ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಳೇ ಶಿವಮೊಗ್ಗ ಭಾಗದಲ್ಲಿ ವಿಧಿಸಲಾಗಿದ್ದ ಸೀಲ್ ಡೌನ್ ತೆರವುಗೊಳಿಸಿದ ಬೆನ್ನಲ್ಲೇ ನಗರದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಗಾಳಿಗೆ ತೂರಿದ ಜನ ಸೋಂಕಿನ ಭಯವೇ ಇಲ್ಲದೇ ಮುಗಿಬಿದ್ದಿರುವುದು ಕಂಡು ಬಂದಿದೆ.
ಪ್ರಮುಖವಾಗಿ, ಗಾಂಧಿ ಬಜಾರ್’ನಲ್ಲಿ ಎಲ್ಲ ಅಂಗಡಿ ಮುಂಗಟ್ಟು ಹಾಗೂ ವ್ಯಾಪಾರ ವ್ಯವಹಾರಗಳು ಆರಂಭವಾಗಿವೆ. ಇನ್ನು, ಬಹಳಷ್ಟು ಮಂದಿ ಮಾಸ್ಕ್ ಧರಿಸದೇ ಇರುವುದು ಸಹ ಕಂಡು ಬಂದಿದೆ.
ಪ್ರಮುಖವಾಗಿ ಸಾಮಾಜಿಕ ಅಂತರ ಎಂಬುದನ್ನು ಜನರು ಗಾಳಿಗೆ ತೂರಿದ್ದು, ವ್ಯಾಪಾರಸ್ಥರೂ ಸಹ ಇದಕ್ಕೆ ತಲೆಕೆಡಿಸಿಕೊಂಡಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಹಳೇ ಶಿವಮೊಗ್ಗ ಭಾಗದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಡಿಯ ಭಾಗದಲ್ಲಿ ಸೀಲ್ ಡೌನ್ ಮಾಡಲಾಗಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿನ್ನೆ ತುರ್ತು ಸಭೆ ನಡೆಸಿ ನಿರ್ಧಾರ ಕೈಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸೀಲ್ ಡೌನ್ ತೆರವುಗೊಳಿಸಲು ಆದೇಶಿಸಿದರು.
ಜನರು ಒತ್ತಡಕ್ಕೆ ಸಚಿವರು ಹಾಗೂ ಜಿಲ್ಲಾಡಳಿತವೇನೋ ಮಣಿದು ಸೀಲ್ ಡೌನ್ ತೆರವುಗೊಳಿಸಿದೆ. ಆದರೆ, ಇಂತಹ ಸಂದರ್ಭದಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಜನರೇ ಸ್ವಯಂ ಪ್ರೇರಿತರಾಗಿ ಕೈಗೊಳ್ಳಬೇಕು. ಆದರೆ, ಇದು ನಗರದ ಯಾವುದೇ ಭಾಗದಲ್ಲಿ ಕಂಡುಬರುತ್ತಿಲ್ಲ.
ಕೊರೋನಾ ಸೋಂಕು ಜಿಲ್ಲೆಯಲ್ಲಿ ಕಾಲಿಟ್ಟ ನಂತರ ನಿನ್ನೆ ಅತಿ ಹೆಚ್ಚು ಅಂದರೆ 126 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಶಿವಮೊಗ್ಗದಲ್ಲಿಯೇ ಅಧಿಕವಾಗಿತ್ತು. ಇಂತಹ ಸಂದರ್ಭದಲ್ಲಿ ಜನರು ಎಷ್ಟು ಮುಂಜಾಗ್ರತೆ ವಹಿಸಿದರೂ ಅದು ಕಡಿಮೆಯೇ. ಹೀಗಿರುವಾಗ, ವ್ಯಾಪಾರಸ್ಥರು ಹಾಗೂ ಜನ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಗಾಳಿಗೆ ತೂರಿ, ಮುಂದಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾದರೆ ಅದಕ್ಕೆ ಜನರೇ ನೇರ ಕಾರಣವಾಗಿರುತ್ತಾರೆ ಎಂಬುದು ಸತ್ಯ.
Get In Touch With Us info@kalpa.news Whatsapp: 9481252093
Discussion about this post