ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಪಾರ ಮಾನವೀಯತೆ, ಪ್ರೀತಿ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸೇವೆ ನೀಡುತ್ತಿರುವ ಶ್ರೀ (Shankara Cancer Hospital) ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ 15ನೇ ವಾರ್ಷಿಕೋತ್ಸವವನ್ನು ಸೆ. 27ರಂದು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವ ಹಲವು ಹೊಸ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಸಚಿವ ಯು.ಟಿ. ಖಾದರ್, ಕಳೆದ 15 ವರ್ಷಗಳಿಂದ ವಿವಿಧ ಸವಾಲುಗಳ ನಡುವೆಯೂ ಶಂಕರ ಕ್ಯಾನ್ಸರ್ ಆಸ್ಪತ್ರೆ ತೋರಿರುವ ಛಲ, ಬದ್ಧತೆ ಮತ್ತು ದೂರದೃಷ್ಟಿ ಇಂದಿನ ಯುವಜನತೆಗೆ ದೊಡ್ಡ ಮಾದರಿಯಾಗಿದೆ ಎಂದು ಹೇಳಿದರು.
ಅಪಾರ ಮಾನವೀಯತೆ, ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಪೈಕಿ ಶಂಕರ ಕ್ಯಾನ್ಸರ್ ಆಸ್ಪತ್ರೆಯೂ ಪ್ರಮುಖ ಸ್ಥಾನ ಪಡೆದಿದೆ. ಚಿಕಿತ್ಸೆಯ ಜತೆಗೆ ಸಮಾಜಮುಖಿ ಸೇವೆಗೆ ಆದ್ಯತೆ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.
ದಾನಿಗಳ ಪ್ರತಿಯೊಂದು ಪೈಸೆಯೂ ಬಡವರ ಚಿಕಿತ್ಸೆಗೆ: ಖಾದರ್
ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾನಿಗಳು ನೀಡುತ್ತಿರುವ ಪ್ರತಿಯೊಂದು ಪೈಸೆಯೂ ಪಾರದರ್ಶಕವಾಗಿ ಬಡ ಮತ್ತು ಸಾಮಾನ್ಯ ಜನರ ಚಿಕಿತ್ಸೆಗೆ ಬಳಕೆಯಾಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಯು.ಟಿ. ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.
Also Read>> ಜಾಲ್ನಾ–ಯಲಹಂಕ ವಿಶೇಷ ರೈಲುಗಳ ಸೇವೆ ವಿಸ್ತರಣೆ
ಆಸ್ಪತ್ರೆಯು ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿ ಉಳಿಯದೆ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ. ಒಂದು ಆಸ್ಪತ್ರೆಯನ್ನು ಸಮಾಜಮುಖಿಯಾಗಿ ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಶಂಕರ ಕ್ಯಾನ್ಸರ್ ಆಸ್ಪತ್ರೆ ದೇಶಕ್ಕೇ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
Shankara Cancer Hospital : 15 ವರ್ಷಗಳ ಸೇವಾ ಪಯಣ ಮೆಲುಕು ಹಾಕಿದ ಡಾ. ಬಿ.ಎಸ್. ಶ್ರೀನಾಥ್
ಸಂಸ್ಥೆಯ ಮುಖ್ಯಸ್ಥ ಡಾ. ಬಿ.ಎಸ್. ಶ್ರೀನಾಥ್ ಮಾತನಾಡಿ, ಕಳೆದ 15 ವರ್ಷಗಳಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ರೋಗಿಗಳ ಅಗತ್ಯಗಳಿಗೆ ಸ್ಪಂದಿಸುವುದು, ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವುದು ಹಾಗೂ ಸಮಾಜದ ಅಗತ್ಯವಿರುವ ವರ್ಗಗಳಿಗೆ ನೆರವಾಗುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿಯೂ ಕ್ಯಾನ್ಸರ್ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಇನ್ನಷ್ಟು ಅನುಕೂಲವಾಗುವಂತಹ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದರು.
15ನೇ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆಯಲ್ಲಿ ಹೊಸ ಸೌಲಭ್ಯಗಳ ಉದ್ಘಾಟನೆಯೂ ನಡೆದಿದ್ದು, ಇದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಡಾ. ಬಿ.ಎಸ್. ಶ್ರೀನಾಥ್, ಟ್ರಸ್ಟಿಗಳಾದ ತೇಜಸ್ವಿನಿ ಅನಂತ್ ಕುಮಾರ್, ನಾಗರಾಜ್, ಆಸ್ಪತ್ರೆಯ ಇತರ ಗೌರವಾನ್ವಿತ ಟ್ರಸ್ಟಿಗಳು, ಹಿರಿಯ ವೈದ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









