ ಸಮರ್ಪಿಸಿದಾಗ ನಾವು ಅದಕ್ಕಿಂತ ದೊಡ್ಡದನ್ನೇ ಮರಳಿ ಪಡೆಯಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ (Raghaveshwara Shri) ಮಹಾಸ್ವಾಮಿಗಳು ಹೇಳಿದರು.
ಬೆಂಗಳೂರಿನ (Bengaluru) ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ಬುಧವಾರ ಲಲಿತೋಪಾಖ್ಯಾನ ಪ್ರವಚನ ಅನುಗ್ರಹಿಸಿ ಅವರು ಮಾತನಾಡಿದರು.
ಇಹದಲ್ಲಿ ಭೋಗ, ಪರದಲ್ಲಿ ಮೋಕ್ಷ
ರಾಜರಾಜೇಶ್ವರಿಯು ಭೋಗ ಮತ್ತು ಮೋಕ್ಷ ಎರಡನ್ನೂ ಅನುಗ್ರಹಿಸುವ ಮಹಾಶಕ್ತಿ. ಇಂದು ಮೋಕ್ಷದ ಕುರಿತು ಮಾತನಾಡಿದಾಗ ಅನೇಕರು ಅದರಿಂದ ದೂರ ಸರಿಯುವ ಮನೋಭಾವ ಹೊಂದಿದ್ದಾರೆ. ಈ ಜಗತ್ತಿನಲ್ಲಿ ಅನುಭವಿಸಬೇಕಾದದ್ದು ಸಾಕಷ್ಟಿದೆ, ಜೀವನದ ಸಂಧ್ಯಾಕಾಲದಲ್ಲಿ ಮೋಕ್ಷದ ಕುರಿತು ಆಲೋಚಿಸೋಣ ಎಂಬ ಭಾವ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಅಂತಹ ಭಾವ ಸರಿಯಲ್ಲ ಎಂದು ಶ್ರೀಗಳು ತಿಳಿಸಿದರು.
ರಾಜರಾಜೇಶ್ವರಿಯನ್ನು ಆಶ್ರಯಿಸಿದವರಿಗೆ ಆಕೆ ಇಹಲೋಕದಲ್ಲಿ ಭೋಗವನ್ನೂ, ಪರಲೋಕದಲ್ಲಿ ಮೋಕ್ಷವನ್ನೂ ಕರುಣಿಸುತ್ತಾಳೆ. ಹೀಗಾಗಿ ಭೋಗ ಮತ್ತು ಮೋಕ್ಷ ಪರಸ್ಪರ ವಿರುದ್ಧವಾದವುಗಳಲ್ಲ ಎಂಬುದನ್ನು ಲಲಿತೋಪಾಖ್ಯಾನ ತಿಳಿಸುತ್ತದೆ ಎಂದು ಅದರ ಮಹತ್ವವನ್ನು ವಿವರಿಸಿದರು.

Raghaveshwara Shri: ಸದಾ ಗುರುವಿನ ಆಶ್ರಯದಲ್ಲಿರಬೇಕು
ಸಮಸ್ಯೆಗಳು ಎದುರಾದಾಗ ಅಥವಾ ಮುಂದಿನ ದಾರಿ ತಿಳಿಯದ ಸಂದರ್ಭದಲ್ಲಿ ಸಾಮಾನ್ಯವಾಗಿ ಗುರುವಿನ ನೆನಪಾಗುತ್ತದೆ. ಆಗ ಗುರುವನ್ನು ಅರಸಿಕೊಂಡು ಹೋಗುವುದು ಸರಿಯಾದ ಕ್ರಮವೇ ಆಗಿದ್ದರೂ, ಕೇವಲ ಸಂಕಷ್ಟದ ಸಂದರ್ಭದಲ್ಲಷ್ಟೇ ಅಲ್ಲದೆ ಸದಾ ಗುರುವಿನ ಆಶ್ರಯದಲ್ಲಿದ್ದರೆ ಜೀವನದಲ್ಲಿ ಉನ್ನತಿಯನ್ನು ಸಾಧಿಸಲು ಸಾಧ್ಯ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಇಂದ್ರನು ದುರ್ವಾಸ ಮಹರ್ಷಿಗಳಿಂದ ಶಾಪಕ್ಕೆ ಒಳಗಾದಾಗ ಭಯಗೊಂಡು ದೇವಗುರು ಬೃಹಸ್ಪತಿಯ ಮೊರೆ ಹೋಗುವ ಲಲಿತೋಪಾಖ್ಯಾನದ ಕಥಾಭಾಗವನ್ನು ವಿವರಿಸಿದ ಶ್ರೀಗಳು, ಜೀವನದ ಪ್ರತಿಯೊಂದು ಹಂತದಲ್ಲಿಯೂ ಗುರುವಿನ ಮಾರ್ಗದರ್ಶನದ ಮಹತ್ವವನ್ನು ತಿಳಿಸಿದರು.
ತಪ್ಪಿಗೆ ಪ್ರಾಯಶ್ಚಿತ್ತ ಅಗತ್ಯ
ಮನುಷ್ಯ ಪಾಪ ಅಥವಾ ತಪ್ಪು ಮಾಡಿದಾಗ ಅದಕ್ಕೆ ಸೂಕ್ತವಾದ ಪ್ರಾಯಶ್ಚಿತ್ತದ ಮೂಲಕ ಪಾಪವನ್ನು ತೊಳೆದುಕೊಳ್ಳಲು ಸಾಧ್ಯ. ಆದರೆ ಪ್ರಾಯಶ್ಚಿತ್ತ ಮಾಡಲು ಸಾಧ್ಯವಾಗದಿದ್ದರೆ ಅಥವಾ ಪ್ರಾಯಶ್ಚಿತ್ತವೇ ಇಲ್ಲದಂತಹ ಪಾಪವಾಗಿದ್ದರೆ, ಅದರ ತಾಪವನ್ನು ಅನುಭವಿಸಿಯೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಶ್ರೀಗಳು ಹೇಳಿದರು.
ಈ ನಿಯಮದಿಂದ ದೇವೇಂದ್ರನೂ ಹೊರತಲ್ಲ. ಕರ್ಮದ ಪರಿಣಾಮವನ್ನು ಪ್ರತಿಯೊಬ್ಬರೂ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಲಲಿತೋಪಾಖ್ಯಾನದ ಕಥಾನಕದ ಮೂಲಕ ಶ್ರೀಗಳು ವಿವರಿಸಿದರು.
Also Read>> ಭಾರತೀಯ ಬಾಕ್ಸಿಂಗ್ನಲ್ಲಿ ಬಿಗ್ ಫೈಟ್: ನೀರಜ್ ಗೋಯತ್–ಪೆಟ್ಟಿಸ್ ಕಾದಾಟ
ರಾಜರಾಜೇಶ್ವರಿಗೆ ವಿಶೇಷ ಪೂಜೆ
‘ನವರಾತ್ರ ನಮಸ್ಯಾ’ ಕಾರ್ಯಕ್ರಮದ ಅಂಗವಾಗಿ ದುರ್ಗಾಮಂಟಪದಲ್ಲಿ ಪ್ರತಿಷ್ಠಾಪಿಸಿರುವ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾಲಕ್ಷ್ಮೀ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ, ವಿಶಿಷ್ಟ ‘ಅನ್ನಬ್ರಹ್ಮ ಸಂಕೀರ್ತನಮ್’, ದುರ್ಗಾದೀಪ ನಮಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಎಸ್. ಶರ್ಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಕೆ.ಎನ್. ಶಂಕರ್ ಹಾಲ್ತೋಟ ಹಾಗೂ ದಿನಪ್ರಧಾನರಾಗಿ ಕೃಷ್ಣಾನಂದ ಭಟ್ ದಂಪತಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













