ಜನನ ಕೌಮಾರ್ಯ, ಯವ್ವನ, ವೃದ್ಧಾಪ್ಯ, ಮರಣ ಇದು ಪ್ರಕೃತಿ ಸಹಜ ಧರ್ಮ. ಈ ಜನನದಿಂದ ಮರಣಗಳವರೆಗಿನ ರೀತಿನೀತಿಯು ಸಂಸ್ಕಾರಗಳ ಆಧಾರದಲ್ಲೇ ನಿರ್ಧಾರಿತವಾಗುತ್ತದೆ. ನಿರ್ಣಯ ಸಿಂದು ಮುಂತಾದ ಪುರಾತನ ಗ್ರಂಥಗಳಲ್ಲಿ ಪೂರ್ವ ಶೋಡಶ ಮತ್ತು ಉತ್ತರ ಶೋಡಶ ಸಂಸ್ಕಾರಗಳನ್ನು ಹೇಳಿದೆ. ಪೂರ್ವ ಶೋಡಶಗಳಲ್ಲಿ ಜನನಾತ್ ಪೂರ್ವ ಗರ್ಭ ಸಂಸ್ಕಾರಗಳಿವೆ. ಪುಂಸವನ, ಸೀಮಂತ ಇತ್ಯಾದಿಗಳೆಲ್ಲ ಗರ್ಭ ಸಂಸ್ಕಾರಗಳಾಗುತ್ತದೆ.
ಕೊನೆಯ ಹಂತ ಜನನ. ಜನಿತ ಶಿಶುವಿಗೆ ಹತ್ತು ದಿನಗಳ ಜನನ ಶೌಚಾದಿಗಳು ಕಳೆದ ಮೇಲೆ ಜಾತಕರ್ಮ ಸಂಸ್ಕಾರಗಳಾಗಬೇಕು. ಅಂದರೆ ಇದನ್ನು ವೈಜ್ಞಾನಿಕ ಪರಿಭಾಷೆಗಳಲ್ಲಿ Processing ಎನ್ನಬಹುದು. ಇದರ ಆಧಾರದಲ್ಲಿ ಮುಂದಿನ ಜೀವನ ಕ್ರಮಗಳು ನಿರ್ಧಾರಿತವಾಗುತ್ತದೆ.
ಮಗು ಹುಟ್ಟಿದ ಮೇಲೆ ಜನನಿಯೇ ಆ ಶಿಶುವಿಗೆ ಮೊದಲ ಗುರು. ಆಕೆಯಿಂದಲೇ ಮೊದಲ ಸಂಸ್ಕಾರಗಳಾಗುತ್ತದೆ. ಮಗುವಿನ ಸ್ವಾಸ್ಥ್ಯಕ್ಕಾಗಿ ಆಹಾರ ನಿಯಮ, ಮಗುವಿನ ಬೆಳವಣಿಗೆಗಳಿಗಾಗಿ ಮಗುವಿಗೆ ನಿತ್ಯ ತೈಲಾಭ್ಯಾಂಗ, ಮಗುವಿನ ಅಂಗಾಂಗ ಮರ್ಧನ ಇತ್ಯಾದಿ ಅನೇಕ ರೀತಿಯ ಕ್ರಿಯೆಗಳು ಮಗುವಿನ ಬೆಳವಣಿಗೆಗೆ ಪೂರಕವಾದ ಕಾರ್ಯಗಳಾಗುತ್ತದೆ. ಇದು ಲೌಕಿಕ ಶರೀರದ ಬೆಳವಣಿಗೆಗಳಾದರೆ, ಅಲೌಕಿಕ(ಮನಸ್ಸಿಗೆ ಬೇಕಾಗುವ ಕ್ರಿಯೆ) ಗಳಿವೆ. ಇದನ್ನು ಧರ್ಮ ಶಾಸ್ತ್ರದಲ್ಲಿ ವಿವರಿಸಿದೆ.
ಹುಟ್ಟಿದ ಮಗುವಿಗೆ ಮೊದಲ ಸಂಸ್ಕಾರ ಜಾತಕರ್ಮ, ನಂತರದ್ದು ಅನ್ನ ಪ್ರಾಶನ, ನಂತರ ವಿದ್ಯಾರಂಭ. ಇಲ್ಲಿಂದ ಮುಂದೆ ಗಂಡು ಮಗುವಿಗೊಂದು ರೂಪದ ಸಂಸ್ಕಾರ, ಹೆಣ್ಣು ಮಗುವಿಗೊಂದು ರೂಪದ ಸಂಸ್ಕಾರಗಳು. ಈ ಎರಡೂ ಲಿಂಗಗಳ ಶಿಶುವಿಗೆ ದೇವತಾ ವಿಚಾರದಲ್ಲಿ ಇನ್ನೊಂದು ನಡೆ ಬಹಳ ಪ್ರಾಮುಖ್ಯತೆಯ ಧರ್ಮವೊಂದಿದೆ. ಇದು ಮಗುವಿನ ಎಲ್ಲಾ ಸಂಸ್ಕಾರಗಳ ಧಾರಣಾ ಶಕ್ತಿಯನ್ನು ಹೆಚ್ಚಿಸುವಂತಹದ್ದು. ಸಾಮಾನ್ಯ ಕೆಲವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಹತ್ತು ದಿನಗಳ ಬಳಿಕ ಶುದ್ಧ ಕ್ರಿಯೆಗಳು ಮುಗಿದ ಬಳಿಕ ದೇವಸ್ಥಾನಕ್ಕೆ ಹೋಗಿ ಬರುವುದು ವಾಡಿಕೆಯಾಗಿದೆ. ಗರ್ಭದಲ್ಲಿ ಶಿಶುವಿಗೆ ಏಳು ತಿಂಗಳಾದನಂತರ ದಂಪತಿಗಳು ದೇವಸ್ಥಾನಗಳ ಧ್ವಜಸ್ಥಂಭ ದಾಟಿ ಒಳಗೆ ಹೋಗುವಂತಿಲ್ಲ. ಯಾವುದೇ ಯಜ್ಞ, ಪೂಜಾ ಕಾರ್ಯದಲ್ಲಿ ಯಜಮಾನಿಕೆ ಮಾಡುವಂತಿಲ್ಲ. ಇದನ್ನು ಗರ್ಭದೀಕ್ಷೆ ಎನ್ನುತ್ತಾರೆ. ಪ್ರಸವಾನಂತರ ಶುದ್ಧವಾದ ಬಳಿಕವೇ ಹೋಗಬಹುದಾದರೂ ತಾಯಿಗೆ ದೇವಸ್ಥಾನ ಪ್ರವೇಶಕ್ಕೆ ಕಾಲ ಪಕ್ವ ಆಗಬೇಕಾದರೆ ಮಗು ಜನಿಸಿದಲ್ಲಿಂದ 40 ದಿನ ಕಾಯಬೇಕು. ಕೆಲವೊಮ್ಮೆ 24 ದಿನವೂ ಸಾಕೆಂದೂ ಹೇಳಿದೆ. ಇದನ್ನು ರೂಢಿ ಭಾಷೆಯಲ್ಲಿ ನಲವತ್ತು ನೀರು ಎಂದಿದೆ. ಈ ನಲವತ್ತು ಸ್ನಾನದ ಬಳಿಕವೇ ಮಂದಿರದೊಳಗಿನ ಧ್ವಜಸ್ಥಂಭ ದಾಟಿ ದೇವರ ದರ್ಶನ ಪಡೆಯಬೇಕು ಮತ್ತು ಪ್ರಸಾದ ಸ್ವೀಕರಿಸಬೇಕು. ಮೊದಲಬಾರಿಗೆ ಮಗುವಿನೊಂದಿಗೇ ಹೋಗಬೇಕು. ನಂತರ ಒಬ್ಬರೇ ಹೋಗುವುದಕ್ಕಡ್ಡಿ ಇಲ್ಲ.
ಯಾಕೆ ಮೊದಲ ಬಾರಿಗೆ ಮಗುವಿನೊಂದಿಗೆ ಹೋಗಬೇಕು? ಯಾಕೆ ಶೌಚ ಮುಗಿದ ಮಾರನೆಯ ದಿನ ಹೋಗಬಾರದು?
ತಾಯಿಗೆ ಸಾಮಾನ್ಯ ನಲವತ್ತು ದಿನಗಳವರೆಗೆ ಸ್ರಾವ ಇರುತ್ತದೆ ಎಂಬುದು ಮೊದಲ ಕಾರಣ. ತಾಯಿ ಮಗುವನ್ನು ಬಿಟ್ಟು ಹೋಗಬಾರದು ಎಂಬುದೂ ಒಂದು ಕಾರಣ. ಮಗುವಿನೊಂದಿಗೆ ಹೋಗಿ ದೇವರ ತೀರ್ಥಪ್ರಸಾದ ಸ್ವೀಕರಿಸಲೇಬೇಕು. ಆದರೆ ನಲವತ್ತು ದಿನಕ್ಕೆ ಮುಂಚೆ ಮಗುವಿಗೆ ಸ್ಥನ್ಯ ಪಾನವಲ್ಲದೆ ಬೇರೇನೂ ಪಾನ ಮಾಡಿಸುವ ಹಾಗಿಲ್ಲ. ಯಾಕೆಂದರೆ ಮಗುವಿನ ಅನ್ನ ನಾಳವು ಪುಷ್ಪದ ಕುಸುಮಗಳಷ್ಟೇ ಮೆದುವಾಗಿರುತ್ತದೆ. ಆ ಸಮಯದಲ್ಲಿ ತೀರ್ಥ ಪ್ರಸಾದ ಸೇವಿಸಿದರೆ ಅಪಾಯಗಳೇ ಹೆಚ್ಚು. ಅಂದರೆ ದೇವಸ್ಥಾನಕ್ಕೆ ಹೋದರೆ ತೀರ್ಥ ಸೇವನೆ ಮಾಡದೆ ಬರುವಂತಿಲ್ಲ. ಮಾಡಿದರೆ ಶಿಶುವಿನ ದೇಹದ ರಚನೆಯೊಳಗಿನ ವ್ಯವಸ್ಥೆಗೆ ಉಪದ್ರವಾಗಬಹುದು. ಶಿಶುವನ್ನು ಬಿಟ್ಟು ದೇವಸ್ಥಾನಕ್ಕೆ ತಾಯಿಯೊಬ್ಬಳೇ ಹೋಗುವಂತಿಲ್ಲ. ಇದಕ್ಕಾಗಿ ನಲವತ್ತು ದಿನ ಹೋಗಲೇಬಾರದು ಎಂಬ ವಾಡಿಕೆಯಾಯ್ತು.
ಮಗುವಿಗೆ ಮೊದಲ ಅನ್ನ ಪ್ರಾಶನವೇ ದೇವರ ಪ್ರಸಾದ. ನಲವತ್ತು ದಿನಕ್ಕೆ ಮುಂಚೆ ಪ್ರಾಶನ ಮಾಡಿಸುವಂತಿಲ್ಲ. ಒಟ್ಟಿನಲ್ಲಿ ಶಿಶುವನ್ನು ಬಿಟ್ಟು ಪ್ರಥಮ ಬಾರಿ ದೇವಸ್ಥಾನಕ್ಕೆ ಹೋಗುವಂತಿಲ್ಲ. ಹೋದರೆ ಪ್ರಸಾದ ಸ್ವೀಕರಿಸದೆ ಬರುವಂತಿಲ್ಲ. ಪ್ರಸಾದ ಸ್ವೀಕರಿಸಿದರೆ ಮಗುವಿಗೆ ಅಪಥ್ಯವಾಗುತ್ತದೆ. ಹಾಗಾಗಿ ನಲವತ್ತು ದಿನಗಳ ನಂತರವೇ ಹೋಗಬೇಕು ಎಂಬ ನಿಯಮವಿರುವುದು.
ಹೆಚ್ಚಿನವರಿಗೆ ಈ ವಿಚಾರ ಗೊತ್ತಿಲ್ಲ. ಅಕಾಲದಲ್ಲಿ ಮಗುವಿಗೆ ದೇವರ ದರ್ಶನ, ಅಲ್ಲಿನ ರಷ್ಮಿಗಳ ಗ್ರಹಣ(Vibration) ತೊಂದರೆಯಾಗಬಹುದು. ಇದು ನೇರ ಮೆದುಳಿಗೆ ಪರಿಣಾಮ ಬೀರಬಹುದು. ಮುಂದೆ ಆ ಮಗು ಸಂಸ್ಕಾರ ಹೀನತೆಯನ್ನೋ, ಅಡ್ಡದಾರಿ ಹಿಡಿಯುವಂತೆಯೋ ಆಗಬಹುದು ಎಂಬುದನ್ನು ಪ್ರಾಜ್ಞರುಗಳು ಅನುಭವ ಪೂರ್ವಕ ಸಂಶೋಧನೆ ನಡೆಸಿ ವಿಧಿವಿಧಾನಗಳ ನಿಯಮವನ್ನು ರೂಢಿಸಿಕೊಂಡರು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post