ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅದು ಜನರಿಗಾಗಿ ಮಿಡಿದ ಮನ, ಸಮಾಜ ಸೇವೆಗಾಗಿಯೇ ಬದುಕನ್ನು ಮೀಸಲಿಟ್ಟಿದ್ದ ಜನಪರ ಜೀವ… ಬಹುಷಃ ಅವರ ಹೆಸರನ್ನು ಕೇಳದ ತೀರ್ಥಹಳ್ಳಿ ಭಾಗದ ಮಂದಿ ಬಹುತೇಕ ಇಲ್ಲ ಎಂದೇ ಭಾವಿಸುತ್ತೇನೆ.. ಅವರೇ ಮಲೆನಾಡಿನ ಮಾಣಿಕ್ಯ ನಮ್ಮ ಸತೀಶಣ್ಣ ಅಂದರೆ ಪಿ.ಸಿ. ಸತೀಶ್ ಶೆಟ್ಟಿ.
30 ವರ್ಷಗಳಿಂದ ಸದಾ ಸಾಮಾಜಿಕ, ಸಂಘಟನೆ, ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿದ್ದ ಸತೀಶಣ್ಣ, ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾಗಿ, ರಾಮೇಶ್ವರ ದೇವಸ್ಥಾನ ಸಮಿತಿ ಸದಸ್ಯರಾಗಿ, ಜಯ ಕರ್ನಾಟಕ ಅಧ್ಯಕ್ಷರಾಗಿ, ಬಾಳೆಬೈಲು ಸಿದ್ದೇಶ್ವರ ಗುಡ್ಡ ದೀಪೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ನೂರಾರು ಸಂಘಟನೆ, ಸಾವಿರಾರು ಕಾರ್ಯಕ್ರಮಕ್ಕೆ ಸ್ಫೂರ್ತಿ ಆಗಿದ್ದ ಶೆಟ್ಟರು ತೀರ್ಥಹಳ್ಳಿಯ ಆಸ್ತಿ ಆಗಿದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಸದಸ್ಯರಾಗಿ ಪಟ್ಟಣದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದ ಇವರು, ಎಲ್ಲರ ಸ್ನೇಹ ಸಂಪಾದಿಸುವ ಮೂಲಕ ಸತೀಶಣ್ಣ ಎಂದೇ ಹೆಸರು ಮಾಡಿದ್ದ ಸ್ನೇಹ ಜೀವಿ!!
ಪ್ರಾಯಶಃ 2002-2003ರ ಸಾಲಿನಲ್ಲಿ ಸಿದ್ದೇಶ್ವರ ಗುಡ್ಡ ದೀಪೋತ್ಸವದ ದಶಮಾನೋತ್ಸವ ಸಂಭ್ರಮದ ವೇಳೆ, ಸಮಿತಿ ಅಧ್ಯಕ್ಷರಾಗಿ ಸತೀಶಣ್ಣ ಸೇವೆ ಸಲ್ಲಿಸುತ್ತಿದ್ದ ಸಮಯ. ಆಗ ಶಿವಮೊಗ್ಗ ಜಿಲ್ಲೆಯ ಪತ್ರಿಕೆಯೊಂದರ ತೀರ್ಥಹಳ್ಳಿ ತಾಲೂಕು ವರದಿಗಾರನಾಗಿ ನಾನು ಸೇವೆ ಸಲ್ಲಿಸುತ್ತಿದ್ದ ದಿನಗಳು.
ಆಗ ಸಿದ್ದೇಶ್ವರ ಗುಡ್ಡ ದೀಪೋತ್ಸವದಲ್ಲಿ ನನ್ನನ್ನು ಪ್ರೋತ್ಸಾಹ ಮಾಡಿದ್ದರು. ಬೆಟ್ಟದಲ್ಲಿ ನೆಲೆಸಿರುವ ಸ್ವಾಮಿಯ ಬಗ್ಗೆ ಒಂದು ಪುಸ್ತಕವನ್ನು ಬರೆದು ಬಿಡುಗಡೆ ಮಾಡೋಣ ಸತೀಶ್ ಅಣ್ಣ ಎಂದಾಗ ನನ್ನ ಮನಸ್ಸಿಗೆ ನೋವು ಆಗದ ಹಾಗೆ ನನ್ನ ಬಳಿ ಮುಂದೆ ಮಾಡೋಣ ಈಗ ಸಣ್ಣದಾಗಿ ಕರ ಪತ್ರದ ರೀತಿಯಲ್ಲಿ ಮಾಡೋಣ ಎಂದು ಹೇಳಿದ್ದರು.
ದಶಮಾನೋತ್ಸವ ಸಂಭ್ರಮದ ದಿನದಂದು ನಾಡಿನ ಗಣ್ಯರನ್ನು ಕಾರ್ಯಕ್ರಮಕ್ಕೆ ಕರೆದು ಅವರಿಂದ ಬಿಡುಗಡೆ ಮಾಡಿಸಿ ವೇದಿಕೆಯಲ್ಲಿ ನನ್ನನ್ನು ನಿಲ್ಲಿಸಿಕೊಂಡು ಸಣ್ಣ ಸಂಚಿಕೆ ರೀತಿಯಲ್ಲಿ ಬೆಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಕಿರು ಪರಿಚಯದ ಹೊತ್ತಿಗೆ ಬಿಡುಗಡೆ ಮಾಡಿಸಿದ್ದರು.
ಸ್ನೇಹ ಜೀವಿ ಸತೀಶಣ್ಣ ಅವರ ಬಗ್ಗೆ ಮೇಲಿನ ಒಂದು ಘಟನೆ ಉದಾಹರಣೆಗೆ ಅಷ್ಟೇ.
ಅವರು ನಾವುಗಳು ಸಿದ್ದೇಶ್ವರ ಬೆಟ್ಟದ ಮೇಲೆ ದೀಪ ಆಚರಿಸಿ ಬೆಟ್ಟದ ಕೆಳಗೆ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿದರೆ ಆ ಕಾರ್ಯಕ್ರಮದ ಕೊನೆ ಹಾಡು ಯಾವಾಗಲು ಅವರ ಅಚ್ಚು ಮೆಚ್ಚಿನ ಹಾಡು. ನಗುವಾಗ ಎಲ್ಲ ನೆಂಟರು, ಅಳುವಾಗ ಯಾರು ಇಲ್ಲ… ಎಂಬ ಹಾಡನ್ನು ಸಂಗೀತ ಕಾರ್ಯಕ್ರಮ ನಡೆಸುವವರು ಹೇಳುವಂತೆ ವಿನಮ್ರವಾಗಿ ಕೇಳುತ್ತಾ ಆ ಹಾಡಿಗೆ ಇವರೂ ಧ್ವನಿಯಾಗಿ ನಮ್ಮ ಜೊತೆ ನಿಂತು ಆನಂದಿಸುತ್ತಾ ಅವರ ಮನದ ಮೂಲೆಯಲ್ಲಿ ಅಡಗಿದ್ದ ದುಃಖವನ್ನು, ಸಂತಸವನ್ನು ಹೊರಹಾಕುತ್ತಾ ಬೆಟ್ಟದ ಬುಡದಲ್ಲಿ ಕುಲದಲ್ಲಿ ಕೀಳ್ಯಾವುದೂ ಎಂಬ ಹಾಡಿಗೆ ನಾವೆಲ್ಲರೂ ಹೆಜ್ಜೆ ಹಾಕಿದ ದಿನಗಳು ಇಂದು ನಮಗೆ ನೆನಪು ಮಾತ್ರ. ಜನರ ನಡುವೆ ಅವರು ಬೆರತು ಗಳಿಸಿದ ಪ್ರೀತಿಗೆ ಇದು ಸಾಕ್ಷಿ.
ಸತೀಶಣ್ಣ ಇಂದು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಅವರ ಒಡಾನಾಟದಲ್ಲಿ ಕಳೆದ ದಿನಗಳ ನೆನಪು ಇಂದು ಮನದಲ್ಲಿ ಹಾಸುಹೊಕ್ಕಾಗಿದೆ. ಅಣ್ಣನ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯುವ ಪ್ರಶ್ನೆಯೇ ಇಲ್ಲ. ಅವರು ನಿಜಕ್ಕೂ ಮಲೆನಾಡಿನ ಹೆಮ್ಮೆಯ ಸುಪುತ್ರ. ಮಲೆನಾಡಿನ ಮಾಣಿಕ್ಯ.
ಮುಂದಿನ ದಿನಗಳಲ್ಲಿ ನಮ್ಮ ಅನಂತಿಯವರು ದೊಡ್ಡ ಲೇಖಕರಾಗುತ್ತಾರೆ ಎಂದು ಹೇಳಿದ ಸತೀಶಣ್ಣ ಇಂದು ಇಹಲೋಕ ತ್ಯಜಿಸಿ ಹೊರಟು ಹೋಗಿದ್ದಾರೆ.
ನೂರಾರು ಜನರಿಗೆ ಸಹಾಯ ಹಸ್ತ ಚಾಚಿದ ಹಲವು ಉದಾಹರಣಯಿದೆ. ಆದರೆ ಅವೆಲ್ಲವನ್ನೂ ಬರೆಯುವ ಮನಸ್ಸಾಗುತ್ತಿಲ್ಲ, ಮನದಲ್ಲಿ ಹೆಪ್ಪುಗಟ್ಟಿದೆ ದುಃಖ!
ಸತೀಶಣ್ಣನ ಅಗಲಿಕೆಗೆ ಮನಸ್ಸು ಭಾರವಾಗಿ ಕಣ್ಣುಗಳಲ್ಲಿ ನೀರು ಬರುತ್ತಿಲ್ಲ, ಅತೀವ ದುಃಖ, ಭಾವನೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಆಗಲೇ ನಾನು ಊರು ಬಿಟ್ಟು ಸುಮಾರು 14 ವರುಷಗಳು ಕಳೆದು ಹೋಗಿವೆ. ಊರಿಗೆ ಹೋದಾಗ ಮುಂದಿನ ಸರಿ ಸತೀಶಣ್ಣ ಭೇಟಿ ಮಾಡೋಣ ಎಂದುಕೊಂಡು ಹಲವು ಬಾರಿ ಬಂದಿದ್ದೇನೆ. ಆದರೆ ಇನ್ನು ಅವರು ಬರಿ ನೆನಪು ಮಾತ್ರ. ಬಾರದ ಲೋಕಕ್ಕೆ ಹೋಗಿದ್ದಾರೆ ದೈಹಿಕವಾಗಿ.
ಭಗವಂತ ಶ್ರೀ ಸಿದ್ದೇಶ್ವರ ಸ್ವಾಮಿ ಮತ್ತು ಬಾಳೆಬೈಲಿನ ಶ್ರೀ ವೆಂಕಟರಮಣ ಸ್ವಾಮಿ ಸತೀಶಣ್ಣನ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Get in Touch With Us info@kalpa.news Whatsapp: 9481252093
Discussion about this post