ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
2019-20ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಕೋರ್ಸ್‌ಗಳಿಗೆ #Kuvempu University Distance Education ನೊಂದಣಿಯಾಗಿದ್ದ ವಿದ್ಯಾರ್ಥಿಗಳಿಗೆ ಕೋವಿಡ್-19 #Covid-19 ಕಾರಣದಿಂದ ಪರೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಅವರೆಲ್ಲರೂ ತೀವ್ರ ಹತಾಶೆಗೊಳಗಾಗಿದ್ದು, ಪ್ರಾಣಹಾನಿಯ ಸಂಭವವನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 ನಿಯಮ 15 (5)ರಲ್ಲಿ ಕುಲಪತಿಗಳಿಗೆ ಪ್ರದತ್ತವಾದ ಅಧಿಕಾರವನ್ನು ಬಳಸಿ ಫಲಿತಾಂಶ ಪ್ರಕಟಿಸಲಾಗಿದೆ. ಇದರಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗಿರುವುದಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ಕೋವಿಡ್ ಕಾರಣದಿಂದ ಇದುವರೆವಿಗೂ ಪರೀಕ್ಷೆ ನಡೆಸಲು ಸಾಧ್ಯವಾಗದಿರುವುದರಿಂದ ಶೈಕ್ಷಣಿಕ ಅವಧಿ ಮೀರುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಅಡಚಣೆಯಾಗಬಾರದೆಂಬ ಸದುದ್ದೇಶದಿಂದ ಯುಜಿಸಿ #UGC ಮಾರ್ಗಸೂಚಿ, ಉನ್ನತ ಶಿಕ್ಷಣ ಇಲಾಖೆಯ ಆದೇಶ, ಮತ್ತು ಉಚ್ಛ ನ್ಯಾಯಾಲಯದ ಕಾನೂನು ಸಲಹೆಗಾರರ ವರದಿಯನ್ನಾಧರಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಅನುಮಾನ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಜನವರಿ 13ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರಸ್ತುತ ಅನುಸರಿಸುತ್ತಿರುವ ಮಾದರಿಯನ್ನೇ ಮುಂದುವರೆಸಲು ಪತ್ರ ಬರೆದಿದ್ದಾರೆ. ಇನ್ನು ಮೈಸೂರು ವಿವಿ, ಮಂಗಳೂರು ವಿವಿ, ಕರ್ನಾಟಕ ರಾಜ್ಯ ಮುಕ್ತ ವಿವಿಗಳು, ಆಂತರಿಕ ಅಂಕಗಳ ಆಧಾರದ ಮೇಲೆ ದೂರಶಿಕ್ಷಣದ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಪ್ರಮೋಟ್ ಮಾಡಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕುವೆಂಪು ವಿಶ್ವವಿದ್ಯಾಲಯ ಕೂಡ ಕರ್ನಾಟಕ ಉಚ್ಛ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಸ್ನಾತಕ ಪದವಿಯ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶವನ್ನು ಮಾತ್ರ ಪ್ರಕಟಿಸಿದೆ. ಉಳಿದಂತೆ ಎಲ್ಲಾ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಿ ಅಂಕಪಟ್ಟಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Also read: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ 10ಲಕ್ಷ ರೂ. ನೆರವು: ಸಚಿವ ಅಶ್ವತ್ಥನಾರಾಯಣ ಘೋಷಣೆ
ಪ್ರಸ್ತುತ ಪ್ರಕಟಿಸಲಾದ ಫಲಿತಾಂಶದಲ್ಲಿ 2007 ವಿದ್ಯಾರ್ಥಿಗಳ ಫಲಿತಾಂಶವನ್ನು ನಿರ್ದಿಷ್ಟ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ದೂರ ಶಿಕ್ಷಣ ವಿದ್ಯಾರ್ಥಿಗಳ ಎಲ್ಲಾ ಆಂತರಿಕ ಕಿರು ಪುಸ್ತಕಗಳನ್ನು ರೆಗ್ಯುಲರ್ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆಯೇ ಪರಿಕ್ಷಾ ಮಂಡಳಿಯ ಅಧ್ಯಕ್ಷರು, ಮತ್ತು ಸದಸ್ಯರು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ಮೌಲ್ಯಮಾಪನ ಮಾಡಿದ್ದಾರೆ. ಫಲಿತಾಂಶದ ಬಗ್ಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ತಳೆದಿರುವ ಅಭಿಪ್ರಾಯ ಸರ್ಕಾರದ ಆದೇಶ ಮತ್ತು ಯುಜಿಸಿ ನಿರ್ದೇಶನಕ್ಕೆ ಅನುಗುಣವಾಗಿರುವುದಿಲ್ಲ. ಹೀಗಾಗಿ ಸಾರ್ವಜನಿಕರು ಗೊಂದಲ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post