ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ, ದೇಶದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ(93) #SMKrishna ಇಂದು ನಸುಕಿನಲ್ಲಿ ವಿಧಿವಶರಾಗಿದ್ದು, ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಉನ್ನತ ವಿದ್ಯಾರ್ಹತೆಯ ರಾಜಕಾರಣಿ
ಸಾಮಾನ್ಯವಾಗಿ ರಾಜಕಾರಣಿಗಳು ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವುದಿಲ್ಲ. ಆದರೆ, ಎಸ್.ಎಂ. ಕೃಷ್ಣ ಅವರು ಇದಕ್ಕೆ ಅಪವಾದವಾಗಿದ್ದರು.
ಉನ್ನತ ವಿದ್ಯಾಭ್ಯಾಸ ಹೊಂದಿರುವ ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳನ್ನು ಅಗ್ರಗಣ್ಯರಾಗಿದ್ದು ಕೃಷ್ಣ, ಬಹುಷಃ ಈ ಕಾರಣದಿಂದಲೇ ತಮ್ಮ ಅವಧಿಯಲ್ಲಿ ದೂರದೃಷ್ಠಿಯ ನಿರ್ಧಾರಗಳನ್ನು ಕೈಗೊಂಡಿದ್ದರು ಎನಿಸುತ್ತದೆ.
ಎಸ್.ಎಂ. ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು, ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ನಂತರ ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ, ನಂತರ ವಾಷಿಂಗ್ಟನ್’ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ವಿದ್ಯಾರ್ಥಿವೇತನವನ್ನು ಪಡೆದರು.

ವಿಧಾನಸಭೆಗೆ ಮೊದಲ ಬಾರಿ 1962 ರಲ್ಲಿ ಚುನಾಯಿತರಾದರು. 1968ರಲ್ಲಿ ಲೋಕಸಭೆಗೆ ಚುನಾಯಿತರಾದರು. 1971ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ 1972 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು.
1983ರಲ್ಲಿ ಉದ್ಯಮ ಖಾತೆ ಮತ್ತು 1984 ರಲ್ಲಿ ವಿತ್ತ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿ, 1989 ರಿಂದ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. 1992 ರಿಂದ 1994ರವರೆಗೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದರು.
1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, 1999 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. 1999ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೃಷ್ಣ ಅವರು ನೀಡಿದಷ್ಟು ಕೊಡುಗೆ ಇನ್ನಾವುದೇ ರಾಜಕಾರಣಿ ನೀಡಿಲ್ಲ. ಇಂದು ಬೆಂಗಳೂರು ಐಟಿ ಹಬ್, ಸಿಲಿಕಾನ್ ಸಿಟಿ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅಡಿಪಾಯ ಹಾಕಿದ್ದೇ ಕೃಷ್ಣ.
ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಇರಿಸುವಲ್ಲಿ ಅವರು ಪೂರ್ವಭಾವಿ ಪಾತ್ರ ವಹಿಸಿದ್ದಾರೆ.
ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಐಟಿ ಕ್ಷೇತ್ರಕ್ಕೆ ಉತ್ತೇಜನ ನೀಡಿದರು. ಇದರ ಪರಿಣಾಮವಾಗಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಗೆ ಬೆಂಗಳೂರು ಪರ್ಯಾಯವಾಗಿ ಬೆಳೆಯುತ್ತಿದೆ ಮತ್ತು ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post