ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಕ್ತಿಯೇ ಮುಕ್ತಿಗೆ ಕಾರಣವಾಗಿದ್ದು, ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಮನಸ್ಸು ಸ್ವಾಭಾವಿಕವಾಗಿ ಸ್ಥಿರವಾಗುತ್ತದೆ. ದೇವರು ಹಾಗೂ ಗುರುಗಳ ಕುರಿತಾದ ಪ್ರೀತಿಗೆ ‘ಭಕ್ತಿ’ ಎಂಬ ಹೆಸರಿದ್ದು, ದೇವರ ಕುರಿತು ಪ್ರೀತಿ ಉಂಟಾದಾಗ ಜೀವನದ ಕಷ್ಟಗಳನ್ನು ದಾಟುವುದರ ಜತೆಗೆ ಮೋಕ್ಷವನ್ನೂ ಪಡೆಯಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Shri) ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ (Navaratri Namasya) ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನ ಅನುಗ್ರಹಿಸಿ ಅವರು ಮಾತನಾಡಿದರು.

ಲಲಿತೋಪಾಖ್ಯಾನ ರಹಸ್ಯಮಯ
ಬ್ರಹ್ಮಾಂಡ ಪುರಾಣದ ಭಾಗವಾಗಿರುವ ಲಲಿತೋಪಾಖ್ಯಾನವು ರಹಸ್ಯವಾಗಿದ್ದು, ಇದನ್ನು ಯೋಗ್ಯರಿಗೆ ಮಾತ್ರ ತಿಳಿಸಬೇಕು. ಲಲಿತೋಪಾಖ್ಯಾನದ ಕುರಿತು ಅನೇಕ ಪುಸ್ತಕಗಳು ಇದ್ದರೂ, ಅದು ಅಷ್ಟಾಗಿ ಪ್ರಚಲಿತದಲ್ಲಿಲ್ಲ. ಹೀಗಾಗಿ ಇಂದಿಗೂ ರಹಸ್ಯವಾಗಿಯೇ ಉಳಿದಿದೆ ಎಂದು ಶ್ರೀಗಳು ತಿಳಿಸಿದರು.
ಪುರಾಣ ಗ್ರಂಥಗಳು ದೇವರ ಅವತಾರಕ್ಕಿಂತ ಕಡಿಮೆಯಲ್ಲ. ಅಂದು ದೇವರು ಅವತಾರದ ಮೂಲಕ ಮಾಡಿದ್ದನ್ನೇ ಇಂದು ಗ್ರಂಥಗಳು ಮಾಡುತ್ತಿವೆ. ದೇವರ ಅವತಾರಗಳು ಹಾಗೂ ಅವುಗಳನ್ನು ತಿಳಿಸುವ ಗ್ರಂಥಗಳು ಜೀವಿಗಳ ಕುರಿತು ದಯೆಯನ್ನು ಹೊಂದಿದ್ದು, ಅವು ನಮ್ಮ ಉದ್ಧಾರಕ್ಕೆ ಕಾರಣವಾಗುತ್ತವೆ ಎಂದು ಹೇಳಿದರು.
ಪ್ರಕೃತಿ-ಪುರುಷ ಅರಿವು ಮುಕ್ತಿಗೆ ಮಾರ್ಗ
ಪ್ರಪಂಚವು ಪ್ರಕೃತಿ ಹಾಗೂ ಪುರುಷಾತ್ಮಕವಾಗಿದೆ. ಸೃಷ್ಟಿಯ ಭೌತಿಕ ರೂಪ ಪ್ರಕೃತಿಯಾದರೆ, ಪುರುಷ ಎಂಬುದು ಅದರೊಳಗಿರುವ ಚೇತನವಾಗಿದೆ. ಪ್ರಕೃತಿ ಮತ್ತು ಪುರುಷವನ್ನು ಸಮರ್ಪಕವಾಗಿ ಅರಿತುಕೊಂಡರೆ ಅದೇ ಮುಕ್ತಿಗೆ ಮಾರ್ಗವಾಗುತ್ತದೆ ಎಂದು ರಾಘವೇಶ್ವರ ಶ್ರೀಗಳು ವಿವರಿಸಿದರು.
ಪರಮ ಪಾಪಿಯೂ ಲಲಿತಾ ತ್ರಿಪುರಸುಂದರಿಯನ್ನು ಧ್ಯಾನಿಸಿದರೆ ಪರಮ ಪುಣ್ಯಾತ್ಮನಾಗುತ್ತಾನೆ ಎಂದು ತಿಳಿಸಿದರು.

Raghaveshwara Shri: ಭಕ್ತಿಯಿಂದ ಸಂಸಾರ ಸಾಗರ ದಾಟಬಹುದು
ಜೀವನದಲ್ಲಿ ತಾಪತ್ರಯಗಳು ಮುಗಿಯುವುದೇ ಇಲ್ಲ. ಸಮುದ್ರದ ತೆರೆಗಳಂತೆ ಕಷ್ಟಗಳು ಒಂದಾದ ಮೇಲೊಂದು ಬರುತ್ತಲೇ ಇರುತ್ತವೆ. ದೇವರಲ್ಲಿ ಭಕ್ತಿ ಹೊಂದಿದಾಗ ಈ ಸಂಸಾರ ಸಾಗರವನ್ನು ದಾಟಲು ಸಾಧ್ಯ ಎಂದು ಶ್ರೀಗಳು ಹೇಳಿದರು.
ಭಾವ ಮತ್ತು ಬುದ್ಧಿ ಎರಡಕ್ಕೂ ಮಹತ್ವ ನೀಡಿ ಬದುಕಬೇಕು. ಅರಿವಿನ ಬದುಕು ನಮ್ಮದಾದಾಗ ಮಾತ್ರ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸಾಧ್ಯ. ಆದರೆ ಇಂದು ನಾವು ಹೊಟ್ಟೆಪಾಡಿನ ಬದುಕಿಗೆ ಸೀಮಿತರಾಗುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
Also Read>> ಆಭರಣ ಪ್ರಿಯರಿಗೆ ಗುಡ್ನ್ಯೂಸ್: ಬೆಂಗಳೂರಿನಲ್ಲಿ ಇಂದ್ರಿಯ 6ನೇ ಮಳಿಗೆ ಆರಂಭ
ಶ್ರೀಗಳ ಆಶೀರ್ವಾದ ಪಡೆದ ರಾಧೇಶ್ಯಾಮ್ ಗೋಯೆಂಕಾ
ಕಾರ್ಯಕ್ರಮದ ಸಂದರ್ಭದಲ್ಲಿ ಇಮಾಮಿ ಸಂಸ್ಥೆಯ ಸಂಸ್ಥಾಪಕ ರಾಧೇಶ್ಯಾಮ್ ಗೋಯೆಂಕಾ, ಉದ್ಯಮಿ ಆರ್.ಕೆ. ಅಗರ್ವಾಲ್ ಹಾಗೂ ಉದ್ಯಮಿ ಜೆ.ಕೆ. ಜವೇರ್ ಅವರು ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದರು.
‘ನವರಾತ್ರ ನಮಸ್ಯಾ’ ಅಂಗವಾಗಿ ಶ್ರೀದುರ್ಗಾಸೂಕ್ತ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಭಜನಾ ಮಂಡಳಿಗಳಿಂದ ಭಜನೆ ಹಾಗೂ ದುರ್ಗಾ ದೀಪನಮಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಹಿರಿಯ ನ್ಯಾಯವಾದಿ ಗಣಪತಿ ಹೆಗಡೆ ದುವಾ, ಮಂಜುನಾಥ ರಾವ್ ಕೆ.ಎನ್. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಅರವಿಂದ ದರ್ಭೆ ದಂಪತಿಗಳು ದಿನಪ್ರಧಾನರಾಗಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















