ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಣಿಪಾಲ: ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ಮುಂಜಾನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಚೇತರಿಸಿಕೊಂಡಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ನಿನ್ನೆ ಮುಂಜಾನೆ ಆಸ್ಪತ್ರೆಗೆ ದಾಖಲಿಸುವ ವೇಳೆ ಗುರುಗಳು ಇದ್ದ ಸ್ಥಿತಿಗಿಂತಲೂ ಶೇ.40ರಷ್ಟು ಗುಣಮುಖರಾಗಿದ್ದಾರೆ. ಆದರೂ ಸಹ ವೈದ್ಯರು ಇನ್ನೂ ಎರಡು ದಿನ ಐಸಿಯುನಲ್ಲೇ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.
ಗುರುಗಳ ಆರೋಗ್ಯ ಕುರಿತಂತೆ ಯಾರೂ ಸಹ ಅನವಶ್ಯಕ ಗೊಂದಲ ಸೃಷ್ಠಿಸಬೇಡಿ. ಅಲ್ಲದೇ, ಗುರುಗಳನ್ನು ನೋಡಲು ಆಸ್ಪತ್ರೆ ಬಳಿ ಆಗಮಿಸಿದರೆ ಎಲ್ಲರಿಗೂ ತೊಂದರೆಯಾಗುತ್ತದೆ. ಹೀಗಾಗಿ, ಭಕ್ತರು ತಾವು ಇದ್ದಲ್ಲಿಯೇ ಗುರುಗಳ ಆರೋಗ್ಯ ಸುಧಾರಣೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ ಎಂದಿದ್ದಾರೆ.
ಇನ್ನು, ಶ್ರೀಗಳ ಆಪ್ತ ಕಾರ್ಯದರ್ಶಿ ಅನಂತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ ಹಾಗೂ ರಾಜ್ಯದ ಗಣ್ಯರು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಮಂಗಳೂರಿನ ಕರ್ಫ್ಯೂ ತೆರವುಗೊಂಡ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುಗಳ ಭೇಟಿಗೆ ಆಗಮಿಸಲಿದ್ದಾರೆ ಎಂದಿದ್ದಾರೆ.
ಇನ್ನು, ಅಷ್ಟ ಮಠದ ಯತಿಗಳು, ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಸೇರಿದಂತೆ ಹಲವು ಮಠಾಧೀಶರು ಹಾಗೂ ಗಣ್ಯಾತಿಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಗುರುಗಳ ಆರೋಗ್ಯ ವಿಚಾರಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post