ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಮಲೆನಾಡಿನ ಮನಮೋಹಕ ಹಚ್ಚ ಹಸಿರು ಮೈತುಂಬಿಕೊಂಡ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹರಿಯುವ ಶರಾವತಿ ನದಿಯ ಹಿನ್ನೀರಿನಲ್ಲಿ ಬೃಹತ್ ಜಲ ವಿದ್ಯುತ್ ಯೋಜನೆ ಆರಂಭಕ್ಕೆ ಕಾಲ ಕೂಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಹಕಾರದಿಂದ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಈ ಬೃಹತ್ ಜಲವಿದ್ಯುತ್ ಉತ್ಪಾದನಾ ಯೋಜನೆಗೆ ಹಸಿರು ನಿಶಾನೆ ತೋರಿದೆ. ಶರಾವತಿ ನದಿಯಿಂದ ಸಮುದ್ರ ಸೇರುವ ನೀರನ್ನು ಬಳಸಿಕೊಂಡು 2000 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಬೃಹತ್ ಯೋಜನೆ ಇದಾಗಿದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಗಳ ಪರಿಸರಕ್ಕೆ ಅಪಾಯವಿದೆ ಅಥವಾ ಸಮುದ್ರಕ್ಕೆ ಹರಿಯುವ ನೀರನ್ನು ತಡೆಯುವ ಮೂಲಕ ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಇದು ಮಾರಕ, ಇಲ್ಲಿನ ಅಪರೂಪದ ಸಿಂಗಲೀಕ ಎಂಬ ಪ್ರಾಣಿ ಸಂಕುಲ ನಾಶವಾಗುತ್ತದೆ ಮತ್ತು ನೀರೆತ್ತಲು ಬಳಕೆಯಾಗುವುದಕ್ಕಿಂತ ಕಡಿಮೆ ವಿದ್ಯುತ್ ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ, ಈ ಯೋಜನೆ ಏಕೆ ಬೇಕು…? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ನೇತೃತ್ವದಲ್ಲಿ ಮಾಧ್ಯಮ ತಂಡ ಇಲ್ಲಿ ವಿಶೇಷ ಅಧ್ಯಯನ ನಡೆಸಿ, ಈ ಲೇಖನವನ್ನು ಸಿದ್ದಪಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್, ಕೆಪಿಸಿಎಲ್, ಮೂಲಕ ಎಂಟು ವರ್ಷಗಳ ದೀರ್ಘಾವಧಿಯ ಕಾರ್ಯ ಸಾಧು ಅಧ್ಯಯನಗಳ ನಂತರ ಇದೀಗಷ್ಟೇ ಈ ಯೋಜನೆಯ ಜಾರಿಗೆ ಮುಂದಾಗಿದೆ. ಈ ದೊಡ್ಡ ಯೋಜನೆ ಜಾರಿಯಿಂದ ರಾಜ್ಯವು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗಲಿದೆ.
ಇನ್ನು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರ ನಾಶಕ್ಕೆ ಈ ಯೋಜನೆ ದಾರಿ ಮಾಡಿಕೊಡಲಿದೆ ಎಂಬುದನ್ನು ಪುಷ್ಠಿಕರಿಸುವ ಅಂಶಗಳು ವಾಸ್ತವದಲ್ಲಿ ಸತ್ಯಕ್ಕೆ ದೂರವಾದವು. ಅಲ್ಲಿನ ಅಪರೂಪದ ಜೀವ ಸಂಕುಲಕ್ಕೆ ತೊಂದರೆ ಆದರೆ ಮುಂದೇನು ಎಂಬುದು ತೀರಾ ಅವೈಜ್ಞಾನಿಕ ಎನ್ನಬಹುದು.
ಯೋಜನೆಯಿಂದ ಮುಳುಗಡೆ ಆಗುವ ಗ್ರಾಮಗಳ ಅಥವಾ ಅಲ್ಲಿನ ಜನರಿಗೆ ಪು:ನರ್ ವಸತಿ ಹೇಗೆ? ಎಂಬೆಲ್ಲಾ ಸಾರ್ವಜನಿಕರ ಪ್ರಶ್ನೆಗಳಿಗೆ ಈ ವಿಶೇಷ ಲೇಖನದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಪಂಪ್ಡ್ ಸ್ಟೋರಜ್ ಯೋಜನೆಯೇ ಏಕೆ ಬೇಕು ಎಂಬುದಕ್ಕೆ ಸಮರ್ಪಕ ಉತ್ತರ ಕೂಡ ಇದೆ. ಭಾರತದಲ್ಲಿ ಕಲ್ಲಿದ್ದಲನ್ನು ಉರಿಸುವ ಮೂಲಕ ಉತ್ಪಾದನೆ ಮಾಡಲಾಗುವ ಥರ್ಮಲ್ ವಿದ್ಯುತ್, ನೀರನ್ನು ಉಪಯೋಗಿಸಿ ಜಲ ವಿದ್ಯುತ್, ಸೂರ್ಯನ ಶಾಖದಿಂದ ಸೋಲಾರ್ ಮತ್ತು ಗಾಳಿ ಮೂಲಕ ವಿಂಡ್ ಪವರ್ ಉತ್ಪಾದನೆ ಮಾಡಲಾಗುತ್ತಿದೆ. ಹೀಗೆ, ಹಲವು ಬಗೆಯಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ, ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ.ಇದಕ್ಕೆ ತಾಂತ್ರಿಕ ತೊಡಕುಗಳೇ ಕಾರಣ.
ವಿದ್ಯುತ್ ಉತ್ಪಾದಿಸಿದ ನಂತರ ಆದಷ್ಟು ಬೇಗ ಬಳಕೆ ಮಾಡಬೇಕು. ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿನ ವೇಳೆ ಒಂದಿಷ್ಟು ವಿದ್ಯುತ್ ವ್ಯಯವಾಗುವುದೂ ಸತ್ಯ. ಬೇಡಿಕೆಯನ್ನು ಸರಿದೂಗಿಸುವ ಜೊತೆಗೆ ಗುಣಮಟ್ಟದ ವಿದ್ಯುತ್ ಇಂದಿನ ಅಗತ್ಯವಾಗಿದೆ.
ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ಮಾರ್ಗಗಳಾಗಿರುವ ಥರ್ಮಲ್ ವಿದ್ಯುತ್ ಉತ್ಪಾದನೆ ಮಾಡುವ ವಿಧಾನಕ್ಕೆ ಕಲ್ಲಿದ್ದಲು ಗಣಿಗಾರಿಕೆ ಮಾಡಬೇಕು. ದೂರದಿಂದ ಕಲ್ಲಿದ್ದಲ್ಲನ್ನು ಹೊತ್ತು ತರುವುದು ದುಬಾರಿ. ಇದರಿಂದ ವಿದ್ಯುತ್ ದರ ಏರಿಕೆಗೆ ನಾಂದಿ ಹಾಡಿದಂತೆ.ಅದರಲ್ಲೂ ಮಳೆಗಾಲದಲ್ಲಿ ಕಲ್ಲಿದ್ದಲು ಕೊರತೆ ಆಗಲಿದ್ದು, ಈ ಕಾರಣಕ್ಕಾಗಿ ದರಗಳಲ್ಲೂ ಏರಿಕೆ ಆಗುತ್ತಿದೆ.
ವಿದ್ಯುತ್ ಉತ್ಪಾದನೆ ವೇಳೆ ಪ್ರತಿ ಥರ್ಮಲ್ ಘಟಕವನ್ನು ಸಜ್ಜುಗೊಳಿಸಲು ಕನಿಷ್ಠ 6 ರಿಂದ 8 ಗಂಟೆ ಸಮಯ ಬೇಕಿರುತ್ತದೆ. ಈ ಸಮಯದಲ್ಲಿ ವಿದ್ಯುತ್ ಬೇಡಿಕೆಯ ಅವಧಿಯೇ ಪೂರ್ಣಗೊಳ್ಳುವ ಜತೆಗೆ, ಕನಿಷ್ಠ ವಿದ್ಯುತ್ ಉತ್ಪಾದನೆಗೂ ಗರಿಷ್ಠ ಕಲ್ಲಿದ್ದಲು ಸುಡಬೇಕಿರುತ್ತದೆ. ಇದರಿಂದ ತೀವ್ರ ನಷ್ಟದ ಜತೆಗೆ ಪರಿಸರ ನಾಶಕ್ಕೂ ಕಾರಣವಾಗಲಿದೆ.
ಪರಿಸರ ಸ್ನೇಹಿ ಹಾಗೂ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿರುವ ವಿದ್ಯುತ್ ಉತ್ಪಾದನಾ ಪದ್ಧತಿಗಳತ್ತ ಗಮನಹರಿಸಬೇಕು ಎಂಬುದು ಈಗೀನ ಕೇಂದ್ರ ಸರ್ಕಾರದ ಪ್ರಮುಖ ಆಶಯವಾಗಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿ ಇರುವ ಜಲ ವಿದ್ಯುತ್ ಯೋಜನೆಗಳು ಮಳೆ ಮೇಲೆ ಆಧಾರವಾಗಿವೆ.
ಎಲ್ಲ ಪ್ರದೇಶಗಳಲ್ಲೂ ಸೋಲಾರ್ ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲ. ಇನ್ನು ಸಾಮಾನ್ಯವಾಗಿ ಬೆಳಗಿನ 11 ಗಂಟೆಯಿಂದ ಮಧ್ಯಾಹ್ನದ 4 ರವರೆಗೆ ಮಾತ್ರ ಸೋಲಾರ್ ವಿದ್ಯುತ್ ಉತ್ಪಾದನೆ ಸಾಧ್ಯ. ಸೋಲಾರ್ ವಿದ್ಯುತ್’ನ ಸಮರ್ಪಕ ಬಳಕೆಗಾಗಿಯೇ ಪ್ರಧಾನ ಮಂತ್ರಿ ಕುಸುಮ್-ಸಿ ಯೋಜನೆ ಇದೆ. ಇದರಿಂದ ಹಗಲು ಹೊತ್ತಿನಲ್ಲಿ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಇನ್ನು ಗಾಳಿಯಿಂದ ಉತ್ಪಾದಿಸಲಾಗುತ್ತಿರುವ ವಿದ್ಯುತ್‌ಗೂ ಹಲವು ಇತಿ ಮಿತಿಗಳು ಇವೆ. ಪರಿಣಾಮ ಅತಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿರುವ ವಿಂಡ್ ಮಿಲ್ ವಿದ್ಯುತ್‌ನಿಂದ ಸಹ ಬೇಡಿಕೆ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಮಟ್ಟದ “ಅಣು ವಿದ್ಯುತ್ ” ಉತ್ಪಾದನೆ ಗೆ ಭಾರತ ತನ್ನನ್ನು ಇನ್ನೂ ತೆರೆದುಕೊಂಡಿಲ್ಲ.
ಈ ಸಮಸ್ಯೆ ಕರ್ನಾಟಕದ್ದು ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಲ್ಲೂ ಇಂತಹುದೇ ಸಮಸ್ಯೆಗಳಿವೆ. ಹೀಗಾಗಿಯೇ ಕೇಂದ್ರ ಸರ್ಕಾರವು ದೇಶದ ಎಲ್ಲ ರಾಜ್ಯಗಳಿಗೆ :ಪಂಪ್ಡ್ ಸ್ಟೋರೆಜ್ ವಿದ್ಯುತ್’ ಉತ್ಪಾದನೆಗೆ ಒತ್ತು ನೀಡುವಂತೆ ಆಗ್ರಹಿಸುತ್ತಿದೆ. ಪ್ರತಿ ರಾಜ್ಯಗಳಿಗೆ 2032ರ ವೇಳೆಗೆ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ನಿಶ್ಚಿತ ಗುರಿ ನೀಡಿದೆ.
ಪಂಪ್ಡ್ ಸ್ಟೋರೆಜ್ ವಿದ್ಯುತ್ ಯೋಜನೆಗಳು ಜಗತ್ತಿನಾದ್ಯಂತ ನವೀಕರಿಸಬಹುದಾದ ಇಂಧನ ಉತ್ಪಾದನಾ ಯೋಜನೆಗಳಲ್ಲಿ ಪ್ರಮುಖವಾದುದು ಹಾಗೂ ಕಡಿಮೆ ವೆಚ್ಚದ್ದು ಎಂದು ಸಾಬೀತಾಗಿವೆ. ತ್ವರಿತ ಚಾಲನೆ, ಶೀಘ್ರ ವಿದ್ಯುತ್ ಉತ್ಪಾದನೆ, ದೀರ್ಘ ಬಾಳಿಕೆ. ಹೀಗಾಗಿಯೇ ಎಲ್ಲ ದೇಶಗಳೂ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನೆಯನ್ನು ತನ್ನದಾಗಿಸಿಕೊಂಡಿವೆ.
ಶರಾವತಿ ನದಿಯ ಈ ಬೃಹತ್ ಜಲವಿದ್ಯುತ್ ಯೋಜನೆಯಲ್ಲಿ ಸೌರ ಮತ್ತು ಗಾಳಿ ಮೂಲಕ ಉತ್ಪಾದನೆಯಾಗಿ, ಬಳಕೆಯಾಗದೆ ವ್ಯರ್ಥವಾಗುವ ವಿದ್ಯುತ್ ಅನ್ನು ಬಳಸಿಕೊಂಡು ನೀರನ್ನು ಮೇಲೆತ್ತಲಾಗುವುದು. ಹೀಗೆ ಮೇಲೆತ್ತಿದ ನೀರನ್ನು ಉಳಿದೆಲ್ಲಾ ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ಕ್ರಮಗಳು ಸ್ಥಗಿತಗೊಂಡ ನಂತರ ಬೇಡಿಕೆಗೆ ಅನುಗುಣವಾಗಿ ಮೇಲೇತ್ತಿರುವ ನೀರನ್ನು ಪುನ: ಕೆಳಗೆ ಹರಿಸುವ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಇತರೆ ಮೂಲಗಳಿಂದ ಉತ್ಪಾದನೆಗೊಂಡ ವಿದ್ಯುತ್ ಅನ್ನು ಇಲ್ಲಿ ನೀರನ್ನು ಬ್ಯಾಟರಿಯಂತೆ ಬಳಸಲಾಗುವುದು. ಸಾಮಾನ್ಯರಿಗೆ ಅರ್ಥವಾಗುವಂತೆ ಈ ಯೋಜನೆಯನ್ನು “ವಾಟರ್ ಬ್ಯಾಟರಿ” ಎನ್ನುವುದು.
ರಾಜ್ಯಕ್ಕೆ ಪಂಪ್ಡ್ ಸ್ಟೋರೆಜ್ ಯೋಜನೆ ಹೊಸದೇನಲ್ಲ. ಈಗಾಗಲೇ ಹಲವು ಸಣ್ಣ ಪುಟ್ಟ ಯೋಜನೆಗಳನ್ನು ಕೆಪಿಸಿಎಲ್ ಯಶಸ್ವಿಯಾಗಿ ಜಾರಿ ಮಾಡಿದೆ. ಪ್ರಸ್ತುತ ಕೆಲವು ಖಾಸಗಿ ವಿದ್ಯುತ್ ಉತ್ಪಾದನಾ ಸಂಸ್ಥೆಗಳೂ ಸಹ ಸಣ್ಣ ಪ್ರಮಾಣದ ಪಂಪ್ಡ್ ಸ್ಟೋರೆಜ್ ಯೋಜನೆಗಳನ್ನು ಜಾರಿ ಮಾಡಿವೆ. 2032ರ ವೇಳೆಗೆ ರಾಜ್ಯದಲ್ಲಿ ಕನಿಷ್ಠ 8000 ಮೆಗಾ ವ್ಯಾಟ್ ‘ಪಂಪ್ಡ್ ಸ್ಟೋರೆಜ್ ವಿದ್ಯುತ್’ ಉತ್ಪಾದನೆ ಮಾಡುವ ಗುರಿ ಇದೆ. ಕೆಪಿಸಿಎಲ್, ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಜಾರಿ ಮೂಲಕ 2000 ಮೆಘಾ ವ್ಯಾಟ್, ಅಂದರೆ, ದೇಶದಲ್ಲೇ ಅತಿ ದೊಡ್ಡ ಪಿಎಸ್‌ಪಿ ಜಾರಿಗೆ ಮುಂದಾಗಿದೆ.
ಶರಾವತಿ ಪಿಎಸ್‌ಪಿ ಯೋಜನೆ ಜಾರಿಗೆ ಅನುವಾಗುವಂತಹ ಪ್ರಾಕೃತಿಕ ಪ್ರದೇಶವನ್ನು ಪ್ರಕೃತಿಯೇ ಸಿದ್ಧಪಡಿಸಿ ನೀಡಿದೆ. ಉದಾಹರಣೆಗೆ ಪಿಎಸ್‌ಪಿ ಮೂಲಕ ವಿದ್ಯುತ್ ಉತ್ಪಾದನೆಗೆ ಅನುವಾಗುವಂತಹ ಏರಿಳಿತದಂತಹ ಬೆಟ್ಟ ಪ್ರದೇಶ ಇಲ್ಲಿದೆ. ಮತ್ತೆ ಈ ಯೋಜನೆಗಾಗಿ ನೀರು ಶೇಖರಣೆ ಮಾಡಲು ಪ್ರತ್ಯೇಕ ಅಣೆಕಟ್ಟೆ ನಿರ್ಮಾಣದ ಅಗತ್ಯವಿಲ್ಲ. ಗೇರುಸೊಪ್ಪ ಪ್ರದೇಶದಲ್ಲಿ ಪ್ರಸ್ತುತ ಇರುವ ಆಣೆಕಟ್ಟೆ ಬಳಕೆ ಮಾಡುವುದರಿಂದ ಮುಳುಗಡೆ ಭೀತಿ ಇಲ್ಲ.
ಇನ್ನು ಈ ಯೋಜನೆಯಡಿ ಪಂಪ್ ಹೌಸ್ ಮತ್ತು ನೀರಿನ ಎತ್ತುವಳಿ ಮತ್ತು ಕೆಳಗೆ ಹರಿಸಲು ಭೂಗತ ಕಾಲುವೆಗಳನ್ನು ಬಳಕೆ ಮಾಡುವ ಪರಿಣಾಮ ಅರಣ್ಯ ಭೂಮಿ ಬಳಕೆಯನ್ನೂ ಕನಿಷ್ಠ ಮಾಡಲಾಗಿದೆ.
ಭೂಗತ ಕಾಲುವೆ ಆರಂಭಿಕವಾಗಿ ಒಳ ಪ್ರವೇಶಿಸಲು ಮಾತ್ರ ಕನಿಷ್ಠ ಅರಣ್ಯ ಭೂಮಿ ಬಳಕೆ ಮಾಡಲಾಗುತ್ತಿದೆ. ಈ ನಿರ್ಮಾಣ ಪ್ರದೇಶಕ್ಕೆ ತೆರಳಲು ಪ್ರಸ್ತುತ ಇರುವ ರಸ್ತೆಯನ್ನೇ ಬಳಸಲಾಗುತ್ತದೆ.ಒಟ್ಟಾರೆ ಈ ಯೋಜನೆಗೆ 54 ಹೆಕ್ಟೇರ್ ಭೂ ಪ್ರದೇಶ ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಇರುವ ರಸ್ತೆ ಅಗಲೀಕರಣವೂ ಸೇರಿದಂತೆ ಟನಲ್ ಕೊರೆಯುವ ಕಾರ್ಯ ಆರಂಭಿಸಲು ಮಾತ್ರ ಭೂಮಿಯ ಮೇಲ್ಬಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ ಶೇ.50 ರಷ್ಟು ಪ್ರದೇಶದಲ್ಲಿ ಯೋಜನೆ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಮತ್ತೆ ಅರಣ್ಯ ತಲೆ ಎತ್ತಲಿದೆ.
ಅರಣ್ಯ ಇಲಾಖೆ ನೀತಿ ನಿಯಮಗಳಂತೆ ಈ 52 ಹೆಕ್ಟೇರ್ ಬಳಕೆಗೆ ಪ್ರತಿಯಾಗಿ ಅರಣ್ಯ ಇಲಾಖೆಗೆ ಕೆಪಿಸಿಎಲ್ 51 ಹೆಕ್ಟೇರ್ ಪರ್ಯಾಯ ಭೂಮಿಯನ್ನೂ ನೀಡುತ್ತಿದೆ. ಅಲ್ಲಿ ಅರಣ್ಯ ಪುನರ್ ನಿರ್ಮಾಣಕ್ಕೆ ತಗುಲುವ ವೆಚ್ಚವನ್ನೂ ಸಹ ನೀಡುತ್ತಿದೆ.
ಶರಾವತಿ ಪಿ.ಎಸ್.ಪಿಯು ಅಸ್ತಿತ್ವದಲ್ಲಿರುವ ಜಲವಿದ್ಯುತ್ ಮೂಲಸೌಕರ್ಯದ ಒಂದು ಭಾಗವನ್ನು ಬಳಸಿಕೊಳ್ಳುತ್ತದೆ. ಅವುಗಳೆಂದರೆ ಮೇಲ್ಭಾಗದ ಜಲಾಶಯವಾಗಿ ತಲಕಾಲೆ ಮತ್ತು ಕೆಳ ಜಲಾಶಯವಾಗಿ ಗೆರುಸೋಪ್ಪಾ ಹೆಚ್ಚುವರಿ ಭೂಮಿ ಮತ್ತು ಸಂಪನ್ಮೂಲಗಳನ್ನು ಬಳಸಿಳ್ಳಲಾಗುತ್ತದೆ. ನೀರನ್ನು ಪಂಪ್ ಮಾಡಲು ಮತ್ತು ವಿದ್ಯುತ್ ಉತ್ಪಾದಿಸಲು ಅಗತ್ಯವಾದ ರಿವರ್ಸಿಬಲ್ ಟರ್ಬೈನ್’ಗಳು ಭೂಗತ ಗುಹೆಯೊಳಗೆ ಇರುತ್ತದೆ. ಇವುಗಳನ್ನು ಸುರಂಗಗಳ ಜೊತೆಗೆ ಭೂಗತವಾಗಿ ನಿರ್ಮಿಸಲಾಗುವುದು.
ಇಲ್ಲಿ ಉತ್ಪಾದಸಿ, ಶೇಖರಣೆ ಮಾಡಿದ ಜಲವಿದ್ಯುತ್ ನ್ನು ಬಳಸಿಕೊಳ್ಳುವ ಮೂಲಕ, ಕರ್ನಾಟಕವು ‘ಗ್ರಿಡ್ಗೆ’ ಹೆಚ್ಚು ನವೀಕರಿಸಬಹುದಾದ ವಿದ್ಯುತ್ ಶಕ್ತಿಯನ್ನು ಪೂರೈಸಲಿದೆ. ಇದರಿಂದ ಉಷ್ಣ ಶಕ್ತಿಯ ಅವಲಂಬನೆಯನ್ನು ಕಡಿಮೆ ಆಗಲಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯ ಆದ್ಯತೆಯೊಂದಿಗೆ, ಈ ಶಕ್ತಿಯನ್ನು ಸಂಗ್ರಹಿಸಲು ಮತ್ತು ಗರಿಷ್ಠ ಬೇಡಿಕೆಯ ಸಮಯದಲ್ಲಿ ಅದನ್ನು ಪೂರೈಸಲು ಪಿ.ಎಸ್.ಪಿಗಳು ನಿರ್ಣಾಯಕವಾಗಿವೆ. ಬ್ಯಾಟರಿ ಆಧಾರಿತ ಶೇಖರಣಾ ವ್ಯವಸ್ಥೆಗಳಿಗೆ ಹೋಲಿಸಿದರೆ ಪಿ.ಎಸ್.ಪಿಗಳು ಹೆಚ್ಚು ಪರಿಸರ ಸ್ನೇಹಿಯಾಗಿವೆ.
ಕಳೆದ ದಶಕದಲ್ಲಿ 2,00,000 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದರೂ, ಭಾರತವು ಕೇವಲ 4,750 ಮೆಗಾವ್ಯಾಟ್ ಪಿ.ಎಸ್.ಪಿ ಸಾಮರ್ಥ್ಯವನ್ನು ಮಾತ್ರ ಹೊಂದಿದೆ. ಇದು ನವೀಕರಿಸ ಬಹುದಾದ ಇಂಧನ ಶೇಖರಣೆ ಕಡಿಮೆ ಬಳಕೆಯಲ್ಲಿರುವುದನ್ನು ಸೂಚಿಸುತ್ತದೆ. ಇದನ್ನು ಪರಿಹರಿಸಲು, ಕೇಂದ್ರ ವಿದ್ಯುತ್ ಪ್ರಾಧಿಕಾರವು 2032 ರ ವೇಳೆಗೆ 50,760 ಮೆಗಾವ್ಯಾಟ್ ಪಿ.ಎಸ್.ಪಿ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಶರಾವತಿ ನದಿಯ ಈ ಪ್ರದೇಶ ಅಸ್ತಿತ್ವದಲ್ಲಿರುವ ಜಲವಿದ್ಯುತ್ ಮೂಲಸೌಕರ್ಯದೊಂದಿಗೆ, ಪಿ. ಎಸ್. ಪಿ. ಗೆ ಸಂಪೂರ್ಣವಾಗಿ ಸೂಕ್ತವಾಗಿದೆ. ಇದು ಈಗಾಗಲೇ ಜಲಾಶಯಗಳು, ಕಚೇರಿಗಳು, ಸಿಬ್ಬಂದಿ ಮತ್ತು ಪ್ರಸರಣ ಮಾರ್ಗಗಳನ್ನು ಹೊಂದಿದ್ದು, ಇದು ಅತ್ಯಂತ ಸೂಕ್ತ ಸ್ಥಳವಾಗಿದೆ.
ಸುರಂಗ ಮತ್ತು ನಿಯಂತ್ರಿತ ಸ್ಫೋಟಕ್ಕಾಗಿ ಸುಧಾರಿತ ತಂತ್ರಜ್ಞಾನ ಮತ್ತು ಕಟ್ಟುನಿಟ್ಟಾದ ಪರಿಸರಕ್ಕೆ ಪೂರಕವಾದ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಇದು ವನ್ಯಜೀವಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಸುರಂಗ ನಿರ್ಮಾಣಕ್ಕಾಗಿ ಯಾವುದೇ ಮರಗಳನ್ನು ಕತ್ತರಿಸಲಾಗುವುದಿಲ್ಲ. ಕೇವಲ 20 ಹೆಕ್ಟೇರ್ ಮೇಲ್ಮೈ ಭೂಮಿಯನ್ನು ಮಾತ್ರ ಬಳಸಲಾಗುವುದು.
ಈ ಯೋಜನೆಗೆ 54 ಹೆಕ್ಟೇರ್ ಅರಣ್ಯ ಭೂಮಿ ಬೇಕಾಗುತ್ತದೆ, ಆದರೆ ಹೆಚ್ಚಿನ ಕೆಲಸವು 20 ರಿಂದ 500 ಮೀಟರ್ ಆಳದಲ್ಲಿ ಭೂಗತ ಸುರಂಗಗಳನ್ನು ಒಳಗೊಂಡಿರುತ್ತದೆ.
ಶರಾವತಿ ಪಿ.ಎಸ್.ಪಿ ನಿರ್ಮಾಣದ ಸಮಯದಲ್ಲಿ ಉಂಟಾಗುವ ಸಣ್ಣ ಪರಿಸರದ ಮೇಲಿನ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post