ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾಗಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆ ಮೇಲ್ಮನೆಯಲ್ಲೂ ಸಹ ಇಂದು ಅಂಗೀಕಾರ ಪಡೆದಿದೆ.
ಮಹತ್ವದ ವಿಧೇಯಕದ ಪರವಾಗಿ ರಾಜ್ಯಸಭೆಯಲ್ಲಿ 149 ಸದಸ್ಯರು ಮತ ಚಲಾಯಿಸಿದರು.
ಈ ವೇಳೆ ಮಾತನಾಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಈ ಮಸೂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರಿಯಲ್ಲಿ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಒದಗಿಸಲಿದೆ ಎಂದು ಸದನಕ್ಕೆ ತಿಳಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಈ ವಿಧೇಯಕ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಕಾನೂನು ನೀತಿಯಾಗಿ ರೂಪುಗೊಳ್ಳಲಿದೆ. ಈ ಮೂಲಕ ಮೇಲ್ವರ್ಗದ ಬಡವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ದೊರೆಯಲಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಮುಂದುವರೆ ಜನಾಂಗದಲ್ಲಿರುವವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಧೈರ್ಯ ಮಾಡಿದ ಮೋದಿ ಸರ್ಕಾರ ಕಳೆದ ಸೋಮವಾರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡು, ನಿನ್ನೆ ಲೋಕಸಭೆಯಲ್ಲಿ ಮಂಡನೆ ಮಾಡಿ, ಭಾರೀ ಬೆಂಬಲದೊಂದಿಗೆ ಅಂಗೀಕಾರ ಪಡೆದುಕೊಂಡಿದೆ.
ಈ ಮೀಸಲಾತಿ ಚುನಾವಣಾ ತಂತ್ರ, ರಾಜಕೀಯ ಗಿಮಿಕ್, ರಾಜಕೀಯ ಸ್ಟಂಟ್ ಎಂದೆಲ್ಲಾ ಹೇಳಿಕೆಗಳನ್ನು ನೀಡಿದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕಲಾಪದಲ್ಲಿ ಮಾತ್ರ ಮಸೂದೆಗೆ ಬೆಂಬಲ ಸೂಚಿಸಿವೆ. ರಾಜಕೀಯವಾಗಿ ದೊಡ್ಡ ಪರಿಣಾಮ ಬೀರುವ ಈ ಮಸೂದೆಯನ್ನು ವಿರೋಧಿಸಿದರೆ ಅದರ ಅಡ್ಡ ಪರಿಣಾಮ ತಮ್ಮ ಮೇಲಾಗುತ್ತವೆ ಎಂದು ಪ್ರತಿಪಕ್ಷಗಳು ಹೆದರಿದ್ದವು.
ಸಂವಿಧಾನದ ಕಲಂ 15 ಹಾಗೂ 16ಕ್ಕೆ ತಿದ್ದುಪಡಿ ಮಾಡಿ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಗೆ ನಿನ್ನೆ ಲೋಕಸಭೆಯಲ್ಲಿ 343 ಸದಸ್ಯರು ಬೆಂಬಲ ಸೂಚಿಸಿದ್ದರೆ, ಮೂವರು ಮಾತ್ರ ವಿರುದ್ಧ ಮತ ಚಲಾಯಿಸಿದ್ದರು.
Discussion about this post